ಜೂನ್ 13 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ರಾಜ್ಯ ಸರಕಾರ
ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಿಗೆ ಒಂದು ದಿನದ ವಿಶೇಷ ಸಾಂದರ್ಭಿಕ ರಜೆ ಘೋಷಿಸಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ಬೆಂಗಳೂರು (ಜೂ.10): ಪದವೀಧರ ಮತ್ತು ಶಿಕ್ಷಕ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗಳು (Karnataka MLC elections) ಜೂನ್ 13ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಿಗೆ ಒಂದು ದಿನದ ವಿಶೇಷ ಸಾಂದರ್ಭಿಕ ರಜೆ ಘೋಷಿಸಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ವಾಯವ್ಯ ಪದವೀಧರ ಕ್ಷೇತ್ರ, ದಕ್ಷಿಣ ಪದವೀಧರ ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 13ರಂದು ಮತದಾನ ನಡೆಯಲಿದೆ ಎಂದು ತಿಳಿಸಿದ್ದಾರೆ.
ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಪದವೀಧರ ಮತ್ತು ಶಿಕ್ಷಕರ ಪರಿಷತ್ ಚುನಾವಣೆಯು ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ನಡೆಯಲಿದೆ. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯು ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ನಡೆಯಲಿದೆ. ಶಿಕ್ಷಕರ ಪಶ್ಚಿಮ ಕ್ಷೇತ್ರದ ಚುನಾವಣೆಯು ಧಾರವಾಡ, ಹಾವೇರಿ,ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯಲಿದೆ.
ಹೀಗಾಗಿ ಸೋಮವಾರ ಅಂದರೆ ಜೂನ್ 13ರಂದು ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಮತ್ತು ಕಾಲೇಜುಗಳು, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು, ಕಾರ್ಖಾನೆಗಳು ಮತ್ತು ಇತರ ಬ್ಯಾಂಕ್‌ಗಳು ಮತ್ತು ಖಾಸಗಿ ಕಾರ್ಖಾನೆಗಳಿಗೆ ವಿಶೇಷ ರಜೆ ಘೋಷಿಸಲಾಗಿದೆ.
ಪಠ್ಯಪುಸ್ತಕದಲ್ಲಿ ರಾಜಕಾರಣ ಮಾಡಬಾರದು : Basavaraj Horatti
ಇನ್ನು ಈ ನಡುವೆ ವಿಶ್ವವಿದ್ಯಾನಿಲಯ ಪೂರ್ವ ಶಿಕ್ಷಣ ಇಲಾಖೆಯು ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯನ್ನು ನೀಡಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರವೇಶ ದಿನಾಂಕವನ್ನು ಶಿಕ್ಷಣ ಇಲಾಖೆ ವಿಸ್ತರಿಸಿದೆ. ಎಸ್‌ಎಸ್‌ಎಲ್‌ಸಿ ಪ್ರವೇಶ ಫಲಿತಾಂಶದಿಂದ ವಿದ್ಯಾರ್ಥಿಗಳು ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ.
ಜೊತೆಗೆ CBSE ಮತ್ತು ICSE 10ನೇ ತರಗತಿಯ ಫಲಿತಾಂಶ ಪ್ರಕಟವಾಗಿಲ್ಲ. ಇದರಿಂದಾಗಿ ಪ್ರಥಮ ಪಿಯುಸಿ ಪ್ರವೇಶ ದಿನಾಂಕವನ್ನು ವಿಸ್ತರಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 2022-23ನೇ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ಪ್ರವೇಶ ದಿನಾಂಕವು ಯಾವುದೇ ದಂಡ ಶುಲ್ಕವಿಲ್ಲದೆ ಜೂನ್ 15 ಮತ್ತು ದಂಡದೊಂದಿಗೆ ಜೂನ್ 30 ಕೊನೆಯ ಆಗಿತ್ತು. ಆದರೆ CBSE ಮತ್ತು ICSC ಬೋರ್ಡ್‌ಗಳಲ್ಲಿ ಫಲಿತಾಂಶಗಳು ವಿಳಂಬವಾಗುತ್ತಿರುವುದರಿಂದ, ಕಾಲೇಜು ಪ್ರವೇಶ ದಿನಾಂಕವನ್ನು ವಿಸ್ತರಿಸಲು ಅನೇಕ ಪೋಷಕರು ಮತ್ತು ವಿದ್ಯಾರ್ಥಿಗಳು ಶಿಕ್ಷಣ ಮಂಡಳಿಗೆ ವಿನಂತಿಸಿದ್ದರು. ಹೀಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಥಮ ಪಿಯುಸಿ ಪ್ರವೇಶ ದಿನಾಂಕವನ್ನು ದಂಡವಿಲ್ಲದೆ ಜೂನ್ 16 ರಿಂದ ಜುಲೈ 11 ರವರೆಗೆ ವಿಸ್ತರಿಸಿ ಆದೇಶಿಸಿದೆ.
