ಬಾಗಲಕೋಟೆ: ತೇರದಾಳ ಭಾಗಕ್ಕೆ ಬರಲೊಲ್ಲರು ಶಿಕ್ಷಕರು, ಮಕ್ಕಳ ಶಿಕ್ಷಣ ಹರೋಹರ..!

ಸರ್ಕಾರ ಕೌನ್ಸಿಂಗ್‌ ಮೂಲಕ ಅಥವಾ ಮ್ಯೂಚುವಲ್‌ ವರ್ಗಾವಣೆಗೆ ಅವಕಾಶ ನೀಡುತ್ತದೆ. ಹಾಗಿದ್ದರೂ ಇಲ್ಲಿನ ಸರ್ಕಾರಿ ಶಾಲೆಗಳಿಗೆ ಶಿಕ್ಷಕರು ವರ್ಗಾವಣೆಗೊಂಡು ಬರಲು ಹಿಂಜರಿಯುತ್ತಿದ್ದಾರೆ. ಅತಿಥಿ ಶಿಕ್ಷಕರೂ ಹಿಂದೇಟು ಹಾಕುವಂತಹ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ತೇರದಾಳ ಭಾಗದ ಬಹುಪಾಲು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದೆ.

No One Teacher Come to Educational Zone of Terdal Part in Bagalkot grg

ಶಿವಾನಂದ ಪಿ.ಮಹಾಬಲಶೆಟ್ಟಿ

ರಬಕವಿ-ಬನಹಟ್ಟಿ(ಜು.30): ಶೈಕ್ಷಣಿಕ ವರ್ಷ ಶುರುವಾಯಿತೆಂದರೆ ಶಿಕ್ಷಕರು ತಮ್ಮ ಅನುಕೂಲಕರ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಹಾತೊರೆಯುವುದು ಸಹಜ. ಆದರೆ, ತೇರದಾಳ ಭಾಗದ ಶೈಕ್ಷಣಿಕ ವಲಯ ಇದಕ್ಕೆ ತದ್ವಿರುದ್ಧ ಎನ್ನುವಂತಿದೆ. ಯಾವೊಬ್ಬ ಶಿಕ್ಷಕರೂ ಈ ಭಾಗಕ್ಕೆ ಬರಲು ಇಚ್ಛೆಪಡುತ್ತಿಲ್ಲ! ಸ್ಥಳೀಯರೂ ಮೂಲದವರೂ ಇದಕ್ಕೆ ಹೊರತಾಗಿಲ್ಲ!!

ಸರ್ಕಾರ ಕೌನ್ಸಿಂಗ್‌ ಮೂಲಕ ಅಥವಾ ಮ್ಯೂಚುವಲ್‌ ವರ್ಗಾವಣೆಗೆ ಅವಕಾಶ ನೀಡುತ್ತದೆ. ಹಾಗಿದ್ದರೂ ಇಲ್ಲಿನ ಸರ್ಕಾರಿ ಶಾಲೆಗಳಿಗೆ ಶಿಕ್ಷಕರು ವರ್ಗಾವಣೆಗೊಂಡು ಬರಲು ಹಿಂಜರಿಯುತ್ತಿದ್ದಾರೆ. ಅತಿಥಿ ಶಿಕ್ಷಕರೂ ಹಿಂದೇಟು ಹಾಕುವಂತಹ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ತೇರದಾಳ ಭಾಗದ ಬಹುಪಾಲು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರವಾಗಿದೆ.

ಸರ್ಕಾರ ಹೊರಗಿಟ್ಟು ಖಾಸಗಿ ವಿವಿಗಳ ಆಡಳಿತ ಸಭೆ: ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸರ್ಕಾರ

ತೇರದಾಳದಲ್ಲಿ 21 ಶಿಕ್ಷಕರ ಕೊರತೆ:

