Kannada: ಪದವೀಲಿ ಕನ್ನಡ ಕಲಿಕೆ ಕಡ್ಡಾಯವಲ್ಲ: ಹೈಕೋರ್ಟ್‌

*  ಎನ್‌ಇಪಿ ನಿಯಮದ ಪ್ರಕಾರ ಯಾವ ಭಾಷೆಯೂ ಕಡ್ಡಾಯ ಅಲ್ಲ
*  ಹೈಕೋರ್ಟ್‌ಗೆ ಕೇಂದ್ರ ಸರ್ಕಾರದ ಅಫಿಡವಿಟ್‌
*  ಕನ್ನಡ ಕಲಿಕೆ ಕಡ್ಡಾಯ ಮರುಪರಿಶೀಲಿಸಿ
 

Kannada Learning Is Not Mandatory Saya Karnataka High Court grg

ಬೆಂಗಳೂರು(ಮಾ.09):  ರಾಷ್ಟ್ರೀಯ ಶಿಕ್ಷಣ ನೀತಿ-2020 (NEP) ಹಾಗೂ ಅದರ ನಿಯಮಗಳಲ್ಲಿ ಯಾವುದೇ ಭಾಷೆಯನ್ನು (ಕನ್ನಡ ಸೇರಿದಂತೆ) ಪದವಿ ಶಿಕ್ಷಣದಲ್ಲಿ ಕಡ್ಡಾಯಗೊಳಿಸುವ ಸಂಬಂಧ ಉಲ್ಲೇಖಗಳಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕರ್ನಾಟಕ ಹೈಕೋರ್ಟ್‌ಗೆ(Karnataka High Court) ಅದು ಪ್ರಮಾಣಪತ್ರ ಸಲ್ಲಿಸಿದೆ. ಇದರಿಂದ ಪದವಿ ಹಂತದಲ್ಲಿ ಭಾಷೆಯಾಗಿ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನೆಡೆಯಾದಂತಾಗಿದೆ.

ಇದರ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ಹೈಕೋರ್ಟ್‌, ‘ಕೇಂದ್ರ ಸರ್ಕಾರವೇ(Central Government) ಈ ಸಂಬಂಧ ಸ್ಪಷ್ಟನೆ ನೀಡಿ ಪ್ರಮಾಣಪತ್ರ ಸಲ್ಲಿಸಿದೆ. ಹೀಗಾಗಿ ಪದವಿ(Degree) ಹಂತದಲ್ಲಿ ಭಾಷೆಯಾಗಿ ಕನ್ನಡ ಕಲಿಕೆ ಕಡ್ಡಾಯದ ಕುರಿತ ನಿಲುವನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ(Government of Karnataka) ನಿರ್ದೇಶಿಸಲಾಗುವುದು’ ಎಂದು ತಿಳಿಸಿದೆ.
ಪದವಿ ಹಂತದಲ್ಲಿ ಭಾಷೆಯಾಗಿ ಕನ್ನಡ ಕಡ್ಡಾಯ ಕಲಿಕೆಯ ಆದೇಶವನ್ನು ವಿರೋಧಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌ ಹಾಗೂ ಕೆಲ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

Karnataka High Court : ಕನ್ನಡ ಕಲಿಕೆಗೆ ಒತ್ತಾಯ ಬೇಡ

ವಿದ್ಯಾರ್ಥಿಗಳ ಪರ ವಕೀಲರು ವಾದಿಸಿ, ‘ಎನ್‌ಇಪಿ ಮತ್ತದರ ನಿಯಮಗಳಲ್ಲಿ ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವ ಸಂಬಂಧ ಉಲ್ಲೇಖಗಳಿಲ್ಲ ಎಂದು ಕೇಂದ್ರ ಸರ್ಕಾರ ತನ್ನ ಪ್ರಮಾಣಪತ್ರದಲ್ಲಿ ಸಷ್ಟಪಡಿಸಿದೆ. ಹೀಗಾಗಿ ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯವಲ್ಲ. ಆದ್ದರಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅರ್ಜಿದಾರ ವಿದ್ಯಾರ್ಥಿಗಳು(Students) ಆಯ್ಕೆ ಮಾಡಿಕೊಂಡಿರುವ ಭಾಷೆಯ(Language) ಅಧ್ಯಯನ ಮುಂದುವರಿಸಲು ಸ್ವತಂತ್ರರು ಎಂಬ ಆದೇಶ ಮಾಡಿ, ನಮ್ಮ ಅರ್ಜಿಯನ್ನು ಇತ್ಯರ್ಥಪಡಿಸಬೇಕು’ ಎಂದು ಕೋರಿದರು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ.ಬಿ. ನರಗುಂದ, ‘ವಿದ್ಯಾರ್ಥಿಗಳ ಅರ್ಜಿಗಳನ್ನು ಇತ್ಯರ್ಥಪಡಿಸುವುದು ಸೂಕ್ತವಿರಬಹುದು. ಆದರೆ, ಅಡ್ವೊಕೇಟ್‌ ಜನರಲ್‌ ಅನುಪಸ್ಥಿತಿಯಲ್ಲಿ ಪ್ರಕರಣ ನಿರ್ಧರಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ತನ್ನ ನಿಲುವನ್ನು ಪುನರ್‌ ಪರಿಶೀಲಿಸುವ ಕುರಿತು ಆಲೋಚಿಸುತ್ತಿದೆ. ಈ ವಿಚಾರವನ್ನು ಸಂಬಂಧಪಟ್ಟವರು ಹೇಳಬೇಕಿದೆ’ ಎಂದರು.

