Asianet Suvarna News Asianet Suvarna News

ಇನ್ನು ಮುಂದೆ ಎಸ್ಸೆಸ್ಸೆಲ್ಸಿ, ಪಿಯುಸಿಗೆ ವರ್ಷಕ್ಕೆ 3 ಪರೀಕ್ಷೆ, ಸರಕಾರದಿಂದ ಹೊಸ ಆದೇಶ

 2023-24ನೇ ಸಾಲಿನಿಂದಲೇ ಈ ವ್ಯವಸ್ಥೆ ಜಾರಿ. ಮೊದಲ ಪರೀಕ್ಷೆ ಬರೆಯುವುದು ಫ್ರೆಷರ್ಸ್‌ಗೆ ಕಡ್ಡಾಯ. ನೇರವಾಗಿ 2/3ನೇ ಪರೀಕ್ಷೆ ಬರೆಯುವಂತಿಲ್ಲ. ಪುನರಾವರ್ತಿತರು ಯಾವ ಪರೀಕ್ಷೆಗಾದರೂ ಕೂರಬಹುದು 

Karnataka government passes order to conduct three annual exams for Class 10th and 12th gow
Author
First Published Sep 23, 2023, 4:00 PM IST

ಬೆಂಗಳೂರು (ಸೆ.23): ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತಂದು ವಿದ್ಯಾರ್ಥಿಗಳಿಗೆ ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯಬಹುದಾದ ಹಾಗೂ ಆ ಮೂರರಲ್ಲಿ ಅತಿ ಹೆಚ್ಚು ಅಂಕಗಳು ಬಂದ ಫಲಿತಾಂಶ ಉಳಿಸಿಕೊಳ್ಳಬಹುದಾದ ಅವಕಾಶ ನೀಡಲು ನಿರ್ಧರಿಸಿದ್ದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಈ ಸಂಬಂಧ ವಿವರವಾದ ಮಾರ್ಗಸೂಚಿ ಪ್ರಕಟಿಸಿದೆ.

ಭಾರತದ ವೈದ್ಯಕೀಯ ಪದವೀಧರರಿಗೆ ಜಾಗತಿಕ ಮನ್ನಣೆ, ವಿದೇಶಗಳಲ್ಲೂ ಅಧ್ಯಯನ, 

ಆ ಪ್ರಕಾರ, 2023-24ನೇ ಸಾಲಿನಿಂದಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ. ಈ ಎರಡೂ ತರಗತಿ ಮಕ್ಕಳಿಗೆ ಒಂದೇ ವರ್ಷದಲ್ಲಿ ಮೂರು ಪರೀಕ್ಷೆಗಳನ್ನು ಬರೆಯಲು ಕೆಲ ಷರತ್ತುಗಳು ಅನ್ವಹಿಸುತ್ತವೆ. ಪ್ರತೀ ವರ್ಷ ಮಾರ್ಚ್‌ನಲ್ಲಿ ಮೊದಲ ಪರೀಕ್ಷೆ, ಮೇ-ಜೂನ್‌ನಲ್ಲಿ 2ನೇ ಪರೀಕ್ಷೆ ಮತ್ತು ಜೂನ್‌-ಜುಲೈನಲ್ಲಿ 3ನೇ ಪರೀಕ್ಷೆ ನಡೆಯಲಿದೆ. ಮೊದಲ ಬಾರಿಗೆ ಪರೀಕ್ಷೆ ಬರೆಯುವ ತರಗತಿ ವಿದ್ಯಾರ್ಥಿಗಳು (ಫ್ರೆಷರ್ಸ್‌) ಹಾಗೂ ಖಾಸಗಿ ಅಭ್ಯರ್ಥಿಗಳು ಮಾರ್ಚ್‌ನಲ್ಲಿ ನಡೆಯುವ ಪರೀಕ್ಷೆ (ಎಲ್ಲ ವಿಷಯಗಳಲ್ಲೂ) ಬರೆಯುವುದು ಕಡ್ಡಾಯ. ನೇರವಾಗಿ ಎರಡನೇ ಅಥವಾ ಮೂರನೇ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಇನ್ನು ತರಗತಿ ವಿದ್ಯಾರ್ಥಿಗಳಿಗೆ ಹಾಲಿ ಇರುವಂತೆ ಶೇ.75ರಷ್ಟು ಹಾಜರಾತಿ ಕಡ್ಡಾಯಗೊಳಿಸಲಾಗಿದೆ.

