KSRTC ಗುಜರಿ ಬಸ್‌ ಈಗ ಸರ್ಕಾರಿ ಶಾಲೆಯ ಸ್ಮಾರ್ಟ್‌ ಕ್ಲಾಸ್‌..!

*   ರಾಜ್ಯದಲ್ಲೇ ವಿನೂತನ ಪ್ರಯೋಗ
*   ಗ್ರಾಮೀಣ ಕಲಾವಿದನ ಬೇಡಿಕೆ ಈಡೇರಿಸಿದ ಸರ್ಕಾರ
*   ಕನ್ನಡಪ್ರಭ ಗುರುತಿಸಿದ ಪ್ರತಿಭೆ
 

KSRTC Scrap Bus Is Now Government School Smart Class at Kundapura in Udupi grg

ಶ್ರೀಕಾಂತ ಹೆಮ್ಮಾಡಿ

ಕುಂದಾಪುರ(ಮಾ.09): ಮೊದಲ ಲಾಕ್‌ಡೌನ್‌(Lockdown) ಸಂದರ್ಭದಲ್ಲಿ ಆಟಿಕೆಯ ತದ್ರೂಪಿ ಕೆಎಸ್‌ಆರ್‌ಟಿಸಿ ಬಸ್‌(KSRTC Bus) ಮಾದರಿ ತಯಾರಿಸಿ ಸಾರಿಗೆ ಸಚಿವರ ಗಮನ ಸೆಳೆದು, ಸ್ಕ್ರಾಪ್‌ಗೆ ಸೇರುವ ಬಸ್‌ ಉಚಿತವಾಗಿ ಪಡೆದಿದ್ದ ಕುಂದಾಪುರ(Kundapur) ತಾಲೂಕಿನ ಬಗ್ವಾಡಿಯ ಕಲಾವಿದ ಪ್ರಶಾಂತ್‌ ಆಚಾರ್‌(Prashant Achar) ತಮ್ಮ ಕನಸು ನನಸಾಗಿಸಿದ್ದಾರೆ. ಸಚಿವರಿಂದ ಉಚಿತವಾಗಿ ಪಡೆದಿದ್ದ ಬಸ್‌ನ್ನು ಮರು ವಿನ್ಯಾಸಗೊಳಿಸಿ ಸರ್ಕಾರಿ ಶಾಲೆಯ ಸ್ಮಾರ್ಟ್‌ ತರಗತಿಯಾಗಿ ಬದಲಾಯಿಸಿದ್ದಾರೆ.

ಕೆಎಸ್‌ಆರ್‌ಟಿ ತದ್ರೂಪಿ ಬಸ್‌ ಮಾದರಿಗಳನ್ನು ರಚಿಸಿ ಸುದ್ದಿಯಾದ ಬಗ್ವಾಡಿ ನಿವಾಸಿಗಳಾದ ಪ್ರಶಾಂತ್‌ ಆಚಾರ್‌ ಹಾಗೂ ಅವರ ಸಹೋದರ ಪ್ರಕಾಶ್‌ ಆಚಾರ್‌ ನೇರವಾಗಿ ಸಾರಿಗೆ ಸಚಿವರನ್ನು ಭೇಟಿಯಾಗಿ ಸ್ಕ್ರಾಪ್‌ ಬಸ್‌ನಲ್ಲಿ ಸ್ಮಾರ್ಟ್‌ ತರಗತಿ(Smart Class) ಮಾಡುವ ಕುರಿತು ಬೇಡಿಕೆ ಇಟ್ಟಿದ್ದರು. ಕಲಾವಿದನ ಬೇಡಿಕೆಗೆ ಸ್ಪಂದಿಸಿದ್ದ ಸಾರಿಗೆ ಸಚಿವ ಲಕ್ಷ್ಮಣ್‌ ಸವದಿ ಕೇವಲ 15 ದಿನದೊಳಗೆ ಬಗ್ವಾಡಿ ಸರ್ಕಾರಿ ಶಾಲೆಗೆ ಕೆಎಸ್‌ಆರ್‌ಟಿಸಿ ಸ್ಕ್ರಾಪ್‌ ಬಸ್‌ ಉಚಿತವಾಗಿ ನೀಡಿದ್ದರು. ಕನ್ನಡಪ್ರಭ ಈ ಕಲಾವಿದನ ಕುರಿತು ವಿಸ್ತೃತ ವರದಿ ಮಾಡಿ, ರಾಜ್ಯಮಟ್ಟದಲ್ಲೇ ಗಮನ ಸೆಳೆದಿತ್ತು. ಸ್ವತಃ ಕಲಾವಿದ ಪ್ರಶಾಂತ್‌ ಆಚಾರ್‌ ಹಾಗೂ ಅವರ ಸಹೋದರ ಪ್ರಕಾಶ್‌ ಆಚಾರ್‌ ಬಿಡುವಿನ ವೇಳೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನ್ನು ಸ್ಮಾರ್ಟ್‌ ತರಗತಿಯಾಗಿ ನವೀಕರಣಗೊಳಿಸಿ ಇದೀಗ ಬಸ್‌ಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

