ಹೆಬ್ಬುಲಿ ಹೇರ್ ಕಟ್ ಮಾಡಿಸಿದವರಿಗಿಲ್ಲ ಶಾಲೆ ಪ್ರವೇಶ; ಶಿಸ್ತು ತರಲು ಶಾಪ್ ಮಾಲೀಕರಿಗೆ ಮುಖ್ಯಶಿಕ್ಷಕರ ಪತ್ರ!
ಮಕ್ಕಳಿಗೆ ‘ಹೆಬ್ಬುಲಿ’ ಸ್ಟೈಲ್ ಕಟಿಂಗ್ ಮಾಡದಂತೆ ಪ್ರೌಢಶಾಲೆ ಶಿಕ್ಷಕರೊಬ್ಬರು ಹೇರ್ ಕಟಿಂಗ್ ಶಾಪ್ ಮಾಲೀಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಈಗ ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಶಿಕ್ಷಣ ಇಲಾಖೆ ಮತ್ತು ವಿದ್ಯಾರ್ಥಿ-ಪಾಲಕರ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ಬಾಗಲಕೋಟೆ (ಜು.23) : ಸಾಮಾನ್ಯವಾಗಿ ಶಾಲೆಗೆ ಹೋಗುವ ಮಕ್ಕಳು ವಿದ್ಯಾರ್ಥಿಗಳ ರೂಪದಲ್ಲಿ ಹೇರ್ ಕಟ್ ಮಾಡಿಸಿ ಶಾಲೆಗೆ ಹೋಗಿ ಕಲಿಯೋದು ಪದ್ಧತಿ. ಆದ್ರೆ ಇಲ್ಲೊಂದು ಪ್ರೌಢಶಾಲೆಯಲ್ಲಿ ಬಹುತೇಕ ಮಕ್ಕಳು ಹೆಬ್ಬುಲಿ ಮಾದರಿ ಹೇರ್ ಕಟ್ ಮಾಡಿಸಿಕೊಂಡು ಶಾಲೆಗೆ ಬರುತ್ತಿರೋದ್ರಿಂದ ಇದಕ್ಕೆ ಬ್ರೇಕ್ ಹಾಕಲು ಶಾಲಾ ಮುಖ್ಯೋಪಾಧ್ಯಾಯರೊಬ್ಬರು ಮುಂದಾಗಿದ್ದಾರೆ. ಹಾಗಾದ್ರೆ ಅಲ್ಲಿ ಆಗಿದ್ದಾದ್ರೂ ಏನು? ಹೆಬ್ಬುಲಿ ಹೇರಕಟ್ ಬಂದ್ ಮಾಡಿಸೋಕೆ ಹೆಡ್ ಮಾಸ್ಟರ್ ಮಾಡಿದ್ದಾದ್ರೂ ಏನು ಗೊತ್ತಾ?
ಬಾಗಲಕೋಟೆ ಜಿಲ್ಲೆಯ ಕುಲಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಗ್ಗೆ. ಅಂದಹಾಗೆ ಈ ಗ್ರಾಮದಲ್ಲಿನ ಮಕ್ಕಳು ಸರ್ಕಾರಿ ಪ್ರೌಢಶಾಲೆಗೆ ಬರಬೇಕಾದರೆ ಸಾಮಾನ್ಯವಾಗಿ ವಿದ್ಯಾರ್ಥಿಗಳ ಮಾದರಿ ಹೇರ್ ಕಟ್ ಮಾಡಿಸಿದರೆ ತೊಂದರೆ ಇರುತ್ತಿರಲಿಲ್ಲ, ಆದ್ರೆ ಇತ್ತೀಚಿನ ದಿನಗಳಲ್ಲಿ ಇಲ್ಲಿನ ಪ್ರೌಢಶಾಲೆಯ ವಿದ್ಯಾರ್ಥಿಗಳು ಬಹುತೇಕರು ಹೆಬ್ಬುಲಿ ಮಾದರಿಯ ಹೇರ್ ಕಟ್ ಮಾಡಿಸಿಕೊಂಡು ಶಾಲೆಗೆ ಬರೋಕೆ ಶುರು ಮಾಡಿದ್ರು. ಇದರಿಂದ ಶಾಲೆಯಲ್ಲಿ ಅಶಿಸ್ತು ಕಾಣಿಸಿಕೊಳ್ಳುವ ಸಂದರ್ಭ ಎದುರಾಯಿತು. ಇದಕ್ಕೆ ಏನಾದ್ರೂ ಮಾಡಬೇಕು ಅಂತ ಮುಖ್ಯೋಪಾಧ್ಯಾಯರು ವಿಚಾರ ಮಾಡಲು ಮುಂದಾದ್ರು. ಆಗ ಹೊಳೆದಿದ್ದೇ ಗ್ರಾಮದ ಎಲ್ಲಾ ಕ್ಷೌರಿಕ ಅಂಗಡಿಗಳಿಗೆ ಪತ್ರ ಬರೆಯುವ ವಿಚಾರ.
