ಬಡ ಮಕ್ಕಳನ್ನ ಓದಿಸಲು ಗವಿಸಿದ್ಧ ನನ್ನ ಜೋಳಿಗೆಗೆ ಶಕ್ತಿ ಕೊಡಲಿ: ಕಣ್ಣೀರು ಹಾಕಿದ ಗವಿಮಠ ಶ್ರೀ
* 5 ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯಕ್ಕೆ ಭೂಮಿಪೂಜೆ
* ಎಲ್ಲ ಸಮಸ್ಯೆ ಶಿಕ್ಷಣವೇ ಶಾಶ್ವತ ಪರಿಹಾರ: ಆನಂದ್ ಸಿಂಗ್
* ವಿಶೇಷ ಅನುದಾನಕ್ಕೆ ಸಿಎಂಗೆ ಮನವಿ
ಕೊಪ್ಪಳ(ಜೂ.23): ದಾನ- ಧರ್ಮ ಮಾಡುವುದರಿಂದ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಬಹುದು. ಆದರೆ ಶಿಕ್ಷಣ ನೀಡುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು. ಗವಿಮಠದ ಆವರಣದಲ್ಲಿ ಗುರುವಾರ 5 ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮೊದಲ ಆದ್ಯತೆ ಶಿಕ್ಷಣಕ್ಕೆ ನೀಡಬೇಕು.
ಮಠ, ಸಂಘಟನೆಗಳು ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣ ದಿಂದ ಮಾತ್ರ ಬಡತನ ನಿರ್ಮೂಲನೆ ಆಗಲಿದೆ ಎಂದರು. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಗಳು ಗವಿಮಠದಲ್ಲಿ ಬೆಳೆದು ವಿದ್ಯಾಭ್ಯಾಸ ಮಾಡಿ ಮಠದ ಪೀಠಾಧಿಪತಿಯಾಗಿದ್ದಾರೆ. ತಾವು ಅನುಭವಿಸಿದ ಕಷ್ಟಗಳು ವಿದ್ಯಾರ್ಥಿಗಳಿಗೆ ಆಗಬಾರದು ಎಂದು ಸಂಕಲ್ಪ ಮಾಡಿದ್ದಾರೆ. ವಿದ್ಯಾರ್ಥಿ ನಿಲಯ ಕಟ್ಟಲು ಶ್ರೀಗಳ ಜೋಳಿಗೆಗೆ ಶಕ್ತಿ ನೀಡುತ್ತೇವೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಶ್ರೀಕೃಷ್ಣನ ಅವತಾರ: ಸಚಿವ ಶ್ರೀರಾಮುಲು
ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮರಿಶಾಂತವೀರ ಸ್ವಾಮೀಜಿ 16 ವರ್ಷ ಕಾಶಿಯಲ್ಲಿ ಆಯುರ್ವೇದ, ಸಂಸ್ಕೃತ ಹಾಗೂ ಯೋಗ ವಿದ್ಯಾಭ್ಯಾಸ ಮಾಡಿ ಕೊಪ್ಪಳ ಕ್ಕೆ ಮರಳಿದರು. ಶ್ರೀಗಳು ಊರೂರು ತಿರುಗಿ ಎರಡ್ಮೂರು ರೂಪಾಯಿ ಭಿಕ್ಷೆ ಭೇಡಿ ಮಕ್ಕಳಿಗೆ ಶಿಕ್ಷಣ ನೀಡಿದರು. ಆಗ ಇನ್ನು ಪ್ರಸಾದ ನಿಲಯ ಆರಂಭಿಸಿರಲಿಲ್ಲ. ಮಠಕ್ಕೆ ಬಂದ ಭಕ್ತರು ಮೀಸಲು ತುಪ್ಪದ ದೀಪ ಹಚ್ಚಿದರೆ ಮಕ್ಕಳು ಅದನ್ನು ತಿನ್ನುತ್ತಿದ್ದರು. ಭಕ್ತರು ಅಕ್ರೋಶಗೊಂಡು ಅಂತಹ ಮಕ್ಕಳನ್ನು ಮಠದಿಂದ ಕಳುಹಿಸಲು ತಿಳಿಸಿದ್ದರು. ಆಗ ಶ್ರೀಗಳು ನೀವು ಹಾರುವ ದೀಪಕ್ಕೆ ಮೀಸಲು ತುಪ್ಪ ಹಾಕಿದ್ದೀರಿ. ಈಗ ಅದು ಹಾರದ ದೀಪಕ್ಕೆ ಮೀಸಲಾಗಿದೆ ಎಂದು ತಿಳಿಸಿ ತಕ್ಷಣವೇ ಪ್ರಸಾದ ನಿಲಯ ಆರಂಭಿಸಿದರು ಎಂದು ಭಾವನಾತ್ಮಕ ವಾಗಿ ನುಡಿದರು.
