ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ, 5 ಮತ್ತು 8ನೇ ತರಗತಿಗೆ ಈ ಶೈಕ್ಷಣಿಕ ವರ್ಷದಿಂದಲೇ ಪಬ್ಲಿಕ್ ಪರೀಕ್ಷೆ
2023ರಿಂದಲೇ ರಾಜ್ಯ ಸರ್ಕಾರವು 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿದೆ. ಮಾತ್ರವಲ್ಲ ಶಿಕ್ಷಣ ಇಲಾಖೆಯು ತಾತ್ಕಾಲಿಕ ವೇಳಾಪಟ್ಟಿಯನ್ನು ಕೂಡ ಪ್ರಕಟಿಸಿದೆ.
ಬೆಂಗಳೂರು (ಡಿ.13): 2023ರಿಂದಲೇ ರಾಜ್ಯ ಸರ್ಕಾರವು 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿದೆ. ಮಾತ್ರವಲ್ಲ ತಾತ್ಕಾಲಿಕ ವೇಳಾಪಟ್ಟಿಯನ್ನು ಕೂಡ ಪ್ರಕಟಿಸಿದೆ. ಮುಂದಿನ ವರ್ಷದ ಮಾರ್ಚ್ ನಿಂದ ಪಠ್ಯಪುಸ್ತಕ ಆಧರಿಸಿ ಪರೀಕ್ಷೆ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದೆ. ಇದಕ್ಕೆ ರಾಜ್ಯ ಸರಕಾರ ಒಪ್ಪಿಗೆ ಕೂಡ ಸೂಚಿಸಿದೆ. ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಹಂತಕ್ಕೆ ತಲುಪುವ ಮುನ್ನ ಅವರ ಕಲಿಕಾ ಮಟ್ಟಮೌಲ್ಯಮಾಪನ ಮಾಡುವ ದೃಷ್ಟಿಯಿಂದ 5 ಮತ್ತು 8ನೇ ತರಗತಿ ಹಂತದಲ್ಲಿ ಪ್ರತ್ಯೇಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. 10ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಎದುರಿಸುವ ಮುನ್ನ 5 ಮತ್ತು 8ನೇ ತರಗತಿಯಲ್ಲಿ ಅವರ ಕಲಿಕಾ ಮಟ್ಟವನ್ನು ಮೌಲ್ಯಮಾಪನ ಮಾಡಲು ಪ್ರತ್ಯೇಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಈ ಹಿಂದೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದರು. ಅದರಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆಯುಕ್ತರಿಂದ ಈ ಸಂಬಂಧ ಆದೇಶ ಪ್ರಕಟವಾಗಿದ್ದು, 2 ಗಂಟೆಯ ಅವಧಿ ಪರೀಕ್ಷೆ ನಡೆಯಲಿದೆ. 50 ಅಂಕಗಳ ನಿಗಧಿ ಪಡಿಸಲಾಗಿದೆ. ಅದರಲ್ಲಿ 40 ಅಂಕ ಲಿಖಿತ ಮತ್ತು 10 ಅಂಕ ಮೌಖಿಕ ಪರೀಕ್ಷೆ ಆಗಿರಲಿದೆ.
ಶಿಕ್ಷಣ ಗುಣಮಟ್ಟಕುಸಿದಿರುವ ಕಾರಣ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ಬಾರಿ ಮಾರ್ಚ್ 9 2023 ರಿಂದ 17 ಮಾರ್ಚ್ 2023ರವರೆಗೆ 10 ನೇ ತರಗತಿ ವಾರ್ಷಿಕ ಪರೀಕ್ಷೆ ಜರುಗಲಿದೆ. ಏಪ್ರಿಲ್ 08 ಮತ್ತು ಏಪ್ರಿಲ್ 10 ರಂದು ಫಲಿತಾಂಶ ಪ್ರಕಟಿಸಲು ಉದ್ದೇಶಿಸಲಾಗಿದೆ. ಈ ನಡುವೆ 5 ಮತ್ತು 8ನೇ ತರಗತಿಗೆ ಕೂಡ ಪಬ್ಲಿಕ್ ಪರೀಕ್ಷೆ ನಡೆಯಲಿದೆ.