ತೇರದಾಳ ಪೂರ್ವ, ಪಶ್ಚಿಮ ವಲಯಗಳಲ್ಲಿ ಇರುವ 7 ಸರ್ಕಾರಿ ಎಚ್‌ಪಿಎಸ್‌ ಮತ್ತು 9 ಎಲ್‌ಪಿಎಸ್‌ ಶಾಲೆಗಳಿದ್ದು, ಒಟ್ಟಾರೆ 21 ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಗೋಲಭಾವಿ ವಲಯದಲ್ಲಿ 6 ಎಚ್‌ಪಿಎಸ್‌, 5 ಎಲ್‌ಪಿಎಸ್‌ ಶಾಲೆಗಳಿದ್ದು ಇಲ್ಲೂ ಅಗತ್ಯ ಶಿಕ್ಷಕರಿಲ್ಲ. ಶಿಕ್ಷಕರ ಕೊರತೆಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ಕ್ಷೀಣಿಸಿದೆ. ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರಿಗೆ ವರವಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಗೊಳ್ಳುತ್ತಿರುವುದು ಕೂಡ ಶಿಕ್ಷಕರು ತೇರದಾಳ ಭಾಗಕ್ಕೆ ಬರದಿರಲು ಒಂದು ಕಾರಣವಾಗಿದೆ. ಆದರೆ, ತೇರದಾಳ ಭಾಗ ಹೊರತುಪಡಿಸಿ ಬೇರೆಲ್ಲ ಕಡೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿದೆ ಎಂಬುದು ಗಮನಾರ್ಹ.

ಕಾಟಾಚಾರಕ್ಕೆ ಅತಿಥಿ ಶಿಕ್ಷಕರು:

ಪ್ರತಿ ವರ್ಷ ಶಿಕ್ಷಕರ ಕೊರತೆ ಎದುರಿಸುತ್ತಿರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಆದರೆ, ಇದು ಕಾಟಾಚಾರಕ್ಕೆ ಎಂಬಂತಾಗಿದೆ. ನೇಮಕಗೊಂಡ ಅತಿಥಿ ಶಿಕ್ಷಕರಿಗೂ ಸರಿಯಾಗಿ ವೇತನ ಬರುತ್ತಿಲ್ಲ. ಇನ್ನು ಕೆಲವು ಕಡೆ ಅರ್ಹತೆಯುಳ್ಳ ಅತಿಥಿ ಶಿಕ್ಷಕರ ನೇಮಕಾತಿ ನಡೆಯುತ್ತಿಲ್ಲ. ಬದಲಾಗಿ ಎಸ್‌ಡಿಎಂಸಿಯವರು ತಮಗೆ ಬೇಕಾದವರನ್ನು ಸೇರಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬರುತ್ತಿದೆ.

ಕಾರಣ ಏನು?:

ಅನೇಕ ವರ್ಷಗಳಿಂದ ತೇರದಾಳ ಭಾಗದ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಬೇರೆ ಬೇರೆ ಜಿಲ್ಲೆ, ತಾಲೂಕುಗಳ ಶಿಕ್ಷಕರು ಈ ಬಾರಿ ತಮ್ಮ ತಮ್ಮ ಜಿಲ್ಲೆ, ತಾಲೂಕುಗಳಿಗೆ ವರ್ಗಾವಣೆ ಪಡೆದಿದ್ದಾರೆ. ಆದರೆ, ಮೂಲತಃ ತೇರದಾಳ ಭಾಗದ ಶಿಕ್ಷಕರು ಮಾತ್ರ ‘ಇದ್ದೂರಲ್ಲಿ ನೌಕರಿ ಮಾಡೋ ಉಸಾಬರಿ ಬ್ಯಾಡ್ರೀ..’ ಎಂದು ಗುಣಗುತ್ತಿದ್ದಾರೆ.

ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಸರ್ಕಾರಿ ಶಿಕ್ಷಕರು ಸಾಕಷ್ಟಿದ್ದಾರೆ. ಆದರೆ ಅವರಾರ‍ಯರೂ ತಮ್ಮೂರಿನ ಶಾಲೆಗಳಿಗೆ ವರ್ಗಾವಣೆ ಬಯಸುತ್ತಿಲ್ಲ. ಒಂದೆಡೆ ಬೇರೆಡೆಯಿಂದ ಬಂದ ಶಿಕ್ಷಕರು ವರ್ಗಾವಣೆ ತೆಗೆದುಕೊಂಡಿದ್ದು, ಇನ್ನೊಂದೆಡೆ ಇಲ್ಲಿಗೆ ಯಾರೋ ವರ್ಗ ತೆಗೆದುಕೊಳ್ಳದಿರುವುದು, ಅತಿಥಿ ಶಿಕ್ಷಕರೂ ಅಷ್ಟುಮನಸ್ಸು ಮಾಡದೇ ಇರುವುದರಿಂದ ಈಗ ಇಲ್ಲಿನ ಶಾಲೆಗಳು ಶಿಕ್ಷಕರ ಕೊರತೆ ಎದುರಿಸುವಂತಾಗಿದೆ.

ಎಸ್‌ಡಿಎಂಸಿ ನಿರ್ಲಕ್ಷ್ಯ:

ಸರ್ಕಾರಿ ಶಾಲೆಗಳು ಶಿಸ್ತುಬದ್ಧವಾಗಿರಲಿ ಎಂದು ಎಸ್ಸೆಂ ಕೃಷ್ಣ ಅವಧಿಯಲ್ಲಿ ಶಾಲಾಭಿವೃದ್ಧಿ (ಎಸ್‌ಡಿಎಂಸಿ) ಸಮಿತಿಗಳು ಅಸ್ಥಿತ್ವಕ್ಕೆ ಬಂದಿವೆ. ಶಾಲೆಗಳ ಕುಂದು ಕೊರತೆ ಪರಿಹರಿಸುವುದೇ ಇವುಗಳ ಮುಖ್ಯ ಕಾರ್ಯ. ಮೊದ ಮೊದಲು ಶಿಕ್ಷಣ ಇಲಾಖೆ ಮೇಲೆ ಹಿಡಿತ ಸಾಧಿಸಲು ಆರಂಭ ಶೂರತ್ವ ತೋರಿದ್ದ ಎಸ್‌ಡಿಎಂಸಿಯವರು ಈಗ ಶಾಲಾ ಚಟುವಟಿಕೆಗಳ ಬಗ್ಗೆ ನಿರುತ್ಸಾಹ, ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದೆ. ಎಸ್‌ಡಿಎಂಸಿಯವರ ಅಸಹಕಾರದಿಂದ ಇದ್ದ ಶಿಕ್ಷಕರೂ ಬೇರೆಡೆಯತ್ತ ಮುಖ ಮಾಡುತ್ತಿದ್ದಾರೆ ಎಂಬ ಮಾತು ಶಿಕ್ಷಕರ ವಲಯದಲ್ಲಿ ಕೇಳಿ ಬರುತ್ತಿದೆ.

ಎಸ್‌ಡಿಎಂಸಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಪಾಲಕರು ಜಾಗೃತರಾಗಬೇಕಿದೆ. ಜನಪ್ರತಿನಿಧಿ​ಗಳು ಎಸ್‌ಡಿಎಂಸಿ, ಶಿಕ್ಷಣ ಇಲಾಖೆ ಹಾಗೂ ಪಾಲಕರ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಪಠ್ಯದಲ್ಲೇ ಆರೋಗ್ಯ ಶಿಕ್ಷಣ ಅಗತ್ಯ: ಸಚಿವ ದಿನೇಶ್‌ ಗುಂಡೂರಾವ್‌

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದು ನಿಜ. ತೇರದಾಳ ಭಾಗಕ್ಕೆ ಶಿಕ್ಷಕರು ಒಲವು ತೋರದಿರುವುದು ಕೂಡ ಅಷ್ಟೇ ಸತ್ಯವಾಗಿದೆ. ಶಿಕ್ಷಕರ ಕೊರತೆಯುಳ್ಳ ಶಾಲೆಗಳಿಗೆ ಇಲಾಖೆ ಅತಿಥಿ ಶಿಕ್ಷಕರನ್ನು ಕೊಡುವ ಕೆಲಸ ಮಾಡುತ್ತಿದೆ ಎಂದು ತೇರದಾಳ ಪಶ್ಚಿಮ ಭಾಗ ಸಿಆರ್‌ಪಿ ಅನಂತ ಮುಧೋಳ ಹೇಳಿದ್ದಾರೆ.  

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದಕ್ಕೆ ಇಂದು ಖಾಸಗಿ ಶಾಲೆಗಳತ್ತ ಪಾಲಕರು ಮುಖ ಮಾಡುವಂತಾಗಿದೆ. ಆದ್ದರಿಂದ ಮೊದಲು ಅಗತ್ಯ ಶಿಕ್ಷಕರನ್ನು ನೀಡುವುದರ ಜತೆಗೆ ಅವರಿಗೆ ಬೇರೆ ಕೆಲಸ ಹಚ್ಚದೇ ಕಲಿಕೆ ಕೆಲಸದಲ್ಲಿ ತೊಡಗಿಸಿದಾಗ ಮಾತ್ರ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಸಾಧ್ಯ ಎಂದು ಪೋಷಕರು ಜ್ಯೋತಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios