E-Shram Card ಜತೆ ಸಾಮಾಜಿಕ ಭದ್ರತಾ ಯೋಜನೆಗಳ ಜೋಡಣೆ

  • ಇ-ಶ್ರಮ್‌ ಕಾರ್ಡ್‌ ಜತೆ ಸಾಮಾಜಿಕ ಭದ್ರತಾ ಯೋಜನೆಗಳ ಜೋಡಣೆ
  • ಎಂಆರ್‌ಪಿಎಲ್‌ನಲ್ಲಿ ವಿವಿಧ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಕೇಂದ್ರ ಸಚಿವ ರಾಮೇಶ್ವರ್‌ ತೇಲಿ
Integration of social security schemes with e-shrum card rav

ಮಂಗಳೂರು (ಅ.10) : ಇ-ಶ್ರಮ್‌ ಕಾರ್ಡ್‌ ಜತೆಗೆ ಹಲವು ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳನ್ನು ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಹಾಯಕ ಸಚಿವ ರಾಮೇಶ್ವರ್‌ ತೇಲಿ ಹೇಳಿದ್ದಾರೆ. ಮಂಗಳೂರಿನ ಎಂಆರ್‌ಪಿಎಲ್‌(ಮಂಗಳೂರು ರಿಫೈನರಿ ಅಂಡ್‌ ಪೆಟ್ರೋ ಕೆಮಿಕಲ್ಸ್‌ ಲಿಮಿಟೆಡ್‌)ನಲ್ಲಿ ಭಾನುವಾರ ಪ್ರಧಾನಮಂತ್ರಿ ಉಜ್ವಲ ಯೋಜನೆ ಮತ್ತು ಇ-ಶ್ರಮ್‌ ಕಾರ್ಡ್‌ನ್ನು ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಜು.1 ರಿಂದ ಹೊಸ ಕಾರ್ಮಿಕ ಸಂಹಿತೆ ಜಾರಿ?: ವಾರಕ್ಕೆ 4 ದಿನ, ದಿನಕ್ಕೆ 12 ಗಂಟೆ ಕೆಲಸ!

ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳನ್ನು ಜೋಡಿಸುವುದರಿಂದ ಫಲಾನುಭವಿಗಳಿಗೆ ಬಹಳ ಉಪಯುಕ್ತವಾಗಲಿದೆ. ಪಿಎಂ ಶ್ರಮಯೋಗಿ ಮಾನ್‌ಧನ್‌ ಯೋಜನೆಯಡಿ 60 ವರ್ಷದ ನಂತರ ಪೆನ್ಶನ್‌ ಪಡೆಯಲು ಸಾಧ್ಯವಿದೆ. ಇದರಲ್ಲಿ ಫಲಾನುಭವಿ ಹಾಗೂ ಕೇಂದ್ರ ಸರ್ಕಾರ ತಲಾ ಶೇ.50 ಪಾಲು ಭರಿಸಬೇಕಾಗಿದೆ. ಕಾರ್ಮಿಕರ ಹಿತಾಸಕ್ತಿ ಕಾಪಾಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಈ ರೀತಿಯ ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದರು.

ಗ್ಯಾಸ್‌ ಸಂಪರ್ಕ, ಇ ಶ್ರಮ್‌ ಕಾರ್ಡ್‌ ಗುರಿ:

ಉಜ್ವಲ 2.0 ಯೋಜನೆಯಡಿ ದೇಶದಲ್ಲಿ 1 ಕೋಟಿ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ. ಈಗ ಹೆಚ್ಚುವರಿಯಾಗಿ 60 ಲಕ್ಷ ಎಲ್‌ಪಿಜಿ ಸಂಪರ್ಕಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಪ್ರಧಾನಿ ಗರೀಬ್‌ ಕಲ್ಯಾಣ್‌ ಯೋಜನೆಯಲ್ಲಿ ಕಳೆದ ಸಾಲಿನಲ್ಲಿ 57,18,089 ಎಲ್‌ಪಿಜಿ ಸಿಲಿಂಡರ್‌ ಖರೀದಿಗೆ ಕರ್ನಾಟಕದ 30,38,018 ಪಿಎಂಯುವೈ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ 378.31 ಕೋಟಿ ರು. ವರ್ಗಾಯಿಸಲಾಗಿದೆ ಎಂದರು.

