ಮನೆಯಲ್ಲಿ ಕಿತ್ತುತಿನ್ನುವ ಬಡತನ, ತಂದೆ ಗಾರೆ ಕೆಲಸ, ತಾಯಿ ಮನೆಗೆಲಸ ಮಾಡುತ್ತಿದ್ದರೆ, ಇತ್ತ ವಿದ್ಯಾರ್ಥಿನಿಯೋರ್ವಳು ರಜಾ ದಿನಗಳಲ್ಲಿ ತಾನೇ ಪಾರ್ಟ್‌ಟೈಮ್ ಕೆಲಸ ಮಾಡುತ್ತ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ರಾಜ್ಯಕ್ಕೆ 6ನೇ ರ‍್ಯಾಂಕ್‌ ಪಡೆದಿದ್ದಾಳೆ.  

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ (ಏ.09): ಮನೆಯಲ್ಲಿ ಕಿತ್ತುತಿನ್ನುವ ಬಡತನ, ತಂದೆ ಗಾರೆ ಕೆಲಸ, ತಾಯಿ ಮನೆಗೆಲಸ ಮಾಡುತ್ತಿದ್ದರೆ, ಇತ್ತ ವಿದ್ಯಾರ್ಥಿನಿಯೋರ್ವಳು ರಜಾ ದಿನಗಳಲ್ಲಿ ತಾನೇ ಪಾರ್ಟ್‌ಟೈಮ್ ಕೆಲಸ ಮಾಡುತ್ತ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ರಾಜ್ಯಕ್ಕೆ 6ನೇ ರ‍್ಯಾಂಕ್‌ ಪಡೆದಿದ್ದಾಳೆ. ಇಲ್ಲಿನ ಗೋಪನಕೊಪ್ಪದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಾಗವೇಣಿ ರಾಯಚೂರ ಕನ್ನಡ-99, ಹಿಂದಿ- 96, ಇತಿಹಾಸ-99, ಭೂಗೋಳಶಾಸ್ತ್ರ-100, ರಾಜಕೀಯ ಶಾಸ್ತ್ರ-100, ಶಿಕ್ಷಣ-99 ಸೇರಿ ಒಟ್ಟು 600ಕ್ಕೆ 593 ಅಂಕಗಳನ್ನು ಪಡೆಯುವುದರ ಮೂಲಕ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 6ನೇ ರ್‍ಯಾಂಕ್ ಪಡೆದು ಸಾಧನೆ ತೋರಿದ್ದಾಳೆ.

ನಾಗವೇಣಿಯ ತಂದೆ ಅಂಥೋನಿ ರಾಯಚೂರ ಗಾರೆ (ಕೂಲಿ) ಕೆಲಸ ಮಾಡುತ್ತಿದ್ದರೆ, ತಾಯಿ ಸುಲೋಚನಾ ಮನೆಗೆಲಸ ಮಾಡುತ್ತಿದ್ದಾರೆ. ಈ ಕುಟುಂಬದ ಜೀವನ ಬಂಡಿ ಸಾಗಲು ತಂದೆಯೇ ಆಸರೆ. ತಂದೆ ಪಡುತ್ತಿರುವ ಕಷ್ಟ ಅರಿತ ನಾಗವೇಣಿ ರಜಾ ದಿನಗಳಲ್ಲಿ ಪಾರ್ಟ್‌ಟೈಮ್ ಕೆಲಸ ಮಾಡಿಕೊಂಡು ತಂದೆಯೊಂದಿಗೆ ಕುಟುಂಬಕ್ಕೆ ಆರ್ಥಿಕವಾಗಿ ಆಸರೆಯಾಗಿದ್ದಾಳೆ. ಜತೆಗೆ ವಿವಿಧ ಸಂಘ- ಸಂಸ್ಥೆಗಳ ಸ್ಕಾಲರ್‌ಶಿಪ್ ಹಾಗೂ ತಾನು ಮಾಡಿದ ಪಾರ್ಟ್‌ಟೈಮ್‌ ಕೆಲಸದ ಸಹಾಯದಿಂದ ಕಾಲೇಜಿನ ಶುಲ್ಕ ಪಾವತಿಸಿದ್ದಾಳೆ. ಈ ವಿದ್ಯಾರ್ಥಿನಿಯ ಕಲಿಕಾ ಸಾಮರ್ಥ್ಯ, ಆಸಕ್ತಿ ಗಮನಿಸಿದ ಕಾಲೇಜಿನ ಉಪನ್ಯಾಸಕರು ಕಲಿಕೆಗೆ ಬೇಕಾದ ಪಠ್ಯಪುಸ್ತಕ ಹಾಗೂ ಆರ್ಥಿಕ ನೆರವು ಸಹ ಮಾಡಿದ್ದಾರೆ.

Karnataka 2nd PUC Result 2025: ಲಾರಿ ಚಾಲಕನ ಪುತ್ರಿ ರಾಜ್ಯಕ್ಕೆ ಟಾಪರ್!