ಇತಿಹಾಸ ತಿರುಚಲು ಹೋಗಿ ಪಠ್ಯಪುಸ್ತಕದಲ್ಲಿ ಅವಾಂತರ: ಖಂಡ್ರೆ
ಮೊದಲ ದಿನವೇ ಪಿಯು ತರಗತಿಗೆ 80% ಹಾಜರಾತಿ: ರಾಜ್ಯಾದ್ಯಂತ ಗುರುವಾರದಿಂದ ಪದವಿಪೂರ್ವ ಕಾಲೇಜುಗಳು ಆರಂಭಗೊಂಡಿದ್ದು, ಮೊದಲ ದಿನವೇ ಪ್ರಥಮ ಪಿಯುಸಿಯಲ್ಲಿ ಶೇ.40ರಿಂದ 50 ರಷ್ಟು, ದ್ವಿತೀಯ ಪಿಯುಸಿಯಲ್ಲಿ ಶೇ.70ರಿಂದ 80ರಷ್ಟು ಹಾಜರಾತಿ ಕಂಡುಬಂದಿದೆ.
ಸಮವಸ್ತ್ರ ಇರುವ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸಿ, ಇಲ್ಲದ ಕಡೆ ಸರ್ಕಾರದ ಸೂಚನೆಯಂತೆ ಭಾವೈಕ್ಯತೆಗೆ ಧಕ್ಕೆಯಾಗದ ಉಡುಪು ಧರಿಸಿ ಮಕ್ಕಳು ತರಗತಿಗೆ ಹಾಜರಾದರು. ಇನ್ನು ಪಿಯು ಪಠ್ಯ ಪರಿಷ್ಕರಣೆಯಾಗದ ಕಾರಣ ಯಾವುದೇ ಗೊಂದಲಗಳಿಲ್ಲದೆ ಎಲ್ಲೆಡೆ ಹಳೆಯ ಪಠ್ಯ ಬೋಧನೆ ಶುರುವಾಗಿದೆ.
ಕಳೆದ ಎರಡು ಕೋವಿಡ್ ವರ್ಷಗಳ ಬಳಿಕ ಈ ವರ್ಷ ಶೈಕ್ಷಣಿಕ ವರ್ಷದ ಆರಂಭದ ನಿಗದಿತ ದಿನದಿಂದಲೇ ಸರ್ಕಾರಿ, ಬಿಬಿಎಂಪಿ, ಅನುದಾನಿತ ಹಾಗೂ ಅನುದಾನರಹಿತ ಪಿಯು ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಆರಂಭಗೊಂಡಿವೆ. ಬಹುತೇಕ ಸರ್ಕಾರಿ ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯು ತರಗತಿಗಳು ಆರಂಭಗೊಂಡಿವೆ. ಆದರೆ, ಕೆಲ ಕಾಲೇಜುಗಳನ್ನು ಹೊರತುಪಡಿಸಿದರೆ ಬಹಳಷ್ಟು ಖಾಸಗಿ ಕಾಲೇಜುಗಳಲ್ಲಿ ಇನ್ನೂ ಪ್ರಥಮ ಪಿಯುಸಿ ಆರಂಭವಾಗಿಲ್ಲ. ದ್ವಿತೀಯ ಪಿಯುಸಿ ತರಗತಿಗಳನ್ನು ಮಾತ್ರ ಆರಂಭಿಸಲಾಗಿದೆ.