ರಾಜೀವ್‌ಗಾಂಧಿ ವಿವಿ ವೀಸಿ ನೇಮಕ ವಿವಾದ ಸಿಎಂ ಜತೆ ಚರ್ಚೆ: ಸುಧಾಕರ್
* ರಾಜೀವ್ ವಿವಿ ನೇಮಕಾತಿ ನನ್ನ ಗಮನಕ್ಕೆ ಬಂದಿಲ್ಲ
* ಖಾಸಗಿ ಕಾಲೇಜಿಂದ ನೇಮಕ ಇದೇ ಮೊದಲು
* 26 ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ಖಾಸಗಿ ಕಾಲೇಜಿನವರನ್ನು ನೇಮಕ
ಬೆಂಗಳೂರು(ಜೂ.14): ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ನೇಮಕ ನನ್ನ ಗಮನಕ್ಕೆ ಬಂದಿರಲಿಲ್ಲ. ಖಾಸಗಿ ಕಾಲೇಜಿನ ಒಬ್ಬರು ವಿವಿ ಹಂಗಾಮಿ ಕುಲಪತಿಯಾಗಿರುವುದು ಇದೇ ಮೊದಲು. ಈ ಬಗ್ಗೆ ವಿವಿಯ ಸಹ ಕುಲಪತಿಯಾಗಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀವ್‌ಗಾಂಧಿ ವಿಶ್ವವಿದ್ಯಾಲಯಕ್ಕೆ ಹಂಗಾಮಿ ಕುಲಪತಿ ನೇಮಕ ಸಂಬಂದ ನಾನು ಎರಡು ಮೂರು ವಾರಗಳ ಹಿಂದೆ ಭೇಟಿ ಮಾಡಲು ರಾಜ್ಯಪಾಲರಿಗೆ ಪತ್ರಬರೆದಿದ್ದೆ. ಕೊರೋನಾದಿಂದಾಗಿ ರಾಜ್ಯಪಾಲರು ಯಾರನ್ನೂ ಭೇಟಿ ಮಾಡುತ್ತಿಲ್ಲ ಎಂದು ಭಾವಿಸುತ್ತೇನೆ.
26 ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ಖಾಸಗಿ ಕಾಲೇಜಿನವರನ್ನು ನೇಮಕ ಮಾಡಲಾಗಿದೆ. ದೇಶದಲ್ಲೇ ಅತಿ ದೊಡ್ಡ ಆರೋಗ್ಯ ವಿಶ್ವವಿದ್ಯಾಲಯ ಅದು. ಅಲ್ಲಿ ಒಬ್ಬ ವ್ಯಕ್ತಿಯೂ ಖಾಸಗಿಯವರು ಇಲ್ಲ. ರಾಜ್ಯಪಾಲರಿಗೆ ಈಗಾಗಲೇ ಪತ್ರ ಬರೆದಿರುವುದರಿಂದ ಅವರನ್ನು ಭೇಟಿ ಆಗುವ ಅವಕಾಶ ನೀಡುವ ಸಾಧ್ಯತೆ ಇದೆ. ಇದರ ಬಗ್ಗೆ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಕಳಂಕಿತ ವ್ಯಕ್ತಿ ವೀಸಿ ವಿವಾದ. ಡಾ. ಜಯಕರ ಶೆಟ್ಟಿ ಸ್ಪಷ್ಟನೆ
ಏನಿದು ವಿವಾದ?:
ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಕಾಲೇಜಿನ ಸಿಬ್ಬಂದಿಯೊಬ್ಬರನ್ನು ಹಂಗಾಮಿ ಕುಲಪತಿಯನ್ನಾಗಿ ನೇಮಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಹಂಗಾಮಿ ಕುಲಪತಿಯಾಗಿ ನೇಮಕವಾಗಿರುವ ಮಾರುತಿ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ್ ಶೆಟ್ಟಿ ಅವರ ವಿರುದ್ಧ ಈ ಹಿಂದೆ ಕೆಲ ಭ್ರಷ್ಟಾಚಾರ ಆರೋಪಗಳು ಸಹ ಕೇಳಿಬಂದಿದ್ದವು ಎನ್ನಲಾಗಿತ್ತು. ಭಾರತೀಯ ದಂತ ವೈದ್ಯಕೀಯ ಪರಿಷತ್ (ಡಿಸಿಐ) ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿದ್ದಾಗ ದಂತ ವೈದ್ಯಕೀಯ ಕಾಲೇಜುಗಳಿಗೆ ಸೀಟು ಹೆಚ್ಚಳಕ್ಕೆ ಅವಕಾಶ ನೀಡುವ ವಿಚಾರದಲ್ಲಿ ಇಬ್ಬರು ಸದಸ್ಯರ ಮೇಲೆ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣದಲ್ಲಿ ಜಯಕರ್‌ಶೆಟ್ಟಿಅವರ ಹೆಸರು ತಳಕು ಹಾಕಿಕೊಂಡಿತ್ತು. ಸಿಬಿಐ ವಿಚಾರಣೆಯನ್ನೂ ಎದುರಿಸಿ ಆರೋಪಮುಕ್ತವಾಗಿದ್ದರು. ಇಷ್ಟೆಲ್ಲಾ ಇದ್ದಾಗಲೂ ಇವರನ್ನು ನೇಮಿಸಿರುವ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.
26 ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ಖಾಸಗಿ ಕಾಲೇಜಿನವರನ್ನು ನೇಮಕ ಮಾಡಲಾಗಿದೆ. ದೇಶದಲ್ಲೇ ಅತಿ ದೊಡ್ಡ ಆರೋಗ್ಯ ವಿಶ್ವವಿದ್ಯಾಲಯ ಅದು. ಅಲ್ಲಿ ಒಬ್ಬ ವ್ಯಕ್ತಿಯೂ ಖಾಸಗಿಯವರು ಇಲ್ಲ. ಈ ಬಗ್ಗೆ ಸಿಎಂ ಮತ್ತು ರಾಜ್ಯಪಾಲರ ಜೊತೆ ಚರ್ಚಿಸುವೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.