NCERT 6ನೇ ತರಗತಿಯ 'ಕೃಷ್ಣ' ಹೆಸರಿನ ಕನ್ನಡ ಪಠ್ಯಪುಸ್ತಕವು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಪುಸ್ತಕವು ಧಾರ್ಮಿಕ ಕಥೆಗಳನ್ನು ಹೇರುತ್ತಿದೆ, ಕರ್ನಾಟಕದ ಪ್ರಾದೇಶಿಕ ವೈವಿಧ್ಯತೆಯನ್ನು ಕಡೆಗಣಿಸಿದೆ ಮತ್ತು ಸಮತೋಲಿತ ಆಹಾರದ ಹೆಸರಿನಲ್ಲಿ ಸಸ್ಯಾಹಾರವನ್ನು ಮಾತ್ರ ಬಿಂಬಿಸುತ್ತಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರು (ಜೂ.24): ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ಸಂಯೋಜಿತ ಶಾಲೆಗಳಲ್ಲಿ 6ನೇ ತರಗತಿ ಮತ್ತು ಅದಕ್ಕಿಂತ ಮೇಲಿನ ತರಗತಿಗಳಿಗೆ ಪರಿಚಯಿಸಲಾದ ಎನ್‌ಸಿಇಆರ್‌ಟಿಯ (NCERT) 6ನೇ ತರಗತಿಯ ಕನ್ನಡ (R3) ಪಠ್ಯಪುಸ್ತಕದ ವಿರುದ್ಧ ರಾಜ್ಯದ ಶಿಕ್ಷಣ ತಜ್ಞರು ಮತ್ತು ಶಿಕ್ಷಣ ವಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಪಠ್ಯಪುಸ್ತಕವು ಪುರಾಣ, ಧಾರ್ಮಿಕ ಕಥೆಗಳು, ಸಸ್ಯಾಹಾರ ಮತ್ತು ದೇವಕೇಂದ್ರಿತ ನಿರೂಪಣೆಗಳನ್ನು ಬಲವಂತವಾಗಿ ಹೇರುತ್ತಿದೆ ಎಂದು ತಜ್ಞರು ಆರೋಪಿಸಿದ್ದಾರೆ. ಪುಸ್ತಕದ ಹೆಸರಿನ ಬಗ್ಗೆ ಮಾತ್ರವಲ್ಲದೆ, ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆ ಮೈಸೂರು ಭಾಗದ ಜಾನಪದ, ಸಾಹಿತ್ಯ ಹಾಗೂ ಪ್ರಾದೇಶಿಕ ಜೀವನ ಪದ್ಧತಿಯನ್ನು ಈ ಪಠ್ಯಪುಸ್ತಕದಲ್ಲಿ ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದು ಅವರು ದೂರಿದ್ದಾರೆ.
'R3' ಎಂಬುದು 6ನೇ ತರಗತಿಯಿಂದ ಕಡ್ಡಾಯಗೊಳಿಸಲಾದ ಮೂರನೇ ಭಾಷಾ (Third Language) ವಿಷಯವಾಗಿದೆ. ಇದು ವಿದ್ಯಾರ್ಥಿಗಳಿಗೆ ಭಾಷೆಯ ಮೇಲಿನ ಸುಧಾರಿತ ಪಾಂಡಿತ್ಯಕ್ಕಿಂತ ಹೆಚ್ಚಾಗಿ, ಮೂಲಭೂತ ತಿಳುವಳಿಕೆ ಮತ್ತು ಸಾಂಸ್ಕೃತಿಕ ಪರಿಚಯವನ್ನು ಒದಗಿಸುವ ಒಂದು ಸಾಧಾರಣ ತಳಹದಿಯ ಭಾಷಾ ಕಲಿಕೆಯಾಗಿದೆ.
