ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮುಂದಿನ ವರ್ಷದಿಂದ 5 ನೂತನ ಶೈಕ್ಷಣಿಕ ವಿಭಾಗ ಆರಂಭ

ಉದ್ಯೋಗ ಬೇಡಿಕೆಗೆ ಅನುಗುಣವಾಗಿ ಮುಂದಿನ ವರ್ಷದಿಂದ 5 ನೂತನ ಶೈಕ್ಷಣಿಕ ವಿಭಾಗ ಆರಂಭ. ಮಂಗಳೂರು ವಿವಿ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ. 

Mangalore University starts 5 new academic departments from next year gow

ಮಂಗಳೂರು (ಡಿ.19): ಉದ್ಯೋಗ ಬೇಡಿಕೆಗೆ ಅನುಗುಣವಾಗಿ ಮಂಗಳೂರು ವಿವಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಐದು ನೂತನ ಶೈಕ್ಷಣಿಕ ವಿಭಾಗ ಆರಂಭಿಸಲಾಗುವುದು ಎಂದು ಕುಲಪತಿ ಪೊ›.ಪಿ.ಎಸ್‌. ಯಡಪಡಿತ್ತಾಯ ತಿಳಿಸಿದ್ದಾರೆ. ಮಂಗಳೂರು ವಿವಿಯಲ್ಲಿ ಈ ಶೈಕ್ಷಣಿಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ವಿಚಾರ ಪ್ರಕಟಿಸಿದರು. ಸಭೆಯಲ್ಲಿ ಈ ಘೋಷಣೆಗೆ ಅನುಮೋದನೆ ನೀಡಲಾಯಿತು. ಸ್ನಾತಕೋತ್ತರ ಮೆಲಿಕ್ಯುಲರ್‌ ಬಯೋಲಜಿ, ಸ್ನಾತಕೋತ್ತರ ಫುಡ್‌ ಸೈನ್ಸ್‌ ಆ್ಯಂಡ್‌ ನ್ಯೂಟ್ರಿಷನ್‌ ಅಧ್ಯಯನ ಸಂಶೋಧನೆ, ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ಅಧ್ಯಯನ ಮತ್ತು ಸಂಶೋಧನೆ, ಸ್ನಾತಕೋತ್ತರ ಎಂಬಿಎ ಹೆಲ್ತ್ ಸೇಫ್ಟಿಆ್ಯಂಡ್‌ ಎನ್ವರಾನ್ಮೆಂಟ್‌ ವಿಭಾಗ ಮತ್ತು ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಸ್ನಾತಕೋತ್ತರ ಪ್ರಾಚೀನ ಇತಿಹಾಸ ಪುರಾತತ್ವ ಶಾಸ್ತ್ರ ವಿಭಾಗ 2023ನೇ ಸಾಲಿನಲ್ಲಿ ಆರಂಭಗೊಳ್ಳಲಿದೆ ಎಂದು ಕುಲಪತಿ ತಿಳಿಸಿದರು.

ಬೆಂಗಳೂರು, ಮೈಸೂರು ವಿವಿ, ಮಣಿಪಾಲ್‌ ಸ್ಕೂಲ್‌ ಆಫ್‌ ಲೈಫ್‌ ಸೈನ್ಸ್‌ ಕೇರಳದ ಕಣ್ಣೂರು ವಿವಿಗಳಲ್ಲಿ ಆರಂಭಗೊಂಡಿರುವ ಹೊಸ ಐದು ಶೈಕ್ಷಣಿಕ ವಿಭಾಗಗಳಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ನೆರವಾಗಲಿದೆ ಎಂದರು.

ವಿವಿ ಕ್ಯಾಂಪಸ್‌ನಲ್ಲಿ ಪಿಜಿ ಡಿಪ್ಲೊಮಾ ಇನ್‌ ಸೈಬರ್‌ ಸೆಕ್ಯುರಿಟಿ ಆ್ಯಂಡ್‌ ಎಥಿಕಲ್‌ ಹ್ಯಾಕಿಂಗ್‌ ಎಂಬ ಕೋರ್ಸ್‌ ರಾಜ್ಯಪಾಲರಿಂದ ಅನುಮೋದನೆಗೊಂಡಿದ್ದು, ಇದು ಕೂಡ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳಲಿದೆ ಎಂದು ಪ್ರೊ. ಯಡಪಡಿತ್ತಾಯ ತಿಳಿಸಿದರು.

ವಿವಿ ಅಧೀನದ ಸ್ವಾಯತ್ತ ಕಾಲೇಜುಗಳ ನಿರ್ವಹಣೆ ಅನುಶಾಸನ ತಿದ್ದುಪಡಿ, ಪರಿಸರ ಅಧ್ಯಯನದ ಪರಿಷ್ಕೃತ ಪಠ್ಯಕ್ರಮ ಹಾಗೂ ಈ ಕೋರ್ಸ್‌ ನ ಉಪನ್ಯಾಸಕರ ವಿದ್ಯಾರ್ಹತೆ ನಿಗದಿ, ಸ್ಪೋಟ್ಸ್‌ ಮತ್ತು ಯೋಗ ಮೌಲ್ಯಾಧಾರಿತ ಕೋರ್ಸ್‌ಗಳ ಪಠ್ಯಕ್ರಮ, ವಿವಿಯ ಉದ್ಯೋಗಿಗಳ ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ ನಿಯಮಗಳ ಪರಿನಿಯಮ ತಿದ್ದುಪಡಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಪಿಎಚ್‌ಡಿ ಕೋರ್ಸ್‌ ಪರಿಷ್ಕೃತ ಪಠ್ಯಕ್ರಮ ಅಳವಡಿಕೆಗೆ ಅನುಮೋದನೆ ನೀಡಲಾಯಿತು. ಕುಲಸಚಿವ ಡಾ. ಕಿಶೋರ್‌ ಕುಮಾರ್‌ ಸಿ.ಕೆ., ಪರೀಕ್ಷಾಂಗ ಕುಲಸಚಿವ ಪೊ›.ಪಿ.ಎಲ್ ಧರ್ಮ ಹಾಗೂ ಹಣಕಾಸು ಅಧಿಕಾರಿ ಪೊ›.ವೈ. ಸಂಗಪ್ಪ ಇದ್ದರು.

ಮಂಗಳೂರು ವಿ.ವಿ.-ಬೆಂಗಳೂರು ಬ್ರೆಟ್‌ ಸೊಲ್ಯೂಷನ್‌ ಒಡಂಬಡಿಕೆ
ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ಹಾಗೂ ಪದವಿ ಅಥವಾ ಸ್ನಾತಕೋತ್ತರ ಪದವಿ ಸಂದರ್ಭದಲ್ಲಿಯೇ ಪ್ರವೇಶಮಟ್ಟದ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಹೆಸರಾಂತ ತರಬೇತಿ ಸಂಸ್ಥೆಯಾದ ಬ್ರೆಟ್‌ ಸೊಲ್ಯುಷನ್‌ ಪ್ರೈವೇಟ್‌ ಲಿಮಿಟೆಡ್‌ ನ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದೆ.

ಪ್ರವೇಶಮಟ್ಟದ ಉದ್ಯೋಗಗಳಿಗಾಗಿ ಕೇಂದ್ರ/ರಾಜ್ಯ ಸರ್ಕಾರಗಳು, ಬ್ಯಾಂಕ್‌, ವಿಮಾ ಸಂಸ್ಥೆಗಳು, ರೈಲ್ವೇ, ಎಸ್‌ ಎಸ್‌ ಸಿ , ಕೆಪಿಎಸ್ಸಿ, ಯುಪಿಎಸ್ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಸೂಕ್ತವಾದ ಉದ್ಯೋಗಾಧಾರಿತ ಡಿಪ್ಲೊಮಾ ಮತ್ತು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ ಗಳನ್ನು ನೀಡುವಲ್ಲಿ ಈ ತಿಳುವಳಿಕಾ ಒಪ್ಪಂದ ಮಾಡಲಾಗಿದೆ.

Haveri: ತೇನ್‌ಸಿಂಗ್‌ ಕತೆ ಹೇಳಿ ಮಕ್ಕಳಿಗೆ ದೃಢಸಂಕಲ್ಪದ ಪಾಠ ಮಾಡಿದ ಸಿಎಂ ಬೊಮ್ಮಾಯಿ

ಮಂಗಳೂರು ವಿ.ವಿ. ಕುಲಸಚಿವ ಪ್ರೊ.ಕಿಶೋರ್‌ ಕುಮಾರ್‌ ಸಿ.ಕೆ. ಹಾಗೂ ಬ್ರೆಟ್‌ ಸೊಲ್ಯೂಷನ್‌ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶೋಕ ಹೆಗ್ಡೆ ಬಿ.ಆರ್‌. ಅವರು ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಸ್‌.ಯಡಪಡಿತ್ತಾಯ ಹಾಗೂ ಇತರ ಗಣ್ಯರ ಉಪಸ್ಥಿತಿಯೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿ ವಿನಿಮಯ ಮಾಡಿಕೊಂಡರು.

ಎನ್‌ಇಪಿಯಲ್ಲಿ ಕೇವಲ ಶೈಕ್ಷಣಿಕ ಸಂಗತಿಗಳ ಕುರಿತು ಪ್ರಸ್ತಾಪ, ಶಿಕ್ಷಕರ ಸಮಸ್ಯೆ ಬಗೆಗಿಲ್ಲ: ಹನುಮಂತಯ್ಯ ವಿಷಾದ

ಈ ಒಪ್ಪಂದದ ಅಡಿಯಲ್ಲಿ ಡಿಪ್ಲೊಮಾ, ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳನ್ನು ಹಾಗೂ ಅಲ್ಪಾವಧಿಯ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಮಂಗಳೂರು ವಿ.ವಿ.ಯ ಎಲ್ಲಾ ಸಂಯೋಜಿತ ಕಾಲೇಜಿಗಳಲ್ಲಿನ ಎಲ್ಲಾ ವಿದ್ಯಾರ್ಥಿ, ಅಭ್ಯರ್ಥಿಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಬ್ರೆಟ್‌ ಸೊಲ್ಯೂಷನ್‌ ಸಂಸ್ಥೆ ನಿರ್ದೇಶಕರಾದ ಎನ್‌.ವಿ.ಜೆ.ಕೆ.ಭಟ್‌ ಹಾಗೂ ವಿಶ್ವವಿದ್ಯಾಲಯದ ವಿವಿಧ ಅಧಿಕಾರಿಗಳು ಹಾಜರಿದ್ದರು.

Latest Videos
Follow Us:
Download App:
  • android
  • ios