Mangaluru: ಜನರಲ್ ಸ್ಟೋರ್‌ನಲ್ಲಿ ಉಚಿತ ಪುಸ್ತಕ ಬ್ಯಾಂಕ್!
ಇದು ಹೆಸರಿಗೆ ಮಾತ್ರ ಸಣ್ಣ ಜನರಲ್ ಸ್ಟೋರ್, ವಿದ್ಯಾರ್ಥಿಗಳ ಪಾಲಿಗೆ ಪುಸ್ತಕ ಭಂಡಾರ. ಇಲ್ಲಿ ಪುಸ್ತಕ ಎಲ್ಲವೂ ಉಚಿತ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಪುಸ್ತಕಗಳನ್ನು ಪಡೆದು ಮತ್ತೆ ಹಿಂತಿರುಗಿಸಿದರೆ ಸಾಕು.
ಆತ್ಮಭೂಷಣ್
ಮಂಗಳೂರು (ಅ.10): ಇದು ಹೆಸರಿಗೆ ಮಾತ್ರ ಸಣ್ಣ ಜನರಲ್ ಸ್ಟೋರ್, ವಿದ್ಯಾರ್ಥಿಗಳ ಪಾಲಿಗೆ ಪುಸ್ತಕ ಭಂಡಾರ. ಇಲ್ಲಿ ಪುಸ್ತಕ ಎಲ್ಲವೂ ಉಚಿತ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಪುಸ್ತಕಗಳನ್ನು ಪಡೆದು ಮತ್ತೆ ಹಿಂತಿರುಗಿಸಿದರೆ ಸಾಕು. ಶೇ.80ಕ್ಕಿಂತ ಅಧಿಕ ಅಂಕ ಬಂದರೆ, ನೋಟ್ಸ್ ಪುಸ್ತಕ ಕೂಡ ಉಚಿತ. ಇದು ಪುತ್ತೂರು ಸರಹದ್ದಿನ ದರ್ಬೆ ಕೂರ್ನಡ್ಕ ಬಳಿಯ ಪ್ರಭು ಜನರಲ್ ಸ್ಟೋರ್‌ನ ಕಳೆದ 20 ವರ್ಷಗಳಿಂದ ಕಂಡುಬರುತ್ತಿರುವ ಶಿಕ್ಷಣ ಪ್ರೇಮದ ನೋಟ. ನೋಟ್ಸ್ ಪುಸ್ತಕ ಮಾರಾಟ ಮಾಡಿ ಸಾಕಷ್ಟು ಹಣ ಗಳಿಸುವ ಬದಲು ಅದರಲ್ಲೇ ಸಮಾಜಕ್ಕೆ ಸ್ವಲ್ಪ ನೀಡುವ ಹೃದಯ ವೈಶಾಲ್ಯಕ್ಕೆ ಉದಾಹರಣೆ ಇದು. ಕಾವೇರಿಕಟ್ಟೆಯ ಮಾಧವ ಪ್ರಭು ಈ ವಿದ್ಯಾರ್ಥಿಸ್ನೇಹಿ ಯೋಜನೆಯ ರೂವಾರಿ.
ಜನರಲ್ ಸ್ಟೋರ್‌ನಲ್ಲಿ ಪುಸ್ತಕ ರಾಶಿ: ಇದು ಜನರಲ್ ಸ್ಟೋರ್ ಆದರೂ ಇಲ್ಲಿ ಪುಸ್ತಕದ್ದೇ ರಾಶಿ, ಸಿಇಟಿ, ನೀಟ್, ಜೆಇಇ, ಕೆ-ಸೆಟ್ ಪರೀಕ್ಷೆಗಳಿಗೆ ಬೇಕಾದ ಪುಸ್ತಕ ಇಲ್ಲಿ ಉಚಿತವಾಗಿಯೇ ಸಿಗುತ್ತದೆ. ಇದನ್ನು ಹಣ ಕೊಟ್ಟು ಖರೀದಿಸುವುದಲ್ಲ, ಓದಿ ವಾಪಸ್ ನೀಡಬೇಕು ಎಂಬ ಷರತ್ತಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಮಾಧವ ಪ್ರಭುಗಳು ನೀಡುತ್ತಾರೆ. ಮಾಧವ ಪ್ರಭುಗಳು ಉಚಿತ ಪಠ್ಯ ಪುಸ್ತಕ ಮಾತ್ರವಲ್ಲ ನೋಟ್ಸ್ ಕೂಡ ನೀಡುತ್ತಾರೆ. ಈ ಹಿಂದೆ 1ರಿಂದ 10ನೇ ತರಗತಿ ಮಕ್ಕಳಿಗೆ ಉಚಿತ ನೋಟ್ಸ್ ಜತೆಗೆ ಪಠ್ಯ ಪುಸ್ತಕ ಕೂಡ ನೀಡುತ್ತಿದ್ದರು.
