ಒಂದೇ ಬರಹ ಇದ್ದ 28 ಲೇಖಕರು ಪಠ್ಯದಿಂದ ಹೊರಗೆ!

* ಲಂಕೇಶ್‌, ಅಬೂಬಕರ್‌, ಬೋಳುವಾರು, ಜೋಗಿ, ನಾಗೇಶ್‌ ಹೆಗಡೆ, ಹಂಸಲೇಖ ಬರಹಕ್ಕೆ ಕೊಕ್‌

* ಒಂದೇ ಬರಹ ಇದ್ದ 28 ಲೇಖಕರು ಪಠ್ಯದಿಂದ ಹೊರಗೆ

 

karnataka Nearly 28 Authors Lessons Kept away from Text books After revision pod

ಲಿಂಗರಾಜು ಕೋರ

 ಬೆಂಗಳೂರು(ಜೂ.07): ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿದ ಪಠ್ಯ ಪರಿಷ್ಕರಣೆಯಲ್ಲಿ ಒಂದರಿಂದ ಹತ್ತನೇ ತರಗತಿ ವರೆಗಿನ ಕನ್ನಡ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷಾ ವಿಷಯಗಳಲ್ಲಿ ಒಟ್ಟು 28 ಲೇಖಕರು, ಕವಿಗಳ ಸಾಹಿತಿಗಳ ಗದ್ಯ/ಪದ್ಯಗಳನ್ನು ಪಠ್ಯದಿಂದ ತೆಗೆದುಹಾಕಲಾಗಿದೆ. ಈ ಎಲ್ಲ 28 ಬರೆಹಗಾರರ ಒಂದೊಂದು ಪದ್ಯ ಅಥವಾ ಗದ್ಯ ಪಠ್ಯದಲ್ಲಿತ್ತು. ಈಗ ಇದ್ದ ಒಂದು ಪದ್ಯ-ಗದ್ಯವನ್ನು ತೆಗೆದುಹಾಕುವ ಮೂಲಕ ಈ ಸಾಹಿತಿಗಳ ಯಾವುದೇ ಸಾಹಿತ್ಯ ಅಭ್ಯಾಸದ ಅವಕಾಶದಿಂದ ವಿದ್ಯಾರ್ಥಿಗಳು ವಂಚಿತರಾದಂತಾಗಿದೆ.

ಈ 28 ಮಂದಿ ಸಾಹಿತಿಗಳ ಪೈಕಿ ಪಿ.ಲಂಕೇಶ್‌, ಸಾರಾ ಅಬೂಬಕರ್‌, ಬೋಳುವಾರು ಮೊಹಮ್ಮದ್‌ ಕುಂಞ, ಮುಡ್ನಾಕೂರುಡ ಚಿನ್ನಸ್ವಾಮಿ ಸೇರಿದಂತೆ ಕೆಲವರ ಹೆಸರುಗಳು ಬಹಿರಂಗವಾಗಿವೆ. ಇವುಗಳಷ್ಟೇ ಅಲ್ಲ ಜ್ಞಾನಪೀಠ ಪುರಷ್ಕೃತ ಸಾಹಿತಿ ಗಿರೀಶ್‌ ಕಾರ್ನಾಡ್‌, ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಮನು ಬಳಿಗಾರ್‌, ಖ್ಯಾತ ಚಿತ್ರ ಸಾಹಿತಿ, ಸಂಗೀತ ನಿರ್ದೇಶಕ ಹಂಸಲೇಖ, ಎಸ್‌.ಜಿ.ಸಿದ್ದರಾಮಯ್ಯ, ಬರಹಗಾರ ಜೋಗಿ ಹೀಗೆ ಒಟ್ಟು 28 ಜನರ ಬರಹಗಳನ್ನು ಪಠ್ಯ ಪರಿಷ್ಕರಣೆ ವೇಳೆ ಕೈಬಿಡಲಾಗಿದೆ. ಈ ಬರಹಗಾರರ ಯಾವ ಪಠ್ಯವನ್ನು ಕೈಬಿಡಲಾಗಿದೆ. ಅವರಿಗೆ ಬದಲಾಗಿ ಬೇರೆ ಯಾವ ಬರಹಗಾರರ ಪಾಠಗಳನ್ನು ಸೇರಿಸಲಾಗಿದೆ ಎಂಬ ತರಗತಿ ವಾರು ಮಾಹಿತಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.

1ನೇ ತರಗತಿ: ನೆಹರು ಜನ್ಮದಿನ (ಸಮಿತಿ ರಚನೆ) ಪಾಠ ಕೈಬಿಟ್ಟು ವಿವೇಕಾನಂದ ಜನುಮದಿನ (ಸಮಿತಿ ರಚನೆ) ಸೇರಿಸಲಾಗಿದೆ.

