ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣ ನೀಡುವ ಮೂಲಕ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. 

ಬೆಂಗಳೂರು (ಜು.29): ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣ ನೀಡುವ ಮೂಲಕ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. ನಗರದ ಆರೋಗ್ಯಸೌಧದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಹೆಪಟೈಟಿಸ್‌ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಾರಕ ಕಾಯಿಲೆಗಳಿಂದ ಯುವಕರನ್ನು ದೂರವಿಡಲು ಪಠ್ಯದಲ್ಲಿಯೇ ಆರೋಗ್ಯ ಶಿಕ್ಷಣ ನೀಡುವ ಅಗತ್ಯವಿದೆ. ಪ್ರೌಢ ಹಾಗೂ ಪದವಿ ಪೂರ್ವ ಪಠ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣವನ್ನು ನೀಡುವ ಮೂಲಕ ಬಹುತೇಕ ಯುವಕರನ್ನು ಜಾಗೃತಗೊಳಿಸಬಹುದು. 

ಈ ಕುರಿತು ಆರೋಗ್ಯ ಇಲಾಖೆಯಿಂದ ಶಿಕ್ಷಣ ಇಲಾಖೆ ಶಿಫಾರಸು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. 2030ರ ವೇಳೆ ಹೆಪಟೈಟಿಸ್‌ ಸಿ ಸೋಂಕು ಮುಕ್ತಗೊಳಿಸುವುದು ಮತ್ತು ಹೆಪಟೈಟಿಸ್‌ ಬಿ ಸೋಂಕು ನಿಯಂತ್ರಣ ಮಾಡುವ ಗುರಿಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಲಸಿಕೆ ನೀಡುವುದು, ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು. ಈ ಸೋಂಕಿಗೆ ಹೆಚ್ಚಾಗಿ ತುತ್ತಾಗುವ ವರ್ಗವನ್ನು ತಪಾಸಣೆ ನಡೆಸಿ ನಿಯಂತ್ರಣದಲ್ಲಿ ಇರುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು. ವಿಶ್ವ ಹೆಪಟೈಟಿಸ್‌ ದಿನಾಚರಣೆ ಕುರಿತು ಮಾತನಾಡಿದ ಡಾ.ಎನ್‌.ಶಕೀಲಾ, ರಾಜ್ಯದಲ್ಲಿ ಮೊದಲ ಬಾರಿಗೆ ವಿಶ್ವ ಹೆಪಟೈಟಿಸ್‌ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. 

ಕಾಂಗ್ರೆಸ್‌ ಶಾಸಕರು, ಸಚಿವರ ಮಧ್ಯೆ ಸಮನ್ವಯತೆಯೇ ಇಲ್ಲ: ಬೊಮ್ಮಾಯಿ

ಕಳೆದ ವರ್ಷ ರಾಜ್ಯದಲ್ಲಿ ಹೆಪಟೈಟಿಸ್‌ ಬಿ ಸೋಂಕಿನ ಕುರಿತು 2.5 ಲಕ್ಷ ಮಂದಿ ತಪಾಸಣೆ ನಡೆಸಲಾಗಿದ್ದು, 6688 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 85 ಸಾವಿರ ಸಿ ಸೋಂಕಿನ ಪರೀಕ್ಷೆ ನಡೆಸಲಾಗಿದ್ದು, 868 ಮಂದಿ ಸೋಂಕು ಪತ್ತೆಯಾಗಿದೆ. ನವಜಾತ ಶಿಶು, ಆರೋಗ್ಯ ಕಾರ್ಯಕರ್ತರಿಗೆ ಹೆಪಟೈಟಿಸ್‌ ಬಿ ಸೋಂಕಿನ ಲಸಿಕೆ ನೀಡುವ ಕಾರ್ಯವನ್ನು ಈವರ್ಷ ಮಾಡಲಾಗುವುದು ಎಂದು ತಿಳಿಸಿದರು. ಈ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಂದೀಪ್‌, ನಿರ್ದೇಶಕಿ ಇಂದುಮತಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ನವೀನ್‌ ಭಟ್‌, ಡಾ.ಪುಷ್ಪಲತಾ, ಡಾ.ಜಿ.ಎನ್‌.ಶ್ರೀನಿವಾಸ್‌ ಸೇರಿದಂತೆ ಮೊದಲಾದವರಿದ್ದರು.

ಮುಂಬರುವ ದಿನಗಳಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ: ಮಲ್ಲಿಕಾರ್ಜುನ ಖರ್ಗೆ

108 ಆ್ಯಂಬುಲೆನ್ಸ್‌ ಸೇವೆ ಸುಧಾರಣೆಗೆ ಸಮಿತಿ: ರಾಜ್ಯದಲ್ಲಿ 108 ಆ್ಯಂಬುಲೆನ್ಸ್‌ನಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ತಾಂತ್ರಿಕ ಸಮಿತಿ ರಚಿಸಿ ವರದಿ ಪಡೆಯುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 108 ಆ್ಯಂಬುಲೆನ್ಸ್‌ ಸೇವೆಗೆ ಸಂಬಂಧಿಸಿದಂತೆ ಹೊಸದಾಗಿ ಟೆಂಡರ್‌ ಆಹ್ವಾನಿಸಲು ನಿರ್ಧರಿಸಲಾಗಿದೆ. ಆ್ಯಂಬುಲೆನ್ಸ್‌ನಲ್ಲಿ ಇರಬೇಕಾದ ಸೇವೆಗಳ ಕುರಿತು ಮಾಹಿತಿ ಪಡೆಯುವುದಕ್ಕೆ ತಾಂತ್ರಿಕ ಸಮಿತಿ ರಚನೆ ಮಾಡಲಾಗುತ್ತಿದೆ. ಸಮಿತಿ ನೀಡುವ ಅಂಶದ ಆಧಾರಿಸಿ ಟೆಂಡರ್‌ ಆಹ್ವಾನಿಸಲಾಗುವುದು. ಇದರಿಂದ ಪರಿಣಾಮಕಾರಿ ಆ್ಯಂಬುಲೆನ್ಸ್‌ ಸೇವೆ ನೀಡುವುದಕ್ಕೆ ಸಹಕಾರಿ ಆಗಲಿದೆ ಎಂದು ತಿಳಿಸಿದರು.