2022-23ನೇ ಸಾಲಿನ ಪರೀಕ್ಷೆ ಮತ್ತು ನಿರ್ವಹಣಾ ವೆಚ್ಚವನ್ನು ವಿದ್ಯಾರ್ಥಿಗಳಿಂದ ಪಡೆಯದೆ ಸಂಪೂರ್ಣವಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಭರಿಸಲು ಸರ್ಕಾರವು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ವೆಚ್ಚದ ಕುರಿತಂತೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ನಿಯಮಾನುಸಾರ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಉನ್ನತ ಶಿಕ್ಷಣ ಇಲಾಖೆ ಸಿಬ್ಬಂದಿ ಸಮಸ್ಯೆ ಪರಿಹರಿಸಲು ಸಮಗ್ರ ಪೋರ್ಟಲ್, ಡಿ.25ರಂದು
ತರಗತಿಯಲ್ಲಿ ಮಕ್ಕಳ ಸಂಖ್ಯೆಯನ್ನಾಧರಿಸಿ 5ನೇ ತರಗತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 25 ಮಕ್ಕಳು ಒಂದು ಕೇಂದ್ರದಲ್ಲಿ ಇರುವಂತೆ. ಶಾಲಾವಾರು ಮಕ್ಕಳು ಕಡಿಮೆ ಇದ್ದಲ್ಲಿ 2 ಕಿ.ಮೀ ವ್ಯಾಪ್ತಿಯ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಸಮೀಪದ ಕಿರಿಯ ಅಥವಾ ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳೂ ಸೇರಿದಂತೆ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಕ್ರಮವಹಿಸಬೇಕೆಂದು ಇಲಾಖೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದೆ.
Karnataka : 17ಕ್ಕೆ ರಾಜ್ಯಾದ್ಯಂತ ಶಾಲಾ ಕಾಲೇಜ್ ಬಂದ್
8ನೇ ತರಗತಿ ಪರೀಕ್ಷಾ ಕೇಂದ್ರವನ್ನು ಕನಿಷ್ಠ 50 ಮಕ್ಕಳು ಇರುವಂತೆ ಆಯಾ ಹಿರಿಯ ಪ್ರಾಥಮಿಕ ಅಥವಾ ಪ್ರೌಢಶಾಲೆಗಳಲ್ಲಿ ಸ್ಥಾಪಿಸುವುದು. ಮಕ್ಕಳ ಸಂಖ್ಯೆ ಕಡಿಮೆ ಇದ್ದಲ್ಲಿ ಕನಿಷ್ಠ 2. ಕಿ.ಮೀ ವ್ಯಾಪ್ತಿಯ ಸಮೀಪದ ಶಾಲೆಗಳಲ್ಲಿ ಪರೀಕ್ಷೆ ನಡೆಸಲು ಹೇಳಿದೆ. ಸದರಿ ಪರೀಕ್ಷಾ ಕೇಂದ್ರಗಳ ಸ್ಥಾಪನೆ ಕುರಿತು ಸಿ.ಆರ್.ಪಿ ಗಳಿಂದ ವರದಿ ಪಡೆದು ಡಯಟ್ ಪ್ರಾಂಶುಪಾಲರು ಮತ್ತು ಕ್ಷೇತ್ರಶಿಕ್ಷಣಾಧಿಕಾರಿಗಳು ಪರಸ್ಪರ ಚರ್ಚಿಸಿ, ಪರೀಕ್ಷಾ ಕೇಂದ್ರ ಸ್ಥಾಪನೆಯ ವರದಿಯನ್ನು ಕ್ರೋಢೀಕರಿಸಿ KSEABಗೆ ವರದಿ ನೀಡಬೇಕು ಎಂದು ಹೇಳಲಾಗಿದೆ.