Education news: 5-8ನೇ ಕ್ಲಾಸ್ ಬೋರ್ಡ್ ಪರೀಕ್ಷೇಲಿ ಫೇಲಾದ್ರೆ ಪೂರಕ ಪರೀಕ್ಷೆ?
ರಾಜ್ಯ ಪಠ್ಯಕ್ರಮದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ಬಾರಿ ಬೋರ್ಡ್ ಪರೀಕ್ಷೆ ನಡೆಸಿ ಯಶಸ್ವಿಯಾಗಿರುವ ಶಾಲಾ ಶಿಕ್ಷಣ ಇಲಾಖೆ ಮುಂಬರುವ 2023-24ನೇ ಸಾಲಿನಿಂದ ಈ ಎರಡೂ ತರಗತಿಯ ಮುಖ್ಯ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ, ಎಸ್ಸೆಸ್ಸೆಲ್ಸಿ ಮಾದರಿಯಲ್ಲಿ ಪೂರಕ ಪರೀಕ್ಷೆ ಪರಿಚಯಿಸಲು ಗಂಭೀರ ಚಿಂತನೆ ನಡೆಸಿದೆ.
ಲಿಂಗರಾಜು ಕೋರಾ
ಬೆಂಗಳೂರು (ಏ.14) : ರಾಜ್ಯ ಪಠ್ಯಕ್ರಮದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ಬಾರಿ ಬೋರ್ಡ್ ಪರೀಕ್ಷೆ ನಡೆಸಿ ಯಶಸ್ವಿಯಾಗಿರುವ ಶಾಲಾ ಶಿಕ್ಷಣ ಇಲಾಖೆ ಮುಂಬರುವ 2023-24ನೇ ಸಾಲಿನಿಂದ ಈ ಎರಡೂ ತರಗತಿಯ ಮುಖ್ಯ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ, ಎಸ್ಸೆಸ್ಸೆಲ್ಸಿ ಮಾದರಿಯಲ್ಲಿ ಪೂರಕ ಪರೀಕ್ಷೆ ಪರಿಚಯಿಸಲು ಗಂಭೀರ ಚಿಂತನೆ ನಡೆಸಿದೆ.
ಪೂರಕ ಪರೀಕ್ಷೆ ಪರಿಚಯಿಸಿದರೂ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ ಉದ್ದೇಶ ಇಲಾಖೆಯಲ್ಲಿ ಸದ್ಯಕ್ಕಿಲ್ಲ. ಬದಲಿಗೆ ಮುಖ್ಯ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಪಡೆದವರನ್ನು ಕಲಿಕೆಯಲ್ಲಿ ಹಿಂದುಳಿದವರೆಂದು ಪರಿಗಣಿಸಿ ಅವರಿಗೆ ಕೆಲವು ತಿಂಗಳು ವಿಶೇಷ ತರಗತಿಗಳನ್ನು ನಡೆಸಿ ಕಲಿಕೆಯಲ್ಲಿ ಸುಧಾರಣೆ ಮಾಡಲಾಗುವುದು. ಬಳಿಕ ಪೂರಕ ಪರೀಕ್ಷೆ ನಡೆಸಿ ಫಲಿತಾಂಶ ನೀಡಿ ಮುಂದಿನ ತರಗತಿಗೆ ಕಳುಹಿಸಲಾಗುತ್ತದೆ. ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣ ಎಂಬ ಪ್ರಶ್ನೆ ಸದ್ಯಕ್ಕೆ ಇರುವುದಿಲ್ಲ. ಅದನ್ನು ಮುಂದೆ ಯೋಚಿಸಲಾಗುವುದು. ಹಂತ ಹಂತವಾಗಿ ಶಾಲಾ ಶಿಕ್ಷಣದಲ್ಲಿ ಗುಣಮಟ್ಟಹೆಚ್ಚಿಸಲು ಕ್ರಮ ಕೈಗೊಳ್ಳುವುದು ನಮ್ಮ ಗುರಿಯಾಗಿದೆ ಎಂದು ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಮೊದಲ ಸಂಬಳ 9 ಸಾವಿರ ರೂ. ನೆನಪಿನ ಬುತ್ತಿ ಬಿಚ್ಚಿಟ್ಟ ವೈದ್ಯರ ಟ್ವೀಟ್ ವೈರಲ್