E-Shram Card ಜತೆ ಸಾಮಾಜಿಕ ಭದ್ರತಾ ಯೋಜನೆಗಳ ಜೋಡಣೆ
ಈಗ ಇವೆರಡನ್ನೂ ಸರ್ಕಾರವೇ ಉಚಿತವಾಗಿ ನೀಡುವುದರಿಂದ ಪ್ರಭುಗಳು ಹೈಸ್ಕೂಲ್‌ನ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ, ನೀಡುತ್ತಿದ್ದಾರೆ. ಪಿಯು ತರಗತಿಯ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೂ ಇವರು ಉಚಿತ ನೋಟ್ಸ್ ನೀಡುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೀಡುವ ಪಠ್ಯಗಳನ್ನು ಬೇರೊಬ್ಬರಿಂದ ಪಡೆದು ಮತ್ತೊಬ್ಬರಿಗೆ ನೀಡುತ್ತಾರೆ. ಮೆಡಿಕಲ್ ಮತ್ತು ಎಂಜಿನಿಯರಿಂಗ್‌ಗೆ ಬೇಕಾದ ಪಠ್ಯ ಇವರಲ್ಲಿದೆ. ಅಂದಹಾಗೆ ಇವರ ಉಚಿತ ಪುಸ್ತಕ ಕೊಡುಗೆ ತನ್ನ ಅಂಗಡಿಯ ಆಸುಪಾಸು ಕೂರ್ನಡ್ಕ, ಮರೀಲು, ಸಂಜಯ ನಗರ ಪರಿಸರದಲ್ಲಿ ಮಾತ್ರ ಎಂಬುದು ಗಮನಾರ್ಹ.
ಬಡ ಮಕ್ಕಳಿಗೆ ಮಾತ್ರ ನೆರವು: ಪ್ರಭು ಜನರಲ್‌ಸ್ಟೋರ್‌ನಲ್ಲಿ ಉಚಿತ ಪುಸ್ತಕ ನೀಡುವುದು ಬಡ ವಿದ್ಯಾರ್ಥಿಗಳಿಗೆ ಮಾತ್ರ. ತೀರ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಇವರೇ ಆಯ್ಕೆ ಮಾಡುತ್ತಾರೆ. ಬಂದ ಆದಾಯದಲ್ಲಿ ಸಮಾಜಕ್ಕೆ ಇಂತಿಷ್ಟುಎಂದು ಈ ಕೆಲಸ ಮಾಡುತ್ತಿದ್ದಾರೆ. ಇವರು ಸ್ಕಾಲರ್‌ಶಿಪ್‌ಗೆ ಕೂಡ ಬಡ ವಿದ್ಯಾರ್ಥಿಗಳನ್ನು ಶಿಫಾರಸು ಮಾಡುತ್ತಾರೆ. ಇವರು ಶಿಫಾರಸು ಮಾಡಿದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಬೇಕಾಗುವ ಆರ್ಥಿಕ ನೆರವನ್ನು ದಾನಿಗಳು ಉದಾರವಾಗಿ ನೀಡುತ್ತಿದ್ದಾರೆ. ಹೆಚ್ಚಾಗಿ ಪ್ರಚಾರ ಬಯಸದ ದಾನಿಗಳು ಇವರ ಬಳಿ ಇದ್ದಾರೆ ಎಂಬುದು ಉಲ್ಲೇಖನೀಯ. ಇವರು ಕೂಡ ಪ್ರಚಾರದಿಂದ ಮಾರುದೂರ. ಕ