Kannada: ಪದವೀಲಿ ಕನ್ನಡ ಕಲಿಕೆ ಕಡ್ಡಾಯವಲ್ಲ: ಹೈಕೋರ್ಟ್‌

KSRTC Scrap Bus Is Now Government School Smart Class at Kundapura in Udupi grg

ಏನೇನು ವಿಶೇಷತೆಗಳಿವೆ?

ಬಸ್‌ ತರಗತಿಯಲ್ಲಿ 25 ವಿದ್ಯಾರ್ಥಿಗಳು(Students) ಕೂರಬಹುದು. ಪ್ರಾಜೆಕ್ಟರ್‌ ವ್ಯವಸ್ಥೆ, ಬಸ್‌ ಒಳಗಿನ ಸುತ್ತಲಿನ ಬದಿಯ ಮೇಲ್ಭಾಗದ ಗಾಜಿಗೆ ಸ್ವಾತಂತ್ರ್ಯ ಹೋರಾಟಗಾರರ, ಸಮಾಜ ಸುಧಾರಕರ, ಸಾಹಿತಿಗಳ ಚಿತ್ರಗಳನ್ನು ಅಳವಡಿಸಲಾಗಿದೆ. ಗ್ರಂಥಾಲಯವೂ ಇದ್ದು, ಇಲ್ಲಿರುವ ಮಹಾತ್ಮರ ಭಾವಚಿತ್ರಗಳ ಕುರಿತು ವಿದ್ಯಾರ್ಥಿಗಳಿಗೆ ಏನಾದರೂ ಪ್ರಶ್ನೆಗಳು, ಸಂದೇಹಗಳಿದ್ದರೆ ಅವರ ಕುರಿತಾದ ಪುಸ್ತಕಗಳನ್ನು ಇದೇ ಗ್ರಂಥಾಲಯದೊಳಗೆ ಇರಿಸಲಾಗಿದೆ. ನಾಲ್ಕು

ಫ್ಯಾನ್‌, ವಾಶ್‌ ಬೇಸಿನ್‌ ಇವೆ.

ಬಸ್‌ನ ಮುಂಭಾಗ ಅದರ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡಿದ್ದು, ಸ್ಟೇರಿಂಗ್‌ ಚಾಲಕರ ಸೀಟನ್ನು ಹಾಗೆಯೇ ಬಿಡಲಾಗಿದೆ. ಅಲ್ಲಿ ಸ್ಟೋರೇಜ್‌ ಕೋಣೆಯಿದೆ. ಇದಕ್ಕೆ ಪ್ರಾಜೆಕ್ಟರ್‌ ಕೋಣೆಯಿಂದಲೇ ಬಾಗಿಲ ವ್ಯವಸ್ಥೆ ಮಾಡಿಕೊಡಲಾಗಿದೆ.

