ಅನೇಕ ಯುಕೆಜಿ ಮಕ್ಕಳಿಗೆ ಈ ವರ್ಷ ‘ಫೇಲ್’ ಭೀತಿ..!
1ನೇ ಕ್ಲಾಸ್ ಪ್ರವೇಶಾತಿಗೆ 6 ವರ್ಷ ತುಂಬಿರಬೇಕೆಂಬ ಸರ್ಕಾರದ ನಿಯಮದಿಂದ ಮಕ್ಕಳಿಗೆ ಫಜೀತಿ
ಲಿಂಗರಾಜು ಕೋರಾ
ಬೆಂಗಳೂರು(ಆ.07): ಮುಂಬರುವ ಶೈಕ್ಷಣಿಕ ವರ್ಷದಿಂದ (2023-24) ಮಕ್ಕಳನ್ನು 1ನೇ ತರಗತಿಗೆ ದಾಖಲಿಸಲು 6 ವರ್ಷ ಪೂರ್ಣಗೊಂಡಿರಬೇಕೆಂಬ ಶಿಕ್ಷಣ ಇಲಾಖೆಯ ಹೊಸ ನಿಯಮದಿಂದ ಪ್ರಸ್ತುತ ಎಲ್‌ಕೆಜಿ, ಯುಕೆಜಿಯಲ್ಲಿ ಓದುತ್ತಿರುವ ಸಾವಿರಾರು ಮಕ್ಕಳು ಅನಗತ್ಯವಾಗಿ ಒಂದು ವರ್ಷ ಮನೆಯಲ್ಲಿ ಉಳಿಯಬೇಕಾದ ಸ್ಥಿತಿಯ ಜತೆಗೆ ಪೋಷಕರಿಗೆ ಆರ್ಥಿಕ ಹೊರೆ ಬೀಳುವ ಆತಂಕ ಎದುರಾಗಿದೆ. ಈ ಹೊಸ ನಿಯಮದಿಂದ ಈಗಾಗಲೇ ಎಲ್‌ಕೆಜಿ, ಯುಕೆಜಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಹೆಚ್ಚು ಸಮಸ್ಯೆಯಾಗಲಿದೆ. ಈ ಹಿಂದೆ ನಿಗದಿಪಡಿಸಿದ್ದ ವಯೋಮಿತಿಯಂತೆ 3 ವರ್ಷ 5 ತಿಂಗಳು ತುಂಬಿದ ಮಕ್ಕಳನ್ನು ಈ ಬಾರಿ ಎಲ್‌ಕೆಜಿಗೆ ದಾಖಲಿಸಿಕೊಳ್ಳಲಾಗಿದೆ. ಅದೇ ರೀತಿ ಕಳೆದ ವರ್ಷ ಎಲ್‌ಕೆಜಿಯಲ್ಲಿದ್ದ ಮಕ್ಕಳು ಈಗ ಯುಕೆಜಿಯಲ್ಲಿದ್ದು, ಅವರಿಗೆ 4 ವರ್ಷ 5 ತಿಂಗಳು ಪೂರ್ಣಗೊಂಡಿದೆ. ಅವರಲ್ಲಿ ಬಹುತೇಕರಿಗೆ ಮುಂದಿನ ಶೈಕ್ಷಣಿಕ ವರ್ಷದ ಜೂ.1ಕ್ಕೆ 6 ವರ್ಷ ಪೂರ್ಣಗೊಳ್ಳುವುದಿಲ್ಲ. ಈ ಮಕ್ಕಳ ಭವಿಷ್ಯವೇನು ಎಂಬ ಪ್ರಶ್ನೆ ಉದ್ಭವಿಸಿದೆ.
