Asianet Suvarna News Asianet Suvarna News

ಎನ್‌ಇಪಿ ಅನುಷ್ಠಾನದಿಂದ ಬಹುದೊಡ್ಡ ಬದಲಾವಣೆ: ಡಾ.ಕೆ. ಕಸ್ತೂರಿರಂಗನ್‌

ಹೊಸ ಶಿಕ್ಷಣ ನೀತಿಯಿಂದ ದೇಶದಲ್ಲಿ ಬಹುದೊಡ್ಡ ಬದಲಾವಣೆಯನ್ನು ವಿವಿಧ ಹಂತಗಳಲ್ಲಿ ತರಬಹುದಾಗಿದೆ ಎಂದ ಡಾ.ಕೆ.ಕಸ್ತೂರಿರಂಗನ್‌ 

Major Change From Implementation of NEP Says Dr K Kasturirangan  grg
Author
First Published Nov 26, 2022, 11:30 AM IST

ಬಾಗಲಕೋಟೆ(ನ.26):  ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಿಂದ ಹೊಸ ಸಂಶೋಧನೆಗಳಿಗೆ ಅವಕಾಶ ತೆರೆದುಕೊಳ್ಳುವುದರ ಜೊತೆಗೆ ಸೃಜನಶೀಲತೆಯ ಶಿಕ್ಷಣಕ್ಕೆ ಮತ್ತು ಔದ್ಯೋಗಿಕ ಅವಕಾಶಗಳಿಗೆ ಬಹುದೊಡ್ಡ ಬಲ ಬರಲಿದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಅಧ್ಯಕ್ಷರು, ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು ಡಾ.ಕೆ.ಕಸ್ತೂರಿರಂಗನ್‌ ಹೇಳಿದರು. ಬಾಗಲಕೋಟೆಯ ಬಿವಿವಿ ಸಂಘ ತನ್ನ ಅಧೀನ ಸಂಸ್ಥೆಗಳಾದ ಬಸವೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯಗಳ ಅಮೃತ-ಸುವರ್ಣ ಸಂಗಮ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಹೊಸ ಶಿಕ್ಷಣ ನೀತಿಯಿಂದ ದೇಶದಲ್ಲಿ ಬಹುದೊಡ್ಡ ಬದಲಾವಣೆಯನ್ನು ವಿವಿಧ ಹಂತಗಳಲ್ಲಿ ತರಬಹುದಾಗಿದೆ ಎಂದರು.

ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಹೊಸ ಶಿಕ್ಷಣದ ನೀತಿ ಹಲವು ಬದಲಾವಣೆಗಳನ್ನು ಕಂಡುಕೊಂಡಿದೆ. ಆರಂಭಿಕವಾಗಿ ಮಕ್ಕಳ ಗ್ರಹಿಕೆ ಶಕ್ತಿಯನ್ನು ಗುರುತಿಸುವುದರಿಂದ ಹಿಡಿದು ಪಪೂ ಹಾಗೂ ಉನ್ನತ ಶಿಕ್ಷಣದ ಸಂದರ್ಭದಲ್ಲಿ ಬೇಕಾದ ಶೈಕ್ಷಣಿಕ ಅರ್ಹತೆ ಮತ್ತು ಅವಶ್ಯಕತೆಗಳನ್ನು ಅಳವಡಿಸಿಕೊಳ್ಳಲು ಅಗತ್ಯವಾಗಿರುವ ನೀತಿಯನ್ನು ಹೊಸ ಶಿಕ್ಷಣ ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಆ ಮೂಲಕ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣಕ್ಕೆ ಬೇಕಾದ ಅವಶ್ಯಕತೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

