ಉಕ್ರೇನ್ ರಣಭೂಮಿಯಿಂದ ಮಾತೃಭೂಮಿಗೆ ಬಂದಿಳಿಯಲಿರುವ ಕರ್ನಾಟಕದ 5 ವಿದ್ಯಾರ್ಥಿಗಳು
* ಉಕ್ರೇನ್ ನಿಂದ ಭಾನುವಾರ ರಾಜ್ಯದ ಐದು ವಿದ್ಯಾರ್ಥಿಗಳು ಭಾರತಕ್ಕೆ
* ದೆಹಲಿ ಬಂದಿಳಿಯಲಿರುವ 5 ವಿದ್ಯಾರ್ಥಿಗಳು.
*ದೆಹಲಿಯಲ್ಲಿರುವ ಕರ್ನಾಟಕ ಭವನದ ಅಧಿಕಾರಿಗಳ ಮಾಹಿತಿ
ಬೆಂಗಳೂರು, (ಫೆ.26): ಸುತ್ತಲೂ ರಷ್ಯಾ ಮಿಸೈಲ್‌ಗಳ ಘರ್ಜನೆ, ಆಕಾಶದಲ್ಲಿ ಯುದ್ಧ ವಿಮಾನಗಳ ಹಾರಾಟ, ಸಿಡಿಮದ್ದುಗಳ ಸದ್ದಿಗೆ ಉಕ್ರೇನ್ ಜನ ಜೀವಕೈಯಲ್ಲಿ ಹಿಡಿದುಕೊಂಡು ಕುಳಿತ್ತಿದ್ದಾರೆ.
ಯುದ್ಧಪೀಡಿತ ಉಕ್ರೇನ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಭಾರತಕ್ಕೆ ಮರಳಲು ಪರದಾಡುತ್ತಿದ್ದಾರೆ. ಅಲ್ಲಿ ಪರಿಸ್ಥಿತಿ ಬಿಗಡಾಯಿಸಿರುವುದರಿಂದ ವಿದ್ಯಾರ್ಥಿಗಳ ಪೋಷಕರು ಇಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ.
ಈ ಮಧ್ಯೆ ಈಗಾಗಲೇ ಯುದ್ದ ಭಾದಿತ ಉಕ್ರೇನ್ ನಿಂದ ಮೊದಲ ಬಾರಿಗೆ 219 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ. ಉಕ್ರೇನ್ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಗಳ ಕಾರ್ಯಾಚರಣೆ ಬಂದ್ ಆಗಿರುವುದರಿಂದ ನೆರೆಯ ರೊಮಾನಿಯಾದಿಂದ ಟೇಕ್ ಆಫ್ ಆದ ವಿಮಾನ, ಮುಂಬೈಗೆ ಬಂದಿಳಿದಿದೆ.
ಎರಡನೇ ವಿಮಾನದಲ್ಲಿ ರಾಜ್ಯದ 5 ವಿದ್ಯಾರ್ಥಿಗಳು
ಹೌದು..ಈಗಾಗಲೇ ಮೊದಲ ವಿಮಾನ ಯುದ್ಧ ಭೂಮಿಯಿಂದ 219 ಭಾರತೀಯರನ್ನು ಭಾರತಕ್ಕೆ ಕರೆತಂದಿದ್ದು, ಈಗ ಎರಡನೇ ವಿಮಾನ ನಾಳೆ(ಫೆ.27) ಬುಡಾಪೆಸ್ಟ್ ನಿಲ್ದಾಣದಿಂದ ದೆಹಲಿಗೆ ಆಗಮಿಸಲಿದೆ. ಈ ವಿಮಾನದಲ್ಲಿ ಕರ್ನಾಟಕ ಐದು ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ ಎಂದು ದೆಹಲಿಯ ಕರ್ನಾಟಕ ಭವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
AI 1940 ನಂಬರಿನ ವಿಮಾನ ಬುಡಾಪೆಸ್ಟ್ ನಿಲ್ದಾಣದಿಂದ ಇಂದು(ಫೆ.26) ರಾತ್ರಿ 8.45 ಹೊರಟ್ಟಿದ್ದು, ನಾಳೆ(ಫೆ.27) ಬೆಳಗ್ಗೆ 7.45 ಕ್ಕೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ.
ಈ ವಿಮಾನದಲ್ಲಿ ಬರುವ ರಾಜ್ಯದ ಐದು ವಿದ್ಯಾರ್ಥಿಗಳು ದೆಹಲಿಯಿಂದ ಕರ್ನಾಟಕಕ್ಕೆ ಬರಲು ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನ ಮಾಡಿದ್ದು, ಆ ವಿದ್ಯಾರ್ಥಿಗಳಿಗೆ ಸಹಾಯ, ಸಹಕಾರಕ್ಕೆ ಮೂವರು ಅಧಿಕಾರಿಗಳನ್ನ ನೇಮಿಸಿದೆ.
