ನೀಟ್ ವಿದ್ಯಾರ್ಥಿಯನ್ನು ಬೆತ್ತಲು ಮಾಡಿ, ಖಾಸಗಿ ಅಂಗಕ್ಕೆ ಇಟ್ಟಿಗೆ ಕಟ್ಟಿ ಬರ್ಬರ ಕೃತ್ಯ!
ಕಾನ್ಪುರದಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಅವರ ಸ್ನೇಹಿತರೇ ಚಿತ್ರಹಿಂಸೆ ನೀಡಿದ್ದಾರೆ. ಅವರನ್ನು ಬೆಂಕಿಯಿಂದ ಸುಟ್ಟಿದ್ದಲ್ಲದೆ, ಕೊಠಡಿಯಲ್ಲಿ ಒತ್ತೆಯಾಳಾಗಿಟ್ಟು, ವಿವಸ್ತ್ರಗೊಳಿಸಿ ಅಮಾನುಷವಾಗಿ ಥಳಿಸಿದ್ದಾರೆ. ಖಾಸಗಿ ಅಂಗಕ್ಕೆ ಇಟ್ಟಿಗೆಯನ್ನು ಕಟ್ಟಿ ಬರ್ಬರ ಕೃತ್ಯ ಎಸಗಿದ್ದಾರೆ.
ನವದೆಹಲಿ (ಮೇ.7): ಉತ್ತರ ಪ್ರದೇಶದ ಕಾನ್ಪುರದಿಂದ ಅತ್ಯಂತ ಆಘಾತಕಾರಿ ಕೃತ್ಯದ ಸುದ್ದಿ ವರದಿಯಾಗಿದೆ. ಅಲ್ಲಿನ ನೀಟ್ ವಿದ್ಯಾರ್ಥಿಗಳ ಮೇಲೆ ಅತ್ಯಂತ ಅಮಾನುಷವಾಗಿ ಅವರ ಸ್ನೇಹಿತರೇ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಚಿತ್ರಹಿಂಸೆ ನೀಡಬೇಡಿ ಎಂದು ಅವರು ಕಿರುಚುತ್ತಲೇ ಇದ್ದರೂ, ಸ್ನೇಹಿತರ ಹೃದಯ ಮಾತ್ರ ಕರಗಿಲ್ಲ. ಈ ಪ್ರಕರಣದ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಹಿತಿಯ ಪ್ರಕಾರ, ಪಾಂಡುನಗರದಲ್ಲಿ ವಾಸವಾಗಿರುವ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಆದರೆ. ಆನ್‌ಲೈನ್ ಗೇಮ್‌ನಲ್ಲಿ ಕಳೆದುಕೊಂಡ ಹಣದ ವಿವಾದಕ್ಕೆ ಸಂಬಂಧಪಟ್ಟಂತೆ ಸಹ ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸಿ ಒತ್ತೆಯಾಳಾಗಿಟ್ಟುಕೊಂಡು ತೀವ್ರವಾಗಿ ಥಳಿಸಿದ್ದಾರೆ. ವೆಲ್ಟಿಂಗ್ ಮಾಡುವ ಸುಡುವ ಗನ್‌ನಿಂದ ಅವರ ಮುಖಕ್ಕೆ ಬೆಂಕಿ ತಾಕಿಸಿ ಚಿತ್ರಹಿಂಸೆ ನೀಡಲಾಗಿದೆ. ಬಳಿಕ ಅವರ ಬಟ್ಟೆಯನ್ನು ಬಿಚ್ಚಿ ದೇಹದ ಖಾಸಗಿ ಭಾಗಕ್ಕೆ ಇಟ್ಟಿಗೆಯನ್ನು ಕಟ್ಟಿ ಹಾಕಲಾಗಿದೆ. ಬೀಭತ್ಸ ಕೃತ್ಯ ಎಸಗಿದ್ದಲ್ಲದೆ, ಅದರ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದು, ಇತರರ ಶೋಧ ಕಾರ್ಯ ನಡೆಯುತ್ತಿದೆ.
ಇಟಾವಾ ಜಿಲ್ಲೆಯ ಲವ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಪೆಟ್ರೋಲ್ ಪಂಪ್ ಕೆಲಸಗಾರನ 17 ವರ್ಷದ ಪುತ್ರ ಏಪ್ರಿಲ್ 18 ರಂದು ಪಾಂಡುನಗರ ಗ್ರಾಮದ ಯುವಕರನ್ನು ಭೇಟಿಯಾಗಲು ಬಂದಿದ್ದ. ಇಲ್ಲಿ ಗೆಳೆಯರೊಂದಿಗೆ ಬೆಟ್ ಕಟ್ಟಿ ಆನ್ ಲೈನ್ ಏವಿಯೇಟರ್ ಗೇಮ್ ಆಡಿ, ಅದರಲ್ಲಿ 20 ಸಾವಿರ ರೂಪಾಯಿ ಕಳೆದುಕೊಂಡಿದ್ದ. ಯುವಕರು ಹಣ ಕೇಳಿದಾಗ ನಂತರ ಕೊಡುವುದಾಗಿ ಹೇಳಿದ್ದರು.
ಇದಾಗಿ ಎರಡು ದಿನವಾದ ಬಳಿಕವೂ ವಿದ್ಯಾರ್ಥಿಗಳು ಹಣ ನೀಡದೇ ಇದ್ದಾಗ ಅವರ ರೂಮ್‌ನಲ್ಲಿಯೇ ಇಬ್ಬರನ್ನೂ ಒತ್ತೆಯಾಳಾಗಿಟ್ಟುಕೊಂಡು ವಿವಸ್ತ್ರಗೊಳಿಸಲಾಗಿದೆ. ಅಲ್ಲಿಗೂ ಅವರ ಕ್ರೌರ್ಯ ನಿಂತಿರಲಿಲ್ಲ. ಇಟ್ಟಿಗೆಗೆ ಹಗ್ಗ ಕಟ್ಟಿ ಅದನ್ನು ವಿದ್ಯಾರ್ಥಿಗಳ ಖಾಸಗಿ ಭಾಗಕ್ಕೆ ಕಟ್ಟಿದ್ದರು. ಹಾಗೇನಾದರೂ ಶೀಘ್ರದಲ್ಲಿ ಹಣವನ್ನು ವಾಪಾಸ್ ನೀಡದೇ ಇದ್ದಲ್ಲಿ, ಈ ವಿಡಿಯೋವನ್ನು ವೈರಲ್ ಮಾಡುವ ಷರತ್ತಿನೊಂದಿಗೆ ಒಬ್ಬ ವಿದ್ಯಾರ್ಥಿಯನ್ನು ಬಿಡುಗಡೆ ಮಾಡಲಾಗಿತ್ತು.
ಹಾಗಿದ್ದರೂ ಹಣ ನೀಡದ ಕಾರ ಣದಿಂದ ವಿಡಿಯೋವನ್ನು ವೈರಲ್ ಮಾಡಲಾಗಿದೆ. ಈ ವಿಡಿಯೋ ಪೊಲೀಸರ ಗಮನಕ್ಕೂ ಬಂದಿದ್ದು, ಇಬ್ಬರು ಆರೋಪಿ ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಇತರ ನಾಲ್ಕೈದು ವಿದ್ಯಾರ್ಥಿಗಳ ಹುಡುಕಾಟದಲ್ಲಿ ತಂಡಗಳು ತೊಡಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋವನ್ನು ಐದು ಭಾಗಗಳಾಗಿ ಕತ್ತರಿಸಿ ವೈರಲ್ ಮಾಡಲಾಗಿದೆ. ಇದರಲ್ಲಿ, ಅವರೊಂದಿಗೆ ಮಾತನಾಡಲು, ಹಣದ ವ್ಯವಹಾರಗಳ ಬಗ್ಗೆ ಮಾತನಾಡಲು, ನಂತರ ಸಹೋದರಿ, ತಂದೆ, ಸಹೋದರ ಮತ್ತು ಇತರ ಕುಟುಂಬದ ಸದಸ್ಯರಲ್ಲಿ ಹಣವನ್ನು ಕೇಳುವ ವಿಡಿಯೋ ಇದೆ. ಮತ್ತೊಂದು ವೀಡಿಯೊದಲ್ಲಿ, ಹಣ ನೀಡಲು ವಿದ್ಯಾರ್ಥಿ ನಿರಾಕರಿಸಿದ ಬಳಿಕ ಆತನನ್ನು ವಿವಸ್ತ್ರ ಮಾಡಿ ಹಲ್ಲೆ ಮಾಡುವುದಲ್ಲದೆ, ಮುಖಕ್ಕೆ ವೆಲ್ಡಿಂಗ್ ಮಷಿನ್‌ನಿಂದ ಸುಡುತ್ತಾರೆ. ನಂತರ ಅವರ ಖಾಸಗಿ ಅಂಗಕ್ಕೆ ಇಟ್ಟಿಗೆಯನ್ನು ಕಟ್ಟುವುದು ದಾಖಲಾಗಿದೆ.
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಸಿಡಿ ಕೇಸ್‌ನ ಕಥಾ ನಾಯಕ ಕಾಂಗ್ರೆಸ್‌ನ ಡಿಕೆಶಿ?
ಅಮಾನವೀಯತೆಗೆ ಬಲಿಯಾದ ವಿದ್ಯಾರ್ಥಿ ಪೊಲೀಸರ ಮುಂದೆಯೂ ಬಾಯಿ ತೆರೆಯಲು ಹೆದರುವಷ್ಟು ಭಯಭೀತನಾಗಿದ್ದಾನೆ. ತನ್ನನ್ನು ಬಿಟ್ಟುಬಿಡಿ ಎಂದು ಪದೇ ಪದೇ ಹೇಳುತ್ತಿದ್ದ. ಆ ಜನರ ವಿರುದ್ಧ ನಾನು ಏನಾದರೂ ಹೇಳಿದರೆ ಅವರು ನನ್ನನ್ನು ಬಿಡುವುದಿಲ್ಲ ಎನ್ನುತ್ತಿದ್ದ. ವಿದ್ಯಾರ್ಥಿಯ ದೇಹದಾದ್ಯಂತ ಗಾಯದ ಗುರುತುಗಳು ಕಂಡುಬಂದಿವೆ. ಆದರೆ, ಪೊಲೀಸರಿಂದ ಸಾಕಷ್ಟು ಮನವೊಲಿಕೆ ಮತ್ತು ಸಹಾಯದ ಭರವಸೆಯ ನಂತರ ಅವರು ದೂರು ದಾಖಲಿಸಿದ್ದಾರೆ. ವಿದ್ಯಾರ್ಥಿಗೆ ಥಳಿಸಿದ ರೀತಿ ಅಮಾನವೀಯ. ಗಂಭೀರ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳ ವಿಚಾರಣೆಯಿಂದ ಇಂತಹ ಘಟನೆ ಏಕೆ ನಡೆದಿದೆ ಎಂಬುದು ಗೊತ್ತಾಗಲಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹರೀಶ್ ಚಂದರ್ ಹೇಳಿದ್ದಾರೆ.