Davanagere; ಸರ್ಕಾರಿ ಐಟಿಐ ಕಾಲೇಜ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಮಾಸ್ ಕಾಪಿ!
ದಾವಣಗೆರೆ ಜಿಲ್ಲೆಯಲ್ಲಿರುವ ಮಾಯಕೊಂಡ ಸರ್ಕಾರಿ ಐಟಿಐ ಕಾಲೇಜ್ ನ ವೃತ್ತಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ವಿಡಿಯೋ ವೈರಲ್ ಆಗಿದೆ.
ವರದಿ : ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಆ. 8): ದಾವಣಗೆರೆ ಜಿಲ್ಲೆಯಲ್ಲಿರುವ ಮಾಯಕೊಂಡ ಸರ್ಕಾರಿ ಐಟಿಐ ಕಾಲೇಜ್ ನ ವೃತ್ತಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ವಿಡಿಯೋ ವೈರಲ್ ಆಗಿದ್ದು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆಗಸ್ಟ್ 3 ರಂದು ಮತ್ತು 4 ರಂದು ನಡೆದ ದ್ವಿತೀಯ ವರ್ಷದ ಐಟಿಐ ವೃತ್ತಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಈ ಘಟನೆ ನಡೆದಿದೆ. ಪಿಟ್ಟರ್ ವಿಭಾಗದ ವೃತ್ತಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡುವುದನ್ನು ಯಾರೋ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಚೀಟಿ ಇಟ್ಟುಕೊಂಡು ರಾಜಾರೋಷವಾಗಿ ನಕಲು ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಎಚ್ಚೆತ್ತುಕೊಂಡಿರುವ ಬೆಂಗಳೂರು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕರಣ ಬಗ್ಗೆ ವರದಿ ಸಲ್ಲಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಈ ನಡುವೆ ಸಾಮಾಹಿಕ ನಕಲು ಮಾಡಿರುವ ವಿಚಾರವನ್ನು ಬಯಲಿಗೆಳೆದಿದ್ದಾರೆಂದು ಆರೋಪಿಸಿ ಉಪನ್ಯಾಸಕಿಗೆ ಬೆದರಿಕೆ ಕೂಡ ಹಾಕಲಾಗಿದೆ ಎಂದು ವರದಿ ತಿಳಿಸಿದೆ.
ಅತಿಥಿ ಉಪನ್ಯಾಸಕಿಗೆ ಜೀವ ಬೆದರಿಕೆ: ಈ ಮಧ್ಯೆ ಮಾಯಕೊಂಡ ಕಾಲೇಜ್ ನಲ್ಲಿ ಗೌರವ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ರೇಖಾ ಮಾಸ್ ಕಾಪಿ ಬಗ್ಗೆ ಹೊರಗಿನವರಿಗೆ ಮಾಹಿತಿ ನೀಡಿದ್ದಾರೆಂದು ಉಪನ್ಯಾಸಕಿಗೆ ಜೀವಬೆದರಿಕೆ ಕರೆ ಬಂದಿದೆ. ಜೀವ ಬೆದರಿಕೆ ಕರೆ ಬರಲು ಉಪಪ್ರಾಂಶುಪಾಲ ಕಾಳೀಚಾರ್ ಹಾಗು ಸಿದ್ದೇಶ್ ಕಾರಣ ಎಂದು ಉಪನ್ಯಾಸಕಿ ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಉಪನ್ಯಾಸಕಿ ಹೊರಗಿನ ವ್ಯಕ್ತಿಗಳಿಗೆ ಮಾಹಿತಿ ನೀಡಿ ಮಾಸ್ ಕಾಪಿ ಬಗ್ಗೆ ವಿಡಿಯೋ ಮಾಡಿಸಿದ್ದಾರೆ.. ಈ ಕಾಪಿ ರಹಸ್ಯ ಗೊತ್ತಾಗಲು ಅವರೇ ಕಾರಣ ಎಂದು ಕೆಲವರು ಉಪನ್ಯಾಸಕಿಗೆ ಜೀವಬೆದರಿಕೆ ಹಾಕಿದ್ದಾರೆ. ಆದ್ರೆ ಉಪನ್ಯಾಸಕಿ ಗೀತಾ ಇದಕ್ಕೆ ನಾನು ಕಾರಣ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
NTA JEE ಮೇನ್ಸ್ 2022 ಸೆಷನ್ 2 ಫಲಿತಾಂಶ ಪ್ರಕಟ: ನಿಮ್ಮ ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ..
