ಈ ವರ್ಷದಿಂದ 9, 11ನೇ ಕ್ಲಾಸಿಗೂ ಇನ್ನು ಪಬ್ಲಿಕ್ ಪರೀಕ್ಷೆ: ಶಿಕ್ಷಣ ಇಲಾಖೆಯಿಂದ ಆದೇಶ
ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿಸಲು ಪ್ರಸಕ್ತ ಸಾಲಿನಿಂದಲೇ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಪಬ್ಲಿಕ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿ ಆದೇಶ ಹೊರಡಿಸಿದೆ.
ಬೆಂಗಳೂರು (ಸೆ.24): ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿಸಲು ಪ್ರಸಕ್ತ ಸಾಲಿನಿಂದಲೇ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಪಬ್ಲಿಕ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿ ಆದೇಶ ಹೊರಡಿಸಿದೆ. 2023-24ನೇ ಸಾಲಿನಿಂದಲೇ 9ನೇ ತರಗತಿ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯಲಿದೆ. ಈಗಾಗಲೇ 5, 8, 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತಿದೆ. ಇದೀಗ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಈ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಪರಿಶೀಲಿಸಿ ಉತ್ತಮಗೊಳಿಸಲು ಸಹಾಯಕವಾಗಲಿದೆ.
ಮಂಡಳಿಯಿಂದಲೇ ಪ್ರಶ್ನೆ ಪತ್ರಿಕೆ: ಪ್ರಶ್ನೆಪತ್ರಿಕೆಗಳನ್ನು ಮಂಡಳಿಯೇ ಸಿದ್ಧಪಡಿಸಲಿದ್ದು, ಪರೀಕ್ಷೆಗಳು ಮಾತ್ರ ಆಯಾ ಶಾಲಾ-ಕಾಲೇಜುಗಳ ಹಂತದಲ್ಲಿಯೇ ನಡೆಯಲಿವೆ. 9ನೇ ತರಗತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್‌ನಲ್ಲಿ ಪ್ರಶ್ನೆ ಪತ್ರಿಕೆ ಅಪ್‌ಲೋಡ್ ಮಾಡಲಿದ್ದು, ನಂತರ ಶಾಲೆಗಳಿಗೆ ಪ್ರಶ್ನೆ ಪತ್ರಿಕೆ ರವಾನಿಸಲಾಗುತ್ತದೆ. ಸಮೀಪದ ಶಾಲೆಗಳ ಶಿಕ್ಷಕರಿಗೆ ಪರೀಕ್ಷಾ ಕೊಠಡಿ ಮೇಲ್ವಿಚಾರಣೆ ಹೊಣೆ ವಹಿಸಲಿದ್ದು, ತಾಲೂಕು ಹಂತದಲ್ಲಿ ಮೌಲ್ಯಮಾಪನ ನಡೆಯಲಿದೆ. ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವಂತಿಲ್ಲ. ಫಲಿತಾಂಶವನ್ನು ವಿದ್ಯಾರ್ಥಿ ಮತ್ತು ಪಾಲಕರಿಗೆ ಮಾತ್ರ ನೀಡಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.
11ನೇ ತರಗತಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಲಾಗಿನ್‌ನಲ್ಲಿ ಪ್ರಶ್ನೆ ಪತ್ರಿಕೆ ಅಪ್‌ಲೋಡ್ ಮಾಡಲಿದ್ದು, ಬಳಿಕ ಕಾಲೇಜುಗಳಿಗೆ ಪ್ರಶ್ನೆ ಪತ್ರಿಕೆ ರವಾನೆಯಾಗಲಿದೆ. ಆಯಾ ಕಾಲೇಜಿನ ಉಪನ್ಯಾಸಕರನ್ನೇ ಪರೀಕ್ಷಾ ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗುವುದು. ಕಾಲೇಜುಗಳಲ್ಲೇ ಮೌಲ್ಯಮಾಪನ ನಡೆಯಲಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಯಾ ಕಾಲೇಜುಗಳಲ್ಲೇ ಪೂರಕ ಪರೀಕ್ಷೆ ನಡೆಯಲಿದೆ.
ನನ್ನ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಟ್ಟಿದ್ದೆ: ಎಚ್.ಡಿ.ಕುಮಾರಸ್ವಾಮಿ
ಏನೇನು ಬದಲಾವಣೆ?
- ಇಷ್ಟು ದಿನ ಹೈಸ್ಕೂಲ್, ಕಾಲೇಜು ಮಟ್ಟದಲ್ಲೇ ನಡೆಯುತ್ತಿದ್ದ ಪರೀಕ್ಷೆ
- ಈ ವರ್ಷದಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಉಸ್ತುವಾರಿಯಲ್ಲಿ ಪರೀಕ್ಷೆ
- ಡಿಡಿಪಿಐ ಮಟ್ಟದಲ್ಲಿ ತಯಾರಾಗುತ್ತಿದ್ದ ಪ್ರಶ್ನೆ ಪತ್ರಿಕೆ ಇನ್ನು ಮುಂದೆ ಮಂಡಳಿಯಿಂದಲೇ ತಯಾರಿ
- 9ನೇ ಕ್ಲಾಸ್ ಮೌಲ್ಯಮಾಪನ ತಾಲೂಕು ಮಟ್ಟದಲ್ಲಿ; ಪ್ರಥಮ ಪಿಯು ಮೌಲ್ಯಮಾಪನ ಆಯಾ ಕಾಲೇಜಿನಲ್ಲಿ
- 9ನೇ ಕ್ಲಾಸಿನಲ್ಲಿ ಯಾರನ್ನೂ ಫೇಲ್ ಮಾಡುವಂತಿಲ್ಲ
- ಪ್ರಥಮ ಪಿಯುಸಿಯಲ್ಲಿ ಫೇಲ್ ಮಾಡಬಹುದು; ನಂತರ ವಿದ್ಯಾರ್ಥಿ ಪೂರಕ ಪರೀಕ್ಷೆ ಬರೆಯಬೇಕು
- ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ವೃದ್ಧಿಸುವಂತೆ ಮಾಡಲು ಈ ಬದಲಾವಣೆ: ಸರ್ಕಾರದ ಹೇಳಿಕೆ