ಬಡ ವಿದ್ಯಾರ್ಥಿಗಳಿಗೆ ‘ಬಿಬಿಎಂಪಿ ಟ್ಯೂಷನ್’
- ಬಡ ವಿದ್ಯಾರ್ಥಿಗಳಿಗೆ ‘ಬಿಬಿಎಂಪಿ ಟ್ಯೂಷನ್’
- 3-5ನೇ ತರಗತಿ ಮಕ್ಕಳಿಗೆ ಸಂಜೆ ಟ್ಯೂಷನ್
- ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಅವಕಾಶ
ಬೆಂಗಳೂರು (ಆ.7):ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ವಾಸಿಸುವ ಪ್ರದೇಶಗಳ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ’ ಕಾರ್ಯಕ್ರಮದ ಅಡಿ ಸಂಜೆ ಟ್ಯೂಷನ್ ಆರಂಭಿಸಲುಸುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದ್ದು, ಆಗಸ್ಟ್ 15ರಿಂದ ಪ್ರಾಯೋಗಿಕವಾಗಿ ನಗರದ 10 ಪ್ರದೇಶದಲ್ಲಿ ಪ್ರಾರಂಭವಾಗಲಿದೆ.
ಬಿಬಿಎಂಪಿ ಕಲ್ಯಾಣ ವಿಭಾಗದಿಂದ ಬಡ ವಿದ್ಯಾರ್ಥಿಗಳಿಗಾಗಿ ಸಂಜೆ 5.30ರಿಂದ 7ರವರೆಗೆ ಟ್ಯೂಷನ್ ಆರಂಭಿಸಲಾಗುತ್ತಿದೆ. ಕೊಳಗೇರಿ ಪ್ರದೇಶ ಸೇರಿದಂತೆ ಬಡವರು ಹೆಚ್ಚಾಗಿರುವ ಪ್ರದೇಶದ 3ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಲಿಕೆ, ತರಬೇತಿ, ಹೋಂ ವರ್ಕ್, ವಿವಿಧ ಕೌಶಲ ವೃದ್ಧಿಸುವ ಉದ್ದೇಶದಿಂದ ಈ ಅಧ್ಯಯನ ಕೇಂದ್ರ ಪ್ರಾರಂಭಿಸಲಾಗುತ್ತಿದೆ.
ವಿದ್ಯಾರ್ಥಿ ಚಿಕಿತ್ಸೆಗೆ 6 ತಿಂಗಳ ವೇತನ ಕೊಡ್ತಿದ್ದಾರೆ BBMP ಅಧಿಕಾರಿ
ಶನಿವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಪಾಲಿಕೆ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ರಾಮ್ ಪ್ರಸಾತ್ ಮನೋಹರ್, ಸದ್ಯ ಬಿಬಿಎಂಪಿ ಶಾಲಾ ಕೊಠಡಿಗಳನ್ನು ಬಳಕೆ ಮಾಡಿಕೊಳ್ಳಲಾಗುವುದು. ಸ್ಥಳೀಯ ಸಂಘ ಸಂಸ್ಥೆಗೆ ಈ ಅಧ್ಯಯನ ಕೇಂದ್ರಗಳ ಉಸ್ತುವಾರಿ ನೀಡಲಾಗುವುದು. ಸಂಘ-ಸಂಸ್ಥೆಗಳು ಮಕ್ಕಳ ಕಲಿಕೆಗೆ ಅಗತ್ಯವಿರುವ ಕಲಿಕಾ ಸಾಮಗ್ರಿ ಪೂರೈಕೆ ಮಾಡಲಿದೆ. ಪದವಿ, ಸ್ನಾತಕೋತ್ತರ ಪದವಿ ಪೂರೈಸಿದ ಸ್ವಯಂ ಸೇವಕ ಯುವಕ ಯುವತಿಯರ ಮೂಲಕ ಮಕ್ಕಳಿಗೆ ಬೋಧನೆ, ತರಬೇತಿ ನೀಡಲಾಗುತ್ತದೆ. ಪಾಲಿಕೆಯಿಂದ ಈ ಯುವಕ ಯುವತಿಯರಿಗೆ ಮಾಸಿಕ .1,500 ಗೌರವಧನ ನೀಡಲಾಗುವುದು ಎಂದರು.
ಪ್ರತಿ ಕೇಂದ್ರದಲ್ಲಿ 25ರಿಂದ 30 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಬಿಬಿಎಂಪಿ ಶಾಲೆ ಮಾತ್ರವಲ್ಲದೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಈ ಅಧ್ಯಯನ ಕೇಂದ್ರಗಳಿಗೆ ಪ್ರವೇಶ ಪಡೆಯಬಹುದಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಯೋಜನೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ನಗರದಲ್ಲಿ 200ರಿಂದ 300 ಅಧ್ಯಯನ ಕೇಂದ್ರ ಆರಂಭಿಸುವುದಕ್ಕೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಕೊಳಗೇರಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಮನೆಯಲ್ಲಿ ಕಲಿಕೆಗೆ ಬೇಕಾದ ಪೂರಕ ವಾತಾವರಣದ ಕೊರತೆ ಇರುತ್ತದೆ. ಪೋಷಕರಿಗೆ ಮಕ್ಕಳಿಗೆ ಕಲಿಸುವಷ್ಟುಶಿಕ್ಷಣ ಇರುವುದಿಲ್ಲ. ಅಂತಹ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಬಿಬಿಎಂಪಿ ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರಗಳನ್ನು ಆರಂಭಿಸುತ್ತಿದೆ.
-ಡಾ. ರಾಮ್ ಪ್ರಸಾತ್ ಮನೋಹರ್, ವಿಶೇಷ ಆಯುಕ್ತ, ಪಾಲಿಕೆ ಕಲ್ಯಾಣ ವಿಭಾಗ
ಪ್ರಾಯೋಗಿಕ ಟ್ಯೂಷನ್ ಸ್ಥಳಗಳು:
- .ಕ್ಲೀವ್ ಲ್ಯಾಂಡ್ ಟೌನ್ ಬಿಬಿಎಂಪಿ ಶಾಲಾ-ಕಾಲೇಜು
- .ಭೈರವೇಶ್ವರ ನಗರ ಬಿಬಿಎಂಪಿ ಶಾಲಾ-ಕಾಲೇಜು
- .ಶ್ರೀರಾಮಪುರ ಬಿಬಿಎಂಪಿ ಶಾಲಾ-ಕಾಲೇಜು
- .ಕಸ್ತೂರಿ ಬಾ ನಗರ ಬಿಬಿಎಂಪಿ ಶಾಲಾ-ಕಾಲೇಜು
- .ಆಸ್ಟೀನ್‌ಟೌನ್ ಬಾಲಕರ ಶಾಲೆ
- .ಗಂಗಾನಗರ ಪಾಲಿಕೆ ಪ್ರೌಢ ಶಾಲೆ
- .ಪಾದರಾಯನಪುರ ಪಾಲಿಕೆ ಶಾಲೆ-ಕಾಲೇಜು
- .ಮತ್ತೀಕೆರೆ ಬಿಬಿಎಂಪಿ ಶಾಲಾ-ಕಾಲೇಜು
- .ವಿಜಯನಗರ ಬಿಬಿಎಂಪಿ ಶಾಲಾ-ಕಾಲೇಜು
- .ಪಿಳ್ಳಣ್ಣ ಗಾರ್ಡ್‌ನ್ ಬಿಬಿಎಂಪಿ ಶಾಲಾ-ಕಾಲೇಜು