ದೇಶದಲ್ಲಿ ಸುಮಾರು 38 ಕೋಟಿ ಕಾರ್ಮಿಕರಿಗೆ ಇ-ಶ್ರಮ್‌ ಕಾರ್ಡ್‌ ನೀಡುವ ಗುರಿ ಹೊಂದಲಾಗಿದೆ. ಕರ್ನಾಟಕದಲ್ಲಿ 70 ಲಕ್ಷ ಕಾರ್ಡ್‌ ನೀಡಲಾಗಿದೆ. ದ.ಕ.ಜಿಲ್ಲೆಯಲ್ಲಿ 2 ಲಕ್ಷ ಫಲಾನುಭವಿಗಳು ಈ ಕಾರ್ಡ್‌ ಹೊಂದಿದ್ದಾರೆ. ಕಾಮನ್‌ ಸರ್ವಿಸ್‌ ಸೆಂಟರ್‌ ಇಲ್ಲವೇ ಆನ್‌ಲೈನ್‌ ಮೂಲಕ ಸ್ವಯಂ ಆಗಿಯೂ ಇ ಶ್ರಮ್‌ ಕಾರ್ಡ್‌ ಪಡೆದುಕೊಳ್ಳಬಹುದು. ಕಾರ್ಡ್‌ ಹೊಂದಿರುವವರಿಗೆ 2 ಲಕ್ಷ ರು. ವರೆಗೆ ವಿಮಾ ಸೌಲಭ್ಯ ಸಿಗಲಿದೆ. ಕಾರ್ಮಿಕರು ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

119 ಔಟ್‌ಲೆಟ್‌ ಗುರಿ:

ಎಂಆರ್‌ಪಿಎಲ್‌ 2025ರ ಮಾಚ್‌ರ್‍ ವೇಳೆಗೆ 119 ಔಟ್‌ಲೆಟ್‌ ತೆರೆಯುವ ಗುರಿ ಹೊಂದಿದೆ. ಹಾಲಿ 39 ಔಟ್‌ಲೆಟ್‌ ಇದ್ದು, ಪ್ರಸಕ್ತ 16 ಔಟ್‌ಲೆಟ್‌ಗಳನ್ನು ತೆರೆಯಲಾಗುತ್ತಿದೆ. ಎಂಆರ್‌ಪಿಎಲ್‌ ಕೂಡ ದೇಶದ ಅಭ್ಯುದಯಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ ಎಂದು ಸಚಿವರು ಶ್ಲಾಘಿಸಿದರು.

ಕರ್ನಾಟಕದ ತೈಲ ಕೈಗಾರಿಕೆಯ ರಾಜ್ಯ ಮಟ್ಟದ ಸಂಯೋಜಕ ಗುರುಪ್ರಸಾದ್‌ ಮಾತನಾಡಿ, ಕರ್ನಾಟಕದಲ್ಲಿ 31.08.2022 ರವರೆಗೆ ಒಟ್ಟು 36,99,841 ಪಿಎಂಯುವೈ ಗ್ಯಾಸ್‌ ಸಿಲಿಂಡರ್‌ ಸಂಪರ್ಕಗಳನ್ನು ತೈಲ ಮಾರುಕಟ್ಟೆಕಂಪನಿಗಳು (ಒಎಂಸಿಗಳು) ಬಿಡುಗಡೆ ಮಾಡಿವೆ. ಅದರಲ್ಲಿ ಐಒಸಿಎಲ್‌ ಬಿಡುಗಡೆ ಮಾಡಿದ ಸಂಪರ್ಕಗಳ ಸಂಖ್ಯೆ16,20,192, ಬಿಪಿಸಿಎಲ್‌ 8,71,432 ಮತ್ತು ಎಚ್‌ಪಿಸಿಎಲ್‌ 12,08,217 ಸಂಪರ್ಕ ನೀಡಿದ್ದು, ಶೇ.104ರಷ್ಟುಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದರು. ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್‌, ಬಿಪಿಸಿಎಲ್‌ನ ಬಿಎಸ್‌ವಿ ಪ್ರಸಾದ್‌, ಇ ಶ್ರಮ್‌ ವಿಭಾಗದ ಆಯುಕ್ತ ಶ್ರೀನಿವಾಸ್‌ ಮತ್ತಿತರರಿದ್ದರು. ಎಂಆರ್‌ಪಿಎಲ್‌ ಅಧಿಕಾರಿ ಸಂಜಯ್‌ ವರ್ಮಾ ವಂದಿಸಿದರು. ಸೌಜನ್ಯ ಹೆಗ್ಡೆ ನಿರೂಪಿಸಿದರು.

ಎಂಆರ್‌ಪಿಎಲ್‌ನ ಬೆಂಗಳೂರು ದೇವನಗುಂಟಿದಲ್ಲಿ ಸುಮಾರು 304 ಕೋಟಿ ರು.ಗಳಲ್ಲಿ ನಿರ್ಮಿಸಲಾಗುತ್ತಿರುವ ಮಾರ್ಕೆಟಿಂಗ್‌ ಟರ್ಮಿನಲ್‌ಗೆ ಸಚಿವ ರಾಮೇಶ್ವರ್‌ ತೇಲಿ ಇಲ್ಲಿಂದಲೇ ರಿಮೋಟ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು. ಅಣಕು ಕಾರ್ಯಾಚರಣೆಯಲ್ಲಿ ಕ್ಷಿಪ್ರವಾಗಿ ಸ್ಪಂದಿಸಿದ ಅಧಿಕಾರಿ, ಸಿಬ್ಬಂದಿಗೆ ಪ್ರಶಂಸಾ ಪತ್ರ ನೀಡಲಾಯಿತು.