ಅದನ್ನು ಪರಿಗಣಿಸಿದ ನ್ಯಾ. ಅವಸ್ಥಿ, ‘ಕನ್ನಡ ಕಡ್ಡಾಯ ಕಲಿಕೆ ವಿಚಾರವನ್ನು ಮರುಪರಿಗಣಿಸಲು ರಾಜ್ಯ ಸರ್ಕಾರಕ್ಕೆ ಈ ಹಿಂದೆಯೇ ನ್ಯಾಯಾಲಯ ಸಮಯ ನೀಡಿತ್ತು. ಆದರೆ, ರಾಜ್ಯ ಸರ್ಕಾರ ತನ್ನ ನಿಲುವು ಮುಂದುವರಿಸಲು ನಿರ್ಧರಿಸಿತ್ತು. ಹಾಗಾಗಿ ಸರ್ಕಾರದ ಆದೇಶ ಜಾರಿಗೊಳಿಸದಂತೆ ಮಧ್ಯಂತರ ಆದೇಶ ನೀಡಲಾಗಿದೆ. ಅಡ್ವೊಕೇಟ್‌ ಜನರಲ್‌ ಅವರ ವಾದ ಆಲಿಸಲಾಗುವುದು. ಕೇಂದ್ರ ಸರ್ಕಾರ ಸ್ಪಷ್ಟಪಡಿಸಿರುವುದರಿಂದ ಕನ್ನಡ ಕಲಿಕೆ ಕಡ್ಡಾಯದ ಕುರಿತ ನಿಲುವನ್ನು ಮರು ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲಾಗುವುದು’ ಎಂದು ಮೌಖಿಕವಾಗಿ ತಿಳಿಸಿ ವಿಚಾರಣೆಯನ್ನು ಏ.4ಕ್ಕೆ ಮುಂದೂಡಿದರು.

ಡಿಗ್ರಿಯಲ್ಲಿ ಕನ್ನಡ ಕಡ್ಡಾಯ : ಮತ್ತೆ ಹೈಕೋರ್ಟ್‌ ಆಕ್ಷೇಪ

ಪ್ರಮಾಣಪತ್ರದಲ್ಲಿ ಏನಿದೆ?:

ಅರ್ಜಿ ಆಕ್ಷೇಪಣೆ ಒಳಗೊಂಡ ಪ್ರಮಾಣ ಪತ್ರ ಸಲ್ಲಿಸಿರುವ ಕೇಂದ್ರ ಸರ್ಕಾರ, ‘ಸ್ಥಳೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದ ಮಹಾತ್ವಾಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಸುಲಭವಾಗಿ ಸಮಗ್ರ ಶೈಕ್ಷಣಿಕ ವ್ಯವಸ್ಥೆ(Educational System) ಕಲ್ಪಿಸುವ ಉದ್ದೇಶದಿಂದ ಎನ್‌ಇಪಿ ಜಾರಿಗೊಳಿಸಲಾಗಿದೆ. ಎನ್‌ಇಪಿಯಲ್ಲಿ ಭಾರತದ ಭಾಷೆಗಳು, ಕಲೆ ಮತ್ತು ಸಂಸ್ಕೃತಿ ಪ್ರಚಾರ ತಲೆಬರಹ ಹೊಂದಿರುವ 22ನೇ ಅಧ್ಯಾಯವನ್ನು ಭಾರತೀಯ ಭಾಷೆ ಮತ್ತು ಪ್ರಾದೇಶಿಕ ಭಾಷೆಗಳ(Regional Languages) ಪ್ರಚಾರಕ್ಕೆ ಮೀಸಲಿಡಲಾಗಿದೆ’ ಎಂದು ತಿಳಿಸಿದೆ.

ಅಲ್ಲದೆ, ಈ ಅಧ್ಯಾಯದ 22.10ನೇ ಪ್ಯಾರಾದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮಾತೃಭಾಷೆ/ಸ್ಥಳೀಯ ಭಾಷೆಯನ್ನು ಬೋಧನಾ ಭಾಷೆಯನ್ನಾಗಿ ಬಳಕೆ ಮಾಡಬಹುದಾಗಿದ್ದು, ದ್ವಿಭಾಷೆಗೆ ಅವಕಾಶ ನೀಡುತ್ತದೆ. ಎಲ್ಲ ಮಟ್ಟದಲ್ಲೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಕೂಲಕ್ಕಾಗಿ ಭಿನ್ನ ಬಗೆಯ ಶೈಕ್ಷಣಿಕ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸಿ ಅದು ಎಲ್ಲರಿಗೂ ದೊರೆಯುವಂತೆ ಮಾಡುವ ಉದ್ದೇಶ ಎನ್‌ಇಪಿಯಲ್ಲಿ ಹೊಂದಲಾಗಿದೆ. ಎನ್‌ಇಪಿ ಮತ್ತದರ ನಿಯಮಗಳಲ್ಲಿ ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವ ಸಂಬಂಧ ಉಲ್ಲೇಖಗಳಿಲ್ಲ. ಹೀಗಾಗಿ, ಎನ್‌ಇಪಿ ನಿಯಮಗಳನ್ನು ಪುನರ್‌ ವ್ಯಾಖ್ಯಾನಿಸುವ ಅಗತ್ಯ ಉದ್ಭವಿಸುವುದಿಲ್ಲ’ ಎಂದು ಕೇಂದ್ರ ಸ್ಪಷ್ಟಪಡಿಸಿದೆ.
 

Latest Videos
Follow Us:
Download App:
  • android
  • ios