5ನೇ ತರಗತಿ: ಬೋಳುವಾರು ಮಹಮ್ಮದ್‌ ಕುಂಞ ಅವರ ‘ಸುಳ್ಳು ಹೇಳಬಾರದು’ ಗದ್ಯ ತೆಗೆದು ಕಾನ್‌ಸ್ಟನ್ಸ್‌ ಜೆ. ಫಾಸ್ಟರ್‌ ಅವರ ಜೀವನದ ಮೌಲ್ಯ ಗದ್ಯ ಅಳವಡಿಸಲಾಗಿದೆ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ‘ನನ್ನ ಕವಿತೆ’ ಪೂರಕ ಗದ್ಯದ ಬದಲಿಗೆ ದಿನಕರ ದೇಸಾಯಿ ಅವರ ‘ಹಿನ್ನುಡಿ’ ಸೇರಿಸಲಾಗಿದೆ.

6ನೇ ತರಗತಿ: ಎಚ್‌.ಎಸ್‌.ಶಿವಪ್ರಕಾಶ್‌ ಅವರ ‘ಮಗು ಮತ್ತು ಹಣ್ಣುಗಳು’ ಪದ್ಯ ಕೈಬಿಟ್ಟು ಎನ್‌.ಶ್ರೀನಿವಾಸ ಉಡುಪ ಅವರ ‘ಕಂಬಳಿಹುಳು ಮತ್ತು ಚಿಟ್ಟೆಪದ’ ಸೇರ್ಪಡೆ. ಇದೇ ತರಗತಿಯಲ್ಲಿದ್ದ ಮನುಬಳಿಗಾರ, ಮಾಲತಿ ಪಟ್ಟಣ ಶೆಟ್ಟಿ, ಕೋ ಚನ್ನಬಸಪ್ಪ ಬರಹ ತೆಗೆಯಲಾಗಿದೆ.

7ನೇ ತರಗತಿ: ಪತ್ರಕರ್ತ ಹಾಗೂ ಸಾಹಿತಿ ಜೋಗಿ ಅವರ ‘ಅನ್ನದ ಹಂಗು, ಅನ್ಯರ ಸ್ವತ್ತು’ ಗದ್ಯ ಕೈಬಿಟ್ಟು ಶಶಿಧರ ಉಡುಪ ಅವರ ‘ಹಿಲ್ಟನ್‌ ಹೆಡ್‌ ಚಳವಳಿ’ ಸೇರಿಸಲಾಗಿದೆ. ಹಂಸಲೇಖ ಅವರ ‘ಈ ಭೂಮಿ ಬಣ್ಣದ ಬುಗುರಿ’ ಪೂರಕ ಪದ್ಯದ ಬದಲಿಗೆ ಚಿ.ಉದಯಶಂಕರ್‌ ಅವರ ‘ಗೊಂಬೆ ಕಲಿಸುವ ನೀತಿ’(ಆಡಿಸಿನೋಡು ಬೀಳಿಸಿನೋಡು) ಪದ್ಯ ಸೇರಿಸಲಾಗಿದೆ. (ಆದರೆ, ಪಠ್ಯದಲ್ಲಿ ಈ ಪದ್ಯವನ್ನು ಆರ್‌.ಎನ್‌.ಜಯಗೋಪಾಲ್‌ ರಚನೆ ಎಂದು ತಪ್ಪಾಗಿ ಮುದ್ರಿಸಲಾಗಿದೆ). ಅಲ್ಲದೆ, ಎಚ್‌.ಎಸ್‌.ಅನುಪಮ ಅವರ ‘ಸಾವಿತ್ರಬಾಯಿ ಪುಲೆ’ ಪೂರಕ ಗದ್ಯವನ್ನು ಬಿಟ್ಟು ರಮಾನಂದ ಆಚಾರ್ಯ ಅವರ ‘ಸಾಮಾಜಿಕ ಕಳಕಳಿಯ ಮೊಲದ ಶಿಕ್ಷಕಿ’ ಗದ್ಯ ಸೇರಿಸಲಾಗಿದೆ. ದು.ಸರಸ್ವತಿ ಅವರ ‘ನನ್ನ ಅಯ್ಯ’ ಪೂರಕ ಗದ್ಯ ಬಿಟ್ಟು ಏಣಗಿ ಬಾಳಪ್ಪ ಅವರ ‘ನನ್ನ ಬಾಲ್ಯ’ ಸೇರಿಸಲಾಗಿದೆ. ಜತೆಗೆ ವಿಜಯಮಾಲಾ ರಂಗನಾಥ್‌, ರಾಶಿ ಅವರ ಪದ್ಯಗಳನ್ನು ಕೈಬಿಡಲಾಗಿದೆ.

8ನೇ ತರಗತಿ: ಬಿ.ಟಿ.ಲಲಿತಾನಾಯಕ್‌ ಅವರ ‘ಭರವಸೆ’ ಗದ್ಯದ ಬದಲಿಗೆ ಕುವೆಂಪು ಅವರ ‘ಬಹುಮಾನ’ ಗದ್ಯ ಸೇರ್ಪಡೆಯಾಗಿದೆ. ದಸ್ತಗೀರ್‌ ಅಲ್ಲಿಬಾಯಿ, ಟಿ.ಯಲ್ಲಪ್ಪ, ಎಸ್‌.ಜಿ.ಸಿದ್ದರಾಮಯ್ಯ, ರಂಜಾನ್‌ ದರ್ಗಾ, ಪಾರ್ವತೀಶ ಅವರುಗಳ ಬರಹಗಳನ್ನೂ ಇದೇ ತರಗತಿಯಿಂದ ಕೈಬಿಟ್ಟಿದ್ದಾರೆ.