ಬಸ್‌ನ ಹೊರಭಾಗದ ಒಂದು ಬದಿಯಲ್ಲಿ ಶಿಕ್ಷಣ ಪದ್ಧತಿ ಕುರಿತು ಚಿತ್ರ ರಚಿಸಲಾಗಿದೆ. ಇನ್ನೊಂದು ಬದಿಯಲ್ಲಿ ಕರಾವಳಿಯ ವಿಶೇಷ, ರಥೋತ್ಸವ, ಯಕ್ಷಗಾನ, ಕೋಲ ಮುಂತಾದ ಚಿತ್ರಗಳನ್ನು ಬಿಡಿಸಲಾಗಿದೆ. ಹೊರಗಿನ ಮೇಲ್ಭಾಗದ ಬದಿಯ ಗಾಜಿನ ಮೇಲೆ ಪ್ರಶಾಂತ್‌ ಆಚಾರ್‌ ತಯಾರಿದ ಬಸ್‌ ಮಾದರಿ, ಸಚಿವರನ್ನು, ಅಧಿಕಾರಿಗಳನ್ನು ಭೇಟಿಯಾದ ಹಾಗೂ ಪತ್ರಿಕೆಯಲ್ಲಿ ಬಂದ ವರದಿಗಳ ಚಿತ್ರಗಳನ್ನು ಅಂಟಿಸಲಾಗಿದೆ. ಬಸ್‌ ಹೇಗೆ ಬಗ್ವಾಡಿಗೆ ಬಂತು ಎನ್ನುವುದು ಸಂಪೂರ್ಣ ಚಿತ್ರಣವನ್ನು ಇಲ್ಲಿ ಕಟ್ಟಿಕೊಡಲಾಗಿದೆ.

ಕನ್ನಡ ಶಾಲೆ ಉಳಿಸಿ ಅಭಿಯಾನ: 

ಶತಮಾನದ ಹೊಸ್ತಿಲಲ್ಲಿರುವ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಕುರಿತು ಕಾರ್ಯಪ್ರವೃತ್ತರಾದ ಆಚಾರ್‌ ಸಹೋದರರು ವಿದ್ಯಾರ್ಥಿಗಳನ್ನು ತಾವು ಕಲಿತ ಸರ್ಕಾರಿ ಶಾಲೆಗೆ ಆಕರ್ಷಿಸಲು ಒಂದಿಲ್ಲೊಂದು ವಿನೂತ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ. ಹಳೆ ವಿದ್ಯಾರ್ಥಿಗಳು, ದಾನಿಗಳು, ಶಿಕ್ಷಣ ಪ್ರೇಮಿಗಳು ನೆರವಾಗಿದ್ದಾರೆ. ಆಚಾರ್‌ ಸಹೋದರರ ಕೆಲಸ ಹೊರತು ಸ್ಮಾರ್ಟ್‌ ತರಗತಿಗೆ ಒಟ್ಟು ಎರಡು ಲಕ್ಷ ರು. ವರೆಗೆ ಖರ್ಚಾಗಿದೆ.

ಎಸಿ ಕೋಣೆಯಲ್ಲಿ ಪಾಠ ಕೇಳಬೇಕು: 

ಗ್ರಾಮೀಣ(Rural) ಭಾಗದ ಕಡು ಬಡವರ ಮನೆಯ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಹವಾನಿಯಂತ್ರಿತ ರೂಮ್‌ನೊಳಗೆ ಸಂಪೂರ್ಣ ಡಿಜಿಟಲ್‌ ವ್ಯವಸ್ಥೆಯಲ್ಲಿ ಕೂತು ಪಾಠ ಕೇಳುವುದನ್ನು ನೋಡುವುದು ನಮ್ಮ ಮುಂದಿನ ಗುರಿ ಎಂದು ಪ್ರಶಾಂತ್‌ ಹಾಗೂ ಪ್ರಕಾಶ್‌ ಸಹೋದರರು ‘ಕನ್ನಡಪ್ರಭ’ಕ್ಕೆ(Kannda Prabha) ತಿಳಿಸಿದ್ದಾರೆ. ಇದೇ ಬಸ್‌ನೊಳಗೆ ಎಸಿ ಜೋಡಣೆ ಮಾಡುವುದು ಅವರ ಕನಸು.