* ಅನಂತ- ಕರ್ನಾಟಕ ಭವನ ಕಮೀಷನರ್ 9205593129
* ವೆಂಕಟೇಶ್- ಕರ್ನಾಟಕ ಭವನ ಕಮೀಷನರ್ 9818464249
* ಜಗದೀಶ್- 9205593126
ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಭಾರತದ ಹಲವರು ಸಿಲುಕಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳು ಸೇರಿದಂತೆ ಹಲವರು ಸಿಲುಕಿದ್ದಾರೆ. ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿ ಲಿಸ್ಟ್ ಮಾಡಿ ಕಳಿಸಿದ್ದೇವೆ. ಭಾರತದ ವಿದೇಶಾಂಗ ಸಚಿವಾಲಯಕ್ಕೆ ಪಟ್ಟಿ ಕಳುಹಿಸಿದ್ದೇವೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಉಕ್ರೇನ್ನ ಪಶ್ಚಿಮ ಭಾಗದಿಂದ ರೊಮೇನಿಯಾಗೆ ಬರುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರೆಲ್ಲ ಭಾರತಕ್ಕೆ ಹಿಂದಿರುಗುತ್ತಾರೆ. ರಷ್ಯಾ ಅಧ್ಯಕ್ಷರ ಜತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಪ್ರಜೆಗಳನ್ನು ಕಾಪಾಡಲು ಭಾರತ ಸರ್ಕಾರ ಸತತ ಪ್ರಯತ್ನ ನಡೆಸುತ್ತಿದೆ. ಉಕ್ರೇನ್-ರೊಮೇನಿಯಾ ಗಡಿ ಪ್ರದೇಶಕ್ಕೆ ಭಾರತದ ವಿದ್ಯಾರ್ಥಿಗಳು ಬಸ್ಗಳಲ್ಲಿ ತೆರಳುತ್ತಿದ್ದಾರೆ. ರೊಮೇನಿಯಾ, ಹಂಗೇರಿ ಮತ್ತು ಪೊಲೆಂಡ್ ದೇಶಗಳಲ್ಲಿರುವ ಭಾರತ ದೂತಾವಾಸದ ನೆರವಿನಿಂದ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಉಕ್ರೇನ್ ರಾಜಧಾನಿ ಕೀವ್ನಲ್ಲಿರುವ ಭಾರತ ರಾಯಭಾರ ಕಚೇರಿ ತಿಳಿಸಿದೆ.
ಹಲವು ವಿದ್ಯಾರ್ಥಿಗಳು ಉಕ್ರೇನ್ನಿಂದ ಪೋಲೆಂಡ್ ಗಡಿಗೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. MEA ಪೋಲೆಂಡ್, ರೊಮೇನಿಯಾ ಗಡಿಗೆ ಬರುವಂತೆ ಸೂಚಿಸಿತ್ತು. ಭಾರತದ ವಿದೇಶಾಂಗ ಇಲಾಖೆ ಸೂಚನೆ ಮೇರೆಗೆ ಆಗಮನ ಆಗಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಏರ್ಲಿಫ್ಟ್ಗೆ ಸೂಚನೆ ಕೊಡಲಾಗಿದೆ. ಈಗಾಗಲೇ ರೊಮೇನಿಯಾದಿಂದ 219 ಭಾರತೀಯರ ಏರ್ಲಿಫ್ಟ್ ಮಾಡಲಾಗಿದೆ. ಬುಕಾರೆಸ್ಟ್ನಿಂದ ಏರ್ ಇಂಡಿಯಾ ವಿಮಾನದಲ್ಲಿ ಸ್ಥಳಾಂತರಿಸಲಾಗಿದೆ.
ಉಕ್ರೇನ್ ನಲ್ಲಿ ಕನ್ನಡಿಗರು ಸಿಲುಕಿರುವ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಸ್ವಇಚ್ಚೆಯಿಂದ ಯಾರು ಸಹ ಉಕ್ರೇನ್ ಗಡಿಗಳಿಗೆ ಹೋಗಬೇಡಿ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಲ್ಲಿಯ ಸರ್ಕಾರಗಳ ಜೊತೆ ಸಂಪರ್ಕದಲ್ಲಿವೆ. ಇರೊ ಸ್ಥಳದಲ್ಲೆ ಸುರಕ್ಷಿತವಾಗಿ ಇರಿ. ಕೆಲವೇ ದಿನಗಳಲ್ಲಿ ಯುದ್ದ ವಿರಾಮ ಆಗಬಹುದು. ನಾನು ಮತ್ತು ಮುಖ್ಯಮಂತ್ರಿಗಳು ವಿದೇಶಾಂಗ ಇಲಾಖೆಯ ಜೊತೆ ಸಂಪರ್ಕದಲ್ಲಿ ಇದ್ದೇವೆ. ಉಕ್ರೇನ್ ನಲ್ಲಕಿರುವ ಕನ್ನಡಿಗರು ಸೇಪ್ ಆಗಿ ಇದ್ದಾರೆ. ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ.