Karnataka : 17ಕ್ಕೆ ರಾಜ್ಯಾದ್ಯಂತ ಶಾಲಾ ಕಾಲೇಜ್ ಬಂದ್
ರಾಜ್ಯದ ವಿವಿಧ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಡಿ. 17ರಂದು ಶನಿವಾರ ರಾಜ್ಯವ್ಯಾಪಿ ಅಖಿಲ ಭಾರತ ವಿದ್ಯಾರ್ಥಿ ಕಾಂಗ್ರೆಸ್ ಒಕ್ಕೂಟದಿಂದ ಶಾಲಾ, ಕಾಲೇಜ್‌ಗಳನ್ನು ಬಂದ್ ಆಚರಿಸಲಾಗುವುದೆಂದು ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ತಿಳಿಸಿದರು.
ಚಿಕ್ಕಬಳ್ಳಾಪುರ (ಡಿ.13): ರಾಜ್ಯದ ವಿವಿಧ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಡಿ. 17ರಂದು ಶನಿವಾರ ರಾಜ್ಯವ್ಯಾಪಿ ಅಖಿಲ ಭಾರತ ವಿದ್ಯಾರ್ಥಿ ಕಾಂಗ್ರೆಸ್ ಒಕ್ಕೂಟದಿಂದ ಶಾಲಾ, ಕಾಲೇಜ್‌ಗಳನ್ನು ಬಂದ್ ಆಚರಿಸಲಾಗುವುದೆಂದು ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ಪ್ರಸನ್ನ ಕುಮಾರ್ ತಿಳಿಸಿದರು.
ನಗರದಲ್ಲಿ ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಬಿಜೆಪಿ (BJP) ಸರ್ಕಾರಗಳು ಶಿಕ್ಷಣ (Education) ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿ ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣಕ್ಕೆ ಮುಂದಾಗಿವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿವೇತನ ನೀಡಿಲ್ಲ
ಪ್ರಸ್ತುತದ ಬಿಜೆಪಿ ಸರ್ಕಾರವು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿದ್ದ ಸೈಕಲ್ ವಿತರಣೆ ನಿಲ್ಲಿಸಲಾಗಿದೆ. ಶೇ. 80ರಷ್ಟು ಶಾಲಾ (School) ಕಾಲೇಜು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಅಲ್ಲದೆ ಪಠ್ಯಪುಸ್ತಕ, ಶೂ ಇತರೆ ವಿಳಂಬ, ಸೇರಿ ಇತರೆ ವಿದ್ಯಾರ್ಥಿ ವಿರೋಧಿ ಚಟುವಟಿಕೆಗಳ ಮೂಲಕ ಬಡ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸಕಾಲದಲ್ಲಿ ಪರೀಕ್ಷಾ ಫಲಿತಾಂಶ ಪ್ರಕಟಿಸುತ್ತಿಲ್ಲ. ನಕಲಿ ಅಂಕಪಟ್ಟಿಹಾವಳಿ ನಿಂತಿಲ್ಲ. ಬಡ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ, ಬಿಸಿಎಂ ಇಲಾಖೆ ಮೂಲಕ ಕೂಡಲೇ ವಿದ್ಯಾರ್ಥಿವೇತನ ತಕ್ಷಣ ಬಿಡುಗಡೆ ಮಾಡಬೇಕು. ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ಬಸ್‌ಪಾಸ್ ವಿತರಿಸಬೇಕು. ಸರ್ಕಾರಿ ಶಾಲಾ, ಕಾಲೇಜಿಗಳಲ್ಲಿ ಶುಲ್ಕವನ್ನು ಕಡಿಮೆ ಮಾಡಬೇಕು, ಶಾಲಾ ಕಾಲೇಜುಗಳಿಗೆ ತೆರಳಲು ಸಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಸೇರಿ ಇನ್ನಿತರೆ ಬೇಡಿಕೆ ಈಡೇರಿಸಲು ಡಿ.17ರಂದು ಶನಿವಾರ ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು. ಇದಕ್ಕೆ ವಿದ್ಯಾರ್ಥಿಗಳು, ಕಾಲೇಜಿನ ಪ್ರಾಂಶುಪಾಲರು ಸಹಕರಿಸಬೇಕೆಂದು ಕೋರಿದರು.