ಇಂತಹ ಮಕ್ಕಳನ್ನು ಮತ್ತೆ ಯುಕೆಜಿಯಲ್ಲಿ ಉಳಿಸಿಕೊಂಡರೆ ಆ ಮಗುವನ್ನು ಫೇಲ್ ಮಾಡಿದಂತಾಗುತ್ತದೆ. ಇದು ಮಗುವಿನ ಮೇಲೆ ಮಾನಸಿಕ ಪರಿಣಾಮ ಬೀರುತ್ತದೆ. ಜೊತೆಗೆ ಪೋಷಕರಿಗೆ ಆರ್ಥಿಕ ನಷ್ಟವುಂಟಾಗುತ್ತದೆ. ಮತ್ತೊಮ್ಮೆ ಆ ಮಕ್ಕಳನ್ನು ಯುಕೆಜಿಯಲ್ಲಿ ಶಾಲೆಗಳು ಉಳಿಸಿಕೊಳ್ಳಲು ಹಿಂದೇಟು ಹಾಕಬಹುದು. ಒಂದು ವೇಳೆ ಇರಿಸಿಕೊಂಡರೂ ಶುಲ್ಕ ಪಾವತಿಸಬೇಕಾಗುತ್ತದೆ. ಪಾಸು ಮಾಡಿದರೆ 1ನೇ ತರಗತಿಗೆ ಪ್ರವೇಶ ನೀಡಲಾಗುವುದಿಲ್ಲ. ಹಾಗಾದರೆ ಅವರ ಪೋಷಕರಿಗೆ ನಿಮ್ಮ ಮಕ್ಕಳನ್ನು ಒಂದು ವರ್ಷ ಮನೆಯಲ್ಲಿಟ್ಟುಕೊಳ್ಳಿ ಎಂದು ಹೇಳಿದರೆ ಆರ್‌ಟಿಇ ಕಾಯ್ದೆ ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮಗಳ ಉಲ್ಲಂಘನೆಯಾಗುತ್ತದೆ. ಹಾಗಾಗಿ ಶಿಕ್ಷಣ ಇಲಾಖೆ ಅವೈಜ್ಞಾನಿಕವಾಗಿ 6 ವರ್ಷಗಳಿಗೆ ಪರಿಷ್ಕರಿಸಿರುವ 1ನೇ ತರಗತಿ ದಾಖಲಾತಿ ವಯೋಮಿತಿಯನ್ನು ಕೈಬಿಟ್ಟು ಈ ಹಿಂದೆ ಇದ್ದಂತೆ 5 ವರ್ಷ 5 ತಿಂಗಳಿಂದ 6 ವರ್ಷ 5 ತಿಂಗಳಿಗೆ ನಿಗದಿಪಡಿಸಿ ಮರು ಜಾರಿಗೊಳಿಸಬೇಕು ಎಂಬುದು ಶಾಲಾ ಆಡಳಿತ ಮಂಡಳಿಗಳು ಹಾಗೂ ಪೋಷಕರ ಆಗ್ರಹವಾಗಿದೆ.
ಬಡ ವಿದ್ಯಾರ್ಥಿಗಳಿಗೆ ‘ಬಿಬಿಎಂಪಿ ಟ್ಯೂಷನ್’
ಪ್ರವೇಶ ಪಡೆದಿರುವ ಮಕ್ಕಳಿಗೆ ವಿನಾಯಿತಿ ಕೊಡಲಿ: ಪೋಷಕರು
ಇಂತಹ ನಿಯಮ ತಂದ ಅಧಿಕಾರಿಗಳಿಗೆ ಕನಿಷ್ಠ ಈಗ ಎಲ್‌ಕೆಜಿ, ಯುಕೆಜಿ ಓದುತ್ತಿರುವ ಮಕ್ಕಳಿಗಾದರೂ 6 ವರ್ಷ ತುಂಬಿರಬೇಕೆಂಬ ನಿಯಮದಿಂದ ವಿನಾಯಿತಿ ನೀಡಬೇಕೆಂಬ ಅರಿವಿರಬೇಕಿತ್ತು. ಅದು ಇಲ್ಲದ ಕಾರಣಕ್ಕೆ ಇಂತಹ ಅವೈಜ್ಞಾನಿಕ ನಿರ್ಧಾರ ಮಾಡಲಾಗಿದೆ ಎಂದು ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳ ವಲಯದಲ್ಲಿ ಅಸಮಾಧಾನ, ಟೀಕೆಗಳು ವ್ಯಕ್ತವಾಗಿವೆ.
