Asianet Suvarna News Asianet Suvarna News

ಡಿಗ್ರಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ರಾಜ್ಯ-ಎನ್‌ಎಎಲ್‌ ಒಪ್ಪಂದ

  • ಪದವಿಯಲ್ಲಿ ಹಣಕಾಸು ಶಿಕ್ಷಣ, ಹೂಡಿಕೆ ಜಾಗೃತಿ ವಿಷಯ ಕಲಿಕೆಗೆ ಒಡಂಬಡಿಕೆ
  •  ರಾಜ್ಯದ 20 ವಿವಿಗಳಲ್ಲಿ 2 ವಿಷಯಗಳ ಕಲಿಕೆಗೆ ಸಚಿವ ಡಾ ಅಶ್ವತ್ಥ ಸಮ್ಮುಖ ಸಹಿ
  •  ರಾಜ್ಯದ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಹಕಾರಿ
Karnataka Higher Education Council signs MoU with NAL to introduce financial education course gow
Author
Bengaluru, First Published Jul 14, 2022, 7:39 AM IST

ಬೆಂಗಳೂರು (ಜು.14): ರಾಜ್ಯದಲ್ಲಿ ಎರಡನೇ ವರ್ಷದ ಪದವಿ ವ್ಯಾಸಂಗದಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಹಣಕಾಸು ಶಿಕ್ಷಣ (ಫೈನಾನ್ಶಿಯಲ್‌ ಎಜುಕೇಶನ್‌) ಮತ್ತು ಹೂಡಿಕೆ ಜಾಗೃತಿ (ಇನ್ವೆಸ್ಟ್‌ಮೆಂಟ್‌ ಅವೆರ್ನೆಸ್‌) ಬಗ್ಗೆ ಕಲಿಸಲು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಮತ್ತು ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ನ ಅಂಗಸಂಸ್ಥೆಯಾದ ಎನ್‌ಎಸ್‌ಇ ಅಕಾಡೆಮಿ ಲಿಮಿಟೆಡ್‌ (ಎನ್‌ಎಎಲ್‌) ನಡುವೆ ಒಡಂಬಡಿಕೆ ಏರ್ಪಟ್ಟಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಎರಡೂ ಸಂಸ್ಥೆಗಳು ಬುಧವಾರ ನಗರದಲ್ಲಿ ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡವು. ಇದೇ ಸಂದರ್ಭದಲ್ಲಿ ಎನ್‌ಎಸ್‌ಇ ಅಕಾಡೆಮಿಯು ರಾಜ್ಯದ 20 ವಿಶ್ವವಿದ್ಯಾಲಯಗಳೊಂದಿಗೂ ಒಪ್ಪಂದವನ್ನು ಮಾಡಿಕೊಂಡಿತು. ಈ ಎಲ್ಲ ವಿ.ವಿ.ಗಳ ಕುಲಪತಿಗಳು ಮತ್ತು ಕುಲಸಚಿವರು ಹಾಜರಿದ್ದು ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು.

ಬಳಿಕ ಮಾತನಾಡಿದ ಸಚಿವರು, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ವಿದ್ಯಾರ್ಥಿಗಳಿಗೆ ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಎರಡನ್ನು ಕಲಿಕೆಯ ಭಾಗವನ್ನಾಗಿ ಮಾಡುವ ಅಗತ್ಯವಿದೆ. ಇದರಿಂದ ರಾಜ್ಯದ 5 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. ಈ ಕೋರ್ಸನ್ನು ಎಲ್ಲ ಪದವಿ ಕಾಲೇಜುಗಳೂ ತಮ್ಮ ಪಠ್ಯಕ್ರಮದ ಭಾಗವನ್ನಾಗಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಉಳಿತಾಯ, ಹೂಡಿಕೆ, ಆರ್ಥಿಕ ತಿಳಿವಳಿಕೆ, ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು ಇತ್ಯಾದಿಗಳ ಬಗ್ಗೆ ಸಮಗ್ರ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

 

ಈ ಒಡಂಬಡಿಕೆಯ ಭಾಗವಾಗಿ ಎನ್‌ಎಸ್‌ಇ ಅಕಾಡೆಮಿಯು ಉಪನ್ಯಾಸಕರಿಗೆ ತರಬೇತಿ ಕೊಡಲು ರಾಜ್ಯ ಮಟ್ಟದ ‘ಟ್ರೈನ್‌ ದಿ ಟ್ರೈನರ್‌’ ಕಾರ್ಯಕ್ರಮವನ್ನು ಹಮ್ಮಿಕೊಂಡು, ಅಗತ್ಯ ಕೌಶಲ್ಯಗಳನ್ನು ಕಲಿಸಿಕೊಡಲಿದೆ. ಬಳಿಕ, ಬೋಧಕ ವೃಂದದವರು ಇದನ್ನು ತಮ್ಮ ವಿದ್ಯಾರ್ಥಿಗಳಿಗೆ ತಿಳಿಸಲಿದ್ದಾರೆ ಎಂದರು.

 

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಅಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಡಾ.ಗೋಪಾಲಕೃಷ್ಣ ಜೋಶಿ, ಎನ್‌ಎಸ್‌ಇ ಇಂಡಿಯಾ ಲಿಮಿಟೆಡ್‌ನ ಪ್ರಧಾನ ಆರ್ಥಿಕ ತಜ್ಞ ಡಾ.ತೀರ್ಥಂಕರ್‌ ಪಟ್ನಾಯಕ್‌, ಎನ್‌ಎಸ್‌ಇ ಅಕಾಡೆಮಿ ಲಿಮಿಟೆಡ್‌ನ ಸಿಇಒ ಅಭಿಲಾಷ್‌ ಮಿಶ್ರ, ಮುಖ್ಯ ವ್ಯವಸ್ಥಾಪಕ ಎಸ್‌. ರಂಗನಾಥನ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios