ಸಿಇಟಿಯಲ್ಲೂ ಹಿಜಾಬ್ ನಿಷೇಧ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆದೇಶ!
ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಜೂ.16ರಿಂದ 18ರವರೆಗೆ ನಡೆಸುವ ಸಿಇಟಿ ಪರೀಕ್ಷೆಗೂ ಹಿಜಾಬ್ ಸೇರಿದಂತೆ ಕಿವಿ ಮತ್ತು ತಲೆ ಮುಚ್ಚುವಂತಹ ಯಾವುದೇ ವಸ್ತ್ರಗಳನ್ನು ಧರಿಸಿ ಬರುವಂತಿಲ್ಲ.
ಬೆಂಗಳೂರು (ಜೂ.04): ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಜೂ.16ರಿಂದ 18ರವರೆಗೆ ನಡೆಸುವ ಸಿಇಟಿ ಪರೀಕ್ಷೆಗೂ ಹಿಜಾಬ್ ಸೇರಿದಂತೆ ಕಿವಿ ಮತ್ತು ತಲೆ ಮುಚ್ಚುವಂತಹ ಯಾವುದೇ ವಸ್ತ್ರಗಳನ್ನು ಧರಿಸಿ ಬರುವಂತಿಲ್ಲ.
ನೀಟ್ ಪರೀಕ್ಷೆಗೆ ಇರುವ ಮಾರ್ಗಸೂಚಿಗಳನ್ನೇ ಅನುಸರಿಸಿ ಸಿಇಟಿ ಪರೀಕ್ಷೆ ನಡೆಸಲು ಮುಂದಾಗಿರುವ ಕೆಇಎ ಈ ಸಂಬಂಧ ಈಗಾಗಲೇ ವಿದ್ಯಾರ್ಥಿಗಳ ಪ್ರವೇಶ ಪತ್ರದಲ್ಲೇ ಪರೀಕ್ಷಾ ಕೇಂದ್ರಗಳಿಗೆ ಯಾವ ರೀತೀಯ ಉಡುಪು, ವಸ್ತುಗಳನ್ನು ನಿಷೇಧಿಸಲಾಗಿದೆ ಎಂಬ ಮಾಹಿತಿ ನೀಡಿದೆ. ಅದರಂತೆ ವಸ್ತ್ರಸಂಹಿತೆಯ ವಿಚಾರದಲ್ಲಿ ಟೋಪಿ ಸೇರಿದಂತೆ ತಲೆ ಮತ್ತು ಕಿವಿಯನ್ನು ಮುಚ್ಚುವಂತಹ ಉಡುಪು ಧರಿಸುವಂತಿಲ್ಲ ಎಂದು ತಿಳಿಸಲಾಗಿದೆ. ಹಿಜಾಬ್ ಕೂಡ ಇದೇ ವರ್ಗದಲ್ಲಿ ಬರುವುದರಿಂದ ಅದನ್ನು ಧರಿಸಿ ಬರುವಂತಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Hijab Row; ಎರಡು ದಿನ ಗಡುವು, ಸಮನ್ವಯ ಸಮಿತಿ ಹೆಸರಲ್ಲಿ ಫೀಲ್ಡಿಗಿಳಿತಾ ಸಿಎಫ್ಐ?
ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ರಮ್ಯಾ ಅವರು, ‘ಪರೀಕ್ಷಾ ಅಕ್ರಮಗಳಿಗೆ ಅವಕಾಶವಾಗದಂತೆ ತಡೆಯಲು ಹಲವು ಮಾರ್ಗಸೂಚಿಗಳನ್ನು ನೀಡಲಾಗಿದೆ. ಅದರಲ್ಲಿ ತಲೆ ಮತ್ತು ಕಿವಿಯನ್ನು ಮುಚ್ಚುವಂತಹ ಉಡುಪು ಧರಿಸುವಂತಿಲ್ಲ ಎಂಬುದು ಕೂಡ ಒಂದು. ಹಿಜಾಬ್ ಕೂಡ ತಲೆ ಮತ್ತು ಕಿವಿಯನ್ನು ಮುಚ್ಚುವಂತೆ ಧರಿಸುವ ಉಡುಪು ಆಗಿರುವುದರಿಂದ ಅದನ್ನೂ ಧರಿಸಿ ಬರುವಂತಿಲ್ಲ. ಆದರೆ, ಇದನ್ನು ಯಾವುದೇ ಧಾರ್ಮಿಕ ಉಡುಪು ಎನ್ನುವ ಕಾರಣಕ್ಕೆ ನಿಷೇಧಿಸಿಲ್ಲ. ಟೋಪಿ ಸೇರಿದಂತೆ ತೆಲೆ ಮತ್ತು ಕಿವಿ ಮುಚ್ಚುವ ಯಾವ ಉಡುಪನ್ನೇ ಧರಿಸುವಂತಿಲ್ಲ’ ಎಂದು ಹೇಳಿದರು.
ಅಲ್ಲದೆ, ಪ್ರತಿ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿಗಳು ಯಾವುದೇ ರೀತಿಯ ಆಭರಣ ಅಥವಾ ಒಡವೆಗಳನ್ನು ಧರಿಸಿ ಪರೀಕ್ಷೆಗೆ ಬರುವಂತಿಲ್ಲ. ಜತೆಗೆ ವಾಚ್, ಕ್ಯಾಲ್ಕುಲೇಟರ್, ಬ್ಲೂಟೂತ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ. ಮಾತ್ರವಲ್ಲ ಇದೇ ಮೊದಲ ಬಾರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಹಾಗೂ ಮೆಟಲ್ ಡಿಟೆಕ್ಟರ್‌ಗಳನ್ನು ಕೂಡ ಅಳವಡಿಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಹಿಜಾಬ್ ಹಾಕಿಕೊಂಡು ಶಾಲೆಗೆ ಬರುವಂತಿಲ್ಲ: ಸಚಿವ ನಾಗೇಶ
ಪರೀಕ್ಷೆಯಲ್ಲಿ ಭಾರೀ ಕಟ್ಟೆಚ್ಚರ: ಸಿಇಟಿಯಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಪ್ರತೀ ವರ್ಷದಂತೆ ಪರೀಕ್ಷಾ ಕೇಂದ್ರದ ಸುತ್ತ 144 ಸೆಕ್ಷನ್ ಜಾರಿಯಲ್ಲರುತ್ತದೆ. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲ ಜೆರಾಕ್ಸ್ ಅಂಗಡಿಗಳನ್ನು ತೆರೆಯದಂತೆ ಆದೇಶ ಹೊರಡಿಸಲಾಗಿದೆ. ಈ ಬಾರಿ ಒಟ್ಟು 2.11 ಲಕ್ಷ ವಿದ್ಯಾರ್ಥಿಗಳು ಸಿಇಟಿಗೆ ನೋಂದಾಯಿಸಿಕೊಂಡಿದ್ದು ಇದರಲ್ಲಿ 1.4 ಲಕ್ಷ ಪುರುಷರು ಹಾಗೂ 1.7 ಲಕ್ಷ ಮಹಿಳಾ ವಿದ್ಯಾರ್ಥಿಗಳಾಗಿದ್ದಾರೆ.