ಗವಿಮಠದಲ್ಲಿ 2002-03ರಲ್ಲಿ 160 ಮಕ್ಕಳಿದ್ದ ಮಕ್ಕಳ ಸಂಖ್ಯೆ ಇತ್ತು. ಇದೀಗ 3500 ಕ್ಕೆ ಏರಿಕೆಯಾಗಿದೆ. ನಮ್ಮಲ್ಲಿ 2000 ಮಕ್ಕಳಿಗೆ ಉಚಿತ ವಸತಿ ಹಾಗೂ ಪ್ರಸಾದ ನಿಲಯವಿದೆ. ಉಳಿದವರಿಗೆ ಮಠದ ವಿವಿಧ ಹಾಲ್ ಗಳು ಹಾಗೂ ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೂ, 400 ಮಕ್ಕಳಿಗೆ ವಸತಿ ಕೊರತೆ ಇದೆ. ಇದರಿಂದಾಗಿ 5000 ಮಕ್ಕಳ ಉಚಿತ ವಸತಿ ಹಾಗೂ ಪ್ರಸಾದ ನಿಲಯಕ್ಕೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ ಎಂದರು.
ಜೋಳಿಗೆ ತುಂಬಲು ಭಗವಂತ ಶಕ್ತಿ ನೀಡಲಿ: ನಾನು ಬಡತನದಿಂದ ಬಂದಿದ್ದೇನೆ. ಗವಿಮಠ ಅನ್ನ, ಊಟ ಹಾಗೂ ಪುಸ್ತಕ ಕೊಟ್ಟು ಓದಿಸಿದೆ. ಮಕ್ಕಳು ವಿದ್ಯಾವಂತರಾಗಬೇಕು ಎಂಬ ದೃಷ್ಟಿಕೋನದಿಂದ ಮಠ ಕಾರ್ಯಾಚರಿಸುತ್ತಿದೆ. ಈ ನಿಟ್ಟಿನಲ್ಲಿ ನನ್ನ ಜೋಳಿಗೆ ಎಷ್ಟು ಶಕ್ತಿ ಇದೆ ಅಷ್ಟೂ ಮಕ್ಕಳನ್ನು ಓದಿಸಲಾಗುವುದು. ಗವಿಸಿದ್ಧ ನನ್ನ ಜೋಳಿಗೆಗೆ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕಣ್ಣೀರು ಹಾಕುವ ಮೂಲಕ ಭಾವನಾತ್ಮಕವಾಗಿ ನುಡಿದರು.
ವಿಶೇಷ ಅನುದಾನಕ್ಕೆ ಸಿಎಂಗೆ ಮನವಿ: ಗವಿಮಠ ಕೊಪ್ಪಳ ಕ್ಕೆ ಆಸ್ತಿಯಾಗಿದೆ. ಮಕ್ಕಳ ವಿದ್ಯಾಭಾಸದ ದೃಷ್ಟಿಯಿಂದ ಪಕ್ಷಾತೀತವಾಗಿ ಕೊಪ್ಪಳ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ನಿಯೋಗ ಸಿಎಂ ಬಳಿ ತೆರಳಿ ಮಠಕ್ಕೆ ವಿಶೇಷ ಅನುದಾನ ನೀಡಲು ಮನವಿ ಮಾಡಲಾಗುವುದು. ಸಚಿವ ಹಾಲಪ್ಪ ಆಚಾರ್ ಅವರ ನೇತೃತ್ವದಲ್ಲಿ ನಿಯೋಗ ಶೀಘ್ರವೇ ಹೋಗಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ಕೊಪ್ಪಳ: ಅಂಜನಾದ್ರಿ ಅಭಿವೃದ್ಧಿಗೆ ಭೂಮಿ ನೀಡಲ್ಲ, ರೈತರ ಆಕ್ರೋಶ
ದೇಣಿಗೆ ನೀಡಿದವರು:
* ಸಚಿವ ಆನಂದ್ ಸಿಂಗ್ 1.08 ಕೋಟಿ ರೂ. ದೇಣಿಗೆ
* ವೀರಯ್ಯಸ್ವಾಮಿ ಹೇರೂರು 51 ಲಕ್ಷ ರೂ.
* ಶರಣಪ್ಪ ಮೈಲಾಪುರ 50 ಲಕ್ಷ ರೂ.
* ಪಂಚಾಕ್ಷರಯ್ಯ 25 ಲಕ್ಷ ರೂ.
* ಸಿ.ವಿ.ಚಂದ್ರಶೇಖರ್ 11 ಲಕ್ಷ ರೂ.
* ಬಸವನಗೌಡ ಪಾಟೀಲ್ 5 ಲಕ್ಷ ರೂ.
* ಶ್ರೀಸಾಯಿ ಟ್ರಸ್ಟ್ 5 ಲಕ್ಷ ರೂ.
* ಬಸವರಾಜ ಸಜ್ಜನ್ 5 ಲಕ್ಷ ರೂ.
* ದಢೇಸೂಗೂರು 5 ಲಕ್ಷ ರೂ.
