ಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ 8,42,173 ವಿದ್ಯಾರ್ಥಿಗಳಲ್ಲಿ 5,24,984 ಮಕ್ಕಳು ಉತ್ತೀರ್ಣರಾಗುವ ಮೂಲಕ ಶೇ.62.34 ಫಲಿತಾಂಶ ದಾಖಲಾಗಿದೆ. ಈ ಬಾರಿ ಹದಿನೈದು ಹೆಣ್ಣು ಮಕ್ಕಳು ಸೇರಿದಂತೆ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಬೆಂಗಳೂರು (ಮೇ.3): ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ 8,42,173 ವಿದ್ಯಾರ್ಥಿಗಳಲ್ಲಿ 5,24,984 ಮಕ್ಕಳು ಉತ್ತೀರ್ಣರಾಗುವ ಮೂಲಕ ಶೇ.62.34 ಫಲಿತಾಂಶ ದಾಖಲಾಗಿದೆ. ಈ ಬಾರಿ ಹದಿನೈದು ಹೆಣ್ಣು ಮಕ್ಕಳು ಸೇರಿದಂತೆ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.

ಆದರೆ, ಕಳೆದ ವರ್ಷಕ್ಕೆ(ಶೇ.73.40) ಹೋಲಿಸಿದರೆ ಫಲಿತಾಂಶ ಶೇ.11.06 ರಷ್ಟು ಕುಸಿದಿದೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಪಾರದರ್ಶಕತೆ ಹೆಚ್ಚಿಸಲು ಸರ್ಕಾರ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಜಾರಿಗೆ ತಂದ ಬಳಿಕ ಸತತ ಎರಡನೇ ವರ್ಷವೂ ಫಲಿತಾಂಶ ಭಾರೀ ಪ್ರಮಾಣದಲ್ಲೇ ಇಳಿಕೆಯಾದಂತಾಗಿದೆ.
ಆದರೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು, ‘ಕಳೆದ ವರ್ಷದ ಫಲಿತಾಂಶವನ್ನು ಶೇ.20ರಷ್ಟು ಗ್ರೇಸ್‌ ಅಂಕದೊಂದಿಗೆ ಉತ್ತಮಗೊಳಿಸಲಾಗಿತ್ತು. ಅಸಲಿ ಫಲಿತಾಂಶ ಶೇ.53 ಅಷ್ಟೇ ಆಗಿತ್ತು. ಈ ಬಾರಿ ಶೇ.20ರಷ್ಟು ಗ್ರೇಸ್‌ ಅಂಕ ನೀಡಿಲ್ಲ ಶೇ.10ಕ್ಕೆ ಸೀಮಿತಗೊಳಿಸಿದ್ದೇವೆ. ಹಾಗಾಗಿ ಶೇ.53ರಷ್ಟು ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿಯ ಫಲಿತಾಂಶ ಶೇ.8ರಷ್ಟು ಹೆಚ್ಚಳವಾದಂತಾಗಿದೆ’ ಎಂದು ವ್ಯಾಖ್ಯಾನಿಸಿದ್ದಾರೆ.

ಸಚಿವ ಮಧು ಬಂಗಾರಪ್ಪ ಶುಕ್ರವಾರ ಮಲ್ಲೇಶ್ವರದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಿದರು.
ಹದಿನೈದು ಹೆಣ್ಣು ಮಕ್ಕಳು ಸೇರಿದಂತೆ 22 ವಿದ್ಯಾರ್ಥಿಗಳು ಈ ಬಾರಿ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಒಟ್ಟಾರೆ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ನಗರಕ್ಕಿಂತ ಗ್ರಾಮೀಣ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದಾರೆ. ಶೇ.74ರಷ್ಟು ಹೆಣ್ಣು ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಗಂಡು ಮಕ್ಕಳಲ್ಲಿ ಶೇ.58ರಷ್ಟು ಮಂದಿ ಮಾತ್ರ ಪಾಸಾಗಿದ್ದಾರೆ. ಅದೇ ರೀತಿ ನಗರದ ಪ್ರದೇಶದ ಶೇ.67ರಷ್ಟು ಮಕ್ಕಳು ಪಾಸಾಗಿದ್ದರೆ, ಗ್ರಾಮೀಣ ಭಾಗದ 65.47ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲಾವಾರು ದಕ್ಷಿಣ ಕನ್ನಡ ಜಿಲ್ಲೆ ಶೇ.91.12 ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಕಲಬುರಗಿ ಶೇ.66.14 ಫಲಿತಾಂಶದೊಂದಿಗೆ ಕೊನೆಯ ಸ್ಥಾನ ಪಡೆದಿದೆ.

ಫಲಿತಾಂಶ 2ನೇ ವರ್ಷವೂ ಕುಸಿತ

  • ಕಳೆದ ಸಾಲಿಗೆ ಹೋಲಿಸಿದರೆ 11.06% ಇಳಿಕೆ
  • ಫಲಿತಾಂಶ 8% ಹೆಚ್ಚಳ: ಸಚಿವರ ವ್ಯಾಖ್ಯಾನ
  • ಈ ಬಾರಿ 22 ವಿದ್ಯಾರ್ಥಿಗಳಿಗೆ ಪ್ರಥಮ ರ್‍ಯಾಂಕ್‌
  • ಫೇಲಾಗುತ್ತಿದ್ದವರು 10% ಗ್ರೇಸ್‌ ಅಂಕದಿಂದ ಪಾಸ್
  • ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನ, ಕಲಬುರಗಿ ಲಾಸ್ಟ್‌