ರಾಜಕೀಯ ಮತ್ತು ಸಾಂಸ್ಕೃತಿಕ ಹೇರಿಕೆಯ ಅಸ್ತ್ರ: PAFRE ಆಪಾದನೆ
ಮೂಲಭೂತ ಶಿಕ್ಷಣದ ಹಕ್ಕಿಗಾಗಿನ ಸಾರ್ವಜನಿಕ ಒಕ್ಕೂಟ (PAFRE) ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಎನ್‌ಸಿಇಆರ್‌ಟಿ ಕನ್ನಡ (R3) ಪಠ್ಯಪುಸ್ತಕಗಳ ಮೂಲಕ ಸಾಂಸ್ಕೃತಿಕ ಹೇರಿಕೆ ಮಾಡಲಾಗುತ್ತಿದೆ ಎಂದು ಬಲವಾಗಿ ಖಂಡಿಸಿದೆ. "ಎನ್‌ಸಿಇಆರ್‌ಟಿಯ 6ನೇ ತರಗತಿಯ 'R3' ಕನ್ನಡ ಪಠ್ಯಪುಸ್ತಕವು ದಿಗ್ಭ್ರಮೆ ಮೂಡಿಸುವಂತಿದೆ. ಮಕ್ಕಳ ಕಲಿಕೆಗೆ ಬಳಕೆಯಾಗಬೇಕಾದ ಪುಸ್ತಕಗಳನ್ನು ರಾಜಕೀಯ ಮತ್ತು ಸಾಂಸ್ಕೃತಿಕ ಹೇರಿಕೆಯ ಅಸ್ತ್ರಗಳನ್ನಾಗಿ ಪರಿವರ್ತಿಸಲಾಗುತ್ತಿದ್ದು, ಇದು ಅತ್ಯಂತ ಅಪಾಯಕಾರಿ" ಎಂದು ಸಂಘಟನೆ ಹೇಳಿದೆ.
ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ವೈವಿಧ್ಯತೆಯನ್ನು ಬಿಂಬಿಸುವ ಯಾವುದೇ ಪಾಠಗಳು ಇದರಲ್ಲಿ ಇಲ್ಲ. ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆ ಮೈಸೂರು ಭಾಗದ ಜಾನಪದ, ಸಾಹಿತ್ಯ ಮತ್ತು ಬದುಕು ಇಲ್ಲಿ ಕಾಣೆಯಾಗಿದೆ. 6ನೇ ತರಗತಿಯ ಮಗುವಿನ ಕುತೂಹಲ ಮತ್ತು ವಯಸ್ಸಿಗೆ ತಕ್ಕಂತಹ ಯಾವುದೇ ಚಟುವಟಿಕೆಗಳು, ಪಠ್ಯಗಳು, ಚಿತ್ರಗಳು ಅಥವಾ ಕಥೆಗಳು ಇದರಲ್ಲಿಲ್ಲ. ಇದರ ನಿರೂಪಣೆ ತೀರಾ ನೀರಸ ಮತ್ತು ಕೇವಲ ಬೋಧನೆಯಿಂದ ಕೂಡಿದೆ ಎಂದು PAFRE ದೂರಿದೆ.
ಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಟ್ಟಿದ್ದೇಕೆ?: ನಿರಂಜನಾರಾಧ್ಯ ಪ್ರಶ್ನೆ
ಅಭಿವೃದ್ಧಿ ಶಿಕ್ಷಣ ತಜ್ಞರಾದ ವಿ.ಪಿ. ನಿರಂಜನಾರಾಧ್ಯ ಅವರು ಪಠ್ಯಪುಸ್ತಕಕ್ಕೆ ದೇವರ ಹೆಸರಿಟ್ಟಿರುವುದನ್ನು ಪ್ರಶ್ನಿಸಿದ್ದಾರೆ. "ಮೊದಲನೆಯದಾಗಿ, ಈ ಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಟ್ಟಿರುವುದು ಏಕೆ? ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅಡಿಯಲ್ಲಿ 'ಭಾರತೀಯ ಜ್ಞಾನ ಪರಂಪರೆ'ಯನ್ನು ಹೇರುವ ನೆಪದಲ್ಲಿ, ಎನ್‌ಸಿಇಆರ್‌ಟಿ ಶಿಕ್ಷಣದಲ್ಲಿ ಪುರಾಣ, ಧಾರ್ಮಿಕ ಕಥೆಗಳು ಮತ್ತು ದೇವಕೇಂದ್ರಿತ ನಿರೂಪಣೆಗಳನ್ನು ತೂರಿಸಲು ಪ್ರಾರಂಭಿಸಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
"ಕೇವಲ 6ನೇ ತರಗತಿ ಮಾತ್ರವಲ್ಲ, 3ನೇ ತರಗತಿಯ ಪುಸ್ತಕಕ್ಕೆ 'ಮೃದುಲಾ' ಎಂದು ಹೆಸರಿಡಲಾಗಿದೆ. ಇದೆಲ್ಲಾ ಏನು? ಇದು ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸುವ ಯೋಜನೆಯಲ್ಲವೇ? ಕರ್ನಾಟಕದ ಅಸ್ಮಿತೆ ಇರುವುದು ಪಂಪ, ಕುವೆಂಪು, ಕಾರಂತ ಮತ್ತು ಬಸವಣ್ಣನವರ ಆಲೋಚನೆಗಳಲ್ಲಿ. ಆದರೆ ಎನ್‌ಸಿಇಆರ್‌ಟಿ ಇದಕ್ಕೆ 'ಕೃಷ್ಣ' ಎಂದು ಹೆಸರಿಟ್ಟಿದೆ. ಸ್ಥಳೀಯ ಬೌದ್ಧಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ನಿರ್ಲಕ್ಷಿಸಿ, ಎನ್‌ಸಿಇಆರ್‌ಟಿ ದೇವ-ಧರ್ಮದ ರಾಜಕಾರಣದತ್ತ ಮುಖ ಮಾಡಿದೆ, ಇದು ಖಂಡನೀಯ" ಎಂದು ನಿರಂಜನಾರಾಧ್ಯ ಹೇಳಿದ್ದಾರೆ.