ಮೊದಲು ವಿದ್ಯಾರ್ಥಿಗಳ ಸ್ಥಳಾಂತರ ಬಳಿಕವೇ ಶಿಕ್ಷಣಕ್ಕೆ ನೆರವು: ಸಚಿವ ಅಶ್ವತ್ಥ್ ನಾರಾಯಣ್

ಬೇಡಿಕೆಗಳು ಹಲವು: 

ಕೇವಲ 40 ಮಕ್ಕಳಿದ್ದ ಬಗ್ವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ(Government School) ಪ್ರಸ್ತುತ 87 ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಮುಖ್ಯ ಶಿಕ್ಷಕಿ ಸೇರಿದಂತೆ ಒಟ್ಟು ಇಬ್ಬರು ಶಿಕ್ಷಕಿಯರು ಕೆಲಸ ನಿರ್ವಹಿಸುತ್ತಿದ್ದಾರೆ. ಒಟ್ಟು ಇಬ್ಬರು ಶಿಕ್ಷಕಿಯರ ಬೇಡಿಕೆ ಇದೆ. ಕೇವಲ 5 ಕೊಠಡಿಗಳಿದ್ದು, ತರಗತಿ ನಡೆಸಲು ಅನಾನುಕೂಲಗಳಾಗುತ್ತಿದ್ದು, ಇನ್ನೆರಡು ಕೊಠಡಿಗಳ ಬೇಡಿಕೆ ಇದೆ.

ಹಳ್ಳಿಯಿಂದ- ಬೆಂಗಳೂರಿಗೆ ಸೇತುವೆ ಆಯ್ತು ಕನ್ನಡಪ್ರಭ!

ಲಾಕ್‌ಡೌನ್‌ ಬಿಡುವಿನ ವೇಳೆಯಲ್ಲಿ ಫಾಮ್‌ಶೀಟ್‌ ಬಳಸಿ ತದ್ರೂಪಿ ಕೆಎಸ್‌ಆರ್‌ಟಿಸಿ ಬಸ್‌ ಮಾದರಿಯನ್ನು ತಯಾರಿಸಿದ್ದು, ‘ಕಲಾವಿದನ ಕೈಯ್ಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌’ ಎಂಬ ಶೀರ್ಷಿಕೆಯಡಿಯಲ್ಲಿ ‘ಕನ್ನಡಪ್ರಭ’ ಮೊದಲ ಬಾರಿಗೆ ರಾಜ್ಯ ಆವೃತ್ತಿಯಲ್ಲಿ ವಿಶೇಷ ವರದಿ ಪ್ರಕಟಿಸಿ ಗಮನಸೆಳೆದಿತ್ತು. ವರದಿಯನ್ನು ಖುದ್ದು ರಾಜ್ಯ ಸಾರಿಗೆ ಸಚಿವ ಲಕ್ಷ್ಮಣ್‌ ಸವದಿ ತಮ್ಮ ವೈಯಕ್ತಿಕ ಫೇಸ್‌ಬುಕ್‌(Facebook) ಹಾಗೂ ಟ್ವಿಟರ್‌(Twitter) ಖಾತೆಯಲ್ಲಿ ಹಂಚಿಕೊಂಡಿದ್ದರು. ವರದಿ ಗಮನಿಸಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಡಿಸಿ ಅರುಣ್‌ ಕುಮಾರ್‌ ಹೆಮ್ಮಾಡಿಯಲ್ಲಿರುವ ಪ್ರಶಾಂತ್‌ ಆಚಾರ್‌ ಅವರ ವರ್ಕ್ಶಾಪ್‌ಗೆ ಆಗಮಿಸಿ ಸರ್ಕಾರಿ ಬಸ್‌ ಮೇಲಿನ ಅವರ ವಿಶೇಷ ಅಭಿಮಾನಕ್ಕೆ ಧನ್ಯವಾದ ತಿಳಿಸಿದ್ದರು. ಬಳಿಕ ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ ತೆರಳಿ ಅಲ್ಲಿನ ಆಡಳಿತ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರ ಮೆಚ್ಚುಗೆಗೂ ಪಾತ್ರರಾಗಿದ್ದರು. 

