ಚಾಮರಾಜನಗರದಲ್ಲಿ ಪ್ರಗತಿಪರ ರೈತರೊಬ್ಬರು ವಿವಿಧ ತಳಿಯ ಮಾವಿನ ಹಣ್ಣಿನ ಪ್ರದರ್ಶನ ಏರ್ಪಡಿಸಿ, ಶಾಲಾ ಮಕ್ಕಳಿಗೆ ಮಾವು ತಿನ್ನುವ ಸ್ಪರ್ಧೆ ಏರ್ಪಡಿಸಿದ್ದರು. ಮಕ್ಕಳು ಮಾವುಗಳನ್ನು ಸವಿಯುವುದರ ಜೊತೆಗೆ ವಿವಿಧ ತಳಿಗಳ ಮಾಹಿತಿಯನ್ನು ಪಡೆದುಕೊಂಡರು.

ವರದಿ: ಪುಟ್ಟರಾಜು. ಆರ್. ಸಿ ಏಷ್ಯಾನೆಟ್ ಸುವರ್ಣ ನ್ಯೂಸ್

ಚಾಮರಾಜನಗರ: ಹಣ್ಣುಗಳ ರಾಜ ಅಂದ್ರೆ ಅದು ಮಾವಿನ ಹಣ್ಣು. ಈ ಬಾರಿ ಮಾವಿನ ಹಣ್ಣಿನ ಸೀಸನ್ ಮುಗಿಯುತ್ತ ಬಂದಿದೆ. ಆದ್ರೆ ಇಲ್ಲೊಬ್ಬ ಪ್ರಗತಿಪರ ರೈತ ತನ್ನ ಜಮೀನಿನಲ್ಲಿ ಬೆಳೆದ ವಿವಿಧ ತಳಿಯ ಮಾವಿನ ಹಣ್ಣಿನ ಪ್ರದರ್ಶನ ಮಾಡಿದ್ದಾರೆ. ಇದರ ಜೊತೆಗೆ ಸರ್ಕಾರಿ ಶಾಲಾ ವಿಧ್ಯಾರ್ಥಿಗಳಿಗೆ ಮಾವಿನ ಹಣ್ಣು ತಿನ್ನುವ ಸ್ಪರ್ಧೆ ನಡೆಸಿದ್ದು, ತಾ ಮುಂದು ನಾ ಮುಂದು ಎಂದು ವಿಧ್ಯಾರ್ಥಿಗಳು ಮಾವು ಸವಿದಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಹೌದು ಇನ್ನೇನೂ ಮಾವಿನ ಸೀಸನ್ ಮುಗಿಯುತ್ತಾ ಬಂದಿದ್ದು ಉತ್ಕೃಷ್ಟ ದರ್ಜೆಯ ಮಾವುಗಳನ್ನು ಶಾಲಾ ವಿದ್ಯಾರ್ಥಿಗಳು ನೋಡಿ ಮಾಹಿತಿ ತಿಳಿಯುವ ಜೊತೆಗೆ ಮಾವಿನ ಹಣ್ಣು ತಿನ್ನುವ ಸ್ಪರ್ಧೆಯಲ್ಲೂ ಪಾಲ್ಗೊಂಡು ಮಾವನ್ನು ಸವಿದಿದ್ದಾರೆ. ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದ ಸಮೀಪದಲ್ಲಿರುವ ಶುದ್ದ ಪಾರಂ ಹೌಸ್ ನಲ್ಲಿ ಮಕ್ಕಳಿಗೆ ಮನರಂಜನೆಯ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಮಾವಿನಹಣ್ಣು ತಿನ್ನುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.

ಮಕ್ಕಳಿಗೆ ಅರಿವಿನ ಜೊತೆಗೆ ಸ್ಪರ್ಧಾ ಮನೋಭಾವ ಬೆಳೆಸುವ ಉದ್ದೇಶದಿಂದ ಮಾವು ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವಿಶೇಷ ಕಾರ್ಯಕ್ರಮದಲ್ಲಿ ಹನೂರು ತಾಲೂಕಿನ ಮಣಗಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಚಿಂಚಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಂದ ಒಟ್ಟು 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಮಣಗಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಚಂದನ್ 9 ಮಾವಿನ ಹಣ್ಣುಗಳನ್ನು ತಿಂದು ಪ್ರಥಮ ಸ್ಥಾನ ಪಡೆದುಕೊಂಡರೆ, ನಿಶಾಂತ್ ಎಂಬ ವಿದ್ಯಾರ್ಥಿ 8 ಹಣ್ಣುಗಳನ್ನು ತಿಂದು ದ್ವಿತೀಯ ಸ್ಥಾನ ಗಳಿಸಿದರು.

ಈ ಸಂದರ್ಭದಲ್ಲಿ ಪ್ರಗತಿಪರ ರೈತ, ಸುವರ್ಣ ರೈತ ರತ್ನ ಪ್ರಶಸ್ತಿ ಪುರಸ್ಕ್ರುತರಾದ ದಯಾನಂದ್ ಮಾತನಾಡಿ ನನ್ನ ಜಮೀನಿನಲ್ಲಿ ಬೆಳೆಯಲಾದ ಮಾವಿನ ಹಣ್ಣುಗಳನ್ನು ಮಕ್ಕಳಿಗೆ ಸ್ಪರ್ಧೆ ಆಯೋಜನೆ ಮಾಡುವ ಮುಖೇನಾ ನೀಡಲು ಸಾಧ್ಯವಾಗಿರುವುದು ಹೆಮ್ಮೆಯ ವಿಚಾರ. ನಮ್ಮ ಫಾರಂನಲ್ಲಿ 25 ಕ್ಕೂ ಹೆಚ್ಚು ಮಾವಿನ ತಳಿಗಳನ್ನು ಬೆಳೆಯಲಾಗಿದೆ ಆದರೆ ನೋಡಿದ ತಕ್ಷಣ ಮಾವಿನ ಹಣ್ಣು ಎಂಬುವುದು ಮಾತ್ರ ನೆನಪಿಗೆ ಬರುತ್ತದೆ. ಪ್ರತಿಯೊಂದು ತಳಿಗಳ ಪ್ರಯೋಜನವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವು ಮಾಹಿತಿ ಹಾಗೂ ಮಾವಿನ ಪ್ರಯೋಜನವನ್ನು ತಿಳಿದುಕೊಂಡಿರುವುದು ಸಂತಸದ ವಿಚಾರ ಎಂದರು.

ಒಟ್ನಲ್ಲಿ ಮಾವಿನ ಬಗ್ಗೆ ವಿಧ್ಯಾರ್ಥಿಗಳಿಗೆ ಅರಿವು ಮೂಡಿಸಲು ಮಾವಿನ ತಳಿಗಳ ಪರಿಚಯದ ಜೊತೆಗೆ ಮಾವಿನ ಬಗ್ಗೆ ವಿಧ್ಯಾರ್ಥಿಗಳಿಗೆ ಆಸಕ್ತಿ ಮೂಡಿಸಲು ಸ್ಪರ್ಧೆ ನಡೆಸಲಾಗಿದೆ. ವಿಧ್ಯಾರ್ಥಿಗಳು ಕೂಡ ಮಾವಿನ ಹಣ್ಣು ಸವಿಯುವ ಜೊತೆಗೆ ಒನ್ ಡೇ ಎಂಜಾಯ್ ಮಾಡಿದ್ದಾರೆ.