ಳೆದ 20 ವರ್ಷಗಳಿಂದ ಬಡಮಕ್ಕಳಿಗೆ ಉಚಿತ ಪುಸ್ತಕ ನೀಡುತ್ತಿದ್ದರೂ ಎಂದಿಗೂ ಪ್ರಚಾರ ಬಯಸಿಲ್ಲ. ಇವರ ಈ ಸಾಧನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ ಯೂಟ್ಯೂಬರ್ ಒಬ್ಬರು ಇವರ ಸಾಧನೆಯನ್ನು ಅಪ್ಲೋಡ್ ಮಾಡಿದ್ದರು. ಇದನ್ನು ನೋಡಿದ ಕಲರ್ಸ್ ಕನ್ನಡ ವಾಹಿನಿ ಪುನೀತ್ ರಾಜಕುಮಾರ್ ಹೆಸರಿನಲ್ಲಿ ತೆರೆಮರೆಯ ಸಾಧಕರಿಗೆ ನೀಡುವ ಅನುಬಂಧ ಪ್ರಶಸ್ತಿ ಜತೆಗೆ 1 ಲಕ್ಷ ರು. ಮೊತ್ತ ನೀಡಿ ಗೌರವಿಸಿದೆ. ಈ ಮೊತ್ತವನ್ನು ಸ್ವಂತಕ್ಕೆ ಬಳಸದ ಮಾಧವ ಪ್ರಭುಗಳು, 1 ಲಕ್ಷ ರು. ಮೊತ್ತದ ಬಡ್ಡಿಯನ್ನು ಬಡ ವಿದ್ಯಾರ್ಥಿಗಳ ವೇತನಕ್ಕೆ ಬಳಸುವುದಾಗಿ ವಿನೀತಭಾವದಿಂದ ಹೇಳುತ್ತಾರೆ.
ವಿದ್ಯಾಭ್ಯಾಸ ವೇಳೆ ಪ್ರಭುಗಳಿಂದಲೇ ಉಚಿತ ಪುಸ್ತಕ ಪಡೆದುಕೊಂಡಿದ್ದೆ. ಬಳಿಕ ಪ್ರಭುಗಳ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ನೆರವಾಗಲು ನನಗೆ ಸಾಧ್ಯವಾಗಿದೆ. ಎಲ್ಲಿಯೂ ಸಿಗದ ಅನೇಕ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು ನನಗೆ ಲಭಿಸಿದ್ದು ಇವರ ಮೂಲಕವೇ ಆಗಿತ್ತು. ಅವರೊಬ್ಬ ಪ್ರಚಾರ ಬಯಸದ ನಿಸ್ವಾರ್ಥ ಸೇವಕ.
-ಸಾದಿಕ್ ಬರೆಪ್ಪಾಡಿ, ಪ್ರಯೋಜಜನ ಪಡೆದವರು
ಪ್ರವಾದಿ ಬದುಕು ಸರ್ವರಂಗಕ್ಕೆ ಮಾದರಿ: ವೈಎಸ್‌ವಿ ದತ್ತಾ
ಕೂರ್ನಡ್ಕ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ನೀಡುವ ನನ್ನ ಕೈಂಕರ್ಯವನ್ನು ಹೀಗೆಯೇ ಮುಂದುವರಿಸುತ್ತೇನೆ. ನನಗೆ ಇದರಲ್ಲೇ ತೃಪ್ತಿಇದೆ. ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವಲ್ಲಿ ದಾನಿಗಳು ಇನ್ನಷ್ಟುಮುಂದೆ ಬರಬೇಕುಎಂಬುದೇ ನನ್ನ ಅಪೇಕ್ಷೆ.
-ಕೆ. ಮಾಧವ ಪ್ರಭು, ಪ್ರಭು ಜನರಲ್ ಸ್ಟೋರ್ ಮಾಲೀಕ, ಕೂರ್ನಡ್ಕ ಪುತ್ತೂರು