ಸರ್ಕಾರ ಹೊರಗಿಟ್ಟು ಖಾಸಗಿ ವಿವಿಗಳ ಆಡಳಿತ ಸಭೆ: ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸರ್ಕಾರ
ರಾಜ್ಯದ 25 ಖಾಸಗಿ ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗಳಿಗೂ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ/ಸರ್ಕಾರದ ಕಾರ್ಯದರ್ಶಿ ಅವರು ಸರ್ಕಾರದ ಪದನಿಮಿತ್ತ ಸದಸ್ಯರಾಗಿದ್ದಾರೆ. ಪ್ರತಿಯೊಂದು ಸಭೆಗೂ ಅವರನ್ನು ಆಹ್ವಾನಿಸಬೇಕೆಂಬ ಸ್ಪಷ್ಟನಿಯಮವಿದ್ದರೂ ಕಡೆಗಣಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಖಾಸಗಿ ವಿಶ್ವವಿದ್ಯಾಲಯಗಳು ಮತ್ತೆ ಈ ರೀತಿ ನಡವಳಿಕೆ ತೋರಿದರೆ ಕಾನೂನಾತ್ಮಕವಾಗಿ ಕ್ರಮ ಜರುಗಿಸುವುದಾಗಿ ಸ್ಪಷ್ಟ ಎಚ್ಚರಿಕೆ ನೀಡಿದೆ.
ಲಿಂಗರಾಜು ಕೋರಾ
ಬೆಂಗಳೂರು(ಜು.30): ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳಿಗೆ ಲಂಗು ಲಗಾಮಿಲ್ಲದಂತಾಗಿದೆ ಎಂಬ ಆರೋಪಗಳ ನಡುವೆಯೇ ಈ ವಿವಿಗಳು ಕಾನೂನಿನ ನಿಯಮಾವಳಿಗಳನ್ನು ಗಾಳಿಗೆ ತೂರಿ ತಮ್ಮಿಷ್ಟದಂತೆ ತಮ್ಮ ಆಡಳಿತ ಮಂಡಳಿ ಸಭೆ ನಡೆಸಿಕೊಳ್ಳುತ್ತಿರುವುದು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.
ರಾಜ್ಯದ 25 ಖಾಸಗಿ ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗಳಿಗೂ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ/ಸರ್ಕಾರದ ಕಾರ್ಯದರ್ಶಿ ಅವರು ಸರ್ಕಾರದ ಪದನಿಮಿತ್ತ ಸದಸ್ಯರಾಗಿದ್ದಾರೆ. ಪ್ರತಿಯೊಂದು ಸಭೆಗೂ ಅವರನ್ನು ಆಹ್ವಾನಿಸಬೇಕೆಂಬ ಸ್ಪಷ್ಟನಿಯಮವಿದ್ದರೂ ಕಡೆಗಣಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಖಾಸಗಿ ವಿಶ್ವವಿದ್ಯಾಲಯಗಳು ಮತ್ತೆ ಈ ರೀತಿ ನಡವಳಿಕೆ ತೋರಿದರೆ ಕಾನೂನಾತ್ಮಕವಾಗಿ ಕ್ರಮ ಜರುಗಿಸುವುದಾಗಿ ಸ್ಪಷ್ಟ ಎಚ್ಚರಿಕೆ ನೀಡಿದೆ.
Shivamogga: ಕುವೆಂಪು ವಿವಿ ನೂತನ ಕುಲಸಚಿವರಾಗಿ ಪ್ರೊ.ಪಿ.ಕಣ್ಣನ್ ನೇಮಕ
ಅಧಿಕಾರಿಗಳು ಹೇಳುವ ಪ್ರಕಾರ, ಕಾನೂನು ಕ್ರಮ ಎಂಬುದರ ಅರ್ಥ ಖಾಸಗಿ ವಿಶ್ವವಿದ್ಯಾಲಯಗಳು ನಿಯಂತ್ರಣ ಕಾನೂನಿನ ಅನುಸಾರ ಸರ್ಕಾರದ ನಿರ್ದೇಶನಗಳು, ಕಾನೂನಿನ ನಿಯಮಾವಳಿಗಳನ್ನು ಅನುಸರಿಸದೆ ಕಡೆಗಣಿಸಿದರೆ, ದುರಾಡಳಿತ ನಡೆಸಿದರೆ ಸಂಬಂಧಿಸಿದ ವಿಶ್ವವಿದ್ಯಾಲಯಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ, ಇಲ್ಲವೇ ವಿಶ್ವವಿದ್ಯಾಲಯವನ್ನೇ ರದ್ದುಗೊಳಿಸುವ (ಸಮಾಪನ) ಅಧಿಕಾರ ಸರ್ಕಾರಕ್ಕಿದೆ. ಇದನ್ನು ಪ್ರಯೋಗಿಸುವ ಎಚ್ಚರಿಕೆ ನೀಡಲಾಗಿದೆ.
