PUC Exams: ಹಿಜಾಬ್‌ ಬಿಟ್ಟು ಪಿಯು ಪರೀಕ್ಷೆ ಬರೆದ್ರು

*  ಪರೀಕ್ಷೆಗಿಂತ ಶಾಂತಿ ಹಾಳುಮಾಡುವ ಉದ್ದೇಶ ಇದ್ದಂತಿದೆ
*  ಇನ್ಮುಂದೆ ಹಿಜಾಬ್‌ ನಾಟಕ ಮಾಡಿದ್ರೆ ನ್ಯಾಯಾಂಗ ನಿಂದನೆ ಕೇಸ್‌-ಎಚ್ಚರಿಕೆ
* ಉಡುಪಿಯಲ್ಲಿ ಹಿಜಾಬ್‌ ತೆಗೆಯಲು ನಿರಾಕರಿಸಿ ಇಬ್ಬರು ಬಹಿಷ್ಕಾರ
 

Muslims Students Wrote PUC Exams Without Hijab in Karnataka grg

ಬೆಂಗಳೂರು(ಏ.23):  ದ್ವಿತೀಯ ಪಿಯುಸಿ ಪರೀಕ್ಷೆಗಳು(PUC Exam) ಶುಕ್ರವಾರದಿಂದ ರಾಜ್ಯಾದ್ಯಂತ ಸುಗಮವಾಗಿ ಆರಂಭಗೊಂಡಿದ್ದು, ಹಿಜಾಬ್‌(Hijab) ಧರಿಸಿ ಬಂದ ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರದ ಪ್ರವೇಶದ್ವಾರದಲ್ಲೇ ಅದನ್ನು ಕಳಚಿಟ್ಟು ಪರೀಕ್ಷೆಗೆ ಹಾಜರಾದರು. ತನ್ಮೂಲಕ ಹಿಜಾಬ್‌ಗಿಂತ ಶಿಕ್ಷಣವೇ ಮುಖ್ಯ ಎಂದು ಸಾರಿದರು.

ಹಿಜಾಬ್‌ ಧರಿಸಿ ಬಂದವರಿಗೆ ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮೊದಲು ಕಳಚಿಡಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಬಹುತೇಕ ಮಂದಿ ಹಿಜಾಬ್‌ ಅನ್ನು ಅಲ್ಲಿಯೇ ಕಳಚಿಟ್ಟು ತಮ್ಮ ಕೊಠಡಿಗೆ ತೆರಳಿ ಪರೀಕ್ಷೆ ಬರೆದರು. ಉಡುಪಿಯ(Udupi) ಕೇಂದ್ರವೊಂದರಲ್ಲಿ ಇಬ್ಬರು ವಿದ್ಯಾರ್ಥಿನಿಯರು ಹಿಜಾಬ್‌ ಕಾರಣಕ್ಕೆ ಪರೀಕ್ಷೆ ಬರೆಯದೆ ವಾಪಸ್ಸಾದರು ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ಪಿಯು ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದಾರೆ. ಹಿಜಾಬ್‌ ವಿಚಾರವಾಗಿ ಯಾವುದೇ ಮಕ್ಕಳು ಪರೀಕ್ಷೆ ಬಿಟ್ಟು ವಾಪಸ್ಸಾಗಿರುವ ಪ್ರಕರಣಗಳು ಎಲ್ಲೂ ಕಂಡುಬಂದಿಲ್ಲ ಇಲಾಖೆ ನಿರ್ದೇಶಕ ರಾಮಚಂದ್ರನ್‌ ಹೇಳಿದ್ದಾರೆ.

PUC Exam ರಾಜಸ್ಥಾನ ದ್ವಿತೀಯ ಪಿಯುಸಿ ಪರೀಕ್ಷೆ, ಆಡಳಿತ ಪಕ್ಷ ಕಾಂಗ್ರೆಸ್ ಹೊಗಳುವ 6 ಪ್ರಶ್ನೆಗೆ ಆಕ್ರೋಶ!

ಮೊದಲ ದಿನ ತರ್ಕಶಾಸ್ತ್ರ ಮತ್ತು ವ್ಯವಹಾರಿಕ ಅಧ್ಯಯನ ವಿಷಯಗಳ ಪರೀಕ್ಷೆಗಳು ಎಲ್ಲ 1076 ಕೇಂದ್ರಗಳಲ್ಲೂ ಸುಸೂತ್ರವಾಗಿ ನಡೆದಿವೆ. ಆದರೆ, 2020ಕ್ಕೆ ಹೋಲಿಸಿದರೆ ಪರೀಕ್ಷೆಗೆ ಮಕ್ಕಳ ಹಾಜರಾತಿ ಕೊಂಚ ಇಳಿಕೆಯಾಗಿರುವುದು ಕಂಡುಬಂದಿದೆ. ವ್ಯವಹಾರ ಅಧ್ಯಯನ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 2,38,764 ವಿದ್ಯಾರ್ಥಿಗಳ(Students) ಪೈಕಿ 2,27,453 (ಶೇ.95.26) ಮಂದಿ ಪರೀಕ್ಷೆಗೆ ಹಾಜರಾಗಿದ್ದು, ಉಳಿದ 11,311 ಜನ ಗೈರು ಹಾಜರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

2020ರ ಇದೇ ವಿಷಯದ ಪರೀಕ್ಷೆಯ ಹಾಜರಾತಿಗೆ ಹೋಲಿಸಿದರೆ ಗೈರು ಹಾಜರಾದ ಮಕ್ಕಳ ಸಂಖ್ಯೆ 3385ರಷ್ಟುಹೆಚ್ಚಾಗಿದೆ. 2020ರಲ್ಲಿ ಈ ವಿಷಯದಲ್ಲಿ 7950 ಜನ ಗೈರು ಹಾಜರಾಗಿದ್ದರು. ಕಳೆದ ವರ್ಷ ದ್ವಿತೀಯ ಪಿಯುಸಿಗೆ ಯಾವುದೇ ಪರೀಕ್ಷೆಯನ್ನು ನಡೆಸದೆ ಅವರ 10ನೇ ತರಗತಿ ಮತ್ತು ಪ್ರಥಮ ಪಿಯುಸಿ ಅಂಕಗಳ ಮೇಲೆ ಬಡ್ತಿ ನೀಡಲಾಗಿತ್ತು. ಪುನರಾವರ್ತಿತ ವಿದ್ಯಾರ್ಥಿಗಳಿಗಿಂತ ಕಾಲೇಜು ವಿದ್ಯಾರ್ಥಿಗಳ (ಫ್ರೆಷ​ರ್‍ಸ್) ಸಂಖ್ಯೆಯೇ ಹೆಚ್ಚಿದೆ. ಇದಕ್ಕೆ ಇಲಾಖೆಯಿಂದ ಯಾವುದೇ ನಿಖರ ಕಾರಣ ಲಭ್ಯವಾಗದಿದ್ದರೂ ಮಕ್ಕಳಲ್ಲಿ ಪರೀಕ್ಷೆ ಎದುರಿಸುವ ಆತ್ಮವಿಶ್ವಾಸದ ಕೊರತೆಯೇ ಕಾರಣ ಎನ್ನುತ್ತಾರೆ ಶಿಕ್ಷಕರು. ಈ ಬಾರಿ ತರಗತಿ ಹಾಜರಾತಿ ಕಡ್ಡಾಯಗೊಳಿಸದ ಕಾರಣ ಕೆಲವು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲಿಲ್ಲ. ಆಫ್‌ಲೈನ್‌ ತರಗತಿಯನ್ನೇ ಕೆಲವರು ಮುಂದುವರೆಸಿದ್ದರು, ಇನ್ನು ಕೆಲವರು ಅದನ್ನೂ ಸಮರ್ಪಕವಾಗಿ ಬಳಸಿಕೊಂಡಿಲ್ಲ. ಇದರಿಂದ ಅಂತಹವರು ಪರೀಕ್ಷೆಯನ್ನು ಎದುರಿಸುವಷ್ಟುಆತ್ಮವಿಶ್ವಾಸ ಹೊಂದಿಲ್ಲದಿರುವುದು ಗೈರು ಹಾಜರಾತಿ ಹೆಚ್ಚಾಗಲು ಕಾರಣ ಇರಬಹುದು ಎಂದು ರಾಜ್ಯ ಪದವಿ ಪೂರ್ವ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ನಿಂಗೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು, ತರ್ಕಶಾಸ್ತ್ರ ವಿಷಯಕ್ಕೆ ನೋಂದಾಯಿಸಿಕೊಂಡಿದ್ದ 620 ವಿದ್ಯಾರ್ಥಿಗಳಲ್ಲಿ 552 ಮಂದಿ ಹಾಜರಾಗಿ ಪರೀಕ್ಷೆ ಬರೆದರೆ 68 ಜನ ಗೈರು ಹಾಜರಾಗಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ. ಉಳಿದಂತೆ ಯಾವುದೇ ಕೋವಿಡ್‌9(Covid-19) ಪ್ರಕರಣಗಳು ವರದಿಯಾಗಿಲ್ಲ. ಕೆಲ ಸಣ್ಣ ಪುಟ್ಟಆರೋಗ್ಯ ಸಮಸ್ಯೆ ಇದ್ದವರಿಗೆ ಪ್ರತ್ಯೇಕ ಕೋಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಯಾವುದೇ ಕೇಂದ್ರದಲ್ಲೂ ಪರೀಕ್ಷಾ ಅಕ್ರಮ, ವಿದ್ಯಾರ್ಥಿಗಳ ಡಿಬಾರ್‌ನಂತಹ ಘಟನೆಗಳು ನಡೆದಿಲ್ಲ ಎಂದು ಇಲಾಖೆ ತಿಳಿಸಿದೆ. ಏ.23ರಂದು ಗಣಿತ ಶಾಸ್ತ್ರ ಮತ್ತು ಶಿಕ್ಷಣ ಶಾಸ್ತ್ರದ ಪರೀಕ್ಷೆ ನಡೆಯಲಿದೆ.

ಸರ್ಕಾರದ ಆದೇಶ ಮತ್ತು ಹೈಕೋರ್ಚ್‌ನ ತೀರ್ಪಿನ ಅನುಸಾರ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ, ಸಮವಸ್ತ್ರ ಇಲ್ಲದಿದ್ದವರು ಯಾವುದೇ ಧರ್ಮಸೂಚಕವಲ್ಲದ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರದಂತಹ ಉಡುಪು ಧರಿಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಎಲ್ಲಿಯೂ ಯಾವುದೇ ತೊಂದರೆ ಆಗಿಲ್ಲ. ಎಲ್ಲೆಡೆ ಸುಸೂತ್ರವಾಗಿ ಪರೀಕ್ಷೆ ನಡೆದಿದೆ​ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.  

ಪ್ರಶ್ನೆ ಪತ್ರಿಕೆ ಸುಲಭವಾಗಿತ್ತು

ಪಿಯು ಇಲಾಖೆಯು ನಿರೀಕ್ಷೆಯಂತೆ ಈ ಬಾರಿ ಪಿಯು ಪ್ರಶ್ನೆ ಪತ್ರಿಕೆಗಳನ್ನು ಬಹಳ ಸುಲಭವಾಗಿ ಸಿದ್ಧಪಡಿಸಿರುವುದು ವಿದ್ಯಾರ್ಥಿಗಳ ಅಭಿಪ್ರಾಯಗಳಲ್ಲಿ ಕಂಡುಬಂದಿದೆ. ಪರೀಕ್ಷೆ ಬರೆದು ಹೊರಬಂದ ಬಹುತೇಕ ವಿದ್ಯಾರ್ಥಿಗಳು ಎರಡೂ ಪ್ರಶ್ನೆ ಪತ್ರಿಕೆಗಳು ನಿರೀಕ್ಷೆಗಿಂತ ಹೆಚ್ಚು ಸುಲಭವಾಗಿದ್ದವು ಎಂದು ಸಂತಸ ವ್ಯಕ್ತಪಡಿಸಿದರು.

ವಿವಿಧ ವಿಭಾಗದಲ್ಲಿ ಪ್ರಶ್ನೆಗಳ ಸಂಖ್ಯೆ ಹೆಚ್ಚಿಸಿದ್ದರಿಂದ ನಿಗದಿತ ಪ್ರಶ್ನೆಗಳಿಗೆ ಉತ್ತರ ಬರೆಯಲು ಸುಲಭವಾಯಿತು. ಇದು ಹೆಚ್ಚು ಅಂಕಗಳನ್ನು ಪಡೆಯಲು ಸಹಾಯವಾಗಲಿದೆ ಎಂದು ಬೆಂಗಳೂರು ಕೇಂದ್ರವೊಂದರ ವಿದ್ಯಾರ್ಥಿ ಪೂರ್ವಿಕ್‌ ಹೇಳಿದರು.

ಈ ವರ್ಷವೂ ಆರಂಭದಲ್ಲಿ ಕೋವಿಡ್‌ನಿಂದಾಗಿ ಪೂರ್ಣ ಪ್ರಮಾಣದಲ್ಲಿ ತರಗತಿ ಬೋಧನೆ ನಡೆದಿರಲಿಲ್ಲ. ಹಾಗಾಗಿ ಸುಲಭವಾಗಿ ಪ್ರಶ್ನೆಗಳನ್ನು ಕೇಳಿರುವುದು ಸ್ವಾಗತಾರ್ಹ. ವ್ಯವಹಾರಿಕ ಅಧ್ಯಯನ ವಿಷಯದ ರೀತಿಯೇ ಇತರೆ ವಿಷಯಗಳು ಸುಲಭವಾಗಿರುತ್ತವೆ ಎಂಬ ವಿಶ್ವಾಸವಿದೆ ಎಂದು ಮತ್ತೊಬ್ಬ ವಿದ್ಯಾರ್ಥಿ ಕೃತಿಕ್‌ ಅಭಿಪ್ರಾಯವ್ಯಕ್ತಪಡಿಸಿದರು.

ಹಾಲ್‌ಟಿಕೆಟ್‌ಗಿಲ್ಲದ ಹಿಜಾಬ್‌ ಪರೀಕ್ಷೆಗೇಕೆ: ರಘುಪತಿ ಭಟ್‌

ಉಡುಪಿ:  ಹಿಜಾಬ್‌ ಧರಿಸಲು ಅವಕಾಶ ನೀಡಬೇಕೆಂದು ದ್ವೀತಿಯ ಪಿಯು ಪರೀಕ್ಷಾ ಕೇಂದ್ರದಲ್ಲಿ ಹೈಡ್ರಾಮಾ ಸೃಷ್ಟಿಸಿದ ವಿದ್ಯಾರ್ಥಿನಿಯರಿಬ್ಬರ ವಿರುದ್ಧ ಉಡುಪಿ ಶಾಸಕ ರಘುಪತಿ ಭಟ್‌(Raghupati Bhat) ವಾಗ್ದಾಳಿ ನಡೆಸಿದ್ದು, ಹಾಲ್‌ ಟಿಕೆಟ್‌ ಪಡೆಯುವಾಗ ಹಿಜಾಬ್‌ ತೆಗೆದಿಟ್ಟಇವರು, ಪರೀಕ್ಷೆ ಬರೆಯುವಾಗ ಮಾತ್ರ ಹಿಜಾಬ್‌ ಬೇಕೆಂದು ನಾಟಕ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Chikkamagaluru ದ್ವಿತೀಯ ಪಿಯು ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಸಚಿವರ ಭೇಟಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್‌ಗಾಗಿ ಹೈಕೋರ್ಟ್‌ಗೆ(High Court) ಹೋಗಿದ್ದ ಇಬ್ಬರು ವಿದ್ಯಾರ್ಥಿನಿಯರು ಶುಕ್ರವಾರ ಬೆಳಗ್ಗೆ ಕಾಲೇಜಿಗೆ ಹೋಗಿ ಹಾಲ್‌ ಟಿಕೆಟ್‌ ಪಡೆಯುವಾಗ ಹಿಜಾಬ್‌ ತೆಗೆದಿಟ್ಟಿದ್ದರು. ಹಿಜಾಬ್‌ ತೆಗೆದಿಟ್ಟು ಪರೀಕ್ಷೆ ಬರೆಯುತ್ತೇವೆ ಎಂದೂ ಹೇಳಿದ್ದರು. ನಂತರ ಪರೀಕ್ಷಾ ಕೇಂದ್ರದಲ್ಲಿ ನಾಟಕ ಮಾಡಿದ್ದಾರೆ. ಇವರ ನಡವಳಿಕೆ ನೋಡಿದರೆ ಪರೀಕ್ಷೆ ಬರೆಯುವುದಕ್ಕೆ ಬಂದಂತಿಲ್ಲ. ಕಾಲೇಜಿನ, ಸಮಾಜದ ಶಾಂತಿ ಹಾಳು ಮಾಡುವುದೇ ಉದ್ದೇಶ ಇಂದಂತಿದೆ. ಆದ್ದರಿಂದ ಈ ಮಕ್ಕಳನ್ನು ನಾವು ಲಘುವಾಗಿ ಪರಿಗಣಿಸುವುದಿಲ್ಲ. ಅವರ ಮೇಲೆ ಕ್ರಿಮಿನಲ್‌ ಕೇಸ್‌ ಹಾಕಿ ಎಂದು ಪೊಲೀಸ್‌(Police) ಅಧಿಕಾರಿಗಳಿಗೆ ಹೇಳಿದ್ದೇನೆ ಎಂದಿದ್ದಾರೆ.  ‘ಇನ್ನು ಮುಂದೆ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್‌ ಧರಿಸುತ್ತೇವೆ’ ಎಂದೆಲ್ಲಾ ನಾಟಕ ಮಾಡಿದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇವೆ ಎಂದು ವಿದ್ಯಾರ್ಥಿನಿಯರಿಗೆ ಎಚ್ಚರಿಕೆ ನೀಡಿದ್ದಾರೆ.

ಹಿಜಾಬ್‌ ಮತ್ತು ಪರೀಕ್ಷೆಗೆ ಯಾವುದೇ ಸಂಬಂಧ ಇಲ್ಲ ಎಂದು ಹೈಕೋರ್ಚ್‌ ಹೇಳಿದೆ. ಈ ಆರು ವಿದ್ಯಾರ್ಥಿಗಳು ಹೈಕೋರ್ಟಿಗಿಂತಲೂ ಮೇಲಾ?, ಈ ವಿದ್ಯಾರ್ಥಿಗಳು, ಅವರ ಪೋಷಕರು ಅನ್ನ ತಿನ್ನುವುದಿಲ್ಲವೇ?, ಯಾವುದೋ ಸಂಘಟನೆಯವರು ಈ ವಿದ್ಯಾರ್ಥಿನಿಯರಿಗೆ ಭಯೋತ್ಪಾದಕರಾಗಲು ಹೇಳುತ್ತಾರೆ, ಮಾನವ ಬಾಂಬ್‌ ಆಗಲು ಹೇಳುತ್ತಾರೆ ಅದನ್ನು ಇವರು ಕೇಳುತ್ತಾರಾ?, ಇವರಿಗೆ ಕಾಮನ್‌ಸೆನ್ಸ್‌ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
 

Latest Videos
Follow Us:
Download App:
  • android
  • ios