ಚೀನಾದ ಶಾಲೆಯೊಂದರಲ್ಲಿ ಮಕ್ಕಳಿಗೆ ಅಡುಗೆ ಮಾಡುವುದು, ತರಕಾರಿ ಬೆಳೆಯುವುದು, ಕೂದಲು ಕತ್ತರಿಸುವುದು, ಬಟ್ಟೆ ಹೊಲಿಯುವುದು ಮುಂತಾದ ಜೀವನ ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಈ ವೀಡಿಯೋ ವೈರಲ್ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮಲ್ಲನೇಕ ಬೆಳೆದು ಉದ್ಯೋಗ ಮಾಡುತ್ತಿರುವ ಮಕ್ಕಳಿಗೆ ಅಡುಗೆ ಮಾಡೋದಿಕೆ ಬರಲ್ಲ, ಹೊಟೇಲ್ ರೆಸ್ಟೋರೆಂಟ್ ಅಂತ ತಿಂದು ದುಡಿಮೆಯ ಅರ್ಧ ಹಣವನ್ನು ಹೊಟೇಲ್‌ಗಳಿಗೆ ಸುರಿದು ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಶಾಲೆಯಲ್ಲಿ ಉನ್ನತ ಡಿಗ್ರಿ ಮಾಡಿದ ಅನೇಕರಿಗೆ ಉದ್ಯೋಗವಿಲ್ಲ. ಬೇರೆ ಕೆಲಸಗಳು ಬೇಕಾದಷ್ಟು ಇದ್ದರೂ ಕೈಕಾಲು ಮಣ್ಣು ಆಗುವ ಕೆಲಸ ಮಾಡುವುದಕ್ಕೆ ಮನಸ್ಸು ಒಪ್ಪುತ್ತಿಲ್ಲ. ಇದಕ್ಕೆ ಕಾರಣ ಪೋಷಕರು ಮಕ್ಕಳನ್ನು ಬೆಳೆಸಿರುವ ರೀತಿ. ಪುಟ್ಟ ಮಕ್ಕಳ ಕೈಯಲ್ಲಿ ಸಣ್ಣ ಚಾಕು ಕತ್ತರಿಯನ್ನು ಕೊಡಲು ಪೋಷಕರು ಹೆದರುತ್ತಾರೆ. ಇನ್ನು ಶಾಲೆಗೆ ಹೋಗುವ ಮಕ್ಕಳು ಶಾಲೆಯಿಂದ ಬಂದು ಟ್ಯೂಷನ್ ನಂತರ ಮೊಬೈಲ್ ಫೋನ್ ಅಂತ ಕಣ್ಣು ಸುಸ್ತಾಗುವವರೆಗೂ ಮೊಬೈಲ್ ನೋಡ್ತಾರೆ. ಆದರೆ ಚೀನಾದ ಶಾಲೆಯೊಂದರ ಈ ವೀಡಿಯೋ ನೋಡಿದರೆ ನೀವು ಅಚ್ಚರಿಗೊಳ್ಳುವುದು ಪಕ್ಕಾ.
ಇಲ್ಲಿ ಪುಟ್ಟ ಮಕ್ಕಳು ಚಪಾತಿ ಮಾಡುವುದರಿಂದ ಹಿಡಿದು ತರಕಾರಿ ಬೆಳೆಯುವುದು ಕೂದಲು ಕತ್ತರಿಸುವುದು ಬಟ್ಟೆ ಹೊಲಿಯುವುದು ಸೇರಿದಂತೆ ಪ್ರತಿಯೊಂದು ಕೆಲಸವನ್ನು ಇಲ್ಲಿ ಮಕ್ಕಳಿಗೆ ಎಳವೆಯಲ್ಲೇ ಕಲಿಸಲಾಗುತ್ತಿದ್ದು, ಮಕ್ಕಳು ಬಹಳ ಆಸಕ್ತಿಯಿಂದ ಈ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ವೀಡಿಯೋದಲ್ಲಿ ಕಾಣುತ್ತಿದೆ.
Molly teacher traveler ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದೆ. ನಮ್ಮ ಚೀನೀ ಕಿಂಡರ್‌ಗಾರ್ಟನ್‌ನಲ್ಲಿ, ಮಕ್ಕಳು ಅಡುಗೆ ಮಾಡುವುದು, ಸ್ವಚ್ಛಗೊಳಿಸುವುದು ಮತ್ತು ತಮ್ಮನ್ನು ತಾವು ನೋಡಿಕೊಳ್ಳುವುದು ಹೇಗೆ ಎಂಬುದನ್ನು ಕಲಿಯುತ್ತಿದ್ದಾರೆ - ಒಂದೊಂದೇ ಸಣ್ಣ ಹೆಜ್ಜೆ. ಇದು ಕೇವಲ ನೋಡುವುದಕ್ಕೆ ಮುದ್ದಾಗಿರುವುದಿಲ್ಲ, ಇದು ಜೀವನಕ್ಕಾಗಿ ಆತ್ಮವಿಶ್ವಾಸ, ಜವಾಬ್ದಾರಿ ಮತ್ತು ಸ್ವಾತಂತ್ರ್ಯವನ್ನು ನಿರ್ಮಿಸುತ್ತದೆ ಎಂದು ಅವರು ಈ ವೀಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.