ಹೆಬ್ಬುಲಿ ಹೇರ್ ಕಟ್ ಮಾಡಿಸಿದ ಮಕ್ಕಳಿಗಿಲ್ಲ ಶಾಲೆಗೆ ಎಂಟ್ರಿ: ಹೆಡ್ ಮಾಸ್ಟರ್ ಆದೇಶಕ್ಕೆ ಮಕ್ಕಳು ಕಂಗಾಲು..!
ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಿಂದಲೇ ಹೆಬ್ಬುಲಿ ಹೇರ್ ಕಟ್ ಬ್ರೇಕ್ ಮಾಡಲು ಗ್ರಾಮದ ಕ್ಷೌರಿಕ ಅಂಗಡಿಗಳಿಗೆ ಪತ್ರ.
ಹೌದು, ಕುಲಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ(Kulahalli Govt High School)ಯ ಮುಖ್ಯೋಪಾಧ್ಯಾಯ ಶಿವಾಜಿ ನಾಯಕ್ ಅವರು ಶಾಲೆಯಲ್ಲಿ ಸಭೆಯೊಂದನ್ನ ಆಯೋಜನೆ ಮಾಡಿದರು. ಈ ಸಭೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು, ಮಕ್ಕಳ ಪಾಲಕರು ಸಹ ಭಾಗಿಯಾಗಿದ್ದರು. ಈ ವೇಳೆ ಮಕ್ಕಳು ಶಾಲೆಗೆ ಹೆಬ್ಬುಲಿ ಮಾದರಿಯ ಹೇರ್ ಕಟಿಂಗ್ ಮಾಡಿಸಿಕೊಂಡು ಬಂದ ಬಗ್ಗೆ ಚರ್ಚೆ ಮಾಡಿದರು. ಈ ರೀತಿ ಹೆಬ್ಬುಲಿ ಮಾದರಿಯ ಹೇರ ಕಟ್ ಮಾಡಿಸುವುದರಿಂದ ಒಂದೆಡೆ ಅಶಿಸ್ತು ಕಂಡು ಬರುತ್ತೆ ಮತ್ತೊಂದೆಡೆ ವಿದ್ಯಾರ್ಥಿಗಳ ಕಲಿಕೆಗೆ ಇಚ್ಚಾಶಕ್ತಿ ಕಡಿಮೆಯಾಗಿ ಕಲಿಕೆ ಕುಂಠಿತವಾಗುತ್ತೆ ಎಂಬ ವಿಷಯಗಳನ್ನ ಚರ್ಚೆ ಮಾಡಿದರು. ಇದರ ನಂತರ ಎಲ್ಲರ ಒಪ್ಪಿಗೆಯಿಂದ ನಿರ್ಧಾರ ಮಾಡಿ ಎಲ್ಲಾ ಕ್ಷೌರಿಕರ ಅಂಗಡಿಗಳಿಗೆ ಪತ್ರವೊಂದನ್ನು ಕಳಿಸಲು ನಿರ್ಧರಿಲಾಯಿತು. ಹೀಗಾಗಿ ಪಾಲಕರು ಸೇರಿದಂತೆ ಎಲ್ಲರ ಒಪ್ಪಿಗೆಯಂತೆ ಮುಖ್ಯೋಪಾಧ್ಯಾಯ ಶಿವಾಜಿ ನಾಯಕ್ ಎಲ್ಲಾ ಕ್ಷೌರಿಕರ ಅಂಗಡಿಗಳಿಗೆ ಪತ್ರ ಬರೆದರು.
ಗ್ರಾಮದ ಕ್ಷೌರಿಕ ಅಂಗಡಿಗಳಲ್ಲಿ ಶಾಲಾ ಮಕ್ಕಳ ಹೆಬ್ಬುಲಿ ಹೇರ್ ಕಟ್ ಗೆ ಬ್ರೇಕ್...
ಪ್ರೌಢಶಾಲೆಯಲ್ಲಿ ನಿರ್ಧಾರ ಮಾಡಿದಂತೆ ಎಲ್ಲಾ ಕ್ಷೌರಿಕರ ಅಂಗಡಿಗಳಿಗೆ ಪತ್ರಗಳು ಮುಟ್ಟಿದ್ದೇ ತಡ ಎಲ್ಲರೂ ಸಹಕಾರ ನೀಡಲು ಮುಂದಾದ್ರು. ಯಾರೇ ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ಬಳಿ ಬಂದಾಗ ಹೆಬ್ಬುಲಿ ಹೇರ್ ಕಟ್(hebbuli haircut) ಮಾಡದಿರಲು ಕ್ಷೌರಿಕರು ಮುಂದಾದ್ರು. ಈ ವೇಳೆ ವಿದ್ಯಾರ್ಥಿಗಳು ಒಪ್ಪಿದರೆ ಸರಿ, ಇಲ್ಲವಾದ್ರೆ ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸಬೇಕು ಇಲ್ಲವೆ ನೇರವಾಗಿ ನಮಗೆ ತಿಳಿಸಬೇಕು ಎಂದು ಮುಖ್ಯೋಪಾಧ್ಯಾಯರು ಪತ್ರ ಬರೆದರು.
