10 ಲಕ್ಷ ಕೊಡಿ ಪೇಪರ್ ಖಾಲಿ ಬಿಡಿ : ನೀಟ್ ಆಕಾಂಕ್ಷಿಗಳಿಗೆ ಶಿಕ್ಷಕನ ಆಮಿಷ, ಎಫ್‌ಐಆರ್ ದಾಖಲು
ಆರೋಪಿಗಳು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್ ಯುಜಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕಿದ್ದ 6 ಅಭ್ಯರ್ಥಿಗಳ ಬಳಿ ಈ ಆರೋಪಿಗಳು 10 ಲಕ್ಷ ನೀಡಿ ಪರೀಕ್ಷಾ ಪತ್ರಿಕೆಯನ್ನು ಖಾಲಿ ಬಿಡಿ, ಉಳಿದಿದ್ದು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿ ಪರೀಕ್ಷಾ ಅಕ್ರಮ ನಡೆಸಲು ಮುಂದಾಗಿದ್ದರು.
ಗೋಧ್ರಾ: ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿ ನಡೆಸಲು ಬಯಸುವ ಆಕಾಂಕ್ಷಿಗಳಿಗೆ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವುದಕ್ಕಾಗಿ ನಡೆಸಲ್ಪಡುವ ಎನ್‌ಇಇಟಿ ಪರೀಕ್ಷೆ ಬಹಳ ಕಠಿಣವಾಗಿದ್ದು, ವಿದ್ಯಾರ್ಥಿಗಳು ಈ ಪರೀಕ್ಷೆ ಪಾಸ್ ಮಾಡುವುದಕ್ಕಾಗಿ ರಾತ್ರಿ ಹಗಲೆನ್ನದೇ ಹಗಲಿರುಳು ನಿದ್ದೆಗೆಟ್ಟು ನೆಮ್ಮದಿ ಬಿಟ್ಟು ಓದುತ್ತಿರುತ್ತಾರೆ. ಹೀಗಿರುವಾಗ ಈ ಪರೀಕ್ಷಾರ್ಥಿಗಳ ಬಳಿ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು ಪರೀಕ್ಷೆ ಪಾಸ್ ಮಾಡುತ್ತೇನೆ ಎಂದು ಆಮಿಷವೊಡ್ಡಿದ್ದ ಪ್ರಕರಣವೊಂದು ಗುಜರಾತ್‌ನ ಗೋಧ್ರಾದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಈಗ ಶಾಲಾ ಶಿಕ್ಷಕನೋರ್ವ ಹಾಗೂ ಮತ್ತಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್ ಯುಜಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕಿದ್ದ 6 ಅಭ್ಯರ್ಥಿಗಳ ಬಳಿ ಈ ಆರೋಪಿಗಳು 10 ಲಕ್ಷ ನೀಡಿ ಪರೀಕ್ಷಾ ಪತ್ರಿಕೆಯನ್ನು ಖಾಲಿ ಬಿಡಿ, ಉಳಿದಿದ್ದು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿ ಪರೀಕ್ಷಾ ಅಕ್ರಮ ನಡೆಸಲು ಮುಂದಾಗಿದ್ದರು. ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾದಲ್ಲಿ ಈ ಘಟನೆ ನಡೆದಿದೆ. ಗೋಧ್ರಾದ ಶಾಲೆಯೊಂದರಲ್ಲಿ ಕಳೆದ ಭಾನುವಾರ ನೀಟ್-ಯುಜಿ ಪ್ರವೇಶ ಪರೀಕ್ಷೆ ನಡೆದಿತ್ತು. ಇಲ್ಲಿ ಕೆಲವು ವ್ಯಕ್ತಿಗಳು ಅವ್ಯವಹಾರದಲ್ಲಿ ತೊಡಗಿದ್ದಾರೆ ಎಂಬ ಸುಳಿವು ಜಿಲ್ಲಾಧಿಕಾರಿಗೆ ಸಿಕ್ಕಿದ ಹಿನ್ನೆಲೆಯಲ್ಲಿ ಪ್ರಕರಣ ಬಯಲಾಗಿದೆ ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ.
