RTE Karnataka Admission 2022-23: RTE ಕಾಯ್ದೆಯಡಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭ
ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ. ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಶೇ. 25ರಷ್ಟು ಸೀಟುಗಳನ್ನು ಆರ್ಥಿಕ ದುರ್ಬಲ ವರ್ಗದವರಿಗೆ ಉಚಿತವಾಗಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಬೆಂಗಳೂರು(ಜ.12): ಸಾರ್ವಜನಿಕ ಶಿಕ್ಷಣ ಇಲಾಖೆ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (RTE) ಕಾಯ್ದೆಯಡಿ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ. ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಶೇ. 25ರಷ್ಟು ಸೀಟುಗಳನ್ನು ಆರ್ಥಿಕ ದುರ್ಬಲ ವರ್ಗದವರಿಗೆ ಉಚಿತವಾಗಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಆರ್‌ಟಿಇ ಕಾಯ್ದೆ 2009ರಲ್ಲಿ ಜಾರಿಯಾಗಿದ್ದು, ಅಂದಿನಿಂದಲೂ ರಾಜ್ಯದಲ್ಲಿ ಈ ಕಾಯ್ದೆ ಜಾರಿಯಲ್ಲಿದೆ. 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ವಿವಿಧ ಹಂತಗಳನ್ನು ಹೊಂದಿದೆ. ಒಟ್ಟಾರೆ ಏಪ್ರಿಲ್ 30ಕ್ಕೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ 3.5 ವರ್ಷದಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ಈ ಕಾಯ್ದೆಯ ಉದ್ದೇಶವಾಗಿದೆ
RTE ಸೀಟು ಪಡೆಯಲು ಬೇಕಾದ ಮಾನದಂಡಗಳು:
ವಿದ್ಯಾರ್ಥಿ ಕರ್ನಾಟಕದ ಮೂಲ ನಿವಾಸಿಯಾಗಿರಬೇಕು.
ಎಲ್‌ಕೆಜಿಗೆ ಅರ್ಜಿ ಸಲ್ಲಿಸಬೇಕಾದರೆ ಮಗುವಿನ ವಯಸ್ಸು 3 ವರ್ಷ 5 ತಿಂಗಳಿನಿಂದ 5 ವರ್ಷದ ಒಳಗಿರಬೇಕು. (ಅಂದರೆ 2017ರ ಆಗಸ್ಟ್ 1ರಿಂದ 2018ರ ಆಗಸ್ಟ್ 1ರೊಳಗೆ ಜನಿಸಿದ ಮಗು)
ಒಂದನೇ ತರಗತಿಗೆ ಅರ್ಜಿ ಸಲ್ಲಿಸುವ ಮಗುವಿಗೆ 5 ವರ್ಷ 5 ತಿಂಗಳಿನಿಂದ 7 ವರ್ಷದ ಒಳಗೆ ಇರಬೇಕು. (ಅಂದರೆ 2015ರ ಆಗಸ್ಟ್ 1ರಿಂದ 2016ರ ಆಗಸ್ಟ್ 1ರೊಳಗೆ ಜನಿಸಿರಬೇಕು)
ಕುಟುಂಬದ ಆದಾಯ ವಾರ್ಷಿಕ 3.5 ಲಕ್ಷಕ್ಕಿಂತ ಹೆಚ್ಚಿರಬಾರದು
ಮಗು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು.
ಮುಖ್ಯವಾಗಿ ಅನಾಥ ಮಗು, ವಿಶೇಷ ಅಗತ್ಯಯುಳ್ಳ ಮಗು (CWSN), ಎಚ್‌ಐವಿ ಸೋಂಕಿತ ಮಗು/ಭಾದಿತ ಮಗು, ವಲಸೆ ಮತ್ತು ಬೀದಿ ಮಗು, ಬರಗಾಲ ಕಾರಣ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಮಗು, ಮಂಗಳಮುಖಿ ಇಂತಹ ಮಕ್ಕಳಿಗೆ ವಿಶೇಷ ಆದ್ಯತೆ ಇರಲಿದೆ. ಇದಕ್ಕೆ ಸೂಕ್ತ ಪ್ರಮಾಣಪತ್ರಗಳನ್ನು ಪಡೆದಿರಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ದಾಖಲೆಯ ನೈಜತೆ ಪರಿಶೀಲಿಸಿ ಅರ್ಜಿ ಸಲ್ಲಿಕೆಗೆ ನೆರವಾಗುತ್ತಾರೆ.
