ಇದೇ ಸಾಲಿನಿಂದ ಮೆಡಿಕಲ್‌ ಕಾಲೇಜು ಆರಂಭಕ್ಕೆ ಗ್ರೀನ್‌ ಸಿಗ್ನಲ್‌, 2022-23 ನೇ ಸಾಲಿನಲ್ಲಿ 150 ಸೀಟುಗಳಿಗೆ ಅನುಮತಿ 

ಯಾದಗಿರಿ(ಜು.29): ಯಾದಗಿರಿ ಜಿಲ್ಲೆಯ ಜನರ ಬಹುಕಾಲದ ಮೆಡಿಕಲ್‌ ಕಾಲೇಜು ಕನಸು ಕೊನೆಗೂ ನನಸಾಗಿದೆ. ಇದೇ ಸಾಲಿನಿಂದ ಯಾದಗಿರಿ ಇನ್ಸಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ (ಯಿಮ್ಸ್‌)ಗೆ ಇದೇ ಸಾಲಿನಲ್ಲಿ 150 ಎಂಬಿಬಿಎಸ್‌ ಸೀಟುಗಳ ಪ್ರವೇಶಾತಿಗೆ ನ್ಯಾಶನಲ್‌ ಮೆಡಿಕಲ್‌ ಕಮೀಷನ್‌ (ರಾಷ್ಟ್ರೀಯ ಆರೋಗ್ಯ ಆಯೋಗ) ಅನುಮತಿ ನೀಡಿದೆ. 150 ಎಂಬಿಬಿಎಸ್‌ ಸೀಟುಗಳಿಗೆ ಇದೇ ಸಾಲಿನಲ್ಲಿ ಪ್ರವೇಶಾತಿ ಅನುಮತಿ ಕೋರಿ ಕಾಲೇಜು ಡೀನ್‌ ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸಿರುವ ಮೆಡಿಕಲ್‌ ಕಮೀಷನ್‌, ಇದೇ ಏಪ್ರೀಲ್‌ 5 ಹಾಗೂ ಏಪ್ರೀಲ್‌ 6 ರಂದು ಕಾಲೇಜಿನ ಮೂಲಸೌಕರ್ಯಗಳು, ಪ್ರಾಧ್ಯಾಪಕರು, ಸೇರಿದಂತೆ ಇನ್ನುಳಿದ ಎಲ್ಲ ವ್ಯವಸ್ಥೆಗಳ ಪರಿಶೀಲನೆ ನಡೆಸಿ ವರದಿ ನೀಡಿತ್ತು. ಪ್ರವೇಶಾತಿ ಅನುಮತಿ ಕುರಿತು ಕಾಲೇಜು ಡೀನ್‌ಗೆ ಪತ್ರ ಬರೆದಿರುವ ನ್ಯಾಶನಲ್‌ ಮೆಡಿಕಲ್‌ ಕೌನ್ಸಿಲ್‌, ನಿಯಮಗಳನುಸಾರ ಪ್ರವೇಶಾತಿಗೆ ಹಸಿರು ನಿಶಾಣೆ ತೋರಿದೆ.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆಯಲಿರುವ ಈ ನಿರ್ಧಾರ, ಈ ಭಾಗದ ಆರೋಗ್ಯ ಮೂಲಸೌಕರ್ಯದಲ್ಲಿ ಗಣನೀಯ ಸುಧಾರಣೆ ತರಲಿದೆ.

‘ಕನ್ನಡಪ್ರಭ’ ಪ್ರಕಟಿಸಿದ ಸರಣಿ ವರದಿ ಎಫೆಕ್ಟ್: ಮೆಡಿಕಲ್‌ ಕಾಲೇಜಿಗೆ ಸಿಎಂ ಶಿಲಾನ್ಯಾಸ

ಹೋರಾಟಗಳ ಮೂಲಕ ಮೆಡಿಕಲ್‌ ಕಾಲೇಜು

ಯಾದಗಿರಿಗೆ ಮಂಜೂರಿಯಾಗಿದ್ದ ಮೆಡಿಕಲ್‌ ಕಾಲೇಜು 2016ರಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ರದ್ದಾಗಿತ್ತು. ಎರಡ್ಮೂರು ಬಾರಿ ಆಗಿನ ಮೆಡಿಕಲ್‌ ಕೌನ್ಸಿಲ್‌ (ಈಗ ಮೆಡಿಕಲ್‌ ಕಮೀಶನ್‌) ಭೇಟಿ ನೀಡಿ ಪರಿಶೀಲನೆ ನಡೆಸಿತ್ತಾದರೂ, ಕಾಲೇಜು ನಿರ್ಮಾಣಕ್ಕೆ ತಿರಸ್ಕರಿಸಿತ್ತು.