ಪ್ರಸ್ತುತ 9ನೇ ತರಗತಿವರೆಗೂ ಮಕ್ಕಳನ್ನು ಅನುತ್ತೀರ್ಣಗೊಳಿಸಬಾರದೆಂಬ ನಿಯಮವಿದೆ. ಇದರಿಂದ ಶಾಲಾ ಶಿಕ್ಷಣದಲ್ಲಿ ಗುಣಮಟ್ಟ, ಗಂಭೀರತೆ ಕುಸಿದಿದೆ. ಇದನ್ನು ಸುಧಾರಿಸಲು 5 ಮತ್ತು 8ನೇ ತರಗತಿಗೆ ಬೋರ್ಡ್ ಪರೀಕ್ಷೆ ಅಗತ್ಯವಿತ್ತು. ಈ ತರಗತಿಗಳಲ್ಲಿ ಅನುತ್ತೀರ್ಣ ಪದ್ಧತಿಯನ್ನು ಆರಂಭಿಸುವ ಇರಾದೆ ಇದ್ದರೂ ಕಾಯ್ದೆಯಲ್ಲಿ ಅವಕಾಶವಿಲ್ಲದ ಕಾರಣ ಪೂರಕ ಪರೀಕ್ಷೆ ಪರಿಚಯಿಸಲು ಉದ್ದೇಶಿಸಲಾಗಿದೆ. ಪೂರಕ ಪರೀಕ್ಷೆಯನ್ನು ಈ ಬಾರಿಯ ಪರೀಕ್ಷೆಯಲ್ಲೇ ಆರಂಭಿಸುವ ಉದ್ದೇಶವಿತ್ತಾದರೂ ಬೋರ್ಡ್ ಪರೀಕ್ಷೆ ಪ್ರಶ್ನಿಸಿ ಕೆಲವು ಖಾಸಗಿ ಶಾಲೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಜಾರಿ ಸಾಧ್ಯವಾಗಲಿಲ್ಲ ಎನ್ನುತ್ತವೆ ಇಲಾಖೆಯ ಮೂಲಗಳು.
ಖಾಸಗಿ ಪಠ್ಯಕ್ಕೆ ಬೋರ್ಡ್ ಪರೀಕ್ಷೆಯಿಂದ ಬ್ರೇಕ್:
ರಾಜ್ಯ ಪಠ್ಯಕ್ರಮದಡಿ ಮಾನ್ಯತೆ ಪಡೆದಿರುವ ರಾಜ್ಯದ ಅನೇಕ ಖಾಸಗಿ ಶಾಲೆಗಳು ಸರ್ಕಾರದ ಪಠ್ಯಪುಸ್ತಕಗಳನ್ನು ಬೋಧನೆ ಮಾಡದೆ ಖಾಸಗಿ ಪ್ರಕಾಶನದ ಪುಸ್ತಕಗಳನ್ನು ಬೋಧನೆ ಮಾಡುತ್ತಿವೆ. ಅಲ್ಲದೆ, ಈ ಪಠ್ಯಪುಸ್ತಕಗಳ ಹೆಸರಲ್ಲಿ ಮಕ್ಕಳಿಂದಲೂ ದೊಡ್ಡ ಮೊತ್ತದ ಶುಲ್ಕ ವಸೂಲಿಯ ಆರೋಪಗಳಿದ್ದವು. ಕೆಲವು ಖಾಸಗಿ ಶಾಲೆಗಳು ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕೇಂದ್ರೀಯ ಪಠ್ಯಕ್ರಮ ಬೋಧನೆ ಮಾಡುವ ಮೂಲಕ ನಮ್ಮದು ಸಿಬಿಎಸ್‌ಇ, ಐಸಿಎಸ್‌ಇ ಶಾಲೆ ಎಂದು ಹೇಳಿ ಪೋಷಕರಿಗೆ ವಂಚಿಸುತ್ತಿದ್ದವು. ಆದರೆ ಸರ್ಕಾರ ಜಾರಿಗೆ ತಂದ 5 ಮತ್ತು 8ನೇ ತರಗತಿ ಮಂಡಳಿ ಪರೀಕ್ಷೆಯಿಂದ ಇದಕ್ಕೆ ಕಡಿವಾಣ ಬಿದ್ದಿದೆ.
