ಕರ್ನಾಟಕದಲ್ಲಿ 13,800 ಸರ್ಕಾರಿ ಶಾಲೆ ವಿಲೀನ?: ಸಚಿವ ನಾಗೇಶ ಹೇಳಿದ್ದಿಷ್ಟು
ಮಾದರಿ ಶಾಲೆಯಲ್ಲಿ ಪ್ರತಿ ತರಗತಿಗೂ ಕನಿಷ್ಠ ಒಬ್ಬ ಶಿಕ್ಷಕರು, ಎಲ್ಲ ತರಗತಿಗೂ ಪ್ರತ್ಯೇಕ ಕೊಠಡಿ ಸೇರಿದಂತೆ ಎಲ್ಲ ಅಗತ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುವುದು: ನಾಗೇಶ್
ಬೆಂಗಳೂರು(ಜು.20): ರಾಜ್ಯದಲ್ಲಿ 48 ಸಾವಿರ ಶಾಲೆಗಳಿದ್ದು ಈ ಪೈಕಿ 13,800 ಶಾಲೆಗಳಲ್ಲಿ 25ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. 1800 ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 10ಕ್ಕಿಂತ ಕಡಿಮೆ ಇದೆ. ರಾಜ್ಯದಲ್ಲಿರುವ 709 ಏಕ ಗ್ರಾಮದ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಎಂಟ್ಹತ್ತು ಶಾಲೆಗಳಿವೆ. ಎಲ್ಲವನ್ನೂ ಸೇರಿಸಿದರೂ 200 ಮಕ್ಕಳಾಗುವುದಿಲ್ಲ. 1ರಿಂದ 10ನೇ ತರಗತಿ ವರೆಗೆ 10 ಮಕ್ಕಳಿದ್ದರೂ ಇಬ್ಬರು ಶಿಕ್ಷಕರನ್ನು ನೀಡಿದ್ದೇವೆ. ಇವರಿಂದ ತರಗತಿ ಮಕ್ಕಳಿಗೆ ಹೇಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ. ಹೀಗಾಗಿ ಹೋಬಳಿಗೊಂದು ಮಾದರಿ ಶಾಲೆ ಸ್ಥಾಪಿಸಿ ಸುತ್ತಲಿನ ಪ್ರದೇಶದಿಂದ ಮಕ್ಕಳನ್ನು ಸರ್ಕಾರದಿಂದಲೇ ವಾಹನ ಸೌಲಭ್ಯ ನೀಡಿ ಕರೆತರಲು ಯೋಜನೆ ರೂಪಿಸಲಾಗುತ್ತಿದೆ ಅಂತ ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಮೂಲಸೌಕರ್ಯ ಅಭಿವೃದ್ಧಿ: ಸಚಿವ
ಮಾದರಿ ಶಾಲೆಯಲ್ಲಿ ಪ್ರತಿ ತರಗತಿಗೂ ಕನಿಷ್ಠ ಒಬ್ಬ ಶಿಕ್ಷಕರು, ಎಲ್ಲ ತರಗತಿಗೂ ಪ್ರತ್ಯೇಕ ಕೊಠಡಿ ಸೇರಿದಂತೆ ಎಲ್ಲ ಅಗತ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುವುದು. ಮಾದರಿ ಶಾಲೆಯ ಸಮೀಪದ ಬೇರೆ ಯಾವುದೇ ಸರ್ಕಾರಿ ಶಾಲೆಯ ಎಸ್‌ಡಿಎಂಸಿಗಳು ಒಪ್ಪಿದರೆ ಆ ಶಾಲೆಯ ಮಕ್ಕಳನ್ನೂ ಮಾದರಿ ಶಾಲೆಗೆ ಕಳುಹಿಸಬಹುದು ಎಂದು ನಾಗೇಶ್ ಹೇಳಿದರು.
1500 ಮಾದರಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಸಚಿವ ನಾಗೇಶ್
ರಾಜ್ಯದಲ್ಲಿ ಹೋಬಳಿಗೊಂದು ಮಾದರಿ ಸರ್ಕಾರಿ ಶಾಲೆ ಸ್ಥಾಪಿಸಿ, ಸುತ್ತಲೂ ಇರುವ ಬೇರೆ ಶಾಲಾ ಮಕ್ಕಳಿಗೆ ವಾಹನ ಸೌಲಭ್ಯ ನೀಡಿ ಇಂತಹ ಶಾಲೆಗೆ ಕರೆತರುವ ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆ. ಶಾಲಾಭಿವೃದ್ಧಿ ಸಮಿತಿಗಳು ಒಪ್ಪಿದರೆ ಅತ್ಯಂತ ಕಡಿಮೆ ಸಂಖ್ಯೆ ಶಾಲೆಗಳ ಮಕ್ಕಳನ್ನು ಮಾದರಿ ಶಾಲೆಗೆ ಸೇರ್ಪಡೆ ಮಾಡಲು ಮುಂದಾಗಿದೆ.