ನೆರೆಹೊರೆ ಶಾಲೆಗಳು: ಆರ್‌ಟಿಇ ಅಡಿ ಅರ್ಜಿ ಸಲ್ಲಿಸುವ ಮಗು ವಾಸಿಸುವಂತಹ ನೆರೆಹೊರೆಯ ಶಾಲೆಗಳಲ್ಲಿ ಪ್ರವೇಶ ನೀಡಲಾಗುತ್ತದೆ.
ನೆರೆಹೊರೆ ಎಂದರೆ ಗ್ರಾಮೀಣ ಪ್ರದೇಶದಲ್ಲಿ ಕಂದಾಯ ಗ್ರಾಮದ ಭೌಗೋಳಿಕ ಗಡಿ
ಶಾಲೆ ಇರುವ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಯ ಭೌಗೋಳಿಕ ಗಡಿ
ಮಹಾನಗರ ಪಾಲಿಕೆಗಳು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರತಿ ವಾರ್ಡ್‌ನ ಭೌಗೋಳಿಕ ಗಡಿ.
SCHOOL HOLIDAY ಶಾಲೆ ಬಂದ್ ಬಗ್ಗೆ ಸಭೆ, ಜಿಲ್ಲಾಧಿಕಾರಿಗಳಿಗೆ ಮಹತ್ವದ ಸೂಚನೆ ಕೊಟ್ಟ ಶಿಕ್ಷಣ ಸಚಿವ
ಪ್ರಮುಖ ದಿನಾಂಕಗಳು:
ಜ.18,2022 ನೆರೆಹೊರೆಯಲ್ಲಿರುವ ಸರ್ಕಾರಿ, ಅನುದಾನಿತ ಮತ್ತ ಖಾಸಗಿ ಶಾಲೆಗಳ ತಾತ್ಕಾಲಿಕ ಪಟ್ಟಿ ಪ್ರಕಟ
ಜ.24,2022 ನೆರೆಹೊರೆಯ ಶಾಲೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ
ಜ.24,2022(ಸಂಜೆ) ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ ಪ್ರಕಟಿಸುವುದು.
ಖಾಸಗಿ ಶಾಲೆಗಳಲ್ಲಿ ಶೇ 25ರಷ್ಟು ಲಭ್ಯವಿರುವ ಸೀಟುಗಳು ಹಾಗೂ ಅನುದಾನಿತ ಶಾಲೆಗಳಲ್ಲಿ ಕನಿಷ್ಠ ಲಭ್ಯವಿರುವ ಶಾಲಾವಾರು ಸೀಟುಗಳ ಸಂಖ್ಯೆಯನ್ನು ಜಿಲ್ಲೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಕಚೇರಿಯ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸುವುದು
ಫೆ.1ಮತ್ತು 2: ಅರ್ಜಿ ಸಲ್ಲಿಸಲು ಪ್ರಯೋಗಾರ್ಥ ಅವಧಿ (ಟ್ರಯಲ್)
ಫೆ.3ರಿಂದ ಮಾರ್ಚ್ 3: ಆರ್‌ಟಿಇ ಅಡಿ ಉಚಿತ ಸೀಟಿಗಾಗಿ ಅರ್ಜಿ ಸಲ್ಲಿಕೆಗೆ ಅವಧಿ
ಫೆ.4ರಿಂದ ಮಾರ್ಚ್ 7: ಸಲ್ಲಿಕೆಯಾಗಿರುವ ಅರ್ಜಿಗಳ ಮೂಲ ದಾಖಲೆಗಳ ನೈಜತೆ ಪರಿಶೀಲನೆ
ಮಾ.14: ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ
ಮಾ.23: ಆನ್‌ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ
ಮಾ.24ರಿಂದ ಏ.4: ಶಾಲೆಗಳಲ್ಲಿ ದಾಖಲಾತಿ ಪ್ರಾರಂಭ
ಏ.19: ಆನ್‌ಲೈನ್ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ
ಏ.20ರಿಂದ ಏ.30: ಎರಡನೇ ಸುತ್ತಿನಲ್ಲಿ ಸೀಟು ಪಡೆದವರು ಶಾಲೆಗಳಲ್ಲಿ ದಾಖಲಾಗುವ ಅವಧಿ.
