Asianet Suvarna News Asianet Suvarna News

ಎಚ್ಚೆತ್ತ ಸರ್ಕಾರ, PU ಪಠ್ಯ ಪರಿಷ್ಕರಣೆ ಸಮಿತಿಯಿಂದ ರೋಹಿತ್​ ಚಕ್ರತೀರ್ಥ ಔಟ್

* ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೆ
* ಕೊನೆಗೂ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ
* PU  ಪಠ್ಯ ಪರಿಷ್ಕರಣೆ ಸಮಿತಿಯಿಂದ ರೋಹಿತ್​ ಚಕ್ರತೀರ್ಥ ಔಟ್
 

Karnataka Govt gate Pass To Rohith Chakrathirtha from PU Textbook Revision Committee rbj
Author
Bengaluru, First Published Jun 7, 2022, 4:10 PM IST

ಬೆಂಗಳೂರು, (ಜೂನ್.07): ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ  ತಾರಕಕ್ಕೇರಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದ್ದು,  ಪಿಯುಸಿ ಪಠ್ಯ ಪರಿಷ್ಕರಣೆ ಸಮಿತಿಯಿಂದ ರೋಹಿತ್​ ಚಕ್ರತೀರ್ಥಗೆ ಗೇಟ್‌ ಪಾಸ್ ನೀಡಲಾಗಿದೆ.

ಪಿಯುಸಿ ಪಠ್ಯ ಪರಿಷ್ಕರಣೆ ಸಮಿತಿಯಿಂದ ರೋಹಿತ್​ ಚಕ್ರತೀರ್ಥ ಅವರನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ. ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ವಿಸರ್ಜಿಸಿರುವ ಕಾರಣ, ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆಯ ವರದಿಯನ್ನು ಪಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದಾರೆ.

ದ್ವಿತೀಯ ಪಿಯುಸಿಯಲ್ಲಿ ಅಧ್ಯಾಯ 4.2ರ ಹೊಸ ಧರ್ಮಗಳ ಉದಯ ಪಠ್ಯಭಾಗದ ಪರಿಷ್ಕರಣೆ ಈ ಮೊದಲು ಸರ್ಕಾರ ಮುಂದಾಗಿತ್ತು. ಪಠ್ಯ ಪರಿಷ್ಕರಣೆ ಜವಾಬ್ದಾರಿಯನ್ನು ರೋಹಿತ್ ಚಕ್ರತೀರ್ಥ ಅವರಿಗೆ ವಹಿಸಲಾಗಿತ್ತು. ಶಾಲೆಗಳ ಪಠ್ಯದ ಪರಿಷ್ಕರಣೆ ವಿವಾದ ಹಿನ್ನೆಲೆಯಲ್ಲಿ ' ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ಕೈಬಿಡಲು ಸರ್ಕಾರ ಮುಂದಾಗಿದೆ ಎಂದು ಸಚಿವ ನಾಗೇಶ್​ ತಿಳಿಸಿದ್ದಾರೆ.

Textbook controversy ಪಿಯುಸಿ ಪಠ್ಯ ಪರಿಷ್ಕರಣಾ ಸಮಿತಿಗೂ ರೋಹಿತ್ ಚಕ್ರತೀರ್ಥ ಅಧ್ಯಕ್ಷ

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಗಳು ತಣ್ಣಗಾಗುವ ಮೊದಲೇ ಪದವಿಪೂರ್ವ ಶಿಕ್ಷಣ ಇಲಾಖೆ ಇತಿಹಾಸ ಪುಸ್ತಕ ಪರಿಷ್ಕರಣೆಗೂ ಮುಂದಾಗಿದ್ದು, ಆ ಸಮಿತಿಗೂ ರೋಹಿತ್ ಚಕ್ರತೀರ್ಥ (Rohith Chakrathirtha) ಅವರನ್ನೇ ಅಧ್ಯಕ್ಷನ್ನಾಗಿ ನೇಮಿಸಿತ್ತು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್  (BC Nagesh)  ಅವರು ಕಳೆದ ಫೆಬ್ರವರಿ 17ರಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು, ದ್ವಿತೀಯ ಪಿಯುಸಿ ಇತಿಹಾಸ ವಿಭಾಗದ ಪಠ್ಯಪುಸ್ತಕಕ್ಕೆ ಸಂಬಂಧಿಸಿ ಭಾರತ ಇತಿಹಾಸ (ಕರ್ನಾಟಕ ವಿಶೇಷ ಉಲ್ಲೇಖಗಳೊಂದಿಗೆ) ಪಠ್ಯ ಪುಸ್ತಕದ 42ನೇ ಅಧ್ಯಾಯ ಹೊಸ ಧರ್ಮಗಳ ಉದಯ ಪಠ್ಯ ಭಾಗದಲ್ಲಿ ನಿರ್ದಿಷ್ಠ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವಂತಹಃ ವಿಷಯ ಇರುವ ದೂರುಗಳು ಬಂದಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು.