ಮನವಿಗೆ ಸ್ಪಂದಿಸದ ಸರ್ಕಾರ
ಎನ್‌ಎಸ್‌ಯುಐನ ಜಿಲ್ಲಾ ಉಪಾಧ್ಯಕ್ಷ ಶಿವಾನಂದ್ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳೇ ಸ್ವಯಂ ಪ್ರೇರಿತರಾಗಿ ಸಮಸ್ಯೆ ಬಗೆಹರಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಸಂಘಟನೆಯೊಂದಿಗೆ ಕೈಜೋಡಿಸಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎನ್‌ಎಸ್‌ಯುಐ ಪದಾಧಿಕಾರಿಗಳಾದ ಅಜಯ…, ಮದನ್ಮೋಹನ…, ಶಿವಕುರ್ಮಾ, ರಾಜು ಇದ್ದರು.
ಉನ್ನತ ಶಿಕ್ಷಣದ ಪ್ರಮಾಣ ಏರಿಸುವ ಗುರಿ
ಮೈಸೂರು (ಡಿ.08): ಮೈಸೂರು ವಿವಿ ಸಿಎಸ್‌ಐಆರ್- ಯುಜಿಸಿ ನೆಟ್ ತರಬೇತಿ ಕೇಂದ್ರ, ಆಂತರಿಕ ಗುಣಮಟ್ಟಆಶ್ವಾಸನಾ ಕೋಶ, ಸಂಶೋಧನಾ ವಿದ್ವಾಂಸರ ಸಂಘವು ಪರಿಣಾಮಕಾರಿ ಪರಿಶೋಧನಾ ಲೇಖನ ರಚನೆ: ನೆನಪಿನಲ್ಲಿರಬೇಕಾದಂತಹ ಅಂಶಗಳು ಕುರಿತು ಕಾರ್ಯಾಗಾರ ಆಯೋಜಿಸಿತ್ತು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು (Mysuru) ವಿವಿ ಹಂಗಾಮಿ ಕುಲಪತಿ ಪೊ›.ಎಚ್. ರಾಜಶೇಖರ್, ಭಾರತದಲ್ಲಿ (India) ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಕ್ಷಿಪ್ರ ಗತಿಯಲ್ಲಿ ಹೆಚ್ಚಾಗುತ್ತಿದ್ದು, 52,000ಕ್ಕೂ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಈ ಮೂಲಕ ವಿಶ್ವದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದೆ. ಆದರೂ ಅನೇಕ ಶಿಕ್ಷಣ ಮಹತ್ವಾಕಾಂಕ್ಷಿಗಳಿಗೆ ಉನ್ನತ ಶಿಕ್ಷಣ ಲಭ್ಯವಾಗುತ್ತಿಲ್ಲ. ಪ್ರಸ್ತುತ ಭಾರತದಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಶೇ. 27.1 ರಷ್ಟಿದ್ದು, ಶೇ.32 ಪ್ರಮಾಣ ಸಾಧಿಸುವ ಗುರಿಯಿಂದ ಹಿಂದೆ ಉಳಿದಿದೆ ಎಂದು ತಿಳಿಸಿದರು.
ಭಾರತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ನಿರಂತರವಾಗಿ ಶ್ರಮಿಸುತ್ತಿದ್ದು ಎನ್‌ಐಆರ್‌ಎಫ್, ಎನ್‌ಎಎಸಿ ಹಾಗೂ ಇತರೆ ರಾರಯಂಕಿಂಗ್ ಏಜೆನ್ಸಿಗಳು ಉನ್ನತ ಶಿಕ್ಷಣ ಸಂಸ್ಥೆಗಳು ಒದಗಿಸುತ್ತಿರುವ ಶಿಕ್ಷಣದ ಗುಣಮಟ್ಟದ ಮೇಲೆ ಪ್ರಭಾವ ಬೀರಿದೆ. ಪ್ರಕಟಣೆಗಳಲ್ಲಿ ಭಾರತ ವಿಶ್ವದಲ್ಲಿ 3ನೇ ಸ್ಥಾನದಲ್ಲಿದೆ. ಮೈಸೂರು ವಿಶ್ವವಿದ್ಯಾನಿಲಯದ ಸಾಧನೆ ಅತ್ಯುತ್ತಮವಾಗಿರದಿದ್ದರೂ ಈ ಸವಾಲಿನ ಸನ್ನಿವೇಶದಲ್ಲಿ ಗಮನಾರ್ಹವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಳೆದ ವರ್ಷ ಮೈಸೂರು ವಿವಿ ನ್ಯಾಕ್ ವತಿಯಿಂದ ಎ’ ಶ್ರೇಣಿ ಲಭಿಸಿದ್ದು, ವಿಶ್ವವಿದ್ಯಾನಿಲಯಗಳ ಪೈಕಿ 33ನೇ ಶ್ರೇಯಾಂಕ ಪಡೆದುಕೊಂಡಿದೆ. ಈ ಮೂಲಕ ನಮ್ಮ ವಿವಿಯು ಕರ್ನಾಟಕದಲ್ಲಿ ಮೊದಲನೇ ಸ್ಥಾನದಲ್ಲಿದೆ. ನಮ್ಮ ವಿಶ್ವವಿದ್ಯಾನಿಲಯ ಇನ್ನೂ ಉತ್ತಮ ಸಾಧನೆ ಮಾಡಬಹುದಾಗಿತ್ತು. ಆದರೆ ಬೋಧಕರ ಕೊರತೆ ಹಾಗೂ ಸಂಶೋಧನಾ ಪರಿಣಾಮದ ಕೊರತೆಯಿಂದಾಗಿ ಸಾಧ್ಯವಾಗಿಲ್ಲ ಎಂದು ಅವರು ವಿವರಿಸಿದರು.
ಕೃತಿ ಚೌರ್ಯದ ಪರಿಣಾಮ ವ್ಯಕ್ತಿಗತ, ವೃತ್ತಿಪರ, ತಾತ್ವಿಕ ಹಾಗೂ ಕಾನೂನು ಈ ಪೈಕಿ ಯಾವುದಾದರೂ ಅಂಶಗಳ ಮೇಲೆ ಉಂಟಾಗಬಹುದು. ಕೃತಿಚೌರ್ಯ ಎಂದರೆ ತಿದ್ದಲಾಗದ ಸಮಸ್ಯೆ, ಅದರಲ್ಲಿಯೂ ವಿಶೇಷವಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಕೃತಿ ಚೌರ್ಯ ಎಂದರೆ ಮತ್ಯಾರದ್ದೋ ಕೆಲಸವನ್ನು ಅವರಿಗೆ ಮಾನ್ಯತೆ ನೀಡದೆ ಅದನ್ನು ಬಳಸಿಕೊಳ್ಳುವುದು ಎನ್ನಬಹುದು. ಶೈಕ್ಷಣಿಕ ಬರವಣಿಗೆ ಕ್ಷೇತ್ರದಲ್ಲಿ ಕೃತಿಚೌರ್ಯದಲ್ಲಿ, ಯಾವುದಾದರೂ ಒಂದು ಮೂಲದಿಂದ ಪದಗಳು, ಕಲ್ಪನೆಗಳು ಹಾಗೂ ಮಾಹಿತಿ ತೆಗೆದುಕೊಂಡು ಅದನ್ನು ಸರಿಯಾದ ಅರ್ಥ ಬಾರದಿರುವಂತೆ ಬಳಸಿಕೊಳ್ಳುವುದು ಎಂದು ಅವರು ವಿವರಿಸಿದರು.
ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ಬೋಧನೆಗೆ ಜೊತೆಗೆ ಸಂಶೋಧನೆಗೂ ಒತ್ತು ನೀಡಿ ಎಂದರು. ಅಲ್ಲದೇ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಬೇಕು. ಆಗ ಮಾತ್ರ ಕೃತಿಚೌರ್ಯ ಆಗಿದೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗುತ್ತದೆ ಎಂದರು.