ವಾಪಸ್ ಪಡೆಯಲಿ
ಈಗಿನ ಮಕ್ಕಳ ದೈಹಿಕ ಮತ್ತು ಮಾನಸಿಕ ಪ್ರಗತಿ (ಅಡ್ವಾನ್ಸ್‌ಮೆಂಟ್) ಹಿಂದಿಗಿಂತ ಹೆಚ್ಚಿದೆ. ಹಾಗಾಗಿ ಶಾಲಾ ದಾಖಲಾತಿಗೆ ಇದುವರೆಗೆ ಇದ್ದ ವಯೋಮಿತಿ ಸಮರ್ಪಕವಾಗಿತ್ತು. ಈಗಿನ ರೂಲ್ ಮೈಡೆಂಡ್ ಅಧಿಕಾರಿಗಳು ಮಾಡಿರುವ ಅವೈಜ್ಞಾನಿಕ, ಅರ್ಥರಹಿತ ನಿರ್ಧಾರವನ್ನು ನಾವು ಖಂಡಿಸುತ್ತೇವೆ. ಸಂಬಂಧಿಸಿದ ಯಾರೊಂದಿಗೂ ಚರ್ಚಿಸದೆ 1ನೇ ತರಗತಿಗೆ 6 ವರ್ಷ ವಯೋಮಿತಿ ನಿಗದಿಪಡಿಸಿರುವುದು ಶಾಲೆಗಳು, ಪೋಷಕರು ಮತ್ತು ಮಕ್ಕಳು ಎಲ್ಲರಿಗೂ ಸಮಸ್ಯೆಯಾಗಲಿದೆ. ಇದನ್ನು ಹಿಂಪಡೆಯಬೇಕು ಅಂತ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಆರ್‌ಟಿಇ ಕಾಯ್ದೆ ಜಾರಿಯಾಗಿ 10 ವರ್ಷಗಳು ಕಳೆದಿವೆ. ಆದರೆ, ಶಿಕ್ಷಣ ಇಲಾಖೆಗೆ ಇನ್ನೂ ಕೂಡ ಮಕ್ಕಳ ದಾಖಲಾತಿ ಸಂಬಂಧ ಒಂದು ಸ್ಪಷ್ಟನಿರ್ಧಾರ, ನಿಯಮ ರೂಪಿಸಲಿಲ್ಲ. ಶಿಕ್ಷಣ ಇಲಾಖೆಗೆ ಒಬ್ಬೊಬ್ಬ ಆಯುಕ್ತರು ಬಂದಾಗಲೂ ಆರ್‌ಟಿಇ ಕಾಯ್ದೆಯನ್ನು ಒಂದೊಂದು ರೀತಿ ವ್ಯಾಖ್ಯಾನ ಮಾಡಿ ಒಂದೊಂದು ನಿರ್ಧಾರ ಮಾಡಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಕೂಡಲೇ 6 ವರ್ಷದ ವಯೋಮಿತಿಯನ್ನು ಹಿಂಪಡೆಯಬೇಕು ಅಂತ ಕರ್ನಾಟಕ ಖಾಸಗಿ ಶಾಲಾ ಪೋಷಕರ ಸಂಘಗಳ ಸಮನ್ವಯ ವೇದಿಕೆ ಅಧ್ಯಕ್ಷ ಬಿ.ಎನ್.ಯೋಗಾನಂದ ಹೇಳಿದ್ದಾರೆ.