ಆದರೆ, ಇದು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಿ ಅಗತ್ಯ ಶಿಕ್ಷಕರನ್ನು ನಿಯೋಜಿಸಿ, ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಆದರೆ, ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮಾದರಿ ಶಾಲೆಗಳೊಂದಿಗೆ ವಿಲೀನಗೊಳಿಸಿದರೆ ಮಕ್ಕಳಿಲ್ಲದ ಶಾಲೆಗಳು ತಾನಾಗಿಯೇ ಮುಚ್ಚಿಹೋಗುತ್ತವೆ. ಮಾದರಿ ಶಾಲೆ ಆರಂಭಿಸಲಿ, ಆದರೆ ಸುತ್ತಮುತ್ತಲ ಶಾಲೆಗಳನ್ನು ಸರ್ಕಾರ ಹಾಗೇ ಉಳಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು ಪ್ರೆಸ್‌ಕ್ಲಬ್’ನಲ್ಲಿ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರು, ರಾಜ್ಯ ಬಿಜೆಪಿ ಸರ್ಕಾರ 15 ಸಾವಿರ ಶಿಕ್ಷಕರ ನೇಮಕಾತಿ, 27 ಸಾವಿರ ಅತಿಥಿ ಶಿಕ್ಷಕರ ನೇಮಕ, 1700 ಶಾಲಾ ಕೊಠಡಿಗಳ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇದೀಗ ಹೋಬಳಿಗೊಂದು ಮಾದರಿ ಶಾಲೆ ನಿರ್ಮಿಸುವ ಮಹತ್ವದ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಡಿಗ್ರಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ರಾಜ್ಯ-ಎನ್‌ಎಎಲ್ ಒಪ್ಪಂದ
ಸರ್ಕಾರ ಇದುವರೆಗೂ ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚಿಲ್ಲ, ಮುಚ್ಚುವುದೂ ಇಲ್ಲ. ಮಕ್ಕಳೇ ಬರದಿದ್ದಾಗ ಸಾಮಾನ್ಯವಾಗಿ ತಾನಾಗೇ ಶಾಲೆ ಮುಚ್ಚುತ್ತದೆ. ಎರಡು ಮೂರು ವರ್ಷ ಮಕ್ಕಳಿಲ್ಲದ ಶಾಲೆಗಳನ್ನೂ ಸರ್ಕಾರ ಏಕಾಏಕಿ ಮುಚ್ಚುವುದಿಲ್ಲ. ಈ ಅವಧಿಯಲ್ಲಿ ಮತ್ತೆ ದಾಖಲಾತಿ ಆದರೆ ಮತ್ತೆ ಶಾಲೆ ಆರಂಭಿಸುವ ಕೆಲಸ ಮಾಡಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇನ್ಮುಂದೆ ಪ್ರತಿ ವರ್ಷ ಶಿಕ್ಷಕರ ನೇಮಕಾತಿ
ಶಿಕ್ಷಣ ಇಲಾಖೆಯಲ್ಲಿ ನಿವೃತ್ತಿ, ಬಡ್ತಿ ಸೇರಿದಂತೆ ವಿವಿಧ ಕಾರಣಗಳಿಂದ ಖಾಲಿಯಾಗುವ ಶಿಕ್ಷಕರ ಹುದ್ದೆಗಳಿಗೆ ಇನ್ಮುಂದೆ ಪ್ರತೀ ವರ್ಷವೂ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಈ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಪಷ್ಟತೀರ್ಮಾನಕ್ಕೆ ಬರಲಾಗುವುದು ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಪ್ರತಿ ವರ್ಷ ಶಿಕ್ಷಣ ಇಲಾಖೆಯಲ್ಲಿ ನಾಲ್ಕೈದು ಸಾವಿರ ಶಿಕ್ಷಕರು ನಿವೃತ್ತರಾಗುತ್ತಾರೆ. ಖಾಲಿಯಾಗುವ ಹುದ್ದೆಗಳನ್ನು ಆಯಾ ವರ್ಷವೇ ಭರ್ತಿ ಮಾಡಿದರೆ ಶಿಕ್ಷಕರ ಕೊರತೆಯ ಸಮಸ್ಯೆ ಆಗುವುದಿಲ್ಲ ಎಂದರು.
ಅಧಿಸೂಚನೆಯಲ್ಲಿ ಹೊರಡಿಸಿದ ಸಂಖ್ಯೆಯಷ್ಟುಅರ್ಹ ಶಿಕ್ಷಕರು ಒಂದೇ ಸಿಇಟಿಯಲ್ಲಿ ಸಿಗದೇ ಹೋದರೆ ಮತ್ತೊಂದು ಬಾರಿ ಸಿಇಟಿ ನಡೆಸಿ ಭರ್ತಿ ಮಾಡಲಾಗುವುದು. ಸದ್ಯ ನಡೆಯುತ್ತಿರುವ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಿ ಅವರನ್ನು ಶಾಲೆಗೆ ನಿಯೋಜಿಸಲಾಗುವುದು. ಕನಿಷ್ಠ 12 ಸಾವಿರ ಹುದ್ದೆಗಳಾದರೂ ಭರ್ತಿಯಾಗುವ ನಿರೀಕ್ಷೆ ಇದೆ. ನೇಮಕಾತಿ ಪೂರ್ಣಗೊಂಡ ಬಳಿಕವೂ ಖಾಲಿ ಉಳಿಯುವ ಹುದ್ದೆಗಳಿಗೆ ಜನವರಿಯಲ್ಲಿ ಮತ್ತೆ ಸಿಇಟಿ ನಡೆಸಿ ನೇಮಕಾತಿ ಪ್ರಕ್ರಿಯೆ ನಡೆಸುತ್ತೇವೆ ಎಂದರು.