ರಾತ್ರಿ ಹೃದಯಾಘಾತಕ್ಕೆ ತಂದೆ ಸಾವು: 700 ಕಿಮೀ ಕ್ರಮಿಸಿ ಅಂತಿಮ ದರ್ಶನ ಪಡೆದ ಮಗಳು ಬೆಳಗ್ಗೆ ಪರೀಕ್ಷೆಗೆ ಹಾಜರು!
ಈ ಕಾರಣಕ್ಕಾಗಿಯೇ ಕೆಲ ಖಾಸಗಿ ಶಾಲಾ ಸಂಘಟನೆಗಳು ಬೋರ್ಡ್ ಪರೀಕ್ಷೆ ಪ್ರಶ್ನಿಸಿ ಸುಪ್ರೀಂಕೋರ್ಚ್‌ವರೆಗೂ ಕಾನೂನು ಹೋರಾಟ ನಡೆಸಿದವು. ಆದರೆ, ಕೊನೆಗೆ ಇಲಾಖೆಯ ಪರವಾಗಿಯೇ ತೀರ್ಪು ಬಂದಿತ್ತು.
ಹಣಕಾಸಿನ ಹೊರೆಯಾಗದಂತೆ ಶಿಕ್ಷಣದ ಗುಣಮಟ್ಟಹೆಚ್ಚಳಕ್ಕೆ ಇಲಾಖೆ ಯಾವುದೇ ನಿರ್ಧಾರ ಕೈಗೊಂಡರೂ ನಮ್ಮ ಬೆಂಬಲವಿದೆ. ಆರ್‌ಟಿಇ ಕಾಯ್ದೆಯ 2019ರ ತಿದ್ದುಪಡಿಯ ಅಂಶಗಳನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತಂದರೆ ಅಭ್ಯಂತರವಿಲ್ಲ. ಈ ತಿದ್ದುಪಡಿಯಲ್ಲಿ ಯಾವುದೇ ಮಗುವಿನ ವಯಸ್ಸು ಹಾಗೂ ತರಗತಿಗೆ ಅನುಗುಣವಾಗಿ ಕನಿಷ್ಠ ಕಲಿಕಾ ಸಾಮರ್ಥ್ಯ ಇಲ್ಲದಿದ್ದರೆ ಅವರಿಗೆ ಪುನಃ ಪರೀಕ್ಷೆಯ ಅವಕಾಶ ಕಲ್ಪಿಸಿ ಅಲ್ಲಿಯೂ ಸಾಮರ್ಥ್ಯ ಬರಲಿಲ್ಲ ಎಂದರೆ ಅದೇ ತರಗತಿಯಲ್ಲಿ ಮತ್ತೊಂದು ವರ್ಷ ಕಲಿಕೆಗೆ ಒತ್ತು ನೀಡಲು ಅವಕಾಶ ನೀಡಲಾಗಿದೆ. ಆ ಪ್ರಕಾರ ಶಿಕ್ಷಣ ಇಲಾಖೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು.
- ಡಿ.ಶಶಿಕುಮಾರ್, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