Scholarship: ಪಿಎಚ್‌ಡಿ ಒಬಿಸಿ ವಿದ್ಯಾರ್ಥಿಗಳಿಗೆ ಸಿಕ್ತಿಲ್ಲ ಶಿಷ್ಯವೇತನ!
* ಪಿಎಚ್‌ಡಿ ಒಬಿಸಿ ವಿದ್ಯಾರ್ಥಿಗಳಿಗೆ ಸಿಕ್ತಿಲ್ಲ ಶಿಷ್ಯವೇತನ!
* 4-5 ತಿಂಗಳನಿಂದ ವಿವಿಧ ವಿವಿಗಳ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಬಾಕಿ
* ಸಂಶೋಧನಾ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪ
ಬೆಂಗಳೂರು,(ನ.08): ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ (University) ಪಿಎಚ್‌ಡಿ ಅಧ್ಯಯನಕ್ಕೆ (Phd Study) ಪ್ರವೇಶ ಪಡೆದಿರುವ ಹಿಂದುಳಿದ ವರ್ಗಗಳಿಗೆ(ಒಬಿಸಿ) ಸೇರಿದ ವಿದ್ಯಾರ್ಥಿಗಳಿಗೆ (Students) ಕಳೆದ ನಾಲ್ಕೈದು ತಿಂಗಳಿಂದ ಪ್ರತೀ ತಿಂಗಳು ಸಿಗಬೇಕಾದ ವಿದ್ಯಾರ್ಥಿ ವೇತನ ಅಥವಾ ಶಿಷ್ಯವೇತನವೇ (Scholarship) ಬಂದಿಲ್ಲ.
ರಾಜ್ಯದಲ್ಲಿರುವ 28 ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ಅಧ್ಯಯನಕ್ಕೆ (Phd Education) ಪ್ರವೇಶ ಪಡೆದ ಬೇರೆ ಬೇರೆ ವರ್ಗದ ಸಂಶೋಧನಾ ವಿದ್ಯಾರ್ಥಿಗಳಿಗೆ (research Scholar) ಸರ್ಕಾರ ಬೇರೆ ಬೇರೆ ಇಲಾಖೆಗಳ ಮೂಲಕ ಶಿಷ್ಯ ವೇತನ ನೀಡುತ್ತದೆ. ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದ ವಿದ್ಯಾರ್ಥಿಗಳಿಗೆ ಮಾಸಿಕ 25 ಸಾವಿರ ರು. ಶಿಷ್ಯ ವೇತನ ನೀಡಲಾಗುತ್ತದೆ.
Computer Science ವಿದ್ಯಾರ್ಥಿನಿಯರಿಗೆ Googleನಿಂದ ಸ್ಕಾಲರ್‌ಶಿಪ್: ಇಲ್ಲಿದೆ ವಿವರ!
ಅದೇ ರೀತಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮಾಸಿಕ 10 ಸಾವಿರ ರು. ಶಿಷ್ಯ ವೇತನ ನೀಡಲಾಗುತ್ತದೆ. ಆದರೆ, ಸರ್ಕಾರ ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶಿಷ್ಯ ವೇತನಕ್ಕೆ ಸೂಕ್ತ ಅನುದಾನ ಬಿಡುಗಡೆ ಮಾಡದೆ ಇರುವುದರಿಂದ ಪಿಎಚ್‌ಡಿ ಅಧ್ಯಯನಕ್ಕೆ ಪ್ರವೇಶ ಪಡೆದು ನಾಲ್ಕೈದು ತಿಂಗಳಾದರೂ ಶಿಷ್ಯ ವೇತನ ಬಾರದೆ ವಿಳಂಬವಾಗಿದೆ. ಇದರಿಂದ ಬಡ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದು, ತಮ್ಮ ಸಂಶೋಧನಾ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ಸಿ, ಎಸ್ಟಿವಿದ್ಯಾರ್ಥಿಗಳಿಗೆ ಪ್ರತೀ ತಿಂಗಳು ನಿಗದಿತ ಶಿಷ್ಯ ವೇತನ ಬಿಡುಗಡೆಯಾಗುತ್ತಿದೆ. ಆದರೆ, ಹಿಂದುಳಿದ ವರ್ಗಗಳ ಇಲಾಖೆಯಿಂದ ಏಕೆ ಬಿಡುಗಡೆಯಾಗುತ್ತಿಲ್ಲ? ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಈ ಧೋರಣೆ ಮುಂದುವರೆದರೆ ಅಧ್ಯಯನ ಕಾರ್ಯಕ್ಕೆ ತೊಂದರೆಯಾಗಲಿದೆ. ಕೂಡಲೇ ಸರ್ಕಾರ ಸೂಕ್ತ ಅನುದಾನ ಬಿಡುಗಡೆ ಮಾಡಿ ಶಿಷ್ಯ ವೇತನ ನೀಡಲು ಕ್ರಮ ವಹಿಸಬೇಕು ಎಂಬುದು ಬೆಂಗಳೂರು ವಿವಿ ಹಿಂದುಳಿದ ವರ್ಗದ ಪಿಎಚ್‌ಡಿ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಪಿಎಚ್‌ಡಿ ಅಧ್ಯಯನಕ್ಕೆ ಬೇಕು ದೊಡ್ಡ ಮೊತ್ತ: ಪಿಎಚ್‌ಡಿ ಅಧ್ಯಯನಕ್ಕೆ ಲಕ್ಷಾಂತರ ರು. ಅನುದಾನ ಬೇಕಾಗುತ್ತದೆ. ವಿದ್ಯಾರ್ಥಿಗಳು ಪಿಎಚ್‌ಡಿ ಶುಲ್ಕವನ್ನೇ ವಾರ್ಷಿಕ 20ರಿಂದ 25 ಸಾವಿರ ರು. ಪಾವತಿಸಬೇಕು. ಇದರ ಹೊರತಾಗಿ, ಕೋರ್ಸ್ ವರ್ಕ್ನಲ್ಲಿ ನೀಡುವ ಪ್ರಾಜೆಕ್ಟ್ ವರ್ಕ್ಗಳಿಗೆ ಸ್ಟೇಷನರಿ ಖರೀದಿ, ಪುಸ್ತಕ ಖರೀದಿ ಮತ್ತಿತರ ಶೈಕ್ಷಣಿಕ ಚಟುವಟಿಕೆಗೆ ಸಾವಿರಾರು ರು. ಹಣ ಖರ್ಚು ಮಾಡಬೇಕಾಗುತ್ತದೆ.
ಬಹಳಷ್ಟುಹಿಂದುಳಿದ ವರ್ಗಗಳ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವೆಚ್ಚ ಭರಿಸಲು ಸಾಧ್ಯವಾಗದೆ, ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಂತಹವರು ಪಿಎಚ್‌ಡಿ ಪ್ರವೇಶ ಪಡೆಯುವುದೇ ಅತಿ ಕಡಿಮೆ. ಹೀಗಿರುವಾಗ ಸರ್ಕಾರ ಸಮಯಕ್ಕೆ ಸರಿಯಾಗಿ ಶಿಷ್ಯವೇತನ ನೀಡದಿದ್ದರೆ ಪಿಎಚ್‌ಡಿ ಅಧ್ಯಯನದಿಂದ ದೂರ ಸರಿದು ವಂಚಿತರಾಗುತ್ತಾರೆ. ಇದರಿಂದ ಆ ಮಕ್ಕಳಿಗೆ ಅನ್ಯಾಯವಾಗಲಿದೆ. ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಅಧಿಕಾರಿಗಳು ಹೇಳೋದೇನು?
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಶಾಲಾ ಹಂತದಿಂದ ಉನ್ನತ ಶಿಕ್ಷಣದವರೆಗೂ ಎಲ್ಲಾ ಶೈಕ್ಷಣಿಕ ಕ್ಯಾಲೆಂಡರ್‌ಗಳು ಬದಲಾದವು. ಅದೇ ರೀತಿ ಪಿಎಚ್‌ಡಿ ಪ್ರವೇಶ ಪ್ರಕ್ರಿಯೆಯಲ್ಲೂ ವಿಳಂಬವಾಗಿದೆ. ಹಾಗಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ತಡವಾಗಿದ್ದು ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿಲ್ಲ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿ ಅರ್ಜಿ ಆಹ್ವಾನಿಸಲು ಸೂಚನೆ ಬರುತ್ತಿದ್ದಂತೆ ತಕ್ಷಣ ಶಿಷ್ಯ ವೇತನ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು.
10 ಸಾವಿರ ರು. ಸಾಕಾಗಲ್ಲ
ಸರ್ಕಾರ ತಕ್ಷಣ ಒಬಿಸಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಬಿಡುಗಡೆ ಮಾಡುವ ಜತೆಗೆ, ಈಗಿರುವ ಮಾಸಿಕ 10 ಸಾವಿರ ರು. ಅನ್ನು ಕನಿಷ್ಠ 15 ಸಾವಿರ ರು.ಗಳಿಗಾದರೂ ಹೆಚ್ಚಿಸಬೇಕು. ಸರ್ಕಾರದಿಂದಲೇ ಪೂರ್ಣ ಹಣ ಕೊಡಲಾಗದಿದ್ದರೆ ವಿವಿಯ ಬೊಕ್ಕಸದಿಂದ ಭಾಗಶಃ ಅನುದಾನ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಶೋಧನಾ ವಿದ್ಯಾರ್ಥಿ ಸಂಜಯ್ ಒತ್ತಾಯಿಸಿದ್ದಾರೆ.