ಕ್ಯಾಂಟಿನ್‌ನಲ್ಲಿ ಆಹಾರ ಸೇವಿಸಿದ ಸಚಿವ

ಎಂಆರ್‌ಪಿಎಲ್‌ಗೆ ಬೆಳಗ್ಗೆ ಆಗಮಿಸಿದ ಕೇಂದ್ರ ಸಚಿವ ರಾಮೇಶ್ವರ್‌ ತೇಲಿ ಅವರು ಮಂಗಳೂರಿನಲ್ಲಿರುವ ಕಾರ್ಮಿಕ ಕಲ್ಯಾಣ ಆಸ್ಪತ್ರೆಗೆ ಭೇಟಿ ನೀಡಿ ಸೌಲಭ್ಯಗಳ ಪರಿಶೀಲನೆ ನಡೆಸಿದರು. ಕಾರ್ಮಿಕರಿಗೆ ಸಿಗುವ ಚಿಕಿತ್ಸಾ ಸವಲತ್ತುಗಳ ಮಾಹಿತಿ ಪಡೆದುಕೊಂಡರು. ಇಎಸ್‌ಐ ಆಸ್ಪತ್ರೆಯನ್ನು ಇನ್ನಷ್ಟುಉತ್ತಮ ಪಡಿಸುವ ಭರವಸೆ ನೀಡಿದರು. ಬಳಿಕ ಎಂಆರ್‌ಪಿಎಲ್‌ನಲ್ಲಿರುವ ಕ್ಯಾಂಟಿನ್‌ಗೆ ತೆರಳಿ ಆಹಾರ ವಸ್ತುಗಳನ್ನು ಪರಿಶೀಲಿಸಿದರು. ಎಂಆರ್‌ಪಿಎಲ್‌ ಗೆಸ್ಟ್‌ಹೌಸ್‌ನಲ್ಲಿ ಆಹಾರದ ವ್ಯವಸ್ಥೆ ಮಾಡಿದ್ದರೂ ಕ್ಯಾಂಟಿನ್‌ನಲ್ಲೇ ಆಹಾರ ಸೇವಿಸುವ ಮೂಲಕ ಸರಳತೆ ಮೆರೆದರು. ಬಳಿಕ ಕಾರ್ಮಿಕರ ಜತೆ ಕುಶಲೋಪರಿ ನಡೆಸಿದರು.

Petrol, Diesel Price Today: ಇಂದು ನಿಮ್ಮ ಊರಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಹೇಗಿದೆ ನೋಡಿ..

ಬರಲಿದೆ ಫೈಬರ್‌ ಗ್ಯಾಸ್‌ ಸಿಲಿಂಡರ್‌!

ಈಗ ಗೃಹ ಹಾಗೂ ವಾಣಿಜ್ಯ ಬಳಕೆಗೆ ಇರುವುದು ಭಾರವಾದ ಸಿಲಿಂಡರ್‌. ಮುಖ್ಯವಾಗಿ ಇದನ್ನು ಅಡುಗೆ ಮನೆಯಲ್ಲಿ ಸಾಗಿಸಲು ಗೃಹಿಣಿಯರು ಬಹಳ ತ್ರಾಸ ಪಡಬೇಕಾಗುತ್ತದೆ. ಗೃಹಿಣಿಯರ ಈ ಸಂಕಷ್ಟಅರಿತುಕೊಂಡ ಕೇಂದ್ರ ಸರ್ಕಾರ ಇನ್ನು ಭಾರದ ಸಿಲಿಂಡರ್‌ ಬದಲಿಗೆ ಫೈಬರ್‌ ಸಿಲಿಂಡರ್‌ ಮಾರುಕಟ್ಟೆಗೆ ಪರಿಚಯಿಸಲು ಕೇಂದ್ರ ಸರ್ಕಾರ ಉತ್ಸುಕ ತೋರಿಸಿದೆ. ಫೈಬರ್‌ ಕವಚದ ಸಿಲಿಂಡರ್‌ ಕಡಿಮೆ ಭಾರ ಇರಲಿದ್ದು, ಗೃಹಿಣಿಯರ ಸ್ನೇಹಿಯಾಗಿ ಮಾರುಕಟ್ಟೆಪ್ರವೇಶಿಸಲಿದೆ ಎಂದು ಕೇಂದ್ರ ಸಚಿವ ರಾಮೇಶ್ವರ್‌ ತೇಲಿ ಹೇಳಿದರು.

Latest Videos
Follow Us:
Download App:
  • android
  • ios