ಪುನರಾವರ್ತಿತ ವಿದ್ಯಾರ್ಥಿಗಳು ಹಿಂದಿನ ಪರೀಕ್ಷೆಯಲ್ಲಿ ತಾವು ಅನುತ್ತೀರ್ಣ ವಿಷಯಗಳಿಗೆ ಈ ಮೂರರಲ್ಲಿ ಯಾವುದೇ ಪರೀಕ್ಷೆಯಲ್ಲಿ ಬೇಕಾದರೂ ಪರೀಕ್ಷೆ ಬರೆಯಹುದು. ಅಥವಾ ತಮ್ಮ ಹಿಂದಿನ ವರ್ಷದ ಪೂರ್ಣ ಫಲಿತಾಂಶವನ್ನೇ ರದ್ದುಪಡಿಸಿಕೊಂಡು ಹೊಸದಾಗಿಯೂ ಪರೀಕ್ಷೆ ಬರೆಯಬಹುದು ಎಂದು ಮಂಡಳಿ ತಿಳಿಸಿದೆ.

ಭಾರತ ಮತ್ತು ಕೆನಡಾ ಶೈಕ್ಷಣಿಕ ಅಭಿವೃದ್ಧಿಗಾಗಿ ಒಪಿ ಜಿಂದಾಲ್‌ ವಿವಿ ಜೊತೆ ಕೆನಡಾ

ಪರೀಕ್ಷೆ-1ರಲ್ಲಿ ತೇರ್ಗಡೆ ಹೊಂದಿದ ಯಾವುದೇ ವಿದ್ಯಾರ್ಥಿಗಳು 2 ಮತ್ತು 3ನೇ ಪರೀಕ್ಷೆ ತೆಗೆದುಕೊಳ್ಳಲು ಇಚ್ಛಿಸಿದಲ್ಲಿ ಅಂತಹ ಸಂದರ್ಭದಲ್ಲಿ ಅವರಿಗೆ ಅಂಕಪಟ್ಟಿ ನೀಡುವಂತಿಲ್ಲ. ಎರಡು ಮತ್ತು ಮೂರನೇ ಪರೀಕ್ಷೆ ಬರೆದ ಬಳಿಕ ಯಾವ ಪರೀಕ್ಷಾ ಫಲಿತಾಂಶ ಉಳಿಸಿಕೊಳ್ಳಲು ವಿದ್ಯಾರ್ಥಿ ಇಚ್ಛಿಸುತ್ತಾರೋ ಆ ಫಲಿತಾಂಶವನ್ನು ಒಳಗೊಂಡ ಅಂಕ ಪಟ್ಟಿಯನ್ನು ನೀಡಲು ಕ್ರಮ ವಹಿಸಬೇಕು.

ಇನ್ನು, ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನ (ಇಂಟರ್ನಲ್ಸ್‌) ಅಂಕಗಳನ್ನು ಸರಿಯಾದ ಕ್ರಮದಲ್ಲಿ ನೀಡಲಾಗಿದೆಯೇ ಎಂಬುದನ್ನು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು ಪರಿಶೀಲನಾ ತಂಡವನ್ನು ರಚಿಸಿಕೊಂಡು ಪ್ರತಿಯೊಂದು ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಬಹುದು. ಪ್ರತಿ ವಿದ್ಯಾರ್ಥಿಗಳಿಂದ ಒಂದು ಬಾರಿ ಮಾತ್ರ ಅಂಕಪಟ್ಟಿ ನೀಡಲು ನಿಗದಿತ ಶುಲ್ಕ ಪಡೆಯಲಾಗುವುದು. ಎರಡನೇ ಬಾರಿಗೆ ಶುಲ್ಕ ಪಡೆಯವಂತಿಲ್ಲ ಎಂದು ತಿಳಿಸಿದೆ.

ವಿದ್ಯಾರ್ಥಿಗಳು ಅಂಕಗಳನ್ನು ಪಡೆಯುವ ಸಲುವಾಗಿ ನ್ಯಾಡ್, ಡಿಜಿ ಲಾಕರ್ ವ್ಯವಸ್ಥೆಯಲ್ಲಿ ಆಯಾ ಪರೀಕ್ಷೆಗಳು ಮುಗಿದ ನಂತರ ಅಪ್‌ಲೋಡ್ ಮಾಡಬೇಕು. ಅನುತ್ತೀರ್ಣರಾಗಿ ಮರು ಪ್ರಯತ್ನಿಸುವ ವಿದ್ಯಾರ್ಥಿಗಳಿಗೆ ಹಾಲಿ ವ್ಯವಸ್ಥೆಯನ್ನೇ ಮುಂದುವರಿಸಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.

Follow Us:
Download App:
  • android
  • ios