ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವ ಮುನ್ನ, ಈ ಸಲಹೆಗಳನ್ನು ತಪ್ಪದೇ ತಿಳಿದುಕೊಳ್ಳಿ
ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕಾದರೆ ಏನು ಮಾಡಬೇಕು? ಬರೀ ಓದು ಸಾಕಾ? ಮತ್ತಿನ್ನೇನಾದರೂ ಬೇಕಾ? ಸ್ಪರ್ಧಾತ್ಮಕ ಪರೀಕ್ಷೆಯೆಂಬ ಸ್ಪರ್ಧೆಯನ್ನು ಎದುರಿಸುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ಚನ್ನಬಸಪ್ಪ ರೊಟ್ಟಿ,
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಮರ್ಪಕ ಪೂರ್ವಸಿದ್ಧತೆ ಅತ್ಯಗತ್ಯ. ಪೂರ್ವಸಿದ್ಧತೆ ಇಲ್ಲದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದೆಂದರೆ ಈಜು ಬಾರದ ವ್ಯಕ್ತಿ ಸಮುದ್ರಕ್ಕೆ ಇಳಿದಂತೆ! ಹಾಗಾದರೆ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕಾದರೆ ಏನು ಮಾಡಬೇಕು? ಬರೀ ಓದು ಸಾಕಾ? ಮತ್ತಿನ್ನೇನಾದರೂ ಬೇಕಾ? ಸ್ಪರ್ಧಾತ್ಮಕ ಪರೀಕ್ಷೆಯೆಂಬ ಸ್ಪರ್ಧೆಯನ್ನು ಎದುರಿಸುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ...
ಸ್ವತಃ ಮಾನಸಿಕವಾಗಿ ಸಿದ್ಧವಾಗಿರಿ: ಸ್ಪರ್ಧಾತ್ಮಕ ಪರೀಕ್ಷೆಗಳ ಓದು ಶಾಲಾ-ಕಾಲೇಜುಗಳ ಪರೀಕ್ಷೆ ಹಾಗೂ ಪಠ್ಯಕ್ರಮಕ್ಕೆ ಸಂಬಂಧಿಸಿದ ಸಾಮಾನ್ಯ ಓದಿಗಿಂತ ಸಾಕಷ್ಟುಭಿನ್ನವಾಗಿದೆ. ಶಾಲಾ-ಕಾಲೇಜಿನ ಓದು ನಿಮ್ಮ ಮೆರಿಟ್ ನಿರ್ಧರಿಸುವ ಪರೀಕ್ಷೆಗಳಿಗಾಗಿ ಇರುತ್ತದೆ. ಆದರೆ, ಸ್ಪರ್ಧಾತ್ಮಕ ಓದು ನಿಮ್ಮ ಜೀವನದ ದಿಕ್ಕನ್ನು ನಿರ್ಧರಿಸುವ ಉದ್ಯೋಗ ನಿರ್ಧಾರಕ ಪರೀಕ್ಷೆಗಳನ್ನು ಎದುರಿಸುವ ಓದಾಗಿರುತ್ತದೆ. ಈ ನಿಟ್ಟಿನಲ್ಲಿ ನಿಮಗೆ ವಿಶೇಷ ಮಾನಸಿಕ ಸಿದ್ಧತೆಯ ಅಗತ್ಯವಿರುತ್ತದೆ. ಸ್ವಸಾಮರ್ಥ್ಯ ಅರಿಯುವಿಕೆ, ಸಾಮರ್ಥ್ಯಕ್ಕೆ ಅನುಗುಣವಾದ ಗುರಿ ನಿರ್ಧಾರ, ವ್ಯವಸ್ಥಿತ ವೇಳಾಪಟ್ಟಿಗೆ ಅನುಗುಣವಾದ ಓದು, ಯಶಸ್ಸು ಮತ್ತು ಅಪಯಶಸ್ಸುಗಳನ್ನು ಏಕರೀತಿಯಿಂದ ಸ್ವೀಕರಿಸುವ ಸಮಚಿತ್ತತೆ, ಅದಮ್ಯ ಆತ್ಮವಿಶ್ವಾಸ, ಆರೋಗ್ಯಕರ ಸ್ಪರ್ಧಾಮನೋಭಾವಗಳನ್ನು ಬೆಳೆಸಿಕೊಂಡು ನೀವು ಮಾನಸಿಕವಾಗಿ ಸಿದ್ಧರಾಗಬೇಕಾಗುತ್ತದೆ.