ಮೆಡಿಕಲ್‌ ಕಾಲೇಜು ರದ್ದತಿ ಕುರಿತು ಯಾದಗಿರಿಯಲ್ಲಿ ಪಕ್ಷಾತೀತ ಹೋರಾಟದ ಅಲೆ ಶುರುವಾಗಿತ್ತು. ವೆಂಕಟರೆಡ್ಡಿ ಮುದ್ನಾಳ್‌, ನರಸಿಂಹ ನಾಯಕ್‌ (ರಾಜೂಗೌಡ) ಮುಂತಾದವರ ನೇತೃತ್ವದಲ್ಲಿ ಜನಾಂದೋಲನ ರೂಪುಗೊಂಡಿತ್ತು. ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರು ಇಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆಯ ಬಗ್ಗೆ ಅಂದಿನ ಸಿಎಂ ಆಗಿದ್ದ ಎಚ್‌. ಡಿ. ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿ, ಸಕಾರಾತ್ಮಕ ಪ್ರತ್ಕಿರಿಯೆ ವ್ಯಕ್ತವಾಗಿತ್ತು.

ಹೋರಾಟದ ಕಿಚ್ಚು ಹಚ್ಚಿದ ‘ಕನ್ನಡಪ್ರಭ’ ಸರಣಿ ವರದಿಗಳು

ಮೆಡಿಕಲ್‌ ಕಾಲೇಜು ನಿರ್ಮಾಣ ಕುರಿತು ಕನ್ನಡಪ್ರಭ’ ಸತತ 22 ದಿನಗಳ ಕಾಲ ನಡೆಸಿದ ಸರಣಿ ವರದಿಗಳು ಜಿಲ್ಲೆಯಲ್ಲಿ ಜನಾಂದೋಲನಕ್ಕೆ ಸಾಕ್ಷಿಯಾಯ್ತು. ಕೈತಪ್ಪಿದ ಮೆಡಿಕಲ್‌ ಕಾಲೇಜು ಮತ್ತೇ ವಾಪಸ್‌ ಪಡೆಯಲು ದಿನಂಪ್ರತಿ ವಿವಿಧ ಆಯಾಮಗಳಲ್ಲಿ ಮಾಡಿದ ಸರಣಿ ವರದಿಗಳು ಪ್ರಜ್ಞಾವಂತ ಸಮುದಾಯದಲ್ಲಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೊಳಗಾದವು. ಇದಕ್ಕೆಂದೇ ಹೋರಾಟದ ರೂಪುರೇಷೆ ಸಿದ್ಧವಾಯಿತು.

ಯಾದಗಿರಿ ಮೆಡಿಕಲ್ ಕಾಲೇಜು: ಸುವರ್ಣನ್ಯೂಸ್-ಕನ್ನಡಪ್ರಭ ಅಭಿಯಾನಕ್ಕೆ ವ್ಯಾಪಕ ಬೆಂಬಲ

ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಆಗ್ರಹಿಸಿ ವೆಂಕಟರೆಡ್ಡಿ ಮುದ್ನಾಳ್‌, ರಾಜೂಗೌಡ ಹಾಗೂ ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮುದ್ನಾಳ್‌ ನೇತೃತ್ವದಲ್ಲಿ ಅಂದು ಕರೆ ನೀಡಲಾಗಿದ್ದ ಯಾದಗಿರಿ ಬಂದ್‌ ಇತಿಹಾಸ ನಿರ್ಮಿಸಿತ್ತು. ಪಕ್ಷಾತೀತ ಹೋರಾಟದ ಜೊತೆಗೆ ನೆರೆಯ ಕಲಬುರಗಿಯ ಎಂ. ಎಸ್‌. ಪಾಟೀಲ್‌ ನರಿಬೋಳ ನೇತೃತ್ವದ ತಂಡ ಸಹ ಯಾದಗಿರಿ ಬಂದ್‌ನಲ್ಲಿ ಪಾಲ್ಗೊಂಡು, ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು.

ಸರ್ಕಾರ ಬದಲಿಯಾದ ನಂತರ, ಮಾಜಿ ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರ ಅತೀವ ಕಾಳಜಿ ಯಾದಗಿರಿಗೆ ಮೆಡಿಕಲ್‌ ಕಾಲೇಜು ಸ್ಥಾಪನೆಯಾಗುವಲ್ಲಿ ಯಶಸ್ವಿಯಾಯಿತು. ಯಾದಗಿರಿ ಜಿಲ್ಲೆಯನ್ನಾಗಿಸುವಲ್ಲಿ ಕಾಳಜಿ ತೋರಿದ್ದ ಬಿಎಸ್‌ವೈ, ಯಾದಗಿರಿಯಲ್ಲಿಯೇ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಕೇಂದ್ರಕ್ಕೆ ವರದಿ ಸಲ್ಲಿಸಿದರು. ಯಾದಗಿರಿಗೆ ಬಂದಿದ್ದ ಅವರು ಸಭೆಯಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆ ಬಗ್ಗೆ ನಿರ್ಧಾರ ಪ್ರಕಟಿಸಿದ್ದರು.

ಯಾದಗಿರಿಯ ಮುದ್ನಾಳ್‌ ಗ್ರಾಮದ ಸಮೀಪ ಮೆಡಿಕಲ್‌ ಕಾಲೇಜು ನಿರ್ಮಾಣಕ್ಕೆ ಬಿಎಸ್‌ವೈ ಕಳೆದ ವರ್ಷ ಜ.6 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಸುಮಾರು 50ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಮೆಡಿಕಲ್‌ ಕಾಲೇಜು ಕಟ್ಟಡ ತಲೆಯೆತ್ತಿದೆ. ಇದಕ್ಕಂಟಿಕೊಂಡೇ ಹೊಸ ಜಿಲ್ಲಾಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ.