Asianet Suvarna News Asianet Suvarna News

ಬಿಜೆಪಿ ಸರ್ಕಾರದ ಅವಧಿಯ ಪಠ್ಯಗಳ ಪುನರ್‌ ಪರಿಶೀಲನೆಗೆ 37 ತಜ್ಞರ ಸಮಿತಿ ರಚನೆ

ಪಠ್ಯ ಪರಿಷ್ಕರಣಾ ಸಮಿತಿಯ ಮುಖ್ಯ ಸಂಯೋಜಕರನ್ನಾಗಿ ಉತ್ತರ ಕನ್ನಡದ ಕುಮಟಾದ ನಿವೃತ್ತ ಪ್ರಾಧ್ಯಾಪಕ ಡಾ. ಮಂಜುನಾಥ್ ಜಿ. ಹೆಗಡೆ ಅವರನ್ನು ನೇಮಿಸಲಾಗಿದೆ. ಇವರ ನೇತೃತ್ವದಲ್ಲಿ ವಿವಿಧ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಐವರು ಅಧ್ಯಕ್ಷರ ನೇತೃತ್ವದಲ್ಲಿ ಪ್ರತ್ಯೇಕ ಉಪ ಸಮಿತಿಗಳನ್ನು ರಚಿಸಿ 37 ವಿಷಯ ತಜ್ಞರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. 

Formation of 37 Expert Committee for Revision of Texts in Karnataka grg
Author
First Published Sep 27, 2023, 6:11 AM IST

ಬೆಂಗಳೂರು(ಸೆ.27):  ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್‌ ಚಕ್ರತೀರ್ಥ ಸಮಿತಿಯಿಂದ ಮಾಡಲಾಗಿದ್ದ ವಿವಿಧ ತರಗತಿ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ಪ್ರಸಕ್ತ ಸಾಲಿನ ಮಟ್ಟಿಗೆ ಕೈಬಿಟ್ಟು ತಿದ್ದೋಲೆ ಹೊರಡಿಸಿದ್ದ ಕಾಂಗ್ರೆಸ್‌ ಸರ್ಕಾರ ಇದೀಗ ಆ ಎಲ್ಲಾ ಪಠ್ಯಪುಸ್ತಕಗಳನ್ನು ರಾಷ್ಟ್ರೀಯ ಪಠ್ಯಚೌಕಟ್ಟಿನಡಿ ಸಮಗ್ರವಾಗಿ ಪುನರ್ ಪರಿಷ್ಕರಿಸಲು 37 ವಿಷಯ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ ಆದೇಶಿಸಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ 1ರಿಂದ 10ನೇ ತರಗತಿ ವರೆಗಿನ ಕನ್ನಡ ಪ್ರಥಮ ಹಾಗೂ ದ್ವೀತಿಯ ಭಾಷೆ ಪಠ್ಯಪುಸ್ತಕಗಳು, 9 ಮತ್ತು 10ನೇ ತರಗತಿಯ ಕನ್ನಡ ತೃತೀಯ ಭಾಷಾ ಪಠ್ಯಪುಸ್ತಕಗಳು ಮತ್ತು 6 ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗಿತ್ತು. ಈ ವೇಳೆ, ಕೆಲ ಪಠ್ಯಗಳಿಗೆ ಕೊಕ್ಕೆ ಹಾಕಿ, ಕೆಲ ಆರೆಸ್ಸೆಸ್‌ ನಾಯಕರು, ಬಲಪಂತೀಯರ ಬಹರಗಳನ್ನು ಪಠ್ಯದಲ್ಲಿ ಸೇರಿಸಿದ್ದು ತೀವ್ರ ವಿವಾದಕ್ಕೀಡಾಗಿತ್ತು. ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಈ ಎಲ್ಲ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ಕೈಬಿಟ್ಟು ಈ ಪರಿಷ್ಕರಣೆಗೂ ಮುನ್ನ ಇದ್ದ ಪಠ್ಯಗಳನ್ನೇ 2023-24ನೇ ಸಾಲಿಗೆ ಮುಂದುವರೆಸಿ ಶಾಲೆಗಳಿಗೆ ತಿದ್ದೋಲೆ ನೀಡಿದೆ. ಅಲ್ಲದೆ, ಮುಂದಿನ ಶೈಕ್ಷಣಿಕ ಸಾಲಿನ ವೇಳೆಗೆ ಈ ಪಠ್ಯಪುಸ್ತಕಗಳನ್ನು ನಿಯಮಾನುಸಾರ ಸಮಿತಿ ರಚಿಸಿ ಪುನರ್‌ ಪರಿಷ್ಕರಿಸುವುದಾಗಿ ಸರ್ಕಾರ ತಿಳಿಸಿತ್ತು. ಅದರಂತೆ ಇದೀಗ ಈ ಎಲ್ಲ ತರಗತಿ ಪಠ್ಯಪುಸ್ತಕಗಳನ್ನು ರಾಷ್ಟ್ರೀಯ ಪಠ್ಯ ಚೌಕಟ್ಟಿನ ಆಧಾರದಲ್ಲಿ ಪರಿಷ್ಕರಿಸಲು ಸಮಿತಿ ರಚಿಸಲಾಗಿದೆ.

ಈ ವರ್ಷದಿಂದ 9, 11ನೇ ಕ್ಲಾಸಿಗೂ ಇನ್ನು ಪಬ್ಲಿಕ್‌ ಪರೀಕ್ಷೆ: ಶಿಕ್ಷಣ ಇಲಾಖೆಯಿಂದ ಆದೇಶ

ಡಾ.ಮಂಜುನಾಥ್‌ ಹೆಗಡೆ ಮುಖ್ಯ ಸಂಯೋಜನಕ: 

ಪಠ್ಯ ಪರಿಷ್ಕರಣಾ ಸಮಿತಿಯ ಮುಖ್ಯ ಸಂಯೋಜಕರನ್ನಾಗಿ ಉತ್ತರ ಕನ್ನಡದ ಕುಮಟಾದ ನಿವೃತ್ತ ಪ್ರಾಧ್ಯಾಪಕ ಡಾ. ಮಂಜುನಾಥ್ ಜಿ. ಹೆಗಡೆ ಅವರನ್ನು ನೇಮಿಸಲಾಗಿದೆ. ಇವರ ನೇತೃತ್ವದಲ್ಲಿ ವಿವಿಧ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಐವರು ಅಧ್ಯಕ್ಷರ ನೇತೃತ್ವದಲ್ಲಿ ಪ್ರತ್ಯೇಕ ಉಪ ಸಮಿತಿಗಳನ್ನು ರಚಿಸಿ 37 ವಿಷಯ ತಜ್ಞರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. 2024-25ನೇ ಸಾಲಿಗೆ ಜಾರಿಗೊಳಿಸಲು ಅನುಕೂಲವಾಗುವಂತೆ ಎರಡರಿಂದ ಮೂರು ತಿಂಗಳೊಳಗೆ ಪಠ್ಯಪುಸ್ತಕಗಳ ಪರಿಷ್ಕರಣಾ ಕಾರ್ಯ ಪೂರ್ಣಗೊಳಿಸಿ ಕೊಡುವಂತೆ ಸರ್ಕಾರ ಸೂಚಿಸಿದೆ.

ಯಾರ ಅಧ್ಯಕ್ಷತೆ ಯಾವ ಸಮಿತಿ?:

1ರಿಂದ 10ನೇ ತರಗತಿ ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಡಾ. ಆಂಜನಪ್ಪ ಅವರ ಅಧ್ಯಕ್ಷತೆಯಲ್ಲಿ 8 ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಅದೇ ರೀತಿ ಕನ್ನಡ ದ್ವಿತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ಚಿಕ್ಕಮಗಳೂರಿನ ಬಸವನಹಳ್ಳಿಯ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಎಚ್.ಎನ್. ಸತ್ಯನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಏಳು ಸದಸ್ಯರು, 9 ಮತ್ತು 10ನೇ ತರಗತಿ ಕನ್ನಡ ತೃತೀಯ ಭಾಷೆ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಗೆ ದಾವಣಗೆರೆಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆಯ ಉಪನ್ಯಾಸಕ ಡಾ. ಮಂಜಣ್ಣ ಅವರ ಅಧ್ಯಕ್ಷತೆಯಲ್ಲಿ ಇಬ್ಬರು ಸದಸ್ಯರು, 6 ಮತ್ತು 7 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆಗೆ ಕಲಬುರಗಿಯ ಕೇಂದ್ರೀಯ ವಿದ್ಯಾನಿಲಯದ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕಿರಣ ಎಂ. ಅವರ ಅಧ್ಯಕ್ಷತೆಯಲ್ಲಿ ಐವರು ಸದಸ್ಯರು, 8 ಮತ್ತು 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆ ಸಮಿತಿಯ ಸಮಿತಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಡಾ. ಅಶ್ವತ್ಥನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಇತರೆ ಎಂಟು ಸದಸ್ಯರ ಸಮಿತಿ ರಚಿಸಲಾಗಿದೆ. ಈ ಸಮಿತಿಗಳ ಸದಸ್ಯ ಕಾರ್ಯದರ್ಶಿಯಾಗಿ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕರು ಕಾರ್ಯನಿರ್ವಹಿಸಲಿದ್ದಾರೆ.

ಯಾವ್ಯಾವ ಪಠ್ಯ ಪರಿಷ್ಕರಣೆ

1-10ನೇ ತರಗತಿ ಕನ್ನಡ ಪ್ರಥಮ, ದ್ವಿತೀಯ ಭಾಷೆ, 9-10ನೇ ತರಗತಿ ಕನ್ನಡ ತೃತೀಯ ಭಾಷೆ, 6-10ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಮಿತಿ ರಚನೆ

Follow Us:
Download App:
  • android
  • ios