NEP ಯಲ್ಲಿ ಮಾತೃಭಾಷೆ ಶಿಕ್ಷಣಕ್ಕೆ ಆದ್ಯತೆ: ಸಚಿವ ನಾಗೇಶ್‌

ಮೂರರಿಂದ 8 ವಯಸ್ಸಿನ ಮಕ್ಕಳಲ್ಲಿನ ಗ್ರಹಿಕೆ, 14 ರಿಂದ 18 ವಯಸ್ಸಿನ ಮಕ್ಕಳಲ್ಲಿನ ಶೈಕ್ಷಣಿಕ ಸಾಮರ್ಥ್ಯ ಮತ್ತು ಉನ್ನತ ಶಿಕ್ಷಣಕ್ಕೆ ಬೇಕಾದ ಅವಶ್ಯಕತೆಗಳನ್ನು ಹೊಸ ಶಿಕ್ಷಣ ನೀತಿಯಲ್ಲಿ ತಂದಿದ್ದರ ಪರಿಣಾಮ ನಿರಂತರ ಕಲಿಕೆ ಮತ್ತು ಸಂಶೋಧನಾ ಕ್ಷೇತ್ರವನ್ನು ವಿಸ್ತರಿಸಿಕೊಳ್ಳಲು ಇರುವ ಅವಕಾಶಗಳಿಗೆ ಆದ್ಯತೆ ನೀಡಲಾಗಿದೆ. ಹೀಗಾಗಿ ಬರುವ ದಿನಗಳಲ್ಲಿ ಹೊಸ ಶಿಕ್ಷಣ ನೀತಿಯ ಲಾಭ ದೇಶದೆಲ್ಲೆಡೆ ದೊರೆಯಲಿದ್ದು, ಪ್ರಧಾನಿ ಮೋದಿ, 2020ರಲ್ಲಿ ಜಾರಿಗೆ ತಂದ ಹೊಸ ಶಿಕ್ಷಣ ನೀತಿಯ ಸಂದರ್ಭದಲ್ಲಿ ನೆರವಾದ ಸ್ಮೃತಿ ಇರಾನಿ ಸದ್ಯದ ಮಾನವ ಸಂಪನ್ಮೂಲ ಸಚಿವರಾದ ಧರ್ಮೆಂದ್ರ ಪ್ರದಾನ ಅವರನ್ನು ಕಸ್ತೂರಿ ರಂಗನ್‌ ಅವರು ಅಭಿನಂದಿಸಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಮಾಜಿ ಸಂಸದ ಡಾ.ಪ್ರಭಾಕರ ಕೋರೆ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಬಿವಿವಿ ಸಂಘ ಸೇರಿದಂತೆ ಕೆಎಲ್‌ಇ, ಬಿಎಲ್‌ಡಿ, ಬಳ್ಳಾರಿಯ ವೀರಶೈವ ಶಿಕ್ಷಣ ಸಂಸ್ಥೆಯ ಕಾರ್ಯವನ್ನು ನೆನಪಿಸಿದರಲ್ಲದೆ, ಈ ಎಲ್ಲ ಸಂಸ್ಥೆಗಳಿಂದ ಉತ್ತಮ ಸಾಧಕರನ್ನು, ಉತ್ತಮ ರಾಜಕಾರಣಿಗಳನ್ನು ನೀಡಿದ ತೃಪ್ತಿ ನನಗಿದೆ ಎಂದರು.

ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಈ ದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಬುದ್ದಿ ಜೀವಿಗಳು ಬೇರೆ ದೇಶಕ್ಕೆ ಹೋಗುತ್ತಾರೆ. ಪ್ರಮುಖವಾಗಿ ಶಿಕ್ಷಣದಲ್ಲಿ ಆಗಬೇಕಾದ 4 ಬದಲಾವಣೆಗಳನ್ನು ಪ್ರಸ್ತಾಪಿಸಿದರು.

ಆಂಧ್ರಪ್ರದೇಶದ ಕೇಂದ್ರಿಯ ಆದಿವಾಸಿ ವಿವಿಯ ಕುಲಪತಿ ಪ್ರೊ.ತೇಜಸ್ವಿ ಕಟ್ಟಿಮನಿ ಮಾತನಾಡಿ, ಕರ್ನಾಟಕದಲ್ಲಿ ಮಾತ್ರ ಮಠಾಧೀಶರ ಮೂಲಕ ಶಿಕ್ಷಣ ನೀಡಿದ ಕೀರ್ತಿ ನಮ್ಮದಾಗಿದೆ. ಇಡೀ ದೇಶದಲ್ಲಿ ಇಂತಹ ಪ್ರಯತ್ನಗಳು ನಡೆದಿಲ್ಲ. ಗ್ರಾಮೀಣ ಬದುಕೆ ಹಲವು ರೀತಿಯ ಬದುಕಿನ ಶಿಕ್ಷಣವನ್ನು ನೀಡುತ್ತದೆ. ಉಳಿದ ಶಿಕ್ಷಣವು ನಮ್ಮನ್ನು ಪರ್ಯಾಯ ಬದುಕಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಇದೇ ಶಿಕ್ಷಣ ಸಂಸ್ಥೆಯಲ್ಲಿ ಕಲೆತ ದಿನಗಳನ್ನು ನೆನಪು ಮಾಡಿಕೊಂಡರು. ಸಚಿವ ಗೋವಿಂದ ಕಾರಜೋಳ ಅವರು ಮಾತನಾಡದೇ ಎಲ್ಲರ ಭಾಷಣ ಆಲಿಸಿದ್ದು ವಿಶೇಷವಾಗಿತ್ತು. ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ.ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ನಡೆದು ಬಂದ ದಾರಿ ಮತ್ತು ಎದುರಿಸಿದ ಸವಾಲುಗಳನ್ನು ಮೆಲಕು ಹಾಕಿದರು. ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ವಿವಿಧ ಸಂಸ್ಥೆಗಳ ಸ್ಮರಣ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು. ಪ್ರಾಸ್ತಾವಿಕವಾಗಿ ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಜೆ.ಸಿ.ತಲ್ಲೂರ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ ಸ್ವಾಗತಿಸಿದರು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು ಉಪಸ್ಥಿತರಿದ್ದರು.