ಐಟಿಐ ಕಾಲೇಜ್ ಜಂಟಿನಿರ್ದೇಶಕರ ನೇತೃತ್ವದಲ್ಲಿ ತನಿಖೆ: ಬೆಂಗಳೂರಿನ ಐಟಿಐ ಕಾಲೇಜ್ ಆಯುಕ್ತರಾದ ಜ್ಯೋತಿ ಪ್ರಾಥಮಿಕ ತನಿಖೆ ನಡೆಸಿ ಆಗಸ್ಟ್ 10 ರೊಳಗೆ ವರದಿ ನೀಡುವಂತೆ ಜಂಟಿನಿರ್ದೇಶಕರಿಗೆ ಸೂಚನೆ ನೀಡಿದ್ದರು. ಅದರಂತೆ ಇಂದು ಮಾಯಕೊಂಡ ಕಾಲೇಜ್ ಗೆ ಕೈಗಾರಿಕಾ ತರಬೇತಿ ಇಲಾಖೆ ಜಂಟಿ ನಿರ್ದೇಶಕರಾದ ವಿಜುಗೊಂಡ, ಜಿಲ್ಲಾ ಉದ್ಯೋಗ ಅಧಿಕಾರ ರವೀಂದ್ರ. ಡಿ. ಪರೀಕ್ಷಾ ಅದ್ಯಕ್ಷರಾದ ಸುರೇಶ್ ಕುಮಾರ್. ಎನ್, ವಿಜಯಕುಮಾರ್ ಸಪಾಲಿ,ದಾವಣಗೆರೆ ಕೈಗಾರಿಕಾ ತರಬೇತಿ ಕಾಲೇಜ್ ಪ್ರಾಂಶುಪಾಲರಾದ ಏಕನಾಥನ್ ಭೇಟಿ ನೀಡಿ ಮಾಯಕೊಂಡ ಕಾಲೇಜ್ ಪ್ರಾಂಶುಪಾಲರಾದ ಕಾಳಚಾರ್,ಸಿಬ್ಬಂದಿ ವರ್ಗದವರಿಂದ, ಗ್ರಾಮದ ಮುಖಂಡರಿಂದ ಮಾಹಿತಿ ಪಡೆದಿದ್ದಾರೆ.
ಯುಜಿಸಿ ನೆಟ್ ಫೇಸ್ 2 ಪರೀಕ್ಷೆ ಮುಂದೂಡಿಕೆ: ಪರಿಷ್ಕೃತ ಪರೀಕ್ಷಾ ದಿನಾಂಕ ಪ್ರಕಟ
ವಿದ್ಯಾರ್ಥಿಗಳ ಬಳಿ ಹಣ ಪಡೆದು ಪ್ರಾಯೋಗಿಕ ಪರೀಕ್ಷೆಗೆ ಅನುಕೂಲ ಮಾಡಿದ್ರಾ: ವಿದ್ಯಾರ್ಥಿಗಳ ಬಳಿ ತಲಾ 3 ಸಾವಿರ ರೂಪಾಯಿ ಕಲೆಕ್ಟ್ ಮಾಡಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಮಾಸ್ ಕಾಪಿ ಮಾಡಲು ಕಾಲೇಜ್ ಪ್ರಾಂಶುಪಾಲರು ಹೊರಗಿನ ವ್ಯಕ್ತಿ ಸೇರಿಕೊಂಡು ಕೃತ್ಯ ಎಸಗಿದ್ದಾರೆ ಎಂಬ ಆರೋಪ ಇದೆ. ಆರೋಪಕ್ಕೆ ಸಂಬಂಧಿಸಿದಂತೆ ವಿಡಿಯೋ ತುಣುಕುಗಳು ಸಾಕ್ಷ್ಯಗಳಾಗಿವೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಚೀಟಿ ತುಣುಕಗಳನ್ನು ಇಟ್ಟುಕೊಂಡು ಪರೀಕ್ಷೆ ಬರೆಯವುದು ಸ್ಪಷ್ಟವಾಗಿ ವಿಡಿಯೋ ದಲ್ಲಿವೆ. ಅಷ್ಟೇ ಅಲ್ಲದೇ ಪ್ರಾಯೋಗಿಕ ಪರೀಕ್ಷೆಗೆ ಹೊರಗಿನಿಂದ ರೆಡಿಮಾಡಿದ ಉಪಕರಣಗಳನ್ನು ತಂದು ಪ್ರದರ್ಶನ ಮಾಡಿ ಪರೀಕ್ಷೆ ಮುಗಿಸಲಾಗಿದೆ ಎಂಬ ಆರೋಪವು ಇದೆ. ಈ ಬಗ್ಗೆ ತನಿಖಾ ತಂಡ ವಿದ್ಯಾರ್ಥಿಗಳು ಪರೀಕ್ಷಾ ಮೇಲ್ವಿಚಾರಕರು, ವಿದ್ಯಾರ್ಥಿಗಳಿಂದ ಸಮಗ್ರ ಮಾಹಿತಿ ಪಡೆದಿದೆ.