ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಸರಕಾರ ಚಿಂತನೆ
2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿರುವ ಬೆನ್ನಲ್ಲೇ, ರಾಜ್ಯ ಸರ್ಕಾರ ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಲು ಚಿಂತನೆ ನಡೆಸಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಜೊತೆ ಶಿಕ್ಷಣ ಸಚಿವರು ಸಭೆ ನಡೆಸಿದ್ದಾರೆ.
ಬೆಂಗಳೂರು (ಡಿ.10): 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿರುವ ಬೆನ್ನಲ್ಲೇ, ರಾಜ್ಯ ಸರ್ಕಾರ ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ಮಾಡಲು ಚಿಂತನೆ ನಡೆಸಿದೆ. ಈ ಸಂಬಂಧ ಕಳೆದವಾರ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪರಿಶೀಲನಾ ಸಭೆ ನಡೆಸಿದ್ದು, ಈ ಸಭೆಯಲ್ಲಿ ಪಿಯುಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಲು ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಪಿಯುಸಿ ಪರೀಕ್ಷೆಯ ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ 15 ರಿಂದ 20 ಅಂಕಗಳ ಬಹು ಆಯ್ಕೆ ಪ್ರಶ್ನೆಗಳನ್ನು ಅಳವಡಿಸಿಲು ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಫಲಿತಾಂಶವನ್ನು ಹೆಚ್ಚಳ ಮಾಡುವುದು ಈ ಹೊಸ ಯೋಜನೆಯ ಮೂಲ ಉದ್ದೇಶವಾಗಿದೆಯಂತೆ . ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶವನ್ನು ಕೇಂದ್ರೀಯ ಮಂಡಳಿಗಳ ಫಲಿತಾಂಶಗಳೊಂದಿಗೆ ಹೋಲಿಸಿದಾಗ ರಾಜ್ಯದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಮತ್ತು ಅಂಕಗಳ ಸಾಮರ್ಥ್ಯ ಕಡಿಮೆಯಾಗುತ್ತಿದೆ.
ಪಿಯು ಪ್ರಶ್ನೆ ಪತ್ರಿಕೆ ವಿವರಣಾತ್ಮಕ ಉತ್ತರಗಳನ್ನು ಮಾತ್ರ ಒಳಗೊಂಡಿದೆ. ಒಂದು ಅಂಕದ ಪ್ರಶ್ನೆಗೂ ವಿವರಣಾತ್ಮಕ ಉತ್ತರಗಳನ್ನು ವಿದ್ಯಾರ್ಥಿಗಳು ಬರೆಯಬೇಕಿದೆ. ಹಾಗಾಗಿ, ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್ ಆಗುತ್ತಿದ್ದರು. ಪದವಿ ವಿದ್ಯಾಭ್ಯಾಸಕ್ಕೆ ಅರ್ಹತೆ ಪಡೆಯಲು ಪಿಯುಸಿ ಅಂಕವೇ ಭದ್ರ ಬುನಾದಿಯಾಗಿದೆ. ಹೀಗಾಗಿ ಬಹು ಆಯ್ಕೆಯ ಪ್ರಶ್ನೆಗಳನ್ನು ಅಳವಡಿಕೆ ಮಾಡಿದರೆ ಪಿಯು ಫಲಿತಾಂಶವು ಉತ್ತಮವಾಗಿರುತ್ತದೆ ಜೊತೆಗೆ ಪದವಿ ದಾಖಲಾತಿ ಕೂಡ ಹೆಚ್ಚುತ್ತದೆ ಎಂಬುದು ಸರಕಾರದ ಉದ್ದೇಶ.
ಮಾ.9ರಿಂದ ಪಿಯು-2 ಪರೀಕ್ಷೆ:
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (ಕೆಎಸ್‌ಇಎಬಿ) 2022-23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದೆ. ಮಾರ್ಚ್ 9ರಿಂದ 29ರವರೆಗೆ ಪರೀಕ್ಷೆಗಳು ನಡೆಯಲಿವೆ.
ಕಳೆದ ಅಕ್ಟೋಬರ್‌ನಲ್ಲಿ ಪ್ರಕಟಿಸಿದ್ದ ತಾತ್ಕಾಲಿಕ ವೇಳಾಪಟ್ಟಿಯಲ್ಲಿ (ಮಾ.10ರಿಂದ 29) ಕೊಂಚ ಮಾರ್ಪಾಡು ಮಾಡಿ ಮಾ.9ರಿಂದ ಪರೀಕ್ಷೆ ಆರಂಭಿಸಿ 29ಕ್ಕೆ ಮುಕ್ತಾಯಗೊಳಿಸಲು ಮಂಡಳಿ ನಿರ್ಧರಿಸಿದೆ. ಎಲ್ಲ ಪರೀಕ್ಷೆಗಳೂ ನಿತ್ಯ ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ.
UTTARA KANNADA :ಮಾತೃಭಾಷಾ ಶಿಕ್ಷಣಕ್ಕೆ ಒತ್ತು: ಸಚಿವ ನಾಗೇಶ
ಅಂತಿಮ ವೇಳಾಪಟ್ಟಿ ಹೀಗಿದೆ
ಮಾ.9- ಕನ್ನಡ, ಅರೇಬಿಕ್
ಮಾ.11- ಗಣಿತ, ಶಿಕ್ಷಣಶಾಸ್ತ್ರ
ಮಾ.13- ಅರ್ಥಶಾಸ್ತ್ರ
ಮಾ.14- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲಗಣಿತ
ಮಾ.15- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾ.16- ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಮಾ.17- ಮಾಹಿತಿ ತಂತ್ರಜ್ಞಾನ, ರಿಟೈಲ್, ಅಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆಂಡ್ ವೆಲ್‌ನೆಸ್
ಮಾ.18- ಭೂಗೋಳಶಾಸ್ತ್ರ, ಜೀವಶಾಸ್ತ್ರ
ಮಾ.20- ಇತಿಹಾಸ, ಭೌತಶಾಸ್ತ್ರ
ಮಾ.21- ಹಿಂದಿ
ಮಾ.23- ಇಂಗ್ಲಿಷ್
ಮಾ.25- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮಾ.27- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
ಮಾ.29- ಸಮಾಜ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳು: ತನಿಖೆಗೆ ಆದೇಶ