ಆಹಾರದ ತಟ್ಟೆಯಲ್ಲೂ ರಾಜಕೀಯ: ಮಾಂಸಾಹಾರ ಬಹಿಷ್ಕಾರಕ್ಕೆ ಆಕ್ರೋಶ!
ಪಠ್ಯಪುಸ್ತಕದಲ್ಲಿರುವ 'ಆರೋಗ್ಯವೇ ಭಾಗ್ಯ' ಎಂಬ ಪಾಠದಲ್ಲಿ ಆಹಾರದ ಬಗ್ಗೆ ಮಾತನಾಡುವಾಗ, ಪರೋಕ್ಷವಾಗಿ 'ಸಾತ್ವಿಕ ಆಹಾರ'ದ ಪರಿಕಲ್ಪನೆಯನ್ನು ಮಕ್ಕಳ ತಲೆಗೆ ತುಂಬಲಾಗುತ್ತಿದೆ ಎಂದು ಶಿಕ್ಷಣ ತಜ್ಞರು ಬೊಟ್ಟು ಮಾಡಿದ್ದಾರೆ.
ಸಮತೋಲಿತ ಆಹಾರದ ಹೊಸ ವ್ಯಾಖ್ಯಾನ: ಪಠ್ಯದ ಪಾಠ ಹೀಗಿದೆ- "ನಮ್ಮ ದೇಹಕ್ಕೆ ಶಕ್ತಿ ಸಿಗಬೇಕಾದರೆ ಹಾಲು, ಸೊಪ್ಪು, ತರಕಾರಿ, ಹಣ್ಣುಗಳು ಮತ್ತು ಧಾನ್ಯಗಳಂತಹ ಸಮತೋಲಿತ ಆಹಾರಗಳು ಅತ್ಯಗತ್ಯ. ಇವು ನಮ್ಮ ದೈನಂದಿನ ಆಹಾರದ ಭಾಗವಾಗಿರಬೇಕು."
ತಜ್ಞರ ಆಕ್ಷೇಪ: "ವಿದ್ಯಾರ್ಥಿಗಳಿಗೆ ಸಮತೋಲಿತ ಆಹಾರದ ಬಗ್ಗೆ ತಿಳಿಸುವಾಗ ನೀಡಿರುವ ತಟ್ಟೆಯ ಚಿತ್ರದಲ್ಲಿ ಕೇವಲ ರೊಟ್ಟಿ, ತರಕಾರಿಗಳು, ಹಾಲು ಮತ್ತು ಹಣ್ಣುಗಳು ಮಾತ್ರ ಇವೆ. ಮೀನು, ಮೊಟ್ಟೆ ಮತ್ತು ಮಾಂಸದ ಚಿತ್ರಗಳೇ ಇಲ್ಲ. ಸಾತ್ವಿಕ ಆಹಾರ ಎಂದರೆ ಕೇವಲ ರೊಟ್ಟಿ, ಹಾಲು ಮತ್ತು ತರಕಾರಿ ಮಾತ್ರ ಎಂದು ಮಕ್ಕಳು ನಂಬುವಂತೆ ಮಾಡುವ ಬ್ರೈನ್ ವಾಶ್ ತಂತ್ರ ಇದಾಗಿದೆ" ಎಂದು ನಿರಂಜನಾರಾಧ್ಯ ಆರೋಪಿಸಿದ್ದಾರೆ.
