ಕೊಪ್ಪಳ: ಅಂಜನಾದ್ರಿ ಅಭಿವೃದ್ಧಿಗೆ ಭೂಮಿ ನೀಡಲ್ಲ, ರೈತರ ಆಕ್ರೋಶ
* ಭೂಮಿ ವಶಪಡಿಸಿಕೊಂಡರೆ ರೈತರು ಬೀದಿಪಾಲು
* ಅಂಜನಾದ್ರಿ ಅಭಿವದ್ಧಿಗೆ 120 ಕೋಟಿ ಅನುದಾನ ಘೋಷಣೆ ಮಾಡಿದ ಸರಕಾರ
* ಯಾವುದೇ ಕಾರಣಕ್ಕೆ ಭೂಮಿ ನೀಡುವುದಿಲ್ಲ ಎಂದು ಎಚ್ಚರಿಸಿದ ರೈತರು
ಗಂಗಾವತಿ(ಜೂ.22): ತಾಲೂಕಿನ ಐತಿಹಾಸಿಕ ಪ್ರದೇಶ ಅಂಜನಾದ್ರಿ ಅಭಿವೃದ್ಧಿಗೆ ಸರ್ಕಾರ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದ್ದು, ಇದಕ್ಕೆ ವಿವಿಧ ಗ್ರಾಮಗಳ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಜನಾದ್ರಿಯಲ್ಲಿ ಯೋಗ ದಿನಾಚರಣೆ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ರೈತ ಮುಖಂಡ ಸುದರ್ಶನ ವರ್ಮಾ ಅವರು, ಈಗಾಗಲೇ ಸರಕಾರ ಅಂಜನಾದ್ರಿ ಅಭಿವದ್ದಿಗೆ 120 ಕೋಟಿ ಅನುದಾನ ಘೋಷಣೆ ಮಾಡಿದೆ. ಇದರಲ್ಲಿ ರೈತರ ಭೂಮಿ ಭೂ ಸ್ವಾಧೀನ ಪಡಿಸಿಕೊಂಡರೆ ರೈತರು ಬೀದಿಪಾಲಾಗುತ್ತಾರೆ ಎಂದರು.
ಕ್ಷೀಣಿಸಿದ ಮಳೆ, ಒಣಗುತ್ತಿರುವ ಬೆಳೆ: ಆತಂಕದಲ್ಲಿ ಅನ್ನದಾತ..!
ಅಂಜನಾದ್ರಿ ಸುತ್ತಮುತ್ತ ಅಭಿವೃದ್ಧಿಪಡಿಸಬೇಕಾದರೆ ಮುಜರಾಯಿ ಇಲಾಖೆಗೆ ಸಂಬಂಧಿಸಿದ ನೂರಾರು ಎಕರೆ ಭೂಮಿ ಇದೆ. ಆ ಭೂಮಿಯಲ್ಲಿ ಕಟ್ಟಡಗಳನ್ನು ನಿರ್ಮಿಸಬಹುದು. ಆದರೆ ರೈತರ ಭೂಮಿ ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸಿದರೆ ನೈಸರ್ಗಿಕ ವಾತಾವರಣ ಇಲ್ಲದಂತಾಗುತ್ತದೆ. ಯಾವುದೇ ಕಾರಣಕ್ಕೆ ಭೂಮಿ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಇನ್ನೊಬ್ಬ ಮುಖಂಡ ಈ. ರಾಮಕೃಷ್ಣ ಮಾತನಾಡಿ, ಈ ಭಾಗದಲ್ಲಿ 1400 ವರ್ಷದ ವಿಜಯನಗರ ಕಾಲುವೆ ಇದೆ. ಈ ಕಾಲುವೆಗಳಿಂದ ರೈತರ 12 ತಿಂಗಳು ನೀರು ಹರಿಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಈಗ ಸರ್ಕಾರ ಭೂಮಿ ಸ್ವಾಧೀನ ಪಡಿಸಿಕೊಂಡರೆ ರೈತರು ಬೀದಿಪಾಲಾಗುತ್ತಾರೆ. ಅಲ್ಲದೇ ಅಂಜನಾದ್ರಿ ಅಭಿವೃದ್ಧಿಗಿಂತ ನಷ್ಟಹೆಚ್ಚಾಗುತ್ತದೆ ಎಂದರು.
Koppal: ದೇಶದ ಎರಡನೇ ನಾರಿ ಸುವರ್ಣ ಕುರಿ ಸಂವರ್ಧನಾ ಕೇಂದ್ರ ಆರಂಭ
ಈಗಾಗಲೇ ಸರ್ಕಾರ ಅಂಜನಾದ್ರಿ ಅಭಿವೃದ್ಧಿ ಬಗ್ಗೆ ಸಭೆ ಸೇರಿ ಸರ್ವೇ ಮಾಡುವುದಕ್ಕೆ ಸೂಚನೆ ನೀಡಿದೆ. ಆದರೆ ಇಲ್ಲಿಯವರೆಗೆ ಸರ್ಕಾರವಾಗಲಿ, ಜನಪ್ರತಿನಿಧಿಯಾಗಲಿ ರೈತರನ್ನು ಸಂಪರ್ಕಿಸಿಲ್ಲ ಎಂದರು. ಕೂಡಲೆ ಶಾಸಕರು ರೈತರನ್ನು ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋಗಿ ಈ ಭಾಗದ ಅಭಿವೃದ್ಧಿ ಮತ್ತು ಭೂ ಸ್ವಾಧೀನದ ಬಗ್ಗೆ ಚರ್ಚೆ ಮಾಡಬೇಕೆಂದು ಆಗ್ರಹಿಸಿದರು.
ಶಾಸಕರ ಭರವಸೆ:
ರೈತರ ಮನವಿ ಆಲಿಸಿದ ಶಾಸಕ ಪರಣ್ಣ ಮುನವಳ್ಳಿ ಅವರು, ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ. ರೈತರಿಗೆ ಯಾವುದೇ ರೀತಿಯ ಅನ್ಯಾಯ ಮಾಡುವುದಿಲ್ಲ. ಮುಖ್ಯಮಂತ್ರಿಗಳು ಕರೆದ ಸಭೆಗೆ ರೈತರು ಭಾಗವಹಿಸಿ ಎಂದು ತಿಳಿಸಿದರು.
ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ, ತಹಸೀಲ್ದಾರ್ ಯು. ನಾಗರಾಜ…, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಂ. ಸಿದ್ದರಾಮಸ್ವಾಮಿ, ರಾಜಾ ಹರಿಹರದೇವರಾಯಲು, ಕುಪ್ಪರಾಜು, ತಿಮ್ಮಣ್ಣ ನಾಯಕ, ಅಂಜನಪ್ಪ ಆನೆಗೊಂದಿ, ಚಂದ್ರಶೇಖರ ಹನುಮನಹಳ್ಳಿ, ವಿಷ್ಣು ಜೋಷಿ ಇತರರು ಇದ್ದರು.