ಈ ಸಂಬಂಧ ರಾಜ್ಯದ 25 ಖಾಸಗಿ ವಿಶ್ವವಿದ್ಯಾಲಯಗಳ ಕುಲಸಚಿವರಿಗೆ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಪತ್ರ ಬರೆದಿದ್ದಾರೆ. ಖಾಸಗಿ ವಿವಿಗಳು ಆಡಳಿತ ಮಂಡಳಿ ಸಭೆಗೆ ಸರ್ಕಾರದ ಪದನಿಮಿತ್ತ ಸದಸ್ಯರು ಹಾಗೂ ಇತರೆ ಪದನಿಮಿತ್ತ ಸದಸ್ಯರನ್ನು ಆಹ್ವಾನಿಸದೆ ನಿರ್ಲಕ್ಷಿಸುತ್ತಿರುವುದು ಕಂಡುಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಖಾಸಗಿ ವಿವಿಗಳು ಕಾನೂನಿನ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಡಳಿತ ಮಂಡಳಿ ಸಭೆಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ ಅವರಿಗೆ ಮುಂಚಿತವಾಗಿಯೇ ಆಹ್ವಾನ ನೀಡಬೇಕು. ಈ ಆಹ್ವಾನದ ಜೊತೆಗೆ ಸಭೆಯ ಅಜೆಂಡಾ, ಪೂರ್ವಭಾವಿ ಸಭೆಗಳು ಮತ್ತು ಇತರೆ ದಾಖಲೆಗಳನ್ನು ಒದಗಿಸಬೇಕು. ತಪ್ಪಿದರೆ ಕಾನೂನು ಅನುಸಾರ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಗೆ 3ನೇ ವರ್ಷದ ಸಂಭ್ರಮ: ಇಲ್ಲಿದ್ದಾರೆ ನೋಡಿ ಬಹುಶಿಸ್ತೀಯ ವಿದ್ಯಾರ್ಥಿಗಳು
ಸೇಂಟ್ ಜೋಸೆಫ್ ವಿವಿ ಪರಿವೀಕ್ಷಣೆಗೆ ಸಮಿತಿ ರಚನೆ
ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯವು ಕಾನೂನಿನ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ದೂರಿನ ಹಿನ್ನೆಲೆಯಲ್ಲಿ ಈ ಸಂಬಂಧ ಪರಿಶೀಲನೆ ನಡೆಸಿ ವರದಿ ನೀಡಲು ಸಮಿತಿಯೊಂದನ್ನು ಸರ್ಕಾರ ರಚಿಸಿದೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಕಾರ್ಯನಿರ್ವಾಹಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ(ವಿಶ್ವವಿದ್ಯಾಲಯ) ಉಪ ಕಾರ್ಯದರ್ಶಿ, ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರನ್ನು ಸದಸ್ಯರನ್ನಾಗಿ ನೇಮಿಸಿ ಪರಿವೀಕ್ಷಣಾ ಸಮಿತಿ ರಚಿಸಲಾಗಿದೆ.
ಸೇಂಟ್ ಜೋಸೆಫ್ ವಿವಿಯು ಸರ್ಕಾರದ ಆದೇಶ, ನಿರ್ದೇಶನಗಳನ್ನು ಕಾನೂನಾತ್ಮಕವಾಗಿ ಪಾಲಿಸಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು. ವಿವಿಯ ಆಡಳಿತ ಮಂಡಳಿ ಸಭೆಗಳನ್ನು ನಿಯಮಾನುಸಾರ ನಡೆಸಲಾಗಿದೆಯೇ, ಈ ವಿವಿಯಲ್ಲಿ ನಡೆಸುತ್ತಿರುವ ಎಲ್ಲ ಕೋರ್ಸುಗಳಿಗೂ ಮಾನ್ಯತೆ ಪಡೆಯಲಾಗಿದೆಯೇ, ಸೀಟು ಹಂಚಿಕೆ, ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ಶುಲ್ಕ ವಿವರ, ಪ್ರವೇಶಾತಿಯಲ್ಲಿ ಮೀಸಲಾತಿ ಅನುಸರಿಸಲಾಗಿದೆಯೇ, ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ನಿಯಮಾನುಸಾರ ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ವೇತನ, ಭತ್ಯೆಗಳನ್ನು ನೀಡಲಾಗುತ್ತಿದೆಯೇ ಎಂಬುದು ಸೇರಿದಂತೆ ಎಲ್ಲ ವಿಚಾರಗಳಲ್ಲೂ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡಲು ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ನಂದಕುಮಾರ್ ಸೂಚಿಸಿದ್ದಾರೆ.