* ತಿಪ್ಪೇರುದ್ರಸ್ವಾಮಿ 1 ಲಕ್ಷ ರೂ.
ಜೋಳಿಗೆಯಲ್ಲಿ ಶಕ್ತಿ ಕೊಟ್ಟಷ್ಟು ಮಕ್ಕಳನ್ನ ಓದಿಸುತ್ತೇನೆ: ಕೊಪ್ಪಳ ನಗರದ ಗವಿಮಠ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸತಿ ನಿಲಯ ನಡೆದು ಬಂದ ದಾರಿ ನೆನೆದು ಗವಿ ಸಿದ್ದೇಶ್ವರ ಶ್ರೀಗಳು ಕಣ್ಣೀರು ಹಾಕಿದ್ದಾರೆ. ಮರಿ ಶಾಂತ ವೀರ ಮಾಹಾಸ್ವಾಮಿಗಳ ಪುಣ್ಯ ಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನನ್ನ ಜೋಳಿಗೆಗೆ ಶಕ್ತಿ ಕೊಡಲಿ ಎಂದು ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ಕಣ್ಣೀರು ಹಾಕಿದ್ದಾರೆ. ಮೊದಲು ಭಿಕ್ಷೆ ಬೇಡಿ ವಸತಿ ನಿಲಯ ಮಾಡಿದ್ರು, 2 ರೂಪಾಯಿ ಭಿಕ್ಷೆ ಬೇಡಿ ವಸತಿ ನಿಲಯ ಮಾಡಿದ್ದಾರೆ. ಮಕ್ಕಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇದ್ದ ಮರಿಶಾಂತವೀರ ಶ್ರೀಗಳನ್ನ ನೆನೆದು ಗವಿ ಸಿದ್ದೇಶ್ವರ ಶ್ರೀಗಳು ಕಣ್ಣೀರು ಹಾಕಿದ್ದಾರೆ. ನಾನು ಸಾವಿರಾರು ಬಡ ಮಕ್ಕಳಿಗೆ ವಸತಿ ನಿಲಯ ಮಾಡಲು ಸಂಕಲ್ಪ ಮಾಡಿದ್ದೇನೆ. ಜೋಳಿಗೆಯಲ್ಲಿ ಶಕ್ತಿ ಕೊಟ್ಟಷ್ಟು ಮಕ್ಕಳನ್ನ ಓದಿಸುತ್ತೇನೆ. 160 ಮಕ್ಕಳಿಂದ ಇದೀಗ 3500 ಸಾವಿರ ಮಕ್ಕಳಿದ್ದಾರೆ. ಎಲ್ಲೆಲ್ಲಿ ಮಠದಲ್ಲಿ ಜಾಗ ಇದೆ ಅಲ್ಲಿ ಮಕ್ಕಳನ್ನ ಹಾಕಿದ್ದಾರೆ. ಅವರಿಗಾಗಿ ಈ ವಸತಿ, ಪ್ರಸಾದ ನಿಲಯ ಅಂತ ಶ್ರೀಗಳು ತಿಳಿಸಿದ್ದಾರೆ.
ಕಣ್ಣೀರು ಹಾಕಿದ್ದ ಸ್ವಾಮೀಜಿ: ಗವಿಮಠಕ್ಕೆ 10 ಕೋಟಿ ನೀಡಲು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಹೌದು! ಕೊಪ್ಪಳ ನಗರದಲ್ಲಿರುವ ಗವಿಮಠದಲ್ಲಿ ಇತ್ತೀಚಿಗೆ 5000 ವಿದ್ಯಾರ್ಥಿಗಳ ವಸತಿ ನಿಲಯದ ಅಡಿಗಲ್ಲು ಸಮಾರಂಭ ನಡೆದಿತ್ತು. ಈ ವೇಳೆ ಗವಿಸಿದ್ದೇಶ್ವರ ಸ್ವಾಮೀಜಿ ಕಣ್ಣೀರು ಹಾಕಿದ್ದರು. ಈ ದೃಶ್ಯ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ 25 ಕೋಟಿ ಅನುದಾನಕ್ಕೆ ಸಿಎಂಗೆ ಸಂಸದ ಕರಡಿ ಸಂಗಣ್ಣ ಮನವಿಯನ್ನು ಸಲ್ಲಿಸಿದ್ದರು. ಸಂಸದ ಕರಡಿ ಸಂಗಣ್ಣ ಮನವಿಗೆ ಸಿಎಂ ಬೊಮ್ಮಾಯಿ ಸ್ಪಂದಿಸಿ, 10 ಕೋಟಿ ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆರ್ಥಿಕ ಇಲಾಖೆಗೆ ಸಿಎಂ ಆಪ್ತ ಕಾರ್ಯದರ್ಶಿ ಅನಿಲಕುಮಾರ್ ನಿರ್ದೇಶನ ನೀಡಿದ್ದಾರೆ.