ಎನ್‌ಇಪಿ ಲೋಪಗಳನ್ನು ಕಸ್ತೂರಿರಂಗನ ಗಮನಕ್ಕೆ ತಂದ ಬಸವರಾಜ

ನೂತನವಾಗಿ ಜಾರಿಗೊಳಿಸಲಾಗಿರುವ ಹೊಸ ಶಿಕ್ಷಣ ನೀತಿಯಲ್ಲಿನ ಕೆಲವು ಅಂಶಗಳ ಕುರಿತು ಲೋಪಗಳಿವೆ ಎಂದು ಹೇಳಿದ ಬಸವರಾಜ ಪಾಟೀಲ ಸೇಡಂ, ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯಲ್ಲಿ ಒಂದಿಷ್ಟುಬದಲಾವಣೆಗಳು ತರಬಹುದಾಗಿದೆ ಎಂದು ವೇದಿಕೆಯಲ್ಲಿ ಉಪಸ್ಥಿತರಿದ್ದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಧ್ಯಕ್ಷರಾದ ಕಸ್ತೂರಿರಂಗನ್‌ ಅವರ ಗಮನಕ್ಕೆ ತಂದರು. ಇದಕ್ಕೆ ಧ್ವನಿ ಗೂಡಿಸಿದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಪ್ರಭಾಕರ ಕೋರೆ ಪ್ರಾಥಮಿಕ ಶಿಕ್ಷಣ ಮತ್ತು ನೀಟ್‌ ಶಿಕ್ಷಣದ ಕುರಿತು ಪ್ರಸ್ತಾಪಿಸಿದರು.

ದೇಶದಲ್ಲಿ ಜಾರಿಗೊಳಿಸಲಾದ ಹೊಸ ಶಿಕ್ಷಣ ನೀತಿಯನ್ನು ಕರ್ನಾಟಕ ರಾಜ್ಯದಲ್ಲಿ ಆಸಕ್ತಿವಹಿಸಿ ಜಾರಿಗೊಳಿಸಿರುವ ರಾಜ್ಯ ಸರ್ಕಾರ ಹಾಗೂ ವಿಶೇಷವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತನಾರಾಯನ ಅವರಿಗೆ ಅಭಿನಂದನೆಗಳು ಅಂತ ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಪದ್ಮವಿಭೂಷಣ ಪುರಸ್ಕೃತರು, ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಅಧ್ಯಕ್ಷ ಡಾ.ಕೆ.ಕಸ್ತೂರಿರಂಗನ್‌ ತಿಳಿಸಿದ್ದಾರೆ. 

ರಾಷ್ಟ್ರೀಯ ಶಿಕ್ಷಣ ನೀತಿ ಚೆನ್ನಾಗಿದೆ, ಆದರೆ ಅದಕ್ಕೆ ಕಡಿವಾಣ ಇಲ್ಲ: ರೋಹಿತ್ ಚಕ್ರತೀರ್ಥ

ಸರ್ಕಾರ ಮಾಡುವುದಕ್ಕಿಂತಲೂ ಹೆಚ್ಚು ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಿವೆ. ನಮ್ಮನ್ನು ಸ್ವತಂತ್ರವಾಗಿ ಸರ್ಕಾರಗಳು ಕೈಬಿಟ್ಟು ಪ್ರೋತ್ಸಾಹಿಸಿದರೇ ಮತ್ತಷ್ಟುಉತ್ತಮ ಕೆಲಸ ಕಾರ್ಯಗಳನ್ನು ಮಾಡುವೆವು ಅಂತ ಮಾಜಿ ಸಂಸದ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ. 

ಶಿಕ್ಷಣ ಜ್ಞಾನಕ್ಕಾಗಿ ಇದ್ದರೂ ಉದ್ಯೋಗಕ್ಕೆ ಆದ್ಯತೆ ಅನಿವಾರ್ಯವಾಗಿದೆ. ಗ್ರಾಮಗಳ ಆತ್ಮವಾಗಿರುವ ಈ ದೇಶದಲ್ಲಿ ಗ್ರಾಮಗಳಲ್ಲಿನ ಆತ್ಮಗಳೇ ಸತ್ತುಹೋಗಿದೆ. ಕೃಷಿ ಈ ದೇಶದಕ್ಕೆ ಅನ್ನ ನೀಡುತ್ತಿದ್ದರೂ ಅವನ ಬದುಕು ಸುಧಾರಣೆಯಾಗದಷ್ಟುಕೆಟ್ಟು ಹೋಗಿವೆ. ಇದಕ್ಕೆ ಶಿಕ್ಷಣದಲ್ಲಿನ ಕೆಲವು ದೋಷಗಳು ಸಹ ಕಾರಣವಾಗಿವೆ ಅಂತ ಮಾಜಿ ಸಂಸದ, ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಸೇಡಂ ತಿಳಿಸಿದ್ದಾರೆ. 
 

Follow Us:
Download App:
  • android
  • ios