ಜೂನ್ 13 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ರಾಜ್ಯ ಸರಕಾರ
ಓದು ಆರಂಭ ಯಾವಾಗಿನಿಂದ?: ಬಹುತೇಕ ಹುದ್ದೆಗಳಿಗೆ ಪದವಿಯೇ ಕನಿಷ್ಠ ವಿದ್ಯಾರ್ಹತೆಯಾಗಿದೆ. ಈ ನಿಟ್ಟಿನಲ್ಲಿ ಪದವಿ ಓದುತ್ತಿರುವಾಗಲೇ ಕೆಲವರು ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯಲ್ಲಿ ತೊಡಗಿರುತ್ತಾರೆ. ಪದವಿ ಪಠ್ಯಕ್ರಮ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾಗಿರುತ್ತದೆ. ಆದರೆ, ಕಾಲೇಜು ಓದುತ್ತಿರುವಾಗ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡಿಕೊಳ್ಳುವುದರಿಂದ ಪದವಿ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅದಕ್ಕಾಗಿ ಈ ಹಂತದಲ್ಲಿ ಪದವಿಯಲ್ಲಿ ಸಾಧ್ಯವಾದಷ್ಟುಹೆಚ್ಚು ಅಂಕಗಳಿಕೆಗೆ ಒತ್ತು ನೀಡಬೇಕು. ನಿಮ್ಮ ಗುರಿ ಐಎಎಸ್, ಐಪಿಎಸ್ ಅಥವಾ ಕೆಎಎಸ್ ಆಗಿದ್ದರೆ, ಪದವಿ ನಂತರ ನಿಮ್ಮ ಇಷ್ಟದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಬಹುದು. ಆದರೆ, ನಿಮಗೆ ಉದ್ಯೋಗ ಅನಿವಾರ್ಯ ಎಂದಾಗಿದ್ದರೆ ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಮಾಡಿಕೊಳ್ಳಬಹುದು.
ಅಧ್ಯಯನ ಸಾಮಗ್ರಿ ಸಂಗ್ರಹ ಹೇಗೆ?: ಸ್ಪರ್ಧಾತ್ಮಕ ಪರೀಕ್ಷೆಯ ಓದಿಗೆ ಶಾಲಾ ಪಠ್ಯಪುಸ್ತಕ, ಹಳೆಯ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡ ಪ್ರಶ್ನೆಕೋಶ, ಆಕರಗ್ರಂಥ, ಸ್ಪರ್ಧಾತ್ಮಕ ನಿಯತಕಾಲಿಕೆಗಳ ಓದು ಅಗತ್ಯವಾಗಿವೆ. ಆಕರಗ್ರಂಥ ಹಾಗೂ ಸ್ಪರ್ಧಾತ್ಮಕ ನಿಯತಕಾಲಿಕೆ ಖರೀದಿಗೂ ಮುನ್ನ ಈಚೆಗೆ ನಡೆದ ಪರೀಕ್ಷೆಗಳಲ್ಲಿ ಯಾವ ಆಕರಗ್ರಂಥ, ನಿಯತಕಾಲಿಕೆಯಿಂದ ಎಷ್ಟುಪ್ರಶ್ನೆಗಳು ಬಂದಿವೆ ಎಂಬುದನ್ನು ಪರಿಶೀಲಿಸಬೇಕು. ನೀವು ಕೊಳ್ಳುವ ಆವೃತ್ತಿ ಈಚೆಗಿನ ಪರಿಷ್ಕೃತ ಆವೃತ್ತಿ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಈಗೀಗ ಬಹುತೇಕ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನ್ವಯಿಕ, ವಿಶ್ಲೇಷಣಾತ್ಮಕ ಪ್ರಶ್ನೆಗಳನ್ನು ಕೇಳುತ್ತಿರುವುದರಿಂದ ನೀವು ಖರೀದಿಸುವ ಪುಸ್ತಕಗಳು ಅನ್ವಯಿಕ, ವಿಶ್ಲೇಷಣಾತ್ಮಕ ಪ್ರಶ್ನೆಗಳಿಗೆ ಉತ್ತರ ಒದಗಿಸುತ್ತವೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಯಾರೋ ಹೇಳಿದರೆಂದು ಯಾವುದೋ ಪುಸ್ತಕವನ್ನು ಕಣ್ಮುಚ್ಚಿ ಖರೀದಿಸದಿರಿ. ಪ್ರತ್ಯಕ್ಷ ಕಂಡರೂ ಪರಾಮರ್ಶಿಸಿ ಅಧ್ಯಯನ ಸಾಮಗ್ರಿ ಆಯ್ಕೆ ಮಾಡಿಕೊಳ್ಳಿ.