ಸಾಧನೆಗೆ ಬೇಕು ಛಲ: ಎಷ್ಟೋ ಮಕ್ಕಳಿಗೆ ಕಲಿಕೆಗೆ ಬೇಕಾದ ಎಲ್ಲ ಸೌಲಭ್ಯಗಳಿದ್ದರೂ ಕಲಿಯದ ಇಂದಿನ ದಿನಮಾನಗಳಲ್ಲಿ ಮನೆಯಲ್ಲಿ ಕಿತ್ತುತಿನ್ನುವ ಬಡತನವಿದ್ದರೂ ಸಾಧನೆ ಮಾಡಬೇಕು ಎಂಬ ಹಂಬಲವಿದ್ದರೆ ಏನ್ನಾದರೂ ಸಾಧಿಸಬಹುದು ಎಂಬುದಕ್ಕೆ ಈ ವಿದ್ಯಾರ್ಥಿನಿಯೇ ಉತ್ತಮ ನಿದರ್ಶನ. ಕಲಿಕೆಯೊಂದಿಗೆ ರಜೆಯ ದಿನಗಳಲ್ಲಿ ಉದ್ಯೋಗ ಮಾಡುತ್ತಾ ಸಾಧನೆ ಮಾಡಿರುವುದು ಈಗ ಜಿಲ್ಲೆಯ ಶಿಕ್ಷಣ ಪ್ರೇಮಿಗಳ ಪ್ರೀತಿಗೆ ಪಾತ್ರಳಾಗಿದ್ದಾರೆ.

ಕೆಲಸದಲ್ಲಿದ್ದ ತಂದೆ ಕರೆದು ಸನ್ಮಾನ: ನಿಮ್ಮ ಮಗಳು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾಳೆ ಕಾಲೇಜಿನಲ್ಲಿ ಕರೆಯುತ್ತಿದ್ದಾರೆ ಬನ್ನಿ ಎಂದು ಗಾರೆ ಕೆಲಸದಲ್ಲಿ ನಿರತರಾಗಿದ್ದ ನಾಗವೇಣಿ ತಂದೆ ಅಂಥೋನಿಯನ್ನು ಕಾಲೇಜು ಸಿಬ್ಬಂದಿ ಅದ್ಧೂರಿಯಾಗಿ ಸ್ವಾಗತಿಸಿ ಮಗಳ ಎದುರೇ ಕಾಲೇಜು ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಸನ್ಮಾನಿಸಿದರು. ಈ ವೇಳೆ ಮಗಳ ಸಾಧನೆ ಕಂಡು ತಂದೆಯ ಕಣ್ಣಲ್ಲಿ ಬಂದ ಆನಂದಭಾಷ್ಪ ಬಂದರೆ, ಮಗಳ ಕಣ್ಣಲ್ಲಿ ಸಾಧನೆಯ ಸಾರ್ಥಕತೆ ಕಾಣುತ್ತಿತ್ತು.

ಬಾಲಕಿ ಪರಿಶ್ರಮಕ್ಕೆ ತಕ್ಕಫಲ: ನಮ್ಮ ಕಾಲೇಜಿನ ವಿದ್ಯಾರ್ಥಿನಿ ನಾಗವೇಣಿಯ ಕಲಿಕಾಸಕ್ತಿ, ಅವಳು ಓದಿಗೆ ಕೊಡುತ್ತಿದ್ದ ಆದ್ಯತೆ ಗಮನಿಸಿ ಮೊದಲ ಎರಡು ರ್‍ಯಾಂಕ್‌ನಲ್ಲಿ ಇವಳ ಹೆಸರು ಬರಲಿದೆ ಎನ್ನುವ ಆಸೆಯಿತ್ತು. ಹಿಂದಿ ವಿಷಯದಲ್ಲಿ ಒಂದಿಷ್ಟು ಅಂಕಗಳು ಕಡಿಮೆ ಬಂದಿರುವ ಕಾರಣ ರಾಜ್ಯಕ್ಕೆ 6ನೇ ರ್‍ಯಾಂಕ್ ಪಡೆದಿದ್ದಾಳೆ. ಬಾಲಕಿಯ ಈ ಪರಿಶ್ರಮ ನಮ್ಮ ಕಾಲೇಜಿನ ಗೌರವ ಹೆಚ್ಚಿಸಿದೆ ಎಂದು ಕಾಲೇಜಿನ ಪ್ರಾಚಾರ್ಯೆ ಶೋಭಾ ಮಂಗಸುಳ "ಕನ್ನಡಪ್ರಭ"ಕ್ಕೆ ತಿಳಿಸಿದರು.

ರಾಜ್ಯಕ್ಕೆ ಮೊದಲ ರ್‍ಯಾಂಕ್ ಬರುವ ನಿರೀಕ್ಷೆಯಿತ್ತು. ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದಿದೆ. ಕಾಲೇಜು ಹಾಗೂ ಕಾಲೇಜಿನ ಉಪನ್ಯಾಸಕರು ನನಗೆ ಸಾಕಷ್ಟು ನೆರವು, ಪ್ರೋತ್ಸಾಹ ನೀಡಿದ್ದಾರೆ. ಮುಂದೆ ಸಾಮಾಜಿಕ ಸೇವೆ ಮಾಡಬೇಕು ಎನ್ನುವ ಗುರಿಯಿದೆ.
- ನಾಗವೇಣಿ ರಾಯಚೂರ, ಕಲಾ ವಿಭಾಗದಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆದ ವಿದ್ಯಾರ್ಥಿನಿ

ಪಿಯುಸಿಯಲ್ಲಿ ವಿಶೇಷ ಸಾಧನೆ: ಕೂಲಿ ತಾಯಿಯ ಶ್ರಮಕ್ಕೆ ಬೆಲೆ ತಂದ ಮಾನ್ಯ!

ನನ್ನ ಮಗಳು ಬಡತನದಲ್ಲಿಯೇ ಬೆಳೆದವಳು. ಅವಳ ಸಾಧನೆ ಕಂಡು ಖುಷಿಯಾಗುತ್ತಿದೆ. ಇದೇ ರೀತಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ. ಮಗಳ ಕಲಿಕೆಗೆ ಕೈಜೋಡಿಸಿದ ಕಾಲೇಜು ಉಪನ್ಯಾಸರು, ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುವೆ.
- ಅಂಥೋನಿ ರಾಯಚೂರ, ನಾಗವೇಣಿ ತಂದೆ