Asianet Suvarna News Asianet Suvarna News

ನಾಲ್ಕು ವರ್ಷದಲ್ಲಿ 2,529 ಸರ್ಕಾರಿ ಶಾಲೆಗಳನ್ನು ಮುಚ್ಚಿ, 2,949 ಖಾಸಗಿ ಶಾಲೆಗಳಿಗೆ ಅನುಮತಿ ಕೊಟ್ಟ ಸರ್ಕಾರ

ಕಳೆದ 16 ವರ್ಷಗಳಿಂದ ಒಂದೇ ಒಂದು ಪ್ರಾಥಮಿಕ ಶಾಲೆ ಆರಂಭಿಸದ ಸರ್ಕಾರ, 4 ವರ್ಷದಲ್ಲಿ 2,529 ಸರ್ಕಾರಿ ಶಾಲೆಗಳನ್ನು ಮುಚ್ಚಿ, 2,949 ಖಾಸಗಿ ಶಾಲೆಗಳ ಆರಂಭಕ್ಕೆ ಅನುಮತಿ ಕೊಟ್ಟಿದೆ.

Karnataka govt closed 2529 government schools and allowed for open 2949 private schools in four years sat
Author
First Published Sep 9, 2023, 5:47 PM IST

ಬೆಂಗಳೂರು (ಸೆ.09): ಕಳೆದ 16 ವರ್ಷಗಳಿಂದ ಒಂದೇ ಒಂದು ಪ್ರಾಥಮಿಕ ಶಾಲೆ ಆರಂಭಿಸದ ಸರ್ಕಾರ, ಕಳೆದ 4 ವರ್ಷಗಳಲ್ಲಿ ರಾಜ್ಯ ಸರ್ಕಾರವು ಬರೋಬ್ಬರಿ 2,529 ಸರ್ಕಾರಿ ಶಾಲೆಗಳನ್ನು ಮುಚ್ಚಿದ್ದು, ಇದಕ್ಕೆ ಬದಲಿಯಾಗಿ 2,949 ಖಾಸಗಿ ಶಾಲೆಗಳನ್ನು ಆರಂಭಿಸಲು ಅನುಮತಿ ಕೊಟ್ಟಿದೆ. ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಉಳಿಸುವ ಯಾವುದೇ ಪ್ರಯತ್ನಗಳನ್ನು ಕೂಡ ಮಾಡಿದಂತೆ ಕಂಡುಬರುತ್ತಿಲ್ಲ.

ಹೌದು, ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಯನ್ನು ಸರ್ಕಾರ ಕಡೆಗಣನೆ ಮಾಡಿದ್ದರಿಂದ ಖಾಸಗಿ ಶಾಲೆಗಳಿಗೆ ಬೇಡಿಕೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಸರ್ಕಾರವೇ ಬೇಕಂತಲೆ ಸರ್ಕಾರಿ ಶಾಲೆಗಳನ್ನು ಮೂಲೆಗುಂಪು ಮಾಡಿ, ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿಯನ್ನು ಕೊಡಲಾಗುತ್ತಿದೆಯೇ ಎಂಬ ಅನುಮಾನಗಳು ಕಂಡುಬರುತ್ತಿದೆ. ಈ ಆರೋಪಕ್ಕೆ ಪೂರಕ ಎಂಬಂತೆ ಕಳೆದ 4 ವರ್ಷಗಳಲ್ಲಿ ರಾಜ್ಯದ ಸರ್ಕಾರಿ ಶಾಲೆಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತವಾಗಿರುವುದು ಸಾಕ್ಷಿಯಾಗಿದೆ. ಇದಕ್ಕೆ ಖಾಸಗಿ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಕೂಡ ಯಾವುದೇ ಕಡಿವಾಣ ಹಾಕದಿರುವುದು ಮತ್ತೊಂದು ಕಾರಣವಾಗಿದೆ.

ಮಕ್ಕಳ ಮೂಲಭೂತ ಹಕ್ಕು ಈಡೇರಿಸಲೂ ನಿರ್ಲಕ್ಷ್ಯ: 6 ರಿಂದ 14 ವರ್ಷದೊಳಗಿನ ಮಕ್ಕಳ ಮೂಲಭೂತ ಹಕ್ಕುಗಳಲ್ಲಿ ಒಂದಾಗಿರುವ ಶಿಕ್ಷಣವನ್ನು ಕೊಡುವುದಕ್ಕೆ ಆಯಾ ಮಕ್ಕಳ ಪಾಲಕರು ಮತ್ತು ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ. ಆದರೆ, ಬಡಜನರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಮಕ್ಕಳೇ ಹೆಚ್ಚಾಗಿ ಓದುವ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ. ಆದ್ದರಿಂದಲೇ 2019-20ರಿಂದ 2022-23ರ ಅವಧಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಸೇರಿದಂತೆ 2,949, ಖಾಸಗಿ ಶಾಲೆಗಳಿಗೆ ಇಲಾಖೆ ಅನುಮತಿ ನೀಡಿದೆ. ಜೊತೆಗೆ, ಈ ಅವಧಿಯಲ್ಲಿ ಕೇವಲ 135 ಸರ್ಕಾರಿ ಶಾಲೆಗಳನ್ನು ಮಾತ್ರ ಆರಂಭಿಸಿದೆ. 

ಶಿಕ್ಷಣ ಸಚಿವರೇ ಇತ್ತ ನೋಡಿ: ಕೊಡಗಿನ 24 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಒಬ್ಬ ಶಿಕ್ಷಕರೂ ಇಲ್ಲ!

16 ವರ್ಷದಿಂದ ಒಂದೇ ಒಂದು ಸರ್ಕಾರಿ ಪ್ರಾಥಮಿಕ ಶಾಲೆ ತೆರೆದಿಲ್ಲ: ರಾಜ್ಯದಲ್ಲಿ 2019-20ರ ವೇಳೆಯಲ್ಲಿ 50,000 ಸರಕಾರಿ ಶಾಲೆಗಳಿದ್ದವು. ಅದರಲ್ಲಿ 2023ರ ವೇಳೆಗೆ ಸರ್ಕಾರಿ ಶಾಲೆಗಳ ಸಂಖ್ಯೆ 47,471ಕ್ಕೆ ಕುಸಿತಗೊಂಡಿದೆ. ಅಂದರೆ, ಒಟ್ಟಾರೆ ರಾಜ್ಯದಲ್ಲಿ 2,529 ಸರ್ಕಾರಿ ಶಾಲೆಗಳನ್ನು ವಿವಿಧ ಕಾರಣಗಳನ್ನು ಒಡ್ಡಿ ಮುಚ್ಚಲಾಗಿದೆ.  2022-23ರಲ್ಲಿ ರಾಜ್ಯ ಸರ್ಕಾರ 120 ಸರ್ಕಾರಿ ಪ್ರೌಢಶಾಲೆಗಳನ್ನು ಆರಂಭಿಸಿದೆ. ಉಳಿದಂತೆ ಇದಕ್ಕಿಂದ ಮೊದಲು 15 ಕಡೆ ಶಾಲೆಗಳನ್ನು ಆರಂಭ ಮಾಡಿತ್ತು. ಇದನ್ನು ಹೊರತುಪಡಿಸಿದೆ 2007 ರಿಂದ 2023ರವರೆಗೆ ಒಂದೇ ಒಂದು ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ತೆರೆದಿಲ್ಲ.

ವಾರ್ಷಿಕ 250 ಖಾಸಗಿ ಶಾಲೆಗಳ ಆರಂಭಕ್ಕೆ ಅನುಮತಿ: ಮತ್ತೊಂದೆಡೆ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮೂಲಸೌಕರ್ಯ ಕೊರತೆ, ಶಿಕ್ಷಕರ ಕೊರತೆ ಹಾಗೂ ಬೋಧನೆಯ ಕಾರಣದಿಂದಾಗಿ ಮುಚ್ಚುತ್ತಿರುವುದೇ ಖಾಸಗಿ ಶಾಲೆಗಳ ಆರಂಭಕ್ಕೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ. ಹೀಗಾಗಿ, ಪ್ರತಿವರ್ಷ ಖಾಸಗಿ ಶಾಲೆಗಳು ಗಣನೀಯವಾಗಿ ಏರಿಕೆಯಾಗುತ್ತಿದೆ. ಸರ್ಕಾರದ ಮಾಹಿತಿ ಪ್ರಕಾರ ರಾಜ್ಯದಲ್ಲಿ 17,350 ಶಾಲೆಗಳಿವೆ. ಪ್ರತಿ ವರ್ಷ ಖಾಸಗಿ ಶಾಲೆಗಳನ್ನು ತೆರೆಯಲು ಶಿಕ್ಷಣ ಇಲಾಖೆಯ ಅರ್ಜಿ ಕರೆದು ಅನುಮತಿ ನೀಡುತ್ತಿದೆ. ಪ್ರತಿವರ್ಷ 400-500 ಅರ್ಜಿಗಳು ಸಲ್ಲಿಕೆಯಾಗುತ್ತಿದ್ದು, ಕನಿಷ್ಟ 200-250 ಶಾಲೆಗಳಿಗೆ ಇಲಾಖೆಯು ಪ್ರತಿ ವರ್ಷ ಅನುಮತಿ ನೀಡುತ್ತಿದೆ. 

ಖಾಸಗಿ ಶಾಲೆಗಳ ಆರಂಭವೇ ಶಿಕ್ಷಣ ಇಲಾಖೆಗೆ ಸುಗ್ಗಿ:
ಜೊತೆಗೆ, ಹೊಸ ಶಾಲೆಗಳಿಗೆ ಮಾನ್ಯತೆ, ಹಳೇ ಶಾಲೆಯ ಮಾನ್ಯತೆ ನವೀಕರಣ ಮಾಡುವಂತಹ ಅವಧಿ ಶಿಕ್ಷಣ ಇಲಾಖೆಯ ಸುಗ್ಗಿಯಂತಾಗಿರುತ್ತದೆ. ಪ್ರತಿ ವರ್ಷ ಈ ಅವಧಿಯು ಶಿಕ್ಷಣ ಇಲಾಖೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭರ್ಜರಿ ಆದಾಯ ಬರಲಿದೆ. ಈ ವೇಳೆ ಸರ್ಕಾರಕ್ಕೆ ನೋಂದಾಯಿಸಿಕೊಳ್ಳಲು ಶುಲ್ಕದ ರೀತಿಯಲ್ಲಿ ಆದಾಯ ಬಂದರೆ, ಪರೋಕ್ಷವಾಗಿ ಲಂಚದ ರೂಪದಲ್ಲಿ ಅಧಿಕಾರಿಗಳಿಗೂ ಸಾಕಷ್ಟು ಹಣ ಗಳಿಸಲು ದಾರಿಯಾಗಲಿದೆ. ಈ ಬಗ್ಗೆ ಖಾಸಗಿ ಶಾಲೆಗಳ ಸಂಘಟನೆಯು ಕೂಡ, ಶಾಲೆ ಆರಂಭಕ್ಕೆ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಡುವ ಬಗ್ಗೆ ಆರೋಪ ಮಾಡಲಾಗಿತ್ತು. 

ಪಂಚೆ ಹಾಕೊಂಡು, ಹ್ಯೂಬ್ಲೋಟ್ ವಾಚ್ ಕಟ್ಕೊಂಡ್ರೆ ಸಮಾಜವಾದಿ ಆಗೋಲ್ಲ: ಸಿದ್ದರಾಮಯ್ಯಗೆ ಟಾಂಗ್‌ ಕೊಟ್ಟ ಹರಿಪ್ರಸಾದ್‌

ನಾಯಿ ಕೊಡೆಯಂತೆ ಹೆಚ್ಚುತ್ತಿರುವ ಖಾಸಗಿ ಶಾಲೆಗಳು: 2019ರಿಂದ 2022ರ ಅವಧಿಯಲ್ಲಿ 2,139 ಖಾಸಗಿ ಪ್ರಾಥಮಿಕ ಶಾಲೆ ಹಾಗೂ 810 ಖಾಸಗಿ ಪ್ರೌಢ ಶಾಲೆಗಳನ್ನು ತೆರೆಯಲು ಅನುಮತಿ ನೀಡಿದೆ. ಇನ್ನು ಕೋವಿಡ್‌ ಸಮಯದಲ್ಲಿ ಕೆಲವು ಖಾಸಗಿ ಶಾಲೆಗಳನ್ನು ನಡೆಸಲು ಸಾಧ್ಯವಾಗದೇ ಕೆಲವು ಆಡಳಿತ ಮಂಡಳಿಗಳು ಶಾಲೆಗಳನ್ನು ಮುಚ್ಚಿವೆ. ಆದರೆ, ಕೋವಿಡ್‌ಗಿಂತ ಮುಂಚಿತವಾಗಿ ಹಾಗೂ ಕೋವಿಡ್‌ ನಂತರದ ಅವಧಿಯಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಸರ್ಕಾರವೂ ಕೂಡ ಪೂರಕ ವಾತಾವರಣ ನಿರ್ಮಿಸಿಕೊಡಲಾಗುತ್ತಿದೆ ಎಂದರೆ ತಪ್ಪಾಗುವುದಿಲ್ಲ ಎಂದೇ ಭಾವಿಸಬಹುದು. 

ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಆರಂಭ:

  • ವರ್ಷಗಳು     ಸರ್ಕಾರಿ    ಖಾಸಗಿ
  • 2019-20         00              1,146
  • 2020-21         07              763
  • 2021-22         08               354
  • 2022-23        120             686
  • ಒಟ್ಟು            135             2,949
  • (16 ವರ್ಷದಿಂದ ಸರ್ಕಾರಿ ಪ್ರಾಥಮಿಕ ಶಾಲೆ ಆರಂಭಿಸಿಲ್ಲ)
Follow Us:
Download App:
  • android
  • ios