ಕರ್ನಾಟಕದ ಖಾಸಗಿ ಶಾಲೆಗಳಿಗೆ RTE ಶುಲ್ಕ ಮರುಪಾವತಿ ವಿಳಂಬ, ಎಲ್ಲೆಲ್ಲಿ ಎಷ್ಟು ಹಣ ಬಾಕಿ?
* ಕರ್ನಾಟಕದ ಖಾಸಗಿ ಶಾಲೆಗಳಿಗೆ RTE ಶುಲ್ಕ ಮರುಪಾವತಿ ವಿಳಂಬ
* ಈಗಾಗಲೇ ಸರ್ಕಾರ 597 ಕೋಟಿ ಹಣವನ್ನು ಬಿಡುಗಡೆ
* ತಾಂತ್ರಿಕ ಕಾರಣ ನೀಡಿ ಆರ್.ಟಿ.ಇ ಶುಲ್ಕ ತಡೆ
ವರದಿ- ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು, (ಮಾ.21): ದೇವರು ವರ ಕೊಟ್ರು ,ಪೂಜಾರಿ ವರ ಕೊಡಲ್ಲ ಅನ್ನೋ ಗಾದು ಮಾತು ಅಕ್ಷರಶಃ ಬಜೆಟ್ ಶಾಲೆಗಳಿಗೆ(Schools) ಅನ್ವಯಿಸುತ್ತೆ.
ಹೌದು... ಶೈಕ್ಷಣಿಕ ವರ್ಷ ಮುಗೀತಾ ಬಂದ್ರು ಬಾಕಿ ಆರ್.ಟಿ.ಇ ಶುಲ್ಕ (RTE Fee) ಮರು ಪಾವತಿ ಆಗಿಲ್ಲ. ಇದರಿಂದ ಕರ್ನಾಟಕದ ಸಾವಿರಾರು ಬಜೆಟ್ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ನೀರಿಕ್ಷಿತ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ (Karnataka Education Department) ಸಲ್ಲಿಸಲಾಗಿದ್ರು, ಅದ್ರು ಶಿಕ್ಷಣ ಇಲಾಖೆ ಅಧಿಕಾರಿಗಳು ಆರ್.ಟಿ.ಇ ಹಣ ಬಿಡುಗಡೆ ಮಾಡದೇ ಸತಾಯಿಸುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
RTE Karnataka Admission 2022-23: RTE ಕಾಯ್ದೆಯಡಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭ
ಇತ್ತ, ಆರ್.ಟಿ.ಇ ಕೋಟದ ಅಡಿಯಲ್ಲಿ ದಾಖಲಾಗಿರುವ ಮಕ್ಕಳ ಶುಲ್ಕ (RTE Students Fee) ಪಾವತಿ ಮಾಡಿಲ್ಲ.ಮರು ಶುಲ್ಕ ಪಾವತಿ ಮಾಡುವಂತೆ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಸರ್ಕಾರಕ್ಕೆ ಮನವಿ ಮಾಡಿದೆ.
ಪ್ರತಿ ವರ್ಷ ಜನವರಿಯಲ್ಲಿ ಮೊದಲ ಕಂತು ಹಣ ಪಡೆದು, ವರ್ಷದ ಕೊನೆಯಲ್ಲಿ ಎರಡನೇ ಕಂತಿನ ಹಣವನ್ನ ಸರ್ಕಾರ ಬಿಡುಗಡೆ ಮಾಡಲಾಗುತ್ತಿತ್ತು.ಆದ್ರೆ ಈ ಭಾರಿ ಒಂದೇ ಒಂದು ರೂಪಾಯಿ ಕೂಡ ಆರ್.ಟಿ.ಇ ಹಣ ಬಿಡುಗಡೆ ಮಾಡಿಲ್ಲ. ಈಗಾಗಲೇ ಮರು ಶುಲ್ಕ ಪಾವತಿ ಮಾಡುವಂತೆ ಸಾವಿರಾರು ಶಾಲೆಗಳು ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿ ಕಾದು ಕುಳಿತಿವೆ.
ಈಗಾಗಲೇ ಸರ್ಕಾರ 597 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಆದ್ರೆ ಇಲಾಖಾ ಅಧಿಕಾರಿಗಳು ತಾಂತ್ರಿಕ ಕಾರಣ ನೀಡಿ ಆರ್.ಟಿ.ಇ ಶುಲ್ಕ ತಡೆ ಹಿಡಿಯಲಾಗಿದೆ.
ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಹಣ ಬಾಕಿ?
ರಾಜ್ಯದ ಒಟ್ಟು 11374 ಶಾಲೆಗಳಿಗೆ ಆರ್ ಟಿ ಇ ಹಣ ಮರು ಪಾವತಿ ಮಾಡಬೇಕಿದೆ. ಬೆಂಗಳೂರು ವಿಭಾಗದಲ್ಲಿ 4603 ಶಾಲೆಗಳ ಪೈಕಿ ಮರುಪಾವತಿಗೆ 1537 ಶಾಲೆಗಳು ಅರ್ಜಿ ಸಲ್ಲಿಸಿವೆ.
ಕಲುಬರಗಿ 2618 ಶಾಲೆಗಳು ಹಾಗೂ ಮೈಸೂರು 1616 ಶಾಲೆಗಳು, ಹಾವೇರಿ 251 ಶಾಲೆಗಳಿಂದ ಆರ್.ಟಿ.ಇ ಮರು ಪಾವತಿಗೆ ಅರ್ಜಿಗಳು ಸಲ್ಲಿಕೆ ಯಾಗಿವೆ.
ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸರ್ಕಾರಕ್ಕೆ ಮನವಿ
ಕೊರೋನಾ ನಂತರ ಬಜೆಟ್ ಶಾಲೆಗಳು ಸಂಪೂರ್ಣವಾಗಿ ನೆಲ ಕಚ್ಚಿವೆ. ಆರ್.ಟಿ.ಇ ಹಣವನ್ನೇ ನಂಬಿ ಶಾಲೆಗಳನ್ನ ನಡೆಸಲಾಗುತ್ತಿದೆ.
ಕಳೆದ ಎರಡು ವರ್ಷದಿಂದ ಶಿಕ್ಷಕರಿಗೆ ಸಂಬಳ ನೀಡಲು ಸಾಧ್ಯವಾಗಿಲ್ಲ. ತಾಂತ್ರಿಕ ಕಾರಣಗಳನ್ನ ಆರ್.ಟಿ.ಇ ಮರು ಪಾವತಿ ಮಾಡದೇ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಲಕ್ಷಾಂತರ ಮಕ್ಕಳು ಆರ್.ಟಿ.ಇ ಅಡಿಯಲ್ಲಿ ಓದುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ಸರ್ಕಾರ ತೊಂದರೆ ಮಾಡಬಾರದು ಕೂಡಲೇ ಬಜೆಟ್ ಶಾಲೆಗಳಿಗೆ ಹಣ ಪಾವತಿಸಿ ಅಂತ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
RTE ಕಾಯ್ದೆಯಡಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ
ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (RTE) ಕಾಯ್ದೆಯಡಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ. ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಶೇ. 25ರಷ್ಟು ಸೀಟುಗಳನ್ನು ಆರ್ಥಿಕ ದುರ್ಬಲ ವರ್ಗದವರಿಗೆ ಉಚಿತವಾಗಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಆರ್‌ಟಿಇ ಕಾಯ್ದೆ 2009ರಲ್ಲಿ ಜಾರಿಯಾಗಿದ್ದು, ಅಂದಿನಿಂದಲೂ ರಾಜ್ಯದಲ್ಲಿ ಈ ಕಾಯ್ದೆ ಜಾರಿಯಲ್ಲಿದೆ. 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ವಿವಿಧ ಹಂತಗಳನ್ನು ಹೊಂದಿದೆ. ಒಟ್ಟಾರೆ ಏಪ್ರಿಲ್ 30ಕ್ಕೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 3.5 ವರ್ಷದಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಈ ಕಾಯ್ದೆಯ ಉದ್ದೇಶವಾಗಿದೆ
RTE ಸೀಟು ಪಡೆಯಲು ಬೇಕಾದ ಮಾನದಂಡಗಳು:
ವಿದ್ಯಾರ್ಥಿ ಕರ್ನಾಟಕದ ಮೂಲ ನಿವಾಸಿಯಾಗಿರಬೇಕು.
ಎಲ್‌ಕೆಜಿಗೆ ಅರ್ಜಿ ಸಲ್ಲಿಸಬೇಕಾದರೆ ಮಗುವಿನ ವಯಸ್ಸು 3 ವರ್ಷ 5 ತಿಂಗಳಿನಿಂದ 5 ವರ್ಷದ ಒಳಗಿರಬೇಕು. (ಅಂದರೆ 2017ರ ಆಗಸ್ಟ್ 1ರಿಂದ 2018ರ ಆಗಸ್ಟ್ 1ರೊಳಗೆ ಜನಿಸಿದ ಮಗು)
ಒಂದನೇ ತರಗತಿಗೆ ಅರ್ಜಿ ಸಲ್ಲಿಸುವ ಮಗುವಿಗೆ 5 ವರ್ಷ 5 ತಿಂಗಳಿನಿಂದ 7 ವರ್ಷದ ಒಳಗೆ ಇರಬೇಕು. (ಅಂದರೆ 2015ರ ಆಗಸ್ಟ್ 1ರಿಂದ 2016ರ ಆಗಸ್ಟ್ 1ರೊಳಗೆ ಜನಿಸಿರಬೇಕು)
ಕುಟುಂಬದ ಆದಾಯ ವಾರ್ಷಿಕ 3.5 ಲಕ್ಷಕ್ಕಿಂತ ಹೆಚ್ಚಿರಬಾರದು
ಮಗು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು.
ಮುಖ್ಯವಾಗಿ ಅನಾಥ ಮಗು, ವಿಶೇಷ ಅಗತ್ಯಯುಳ್ಳ ಮಗು (CWSN), ಎಚ್‌ಐವಿ ಸೋಂಕಿತ ಮಗು/ಭಾದಿತ ಮಗು, ವಲಸೆ ಮತ್ತು ಬೀದಿ ಮಗು, ಬರಗಾಲ ಕಾರಣ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಮಗು, ಮಂಗಳಮುಖಿ ಇಂತಹ ಮಕ್ಕಳಿಗೆ ವಿಶೇಷ ಆದ್ಯತೆ ಇರಲಿದೆ. ಇದಕ್ಕೆ ಸೂಕ್ತ ಪ್ರಮಾಣಪತ್ರಗಳನ್ನು ಪಡೆದಿರಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ದಾಖಲೆಯ ನೈಜತೆ ಪರಿಶೀಲಿಸಿ ಅರ್ಜಿ ಸಲ್ಲಿಕೆಗೆ ನೆರವಾಗುತ್ತಾರೆ.