Multiple Universities Admission Tips: ವಿಶ್ವವಿದ್ಯಾಲಯ ಪ್ರವೇಶ ಹೇಗೆ? ಗೊಂದಲಗಳಿವೆಯೇ? ಇಲ್ಲಿವೆ ಟಿಪ್ಸ್
ಮ್ಯಾಪ್ ಮಾಡಲು ಸೂಚನೆ:
ನೆರೆಹೊರೆಯಲ್ಲಿರುವ ಯಾವುದೇ ಶಾಲೆಯನ್ನು ಕೈಬಿಡದಂತೆ ಎಲ್ಲ ಸರ್ಕಾರಿ, ಬಿಬಿಎಂಪಿ ಶಾಲೆಗಳು ಮತ್ತು ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳನ್ನು ಮ್ಯಾಪಿಂಗ್ ಮಾಡಲು ಸೂಚಿಸಲಾಗಿದೆ. ಕೇವಲ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳನ್ನು ಪಟ್ಟಿಯಲ್ಲಿ ಸೇರಿಸುವಂತಿಲ್ಲ. ಅಲ್ಲದೆ, ಅಲ್ಪಸಂಖ್ಯಾತ ಘೋಷಣಾ ಪ್ರಮಾಣ ಪತ್ರ ಪಡೆದಿರುವ ಹಾಗೂ ಈಗಾಗಲೇ ಮುಚ್ಚಿರುವ, ನ್ಯಾಯಾಲಯದಲ್ಲಿ ತಡೆಯಾಜ್ಞೆ ಪಡೆದಿರುವ ಶಾಲೆಗಳನ್ನು ಪಟ್ಟಿಯಿಂದ ಕೈಬಿಡಬೇಕು ಎಂದು ಆದೇಶಿಸಲಾಗಿದೆ.
RTE ಅರ್ಜಿ ಸಲ್ಲಿಕೆ ಹೇಗೆ?
ಆರ್‌ಟಿಇ ಕಾಯ್ದೆಯಡಿ ಖಾಸಗಿ ಶಾಲೆಯಲ್ಲಿ ಉಚಿತ ಸೀಟಿಗಾಗಿ ಅರ್ಜಿ ಸಲ್ಲಿಸುವ ಮಗು, ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್, ಜಾತಿ ಹಾಗೂ ಆದಾಯ ದೃಢೀಕರಣ ಪತ್ರ ಕಡ್ಡಾಯವಾಗಿ ಬೇಕು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಅಥವಾ ಸರ್ಕಾರದ ಪಾವತಿ ಕೇಂದ್ರಗಳಾದ ಬೆಂಗಳೂರು ಒನ್, ಕರ್ನಾಟಕ ಒನ್, ತಾಲೂಕು ಮತ್ತು ಹೋಬಳಿ ಮಟ್ಟದ ಅಟಲ್‌ಜಿ ಜನಸ್ನೇಹಿ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು.
ಪೋಷಕರ ಬಳಿ ಸ್ಮಾರ್ಟ್‌ಫೋನ್ ಇದ್ದಲ್ಲಿ ತಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಈ ಸಂದರ್ಭದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆಯನ್ನು ಮಾತ್ರ ನಿಗದಿತ ಕಾಲಂನಲ್ಲಿ ನಮೂದಿಸಬೇಕು. ದಾಖಲೆಗಳನ್ನು ಅಪ್‌ಲೋಡ್ ಮಾಡುವ ಅಗತ್ಯವಿಲ್ಲ. ಸೀಟು ಲಭ್ಯವಾಗಿ ಮೂಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಈ ಪ್ರಮಾಣ ಪತ್ರಗಳನ್ನು ಒದಗಿಸಬಹುದಾಗಿದೆ.
ಪೋಷಕರಿಗೆ ಫೋನ್ ಸಂದೇಶ: ಅರ್ಜಿ ಸಲ್ಲಿಕೆ ಕ್ರಮಬದ್ಧವಾಗಿದ್ದಲ್ಲಿ ಅರ್ಜಿಯ ಸಂಖ್ಯೆಯ ಸಮೇತ ಪೋಷಕರ ಮೊಬೈಲ್‌ಗೆ ಎಸ್‌ಎಂಎಸ್ ಬರುತ್ತದೆ. ಒಂದು ವೇಳೆ ದಾಖಲೆಗಳು ಅಪೂರ್ಣವಾಗಿದ್ದಲ್ಲಿಯೂ ಸಹ ದೋಷಗಳನ್ನು ಸರಿಪಡಿಸಲು ಎಸ್‌ಎಂಎಸ್ ಕಳುಹಿಸಲಾಗುತ್ತದೆ. ಸಕಾಲಕ್ಕೆ ಅದಕ್ಕೆ ಪ್ರತಿಕ್ರಿಯಿಸಬೇಕು.