9ನೇ ತರಗತಿ: ಅರವಿಂದ ಮಾಲಗತ್ತಿ ಅವರ ‘ಮರಳಿ ಮನೆಗೆ’ ಪದ್ಯದ ಬದಲಿಗೆ ಎಸ್‌.ವಿ.ಪರಮೇಶ್ವರ ಭಟ್ಟಅವರ ‘ಹೇಮಂತ’ ಪದ್ಯ ಸೇರಿಸಲಾಗಿದೆ. ಕೆ.ನೀಲಾ ಅವರ ‘ರಂಜಾನ್‌ ಸುರಕುಂಬಾ’ ಪೂರಕ ಪದ್ಯಕ್ಕೆ ಪ್ರತಿಯಾಗಿ ಸುಶ್ರುತ ದೊಡ್ಡೇರಿ ಅವರ ‘ಹೊಳೆಬಾಗಿಲು’ ಗದ್ಯ ಸೇರಿಸಲಾಗಿದೆ. ಅದೇ ರೀತಿ ಗೊರೂ ರಾಮಸ್ವಾಮಿ ಅಯ್ಯಂಗಾರ್‌ ಅವರ ‘ಕನ್ನಡ ಮೌಲ್ವಿ’ ಗದ್ಯ ತೆಗೆದು ಎನ್‌.ರಂಗನಾಥ ಶರ್ಮರ ‘ರಾಮರಾಜ್ಯ’ ಸೇರಿಸಿದ್ದಾರೆ. ‘ಧರ್ಮಸಮದೃಷ್ಟಿ’ ವಿಜಯನಗರ ಶಾಸನ (ಶಾಸನ ಸಾಹಿತ್ಯ) ಪಾಠದ ಬದಲು ಎಸ್‌.ಎಲ್‌.ಬೈರಪ್ಪ ಅವರ ‘ನಾ ಕಂಡಂತೆ ಬಿಜಿಎಲ್‌ ಸ್ವಾಮಿ’ ಗದ್ಯ ಸೇರಿಸಲಾಗಿದೆ.

10ನೇ ತರಗತಿ: ಗಿರೀಶ್‌ ಕಾರ್ನಾಡ್‌ ಅವರ ಪದ್ಯವನ್ನು ಬಿಟ್ಟು ನಾ.ಮೊಗಸಾಲೆ ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಸಾರಾ ಅಬೂಬಕರ್‌ ಅವರ ‘ಯುದ್ಧ’ ಗದ್ಯದ ಬದಲು ಆರ್‌.ಗಣೇಶ್‌ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’, ಪಿ.ಲಂಕೇಶ್‌ ಅವರ ‘ಮೃಗ ಮತ್ತು ಸುಂದರಿ’ ಪೂರಕ ಗದ್ಯವನ್ನು ಕೈಬಿಟ್ಟು ಎಂ.ಗೋವಿಂದ ಪೈ ಅವರ ‘ನಾನು ಪ್ರಾಸ ಬಿಟ್ಟಕಥೆ’ ಸೇರಿಸಲಾಗಿದೆ. ಅದೇ ರೀತಿ ಎ.ಎನ್‌.ಮೂರ್ತಿರಾವ್‌ ಅವರ ‘ವ್ಯಾಘ್ರಗೀತೆ’ ಗದ್ಯದ ಬದಲಿಗೆ ಬನ್ನಂಜೆ ಗೋವಿಂದಾಚಾರ್ಯರ ‘ಶುಕನಾಶನ ಉಪದೇಶ’, ಶಿವಕೋಟ್ಯಾಚಾರ್ಯರ ‘ಸುಕುಮಾರಸ್ವಾಮಿ ಕಥೆ’ ಹಳಗನ್ನಡ ಗದ್ಯವನ್ನು ತೆಗೆದು ಆರೆಸ್ಸೆಸ್‌ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್‌ ಅವರ ‘ನಿಜವಾದ ಆದರ್ಶ ಪುರುಷ ಯಾರಾಗಬೇಕು’ ಎಂಬ ಭಾಷಣ ಸೇರಿಸಲಾಗಿದೆ. ನಾಗೇಶ ಹೆಗಡೆ ಅವರ ಬರಹದ ಬದಲಿಗೆ ಟಿ.ಆರ್‌.ಅನಂತರಾಮು ಅವರಿಗೆ ಅವಕಾಶ ನೀಡಲಾಗಿದೆ. ಸರೂಜ ಕಾಟ್ಕರ್‌ ಅವರ ಗದ್ಯ ಕೈಬಿಡಲಾಗಿದೆ.

Latest Videos
Follow Us:
Download App:
  • android
  • ios