ಸಮಿತಿ ವಿಸರ್ಜನೆ
ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣೆ ಸಮಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದೇ 3 ರಂದು ವಿಸರ್ಜಿಸಿದ್ದರು. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದ ಮುಖ್ಯಮಂತ್ರಿಗಳು, 'ಪಠ್ಯ ಪರಿಷ್ಕರಣೆಯ ಕ್ರಮಗಳ ಬಗ್ಗೆ ಎದ್ದಿರುವ ವಿವಾದಗಳ ಕಾರಣಕ್ಕೆ ಅಥವಾ ಯಾವುದೇ ಒತ್ತಡಕ್ಕೆ ಮಣಿದು ಈ ಸಮಿತಿಯನ್ನು ವಿಸರ್ಜಿಸುತ್ತಿಲ್ಲ' ಎಂದು ಸ್ಪಷ್ಟಪಡಿಸಿದ್ದರು. 'ಶಾಲಾ ಶಿಕ್ಷಣದಲ್ಲಿ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳನ್ನು ಕಾಲಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ರಾಜ್ಯದಲ್ಲಿ ಹಲವು ಬಾರಿ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ' ಎಂದೂ ಅವರು ಹೇಳಿದ್ದರು.

 ಒಂದೇ ಬರಹ ಇದ್ದ 28 ಲೇಖಕರು ಪಠ್ಯದಿಂದ ಹೊರಗೆ!

ಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್ ಸತ್ಯಾಗ್ರಹ..!
ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಜೂನ್ 9 ಗುರುವಾರ ಕಾಂಗ್ರೆಸ್ ಪಕ್ಷದ ನಾಯಕರು ವಿಧಾನ ಸೌಧದಲ್ಲಿ ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದ್ದು, ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಲಿದ್ದಾರೆ.

ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಿ. ಕೆ. ಶಿವಕುಮಾರ್,‌ 'ಈಗ ಪಠ್ಯದ ಪರಿಷ್ಕರಣೆ ನೆಪದಲ್ಲಿ ಸಾಂಸ್ಕೃತಿಕ ಅತ್ಯಾಚಾರ ನಡೆಯುತ್ತಿದೆ. ಮೊದಲನೇ ಬಾರಿಗೆ ಸ್ವಾಮೀಜಿ, ಸಾಹಿತಿ, ಸಂಘಟನೆಗಳು ಸರ್ಕಾರದ ಧೋರಣೆಯನ್ನು ವಿರೋಧಿಸಿದ್ದಾರೆ. ಸಿದ್ದಗಂಗಾ ಶ್ರೀಗಳಿಗೆ, ಮುರುಗಾ ಮಠ ಶ್ರೀ, ಆದಿ ಚುಂಚನಗಿರಿ, ಸಾಣೆ ಮಠದ ಶ್ರೀಗಳಿಗೆ ನಮಸ್ಕಾರ ಹೇಳುತ್ತೇನೆ. ಅವರ ಧ್ವನಿ ಜೊತೆಗೆ ನಮ್ಮ ಧ್ವನಿ‌ ಸೇರಿಸುತ್ತೇವೆ' ಎಂದರು‌.

ವಿವೇಕಾನಂದ, ಪೆರಿಯಾರ್ ವಿಚಾರಗಳಿಗೆ ಕತ್ತರಿ ಹಾಕಲಾಗಿದೆ, ತಿರುಚಲಾಗಿದೆ. ಭಕ್ತಿ ಹಾಗೂ ಸೂಫಿ ಪಂಥದ ಪಠ್ಯಕ್ಕೆ ಕತ್ತರಿ ಹಾಕಲಾಗಿದೆ. ಬುದ್ಧ, ಮಹಾವೀರರನ್ನು ಏಕವಚನದಲ್ಲಿ ಉಲ್ಲೇಖ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜೂನ್ 9 ಗುರುವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆಯ ಎದುರು ಧರಣಿ ಸತ್ಯಾಗ್ರಹ ನಡೆಸುತ್ತೇವೆ' ಎಂದು‌ ಮಾಹಿತಿ ನೀಡಿದರು.
 

Follow Us:
Download App:
  • android
  • ios