ಗೋಧ್ರಾದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯ ಉಪ ಅಧೀಕ್ಷಕನಾಗಿದ್ದ ತುಷಾರ್ ಭಟ್ ಎಂಬ ಭೌತಶಾಸ್ತ್ರ ಶಿಕ್ಷಕ ಹಾಗೂ ಆತನ ಜೊತೆ ಇದ್ದ ಪರಶುರಾಮ್ ರಾಯ್ ಮತ್ತು ಆರಿಫ್ ವೋರಾ ಎಂಬುವವರ ವಿರುದ್ಧ ಈಗ ಎಫ್‌ಐಆರ್ ದಾಖಲಾಗಿದೆ. ಜೊತೆಗೆ ನೀಟ್ ಪರೀಕ್ಷಾರ್ಥಿಯೊಬ್ಬರು ನೀಡಿದ 7 ಲಕ್ಷ ಮುಂಗಡ ನಗದನ್ನು ತುಷಾರ್ ಭಟ್ ಅವರ ಕಾರಿನಿಂದ ವಶಕ್ಕೆ ಪಡೆಯಲಾಗಿದೆ. ಈ ಹಣವನ್ನು ಆರೀಫ್ ವೋರಾ ತುಷಾರ್ ಭಟ್‌ಗೆ ಮುಂಗಡವಾಗಿ ಪಾವತಿ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
5 ವರ್ಷ ಮನೆಗೆ ಮರಳಲ್ಲ: ನೀಟ್ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ಪರಾರಿ
ಈ ಪರೀಕ್ಷಾ ಅಕ್ರಮ ನಡೆಸಲು ಮುಂದಾದ ಆರೋಪಿಗಳು ಮತ್ತು ಕೆಲವು ಎನ್‌ಇಇಟಿ ಯುಜಿ ಆಕಾಂಕ್ಷಿಗಳ ನಡುವೆ ನಡೆದ ಮಾತುಕತೆಯಂತೆ ಉತ್ತರ ಗೊತ್ತಿಲ್ಲದ ಪ್ರಶ್ನೆಗಳನ್ನು ಖಾಲಿ ಬಿಡುವಂತೆ ಹೇಳಲಾಯಿತು. ಪರೀಕ್ಷಾರ್ಥಿಗಳು ಖಾಲಿ ಬಿಟ್ಟ ಜಾಗದಲ್ಲಿ ಆರೋಪಿಗಳು ಉತ್ತರ ಬರೆದು ಪೇಪರ್ ಅಂತಿಮಗೊಳಿಸುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಶಿಕ್ಷಣಾಧಿಕಾರಿಗಳ ದೂರಿನ ಮೇರೆಗೆ ಗೋಧ್ರಾ ತಾಲೂಕು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅದರಲ್ಲಿರುವಂತೆ ಆರೋಫಿ ತುಷಾರ್ ಭಟ್ ಅವರು ಜೈ ಜಲರಾಮ್ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ನೀಟ್ ಪರೀಕ್ಷಾ ಕೇಂದ್ರದ ಅಧೀಕ್ಷಕರಾಗಿ ನೇಮಕಗೊಂಡಿದ್ದರು.
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿಗಳ ತಂಡ ಪರೀಕ್ಷೆಯ ದಿನವೇ ಶಾಲೆಗೆ ಆಗಮಿಸಿ ಆರೋಪಿ ತುಷಾರ್ ಭಟ್ ಅವರನ್ನು ವಿಚಾರಣೆಗೊಳಪಡಿಸಿದೆ. ಅಧಿಕಾರಿಗಳು ತುಷಾರ್ ಅವರ ಮೊಬೈಲ್ ಫೋನ್ ಪರಿಶೀಲಿಸಿದಾಗ, 16 ಅಭ್ಯರ್ಥಿಗಳ ಹೆಸರು, ರೋಲ್ ಸಂಖ್ಯೆಗಳು ಮತ್ತು ಪರೀಕ್ಷಾ ಕೇಂದ್ರಗಳ ಪಟ್ಟಿ ಅದರಲ್ಲಿರುವುದು ಕಂಡು ಬಂದಿದೆ. ಅದನ್ನು ಸಹ ಆರೋಪಿ ರಾಯ್ ಈ ವಿವರವನ್ನು ತುಷಾರ್ ಭಟ್ ಅವರ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿದ್ದ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ನೀಟ್ ವಿದ್ಯಾರ್ಥಿಯನ್ನು ಬೆತ್ತಲು ಮಾಡಿ, ಖಾಸಗಿ ಅಂಗಕ್ಕೆ ಇಟ್ಟಿಗೆ ಕಟ್ಟಿ ಬರ್ಬರ ಕೃತ್ಯ!
ಈ ವಿವರದ ಬಗ್ಗೆ ಮಾಹಿತಿ ಕೇಳಿದಾದ ಇದು ತಾನಿದ್ದ ಕೇಂದ್ರದಲ್ಲಿ ನೀಟ್ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳು ಎಂದು ಹೇಳಿದ್ದಾರೆ. ಈ ಪೈಕಿ ಆರು ಅಭ್ಯರ್ಥಿಗಳ ಪ್ರಶ್ನೆ ಪತ್ರಿಕೆಗಳಲ್ಲಿ ಉತ್ತರ ಬರೆಯಲು ತಲಾ 10 ಲಕ್ಷ ನೀಡುವುದಾಗಿ ಅಭ್ಯರ್ಥಿಗಳು ಭರವಸೆ ನೀಡಿರುವುದಾಗಿ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಕಿರೀಟ್ ಪಟೇಲ್ ತಿಳಿಸಿದ್ದಾರೆ. ಇವರಲ್ಲಿ ಓರ್ವ ಆಕಾಂಕ್ಷಿ ಈಗಾಗಲೇ 7 ಲಕ್ಷ ರೂಪಾಯಿ ಪಾವತಿ ಮಾಡಿದ್ದ ಅದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರ ಜೊತೆ ಆರೋಪಿ ಶಿಕ್ಷಕನ ಮೊಬೈಲ್ ಫೋನ್ ಅನ್ನು ಕೂಡ ವಶಕ್ಕೆ ಪಡೆಯಲಾಗಿದೆ.