ಸರ್ಕಾರಿ ಶಾಲಾ ಮಕ್ಕಳ ಮೊಟ್ಟೆಗೆ ಕನ್ನ ಹಾಕಿದ ಕಾಂಗ್ರೆಸ್‌ : ವಾರಕ್ಕೊಂದೇ ಮೊಟ್ಟೆ

ರಾಜ್ಯದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1-8ನೇ ತರಗತಿ ವಿದ್ಯಾರ್ಥಿಗಳಿಗೆ ವಾರಕ್ಕೆ ಒಂದು ಮೊಟ್ಟೆಯನ್ನು ಮಾತ್ರ ನೀಡಲು ಕಾಂಗ್ರೆಸ್‌ ಸರ್ಕಾರ ತೀರ್ಮಾನಿಸಿ ಆದೇಶವನ್ನು ಹೊರಡಿಸಿದೆ.

Karnataka education department has ordered one egg per week for government schools children sat

ಬೆಂಗಳೂರು (ಜೂ.21): ರಾಜ್ಯದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ 1-8ನೇ ತರಗತಿ ವಿದ್ಯಾರ್ಥಿಗಳಿಗೆ ವಾರಕ್ಕೆ ಒಂದು ಮೊಟ್ಟೆಯನ್ನು ಮಾತ್ರ ನೀಡಲು ಕಾಂಗ್ರೆಸ್‌ ಸರ್ಕಾರ ತೀರ್ಮಾನಿಸಿ ಆದೇಶವನ್ನು ಹೊರಡಿಸಿದೆ. ಈ ಹಿಂದೆ ವಾರಕ್ಕೆ ಎರಡು ಮೊಟ್ಟೆಗಳನ್ನು ನೀಡುತ್ತಿದ್ದು, ಈ ವರ್ಷದಿಂದ ಒಂದು ಮೊಟ್ಟೆಯನ್ನು ಕಾಂಗ್ರೆಸ್‌ ಸರ್ಕಾರ ಕಡಿತಗೊಳಿಸಿದೆ. 

ಹೌದು, ಈ ಬಾರಿ ಶಾಲಾ ಮಕ್ಕಳಿಗೆ ವಾರಕ್ಕೊಂದೇ  ಮೊಟ್ಟೆಯನ್ನು ನೀಡಲು ಸರ್ಕಾರ ತೀರ್ಮಾನಿಸಿ ಆದೇಶ ಹೊರಡಿಸಿದೆ. ಕಳೆದ ವರ್ಷ ಪ್ರಧಾನಮಂತ್ರಿ ಪೋಷಣ್‌ ಅಭಿಯಾನ, ರಾಜ್ಯ ಸರ್ಕಾರದ ಪೌಷ್ಠಿಕ ಆಹಾರ ವಿತರಣೆಗೆ ವಾರಕ್ಕೆ 2 ಬಾರಿ ನೀಡಲಾಗುತ್ತಿತ್ತು. ಅಂದರೆ ಬಿಸಿಯೂಟದೊಂದಿಗೆ ಪ್ರತಿ ಮಂಗಳವಾರ, ಶುಕ್ರವಾರ ಮೊಟ್ಟೆ ನೀಡಲಾಗುತ್ತಿತ್ತು. ಆದರೆ, ಈ ವರ್ಷ ವಾರಕ್ಕೊಮ್ಮೆ ಮಾತ್ರ ಮೊಟ್ಟೆ ನೀಡಲು ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. 

ದೇವಸ್ಥಾನಗಳಲ್ಲಿ ಹಿರಿಯ ನಾಗರಿಕರಿಗೆ ಡೈರೆಕ್ಟ್‌ ಎಂಟ್ರಿ: ಮುಜರಾಯಿ ಇಲಾಖೆ ನಿರ್ಧಾರ

ಅಪೌಷ್ಠಿಕತೆ ನಿವಾರಣೆಗೆ ಯಶಸ್ವಿಯಾಗಿದ್ದ ಯೋಜನೆ:  ರಾಜ್ಯದಲ್ಲಿ ಅಪೌಷ್ಟಿಕತೆ, ರಕ್ತಹೀನತೆಯ (ಅನೀಮಿಯಾ) ನಿವಾರಣೆಗಾಗಿ ಮೊಟ್ಟೆ ನೀಡಲಾಗುತ್ತಿತ್ತು. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ಹಂಚಿಕೆ ಮಾಡಲಾಗುತ್ತಿತ್ತು. ಕಲ್ಯಾಣ ಕರ್ನಾಟಕ ವಿಭಾಗದ 08 ಜಿಲ್ಲೆಗಳಾದ ಯಾದಗಿರಿ, ಕಲಬುರಗಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಬೀದರ್‌ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮೊಟ್ಟೆ ವಿತರಣೆ ಯೋಜನೆ ಯಶಸ್ವಿಯಾಗಿತ್ತು. ಮಕ್ಕಳ ಅಪೌಷ್ಠಿಕತೆ ನಿವಾರಣೆಯಲ್ಲೂ ಅನುಕೂಲವಾಗಿತ್ತು. ಆದರೆ, ಈಗ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಾರಕ್ಕೊಂದೇ ಮೊಟ್ಟೆಯನ್ನು ನೀಡಲು ಶಿಕ್ಷಣ ಇಲಾಖೆ ಆದೇಶಿಸಿದೆ. ಜೊತೆಗೆ, ಪ್ರತಿ ಮೊಟ್ಟೆ 6 ರೂ.ನಂತೆ ದರ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.

ಜುಲೈ 15ರವರೆಗೆ ಮಾತ್ರ ಅನ್ವಯ: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಕಳೆದ ಸಾಲಿನಲ್ಲಿ ಬಿಸಿಯೂಟದ ಜೊತೆ ವಾರದಲ್ಲಿ ಎರಡು ದಿನ ನೀಡುತ್ತಿದ್ದ ಬೇಯಿಸಿದ ಮೊಟ್ಟೆ ಅಥವಾ ಬಾಳೆಹಣ್ಣು/ಶೇಂಗಾ ಚಿಕ್ಕಿಯನ್ನು ಸದ್ಯ ಒಂದು ದಿನಕ್ಕೆ ಕಡಿತಗೊಳಿಸಲಾಗಿದೆ. ಮುಂದಿನ ತಿಂಗಳು ಜುಲೈ 15ರವರೆಗೆ ಮಾತ್ರ ಅನ್ವಯಿಸಿ ಈ ಆದೇಶ ಮಾಡಲಾಗಿದೆ. ಬಿಸಿಯೂಟ ಯೋಜನೆ ಅಧಿಕಾರಿಗಳು ಹೇಳುವ ಪ್ರಕಾರ, ಮುಂದಿನ ತಿಂಗಳು ಹೊಸ ಬಜೆಟ್‌ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಜು.15ರವರೆಗೆ ಮಾತ್ರ ಅನ್ವಯಿಸುವಂತೆ ಸರ್ಕಾರದ ನಿರ್ದೇಶನ ಮೇರೆಗೆ ಈ ಆದೇಶ ಮಾಡಲಾಗಿದೆ. ಬಜೆಟ್‌ನಲ್ಲಿ ಸರ್ಕಾರ ಮೊಟ್ಟೆ ನೀಡುವ ಯೋಜನೆ ಮುಂದುವರೆಸುವ ಘೋಷಣೆ ಮಾಡಿದರೆ ಹೊಸ ಆದೇಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಇಲಾಖೆಗೆ ಸರ್ಜರಿ: ಸಂದೀಪ್‌ ಪಾಟೀಲ್‌ ಸೇರಿ 13 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೇಹಣ್ಣು: ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಸಂಬಂಧ ಬಿಸಿಯೂಟ ಯೋಜನೆ ನಿರ್ದೇಶಕರು ಮಂಗಳವಾರ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ಜೂ.20ರಿಂದ ಜುಲೈ15ರವರೆಗೆ ಅಥವಾ ಮುಂದಿನ ಆದೇಶ ಬರುವವರೆಗೆ ಪೂರಕ ಪೌಷ್ಠಿಕ ಆಹಾರವಾಗಿ ವಾರದಲ್ಲಿ ಒಂದು ದಿನ ಬೇಯಿಸಿದ ಮೊಟ್ಟೆ ನೀಡಬೇಕು. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೇಹಣ್ಣು ಇಲ್ಲವೇ ಶೇಂಗಾ ಚಿಕ್ಕಿ ವಿತರಿಸಲು ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆಯ ಎಲ್ಲ ಡಿಡಿಪಿಐಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

Latest Videos
Follow Us:
Download App:
  • android
  • ios