ಶಾಲೆಯ ಫಲಿತಾಂಶದಲ್ಲಿ ಗಂಡು ಮಕ್ಕಳ ಉತ್ತೀರ್ಣ ಸಂಖ್ಯೆ ಕಡಿಮೆಯಾಗಿದ್ದಕ್ಕೆ ಹೆಬ್ಬುಲಿ ಹೇರ್ ಕಟಿಂಗ್ ಚಿಂತನೆ
ಇನ್ನು ಶಾಲೆಯಲ್ಲಿ ಹೆಬ್ಬುಲಿ ಹೇರ್ ಕಟಿಂಗ್ ಬ್ರೇಕ್ ಮಾಡಲು ಮತ್ತೊಂದು ಕಾರಣ ಅಂದ್ರೆ ಇತ್ತೀಚಿನ ವರ್ಷಗಳಲ್ಲಿ ಕುಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಫಲಿತಾಂಶದಲ್ಲಿ ಬಹುತೇಕವಾಗಿ ವಿದ್ಯಾರ್ಥಿನಿಯರ ಉತ್ತೀರ್ಣ ಸಂಖ್ಯೆ ಹೆಚ್ಚಾಗುತ್ತಾ ಹೋದರೆ ಇತ್ತ ವಿದ್ಯಾರ್ಥಿಗಳ ಉತ್ತೀರ್ಣದ ಸಂಖ್ಯೆ ಕಡಿಮೆಯಾಗುತ್ತಲೇ ಹೋಯಿತು. ಯಾಕೆಂದರೆ ವಿದ್ಯಾರ್ಥಿಗಳು ಕಲಿಕೆಯನ್ನು ಬಿಟ್ಟು ಹೆಬ್ಬುಲಿಯಂತಹ ಹೇರ್ ಕಟಿಂಗ್ ಮಾಡಿಸಿಕೊಳ್ಳುವ ಮೂಲಕ ಕೇವಲ ಸ್ಟೈಲಿಸ್ ಬದುಕಿಗೆ ಹೆಚ್ಚು ಆದ್ಯತೆ ನೀಡುತ್ತಾ ಓದಿನ ಬಗ್ಗೆ ನಿರಾಸಕ್ತಿ ತಾಳುತ್ತಾ ಬಂದರು. ಹೀಗಾಗಿ ಶಾಲಾ ಮಕ್ಕಳನ್ನ ಸ್ಟೈಲಿಸ್ ಬದುಕಿನಿಂದ ದೂರವಿಟ್ಟು ಓದಿನ ಕಡೆಗೆ ಹೆಚ್ಚು ಗಮನ ಹರಿಸಬೇಕೆಂಬ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಯಿತು ಮತ್ತು ಇಂತಹ ನಿರ್ಧಾರಗಳನ್ನ ತೆಗೆದುಕೊಂಡು ಶಾಲೆಯಲ್ಲಿ ಮಕ್ಕಳ ಓದಿಗೆ ಇನ್ನಷ್ಟು ಪ್ರಯತ್ನಪಡಲು ಎಲ್ಲರೂ ಪ್ರಯತ್ನಿಸಬೇಕು ಅಂತಾರೆ ಎಸ್.ಡಿ.ಎಂ.ಸಿ ಸದಸ್ಯ ಬಂದೇನವಾಜ್.
ಪುಟ್ಟ ಮಗುವಿನ ಹೇರ್ ಕಟ್ಟಿಂಗ್‌ಗೆ ಅಮ್ಮ ಮಾಡಿದ ಸ್ಮಾರ್ಟ್ ಐಡಿಯಾ ವೈರಲ್
ಒಟ್ಟಿನಲ್ಲಿ ಶಾಲಾ ಮಕ್ಕಳಲ್ಲಿ ಶಿಸ್ತು ಸಂಯಮದ ಜೊತೆಗೆ ಕಲಿಕೆಯನ್ನು ಹೆಚ್ಚಿಸಬೇಕೆನ್ನುವ ಕಾರಣಕ್ಕಾಗಿ ಪಾಲಕರು , ಎಸ್.ಡಿ.ಎಂ.ಸಿ ಸದಸ್ಯರ ಒಪ್ಪಿಗೆಯ ಮೇರೆಗೆ ಮುಖ್ಯೋಪಾಧ್ಯಾಯರು ಹೆಬ್ಬುಲಿ ಹೇರ್ ಕಟ್ ಗೆ ಬ್ರೇಕ್ ಹಾಕಲು ಕ್ಷೌರಿಕ ಅಂಗಡಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದು ಎಲ್ಲರ ಗಮನ ಸೆಳೆದಿದ್ದು, ಇದು ಮುಂದೆ ಯಾವ ರೀತಿ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತೆ ಅಂತ ಕಾದು ನೋಡಬೇಕಿದೆ..