ಮತ್ತೊಬ್ಬ ಹಿರಿಯ ಶಿಕ್ಷಣ ತಜ್ಞರು ಮಾತನಾಡಿ, "ಹಾಗಾದರೆ ಮೊಟ್ಟೆ, ಮೀನು, ಚಿಕನ್, ಮಟನ್, ಕರಾವಳಿ ಮಕ್ಕಳ ನೆಚ್ಚಿನ 'ಮೀನುೂಟ', ಉತ್ತರ ಕರ್ನಾಟಕದ ಶೇಂಗಾ ಎಣ್ಣೆಯೊಂದಿಗಿನ ಜೋಳದ ರೊಟ್ಟಿ ಇವೆಲ್ಲಾ ಎಲ್ಲಿಗೆ ಹೋದವು? ಇದು ಮಾಂಸಾಹಾರಿ ಆಹಾರವನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡುವ ತಂತ್ರವಾಗಿದೆ. ಕೇವಲ ಸಸ್ಯಾಹಾರ ಮಾತ್ರ 'ಸಮತೋಲಿತ' ಎಂದು ಬರೆಯುವುದು ಮಕ್ಕಳ ಆಹಾರದ ತಟ್ಟೆಯನ್ನು ರಾಜಕೀಯಗೊಳಿಸುವುದಾಗಿದೆ. ಇದು ಶಿಕ್ಷಣವಲ್ಲ, ಇದು ಸಾಂಸ್ಕೃತಿಕ ಭಯೋತ್ಪಾದನೆ" ಎಂದು ಕಿಡಿಕಾರಿದ್ದಾರೆ.
ಶಿಕ್ಷಣ ತಜ್ಞರ ಪ್ರಮುಖ ಬೇಡಿಕೆಗಳು
ಕಡ್ಡಾಯ ಕನ್ನಡ ಶಿಕ್ಷಣ: 'ಕನ್ನಡ ಭಾಷಾ ಕಲಿಕೆ ಕಾಯ್ದೆ 2015' ರ ಪ್ರಕಾರ ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು.
ತಿಳಿ ಕನ್ನಡ ಮರುಬಳಕೆ: ಈಗಾಗಲೇ ರಾಜ್ಯದಲ್ಲಿ 'ಸವಿ ಕನ್ನಡ', 'ಸಿರಿ ಕನ್ನಡ' ಮತ್ತು 'ತಿಳಿ ಕನ್ನಡ' ಪಠ್ಯಪುಸ್ತಕಗಳಿವೆ. ಈ ಹಿಂದೆ ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಬಳಸಲಾಗುತ್ತಿದ್ದ 'ತಿಳಿ ಕನ್ನಡ' ಪುಸ್ತಕವನ್ನೇ R3 ಗೂ ಬಳಸಬೇಕು.
ತುರ್ತು ಆದೇಶ ಹಿಂಪಡೆಯಿರಿ: 6ನೇ ತರಗತಿಗಾಗಿ ಸಿದ್ಧಪಡಿಸಲಾದ ಇದೇ R3 ಪಠ್ಯಪುಸ್ತಕವನ್ನು ಈ ವರ್ಷದಿಂದ 9ನೇ ತರಗತಿಯ R3 ಪಠ್ಯಪುಸ್ತಕವಾಗಿಯೂ ಬಳಸಲು ಹೊರಡಿಸಿರುವ "ಗಡಿಬಿಡಿಯ ಆದೇಶ"ವನ್ನು ತಕ್ಷಣವೇ ಹಿಂಪಡೆಯಬೇಕು.
NCERT ವಿವರಣೆ ನೀಡಲಿ: ಈ ಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಟ್ಟಿರುವುದು ಏಕೆ? ಮತ್ತು ಕರ್ನಾಟಕದ ಪಠ್ಯಪುಸ್ತಕ ಸಿದ್ಧತೆ ಹಾಗೂ ಶೈಕ್ಷಣಿಕ ಕಾರ್ಯಗಳ ಪ್ರಾಧಿಕಾರವಾದ ಡಿಎಸ್‌ಇಆರ್‌ಟಿ (DSERT) ಅನ್ನು ಈ ಪ್ರಕ್ರಿಯೆಯಲ್ಲಿ ಏಕೆ ಭಾಗಿ ಮಾಡಿಕೊಳ್ಳಲಿಲ್ಲ ಎಂಬುದಕ್ಕೆ ಎನ್‌ಸಿಇಆರ್‌ಟಿ ವಿವರಣೆ ನೀಡಬೇಕು.
ಮರುಮುದ್ರಣಕ್ಕೆ ಆಗ್ರಹ: 'ಸಮತೋಲಿತ ಆಹಾರ' ಪಾಠದಲ್ಲಿ ಮೊಟ್ಟೆ, ಮೀನು ಮತ್ತು ಮಾಂಸದ ಚಿತ್ರಗಳು ಹಾಗೂ ಉಲ್ಲೇಖಗಳನ್ನು ಕಡ್ಡಾಯವಾಗಿ ಸೇರಿಸಿ ಪುಸ್ತಕವನ್ನು ಮರುಮುದ್ರಣ ಮಾಡಬೇಕು ಮತ್ತು ಪುಸ್ತಕದ ಹೆಸರನ್ನು ಕನ್ನಡದ ಅಸ್ಮಿತೆಗೆ ಹೊಂದುವಂತೆ ಬದಲಾಯಿಸಬೇಕು.