Nupur Sharma ಹೇಳಿಕೆಗೆ ಮುಸ್ಲಿಂ ಸಮುದಾಯ ಪ್ರತಿಭಟನೆ, ಕರ್ನಾಟಕದಲ್ಲಿ ಹೈಅಲರ್ಟ್
ದಿನಪತ್ರಿಕೆ ಓದು, ವೆಬ್ ರೆಫರೆನ್ಸ್ ಕಡ್ಡಾಯ : ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಯಶಸ್ಸು ಪಡೆಯಲು ಪ್ರಚಲಿತ ವಿದ್ಯಮಾನಗಳ ಅರಿವು ಅಗತ್ಯ. ಇದು ಸಾಮಾನ್ಯಜ್ಞಾನ ಪ್ರಶ್ನೆಗಳಿಗೆ ಉತ್ತರಿಸಲೂ ಅನುಕೂಲಕಾರಿ. ರಾಷ್ಟ್ರ, ರಾಜ್ಯಮಟ್ಟದ ಪ್ರತಿಷ್ಠಿತ ದಿನಪತ್ರಿಕೆಗಳಲ್ಲಿ ಪ್ರತಿನಿತ್ಯ ರಾಜಕೀಯ, ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ವಾಣಿಜ್ಯ, ಕ್ರೀಡೆಗೆ ಸಂಬಂಧಿಸಿದ ಸುದ್ದಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಅದನ್ನೇ ಆಧರಿಸಿ ಸ್ವಂತ ನೋಟ್ಸ್ ಮಾಡಿಕೊಳ್ಳಬೇಕು.
ವೆಬ್ ರೆಫರೆನ್ಸ್‌ನಲ್ಲೂ ಇನ್‌ಸೈಟ್ ಇಂಡಿಯಾ, ಇನ್‌ಸೈಟ್ ಐಎಎಸ್, ಜಿಕೆ ಟುಡೆ, ಎಜ್ಯುಸ್ಪೇಸ್, ಎಕ್ಸಾಂ ಬಜಾರ್.. ಇತ್ಯಾದಿ ಸೋರ್ಸ್‌ಗಳು ಲಭ್ಯವಿದ್ದು, ಅದರಲ್ಲಿ ನಿಮಗೆ ಬೇಕಾದ ವಿಷಯವನ್ನು ನೀವು ಸಂಗ್ರಹಿಸಿಕೊಳ್ಳಬಹುದು.
ಅಗತ್ಯ ಪ್ರಮಾಣಪತ್ರಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ: ಆಯಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕಕ್ಕಿಂತ ಮುನ್ನ ಸಂಬಂಧಪಟ್ಟಜಾತಿ, ಆದಾಯ, ಕನ್ನಡಮಾಧ್ಯಮ, ಗ್ರಾಮೀಣ, ನಿರಾಕ್ಷೇಪಣ, ಮತ್ತಿತರ ಪ್ರಮಾಣಪತ್ರಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿರಬೇಕು.ಅರ್ಜಿ ಸಲ್ಲಿಸಿದ ನಂತರದ ದಿನಾಂಕದ ಪ್ರಮಾಣಪತ್ರಗಳು ಅಸಿಂಧುವಾಗುತ್ತವೆ ಎಂಬುದನ್ನು ಮರೆಯದಿರಿ.