ವೀಡಿಯೋದಲ್ಲಿ ಪುಟ್ಟ ಮಕ್ಕಳು ತರಕಾರಿ ಕತ್ತರಿಸುವುದನ್ನು ತರಕಾರಿ ಬೆಳೆಯುವುದಕ್ಕಾಗಿ ನೆಲವನ್ನು ಹದ ಮಾಡುವುದು, ತರಕಾರಿ ಕತ್ತರಿಸುವುದು, ಗಿಡಗಳಿಗೆ ನೀರು ಹಾಕುವುದು ಹಿಟ್ಟು ಕಲಸಿ ಚಪಾತಿ ಮಾಡುವುದು ಹೀಗೆ ಮನೆಯೊಂದನ್ನು ನಡೆಸಲು ಬೇಕಾಗುವ ಪ್ರತಿಯೊಂದು ಕೆಲಸವನ್ನು ಈ ಮಕ್ಕಳು ಮಾಡುತ್ತಿದ್ದಾರೆ.

ವೀಡಿಯೋ ನೋಡಿದ ಅನೇಕರು ಈ ರೀತಿಯ ಜೀವನ ಮೌಲ್ಯವನ್ನು ತಿಳಿಸುವ ಚೀನಾದ ಶಿಕ್ಷಣ ವ್ಯವಸ್ಥೆಯನ್ನು ನೋಡಿ ಅಚ್ಚರಿಪಟ್ಟಿದ್ದಾರೆ. ಅಮೆರಿಕಾದಲ್ಲಿ ಬೆಳೆದ ಗಂಡಸೊಬ್ಬನಿಗಿಂತಲೂ ಈ ಮಕ್ಕಳು ಬಹಳ ಪ್ರಯೋಜನಕಾರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಮತ್ತೊಬ್ಬರು ಕೇವಲ ಯುಎಸ್‌ಎ ಅಲ್ಲ ಪ್ರಪಂಚದೆಲ್ಲೆಡೆ ಇರುವ ಜನರಿಗಿಂತ ಈ ಮಕ್ಕಳು ಹೆಚ್ಚು ಉಪಯೋಗಕ್ಕೆ ಬರುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಹಾಗೆಯೇ ಇದು ನಿಜವಾದ ಶಿಕ್ಷಣ ಎಂದು ಮತ್ತೊಬ್ಬರು ಹೇಳಿದ್ದಾರೆ. ಅಲ್ಲಿ ಪ್ರತಿಯೊಂದು ಕೆಲಸವನ್ನು ಮಕ್ಕಳ ಕೈನಿಂದ ಮಾಡಿಸುತ್ತಿದ್ದರೆ ಇಲ್ಲಿ ನಾವು ಪುಟ್ಟ ಮಕ್ಕಳ ಕೈಗೆ ಕತ್ತರಿ ನೀಡುವುದಕ್ಕೆ ಹೆದರುತ್ತೇವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಚೀನಾ ಶಿಕ್ಷಣ ಹಾಗೂ ಸಂಸ್ಕೃತಿಯನ್ನು ಬಗ್ಗೆ ಹೇಗೆ ಕಾಳಜಿ ವಹಿಸುತ್ತಿದೆ ಎಂದು ನೋಡುವುದಕ್ಕೆ ಅಚ್ಚರಿಯಾಗುತ್ತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದು ಅತ್ಯುತ್ತಮ ಮತ್ತು ಅತ್ಯಂತ ಉಪಯುಕ್ತ ಶಿಕ್ಷಣ. ಮಕ್ಕಳು ದಿನವಿಡೀ ಐಪ್ಯಾಡ್ ಮತ್ತು ಐಫೋನ್‌ಗಳಲ್ಲಿ ಕುಳಿತು ಸಮಯವನ್ನು ಕೊಲ್ಲುವುದನ್ನು ಮತ್ತು ಅವರ ಕಣ್ಣುಗಳನ್ನು ಮತ್ತು ಮನಸ್ಸನ್ನು ಹಾಳುಮಾಡುವುದನ್ನು ನೋಡಿದಾಗ ನನಗೆ ಬೇಸರವಾಗುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಪ್ರಪಂಚದ ಎಲ್ಲೆಡೆ ಇರುವ ಮಕ್ಕಳಿಗೆ ಇಂತಹ ಶಿಕ್ಷಣ ಸಿಗಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮಕ್ಕಳು ಭವಿಷ್ಯದಲ್ಲಿ ಯಾರನ್ನೂ ಅವಲಂಬಿಸದೇ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುವಂತೆ ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಬದುಕುವುದಕ್ಕೆ ಸಹಾಯವಾಗುವಂತೆ ಕೌಶಲ್ಯಗಳಿಗೆ ಆದ್ಯತೆ ನೀಡಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಮತ್ತೊಬ್ಬರು ಪ್ರತಿಕ್ರಿಯಿಸಿದ್ದು, ನೈಜಿರಿಯಾದಲ್ಲಿ ನೀವು ಶಾಲೆಗೆ ಹೋಗುವ ಮೊದಲೇ ಇದೆಲ್ಲವನ್ನು ಮಾಡಿ ಹೋಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಚೀನಾದ ಶಾಲೆಯೊಂದರ ಈ ವೀಡಿಯೋ ಭಾರಿ ವೈರಲ್ ಆಗುತ್ತಿದ್ದು, ಅನೇಕರು ನಮ್ಮಲ್ಲೂ ಇಂತಹ ಶಿಕ್ಷಣ ಬೇಕು ಎಂದು ಆಗ್ರಹಿಸಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸುತ್ತೇ ಕಾಮೆಂಟ್ ಮಾಡಿ.
