ಕರ್ನಾಟಕ ಸರ್ಕಾರವು ಒಂದನೇ ತರಗತಿ ಪ್ರವೇಶದ ವಯೋಮಿತಿಯಲ್ಲಿ 60 ದಿನಗಳ ವಿನಾಯಿತಿ ಘೋಷಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಪ್ರಕಾರ, ಇನ್ನು ಮುಂದೆ 5 ವರ್ಷ 10 ತಿಂಗಳು ತುಂಬಿದ ಮಕ್ಕಳನ್ನು ಶಾಲೆಗೆ ಸೇರಿಸಬಹುದಾಗಿದ್ದು, ಈ ನಿರ್ಧಾರ ಪೋಷಕರಿಗೆ ನೆಮ್ಮದಿ ತಂದಿದೆ.

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಶಾಲಾ ಪ್ರವೇಶ ವಯೋಮಿತಿ ಕುರಿತಾಗಿ ಮಹತ್ವದ ತೀರ್ಮಾನವೊಂದನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ. ಒಂದನೇ ತರಗತಿಗೆ ಸೇರುವ ಮಕ್ಕಳ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದ್ದು, ಪೋಷಕರಿಗೆ ಸ್ವಲ್ಪ ನೆಮ್ಮದಿ ಸುದ್ದಿ ಸಿಕ್ಕಿದಂತಾಗಿದೆ.

Add Asianetnews Kannada as a Preferred SourcegooglePreferred

ಒಂದನೇ ತರಗತಿ ಪ್ರವೇಶಕ್ಕೆ 60 ದಿನಗಳ ವಿನಾಯಿತಿ

ಇದುವರೆಗೆ ಒಂದನೇ ತರಗತಿಗೆ ಸೇರ್ಪಡೆಯಾಗಲು 6 ವರ್ಷ ವಯಸ್ಸು ಕಡ್ಡಾಯವಾಗಿತ್ತು. ಆದರೆ ಪೋಷಕರ ಮನವಿಯ ಮೇರೆಗೆ ಸರ್ಕಾರ ಈ ನಿಯಮದಲ್ಲಿ ಸಡಿಲಿಕೆ ನೀಡಲು ಮುಂದಾಗಿದೆ. ಈಗ 6 ವರ್ಷ ಪೂರ್ಣಗೊಂಡ ಬಳಿಕ 60 ದಿನಗಳ (ಅಂದರೆ 6 ವರ್ಷ 2 ತಿಂಗಳುಗಳವರೆಗೆ) ವಿನಾಯಿತಿ ನೀಡಲಾಗುತ್ತದೆ. ಈ ಮೂಲಕ, ವಯೋಮಿತಿ ಕಡಿಮೆ ಇದ್ದ ಕಾರಣದಿಂದ ಪ್ರವೇಶ ಪಡೆಯಲು ಆಗದಿದ್ದ ಮಕ್ಕಳಿಗೂ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ 5 ವರ್ಷ 10 ತಿಂಗಳಿಗೆ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬಹುದು

ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ

ಈ ಬದಲಾವಣೆಯನ್ನು ಜಾರಿಗೆ ತರುವ ಉದ್ದೇಶದಿಂದ ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಜೊತೆಗೆ, ಶಾಲಾ ದಾಖಲಾತಿ ಪ್ರಕ್ರಿಯೆಯಲ್ಲಿ ಬಳಸುವ ತಂತ್ರಾಂಶದಲ್ಲಿಯೂ ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

LKG, UKG ದಾಖಲಾತಿಗೂ ಬದಲಾವಣೆ

ಸದನದಲ್ಲಿ ಚರ್ಚೆ ವೇಳೆ, LKG ಹಾಗೂ UKG ತರಗತಿಗಳ ದಾಖಲಾತಿಯಲ್ಲಿಯೂ ಪೋಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಯಿತು. ಈ ಸಮಸ್ಯೆಗಳನ್ನು ಕೂಡ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ಕಾನೂನು ರೂಪಕ್ಕೆ ತರಲು ಮನವಿ

ಶಾಸಕ ಅರವಿಂದ್ ಬೆಲ್ಲದ್ ಅವರು ಈ ಸಡಿಲಿಕೆಯನ್ನು ಕಡ್ಡಾಯ ಕಾನೂನಾಗಿ ರೂಪಿಸಲು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವರು, ಇಲಾಖೆಯಿಂದ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಸದನದಲ್ಲಿ ತಿಳಿಸಿದ್ದಾರೆ.

ಪೋಷಕರಿಗೆ ನಿರಾಳತೆ

ಈ ನಿರ್ಧಾರದಿಂದಾಗಿ, ವಯಸ್ಸಿನ ಅಂತರದ ಕಾರಣದಿಂದ ಮಕ್ಕಳಿಗೆ ಶಾಲಾ ಪ್ರವೇಶ ವಿಳಂಬವಾಗುತ್ತಿದ್ದ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಇದು ಮಹತ್ವದ ಬದಲಾವಣೆಯಾಗಿ ಪರಿಗಣಿಸಲಾಗುತ್ತಿದೆ.