ಓದಿನೊಂದಿಗೆ ಉದ್ಯೋಗವೂ ಅನಿವಾರ್ಯವಾಗಿದ್ದರೆ: ಪದವಿ ನಂತರ ಸೂಕ್ತ ತರಬೇತಿ ಪಡೆದು ಅಥವಾ ಸ್ವಾವಲಂಬನೆಯಿಂದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಆರಂಭಿಸುವುದು ಒಳ್ಳೆಯದು. ಆದರೆ, ನಿಮಗೆ ಕೆಲಸ ಮಾಡಲೇಬೇಕಾದ ಅವಶ್ಯಕತೆ ಇದ್ದರೆ, ನಿಮ್ಮ ಮನೆಯ ಜವಾಬ್ದಾರಿ ಅಥವಾ ಸ್ವಾವಲಂಬನೆಯ ಓದು ಅನಿವಾರ್ಯವಾಗಿದ್ದರೆ ಯಾವುದಾದರೂ ಅರೆಕಾಲಿಕ ಉದ್ಯೋಗ ಮಾಡುತ್ತ ಅಧ್ಯಯನ ಮುಂದುವರಿಸಬಹುದು. ಆದರೆ, ಈ ಪರಿಸ್ಥಿತಿಯಲ್ಲೂ ಓದು ನಿಮ್ಮ ಮೊದಲ ಆದ್ಯತೆ ಆಗಿರಬೇಕು.
ಓದು ಪಠ್ಯಕ್ರಮದ ಚೌಕಟ್ಟಿಗೆ ಒಳಪಟ್ಟಿರಲಿ: ನಿಮ್ಮ ಓದು ಪಠ್ಯಕ್ರಮದ ಚೌಕಟ್ಟಿಗೆ ಒಳಪಟ್ಟಿರಬೇಕು. ಸಿಕ್ಕಿದ್ದನ್ನೆಲ್ಲಾ ಓದಬಾರದು ಮತ್ತು ಸಿಕ್ಕಾಪಟ್ಟೆಓದಬಾರದು. ಆಯಾ ಪರೀಕ್ಷೆಗೆಂದೇ ನಿಗದಿತ ಪರೀಕ್ಷಾ ಪ್ರಾಧಿಕಾರ ಪಠ್ಯಕ್ರಮವನ್ನು ನಿರ್ದಿಷ್ಟಪಡಿಸಿರುತ್ತದೆ. ಅದಕ್ಕನುಗುಣವಾಗಿಯೇ ನಿಮ್ಮ ಓದು ಸಾಗಬೇಕು. ಒಟ್ಟಾರೆ ನಿಮ್ಮ ಓದು ಸ್ಮಾರ್ಚ್ ಆಗಿರಬೇಕು. ಓದಿದ್ದನ್ನು ನೆನಪಿಡುವ ಮೈಂಡ್ ಮ್ಯಾಪ್‌ನಂಥ ಶಾರ್ಚ್‌ಕಟ್‌ಗಳನ್ನು ಅದು ಒಳಗೊಂಡಿರಬೇಕು. ಓದಿನೊಂದಿಗೆ ಪ್ರತಿನಿತ್ಯ ಅಧ್ಯಯನದ ಅಂತರಾವಲೋಕನ ಇರಬೇಕು. ಮುಖ್ಯಾಂಶಗಳ ಮನನವಿರಬೇಕು. ಆಗ ಯಶಸ್ಸು ತಂತಾನೇ ಒಲಿಯುತ್ತದೆ.
- ಗುರುರಾಜ ಬುಲಬುಲೆ, ನಿರ್ದೇಶಕರು, ಬುಲಬುಲೆಸ್ ಕರಿಯರ್ ಅಕಾಡೆಮಿ ಆ್ಯಂಡ್ ಸ್ಕೂಲ್ ಆಫ್ ಬ್ಯಾಂಕಿಂಗ್, ಧಾರವಾಡ