KSRTC Scrap Bus Is Now Government School Smart Class at Kundapura in Udupi grg

ಬಸ್‌ ಮಾದರಿಯಿಂದ ಹಿಡಿದು ಬಗ್ವಾಡಿ ಶಾಲೆಗೆ ಸ್ಕ್ರಾಪ್‌ ಬಸ್‌ ತರುವ ತನಕವೂ ಕನ್ನಡಪ್ರಭ ಸರಣಿ ವರದಿಗಳನ್ನು ಪ್ರಕಟಿಸಿ ಕಲಾವಿದ ಪ್ರಶಾಂತ್‌ ಆಚಾರ್‌ ಅವತನ್ನು ಇನ್ನಷ್ಟುಹುರಿದುಂಬಿಸಿತ್ತು. ಹೀಗಾಗಿಯೇ ಬಸ್‌ನ ಸುತ್ತಲೂ ಬಹುತೇಕ ‘ಕನ್ನಡಪ್ರಭ’ದ ಸರಣಿ ವರದಿಗಳ ಚಿತ್ರಗಳು ಗಮನ ಸೆಳೆಯುತ್ತಿವೆ. ಹಳ್ಳಿಯ ಕಲಾವಿದನನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆæ ಮಾಡಿದ ಕನ್ನಡಪ್ರಭ ಬಳಗಕ್ಕೆ ಸ್ಪೆಶಲ್‌ ಥ್ಯಾಂಕ್ಸ್‌ ಎಂದು ಸಹೋದರರು ತಿಳಿಸಿದ್ದಾರೆ.

12ರಂದು ಉದ್ಘಾಟನೆ

ಸ್ಮಾರ್ಟ್‌ ಕ್ಲಾಸ್‌ ಉದ್ಘಾಟನೆ ಶನಿವಾರ ನಡೆಯಲಿದೆ. ಉಸ್ತುವಾರಿ ಸಚಿವ ಎಸ್‌. ಅಂಗಾರ(S Angara) ಬಸ್‌ ಉದ್ಘಾಟಿಸಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಮಾರ್ಟ್‌ ತರಗತಿ ಉದ್ಘಾಟಿಸಲಿದ್ದು, ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಗ್ರಂಥಾಲಯ ಉದ್ಘಾಟಿಸಲಿದ್ದು, ಹಕ್ಲಾಡಿ ಗ್ರಾ.ಪಂ ಅಧ್ಯಕ್ಷ ಚೇತನ್‌ ಕುsಮಾರ್‌, ಕೆಎಸ್‌ಆರ್‌ಟಿಸಿ ವ್ಯವಸ್ಥಾಪನಾ ನಿರ್ದೇಶಕ ಶಿವಯೋಗಿ ಸಿ ಕಳಸದ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಗೋವಿಂದ ಮಡಿವಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ ಮುಂದಿನಮನಿ ಮತ್ತಿತರರು ಭಾಗವಹಿಸಲಿದ್ದಾರೆ.
 

Latest Videos
Follow Us:
Download App:
  • android
  • ios