ಫಲಿತಾಂಶ ಬಂದು 3 ತಿಂಗಳಾದ್ರೂ ಪಿಯು ಶಿಕ್ಷಕರಿಗೆ ಇನ್ನೂ ಮೌಲ್ಯಮಾಪನ ಭತ್ಯೆ ಇಲ್ಲ!
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿ ಮೂರು ತಿಂಗಳಾಗುತ್ತಿದ್ದರೂ ಪಿಯು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ಉಪನ್ಯಾಸಕರಿಗೆ ಮೌಲ್ಯಮಾಪನ ಸಂಭಾವನೆ ಹಾಗೂ ಇತರೆ ಭತ್ಯೆಗಳು ಇನ್ನೂ ಸರ್ಕಾರದಿಂದ ಬಿಡುಗಡೆಯಾಗಿಲ್ಲ.
ಲಿಂಗರಾಜು ಕೋರಾ
ಬೆಂಗಳೂರು (ಜು.15) : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿ ಮೂರು ತಿಂಗಳಾಗುತ್ತಿದ್ದರೂ ಪಿಯು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ಉಪನ್ಯಾಸಕರಿಗೆ ಮೌಲ್ಯಮಾಪನ ಸಂಭಾವನೆ ಹಾಗೂ ಇತರೆ ಭತ್ಯೆಗಳು ಇನ್ನೂ ಸರ್ಕಾರದಿಂದ ಬಿಡುಗಡೆಯಾಗಿಲ್ಲ.
ಪಿಯು ಮೌಲ್ಯಮಾಪಕರಿಗೆ ನೀಡಬೇಕಾದ ಸಂಭಾವನೆ ಮತ್ತು ಭತ್ಯೆಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಸ್ತಾವನೆ ಸಲ್ಲಿಸಿದೆಯಾದರೂ ಇನ್ನೂ ಕೂಡ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಮೌಲ್ಯಮಾಪನ ಕಾರ್ಯ ಮುಗಿಸಿ ಸಮಯಕ್ಕೆ ಸರಿಯಾಗಿ ಫಲಿತಾಂಶ ಪ್ರಕಟಿಸಲು ನೆರವಾದ 26,000 ಹೆಚ್ಚು ಉಪನ್ಯಾಸಕರು ತಮ್ಮ ಸಂಭಾವನೆ ಮತ್ತು ಭತ್ಯೆಗಾಗಿ ಚಾತಕ ಪಕ್ಷಿಗಳಂತೆ ಕಾಯುವಂತಾಗಿದೆ.
ಪಿಯುಸಿಯಲ್ಲಿನ್ನು 20 ಆಂತರಿಕ ಅಂಕ: ಇದೇ ವರ್ಷದಿಂದ ಜಾರಿ
ಕಳೆದ ಮಾಚ್‌ರ್ 9ರಿಂದ 29ರವರೆಗೆ ನಡೆದ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಒಟ್ಟಾರೆ 7.02 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದರು. ಈ ಎಲ್ಲ ವಿದ್ಯಾರ್ಥಿಗಳು ಬರೆದಿದ್ದ ಆರೂ ವಿಷಯಗಳÜ ಒಟ್ಟು 45 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಏ.4ರಿಂದ ಆರಂಭಿಸಿ ಕೇವಲ 15 ದಿನಗಳಲ್ಲಿ ಪೂರ್ಣಗೊಳಿಸಿ ಏ.21ಕ್ಕೆ ಫಲಿತಾಂಶ ಪ್ರಕಟಿಸಲಾಗಿತ್ತು. 5.25 ಲಕ್ಷ ಮಕ್ಕಳು ಉತ್ತಿರ್ಣರಾಗುವ ಮೂಲಕ ಶೇ.74.67ರಷ್ಟುಫಲಿತಾಂಶ ಬಂದಿತ್ತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು(ಕೆಎಸ್‌ಇಎಬಿ) ಸುಮಾರು 26 ಸಾವಿರ ಉಪನ್ಯಾಸಕರನ್ನು ಈ ಬಾರಿ ಮೌಲ್ಯಮಾಪನ ಕಾರ್ಯಕ್ಕೆ ಬಳಸಿಕೊಂಡಿತ್ತು.
₹18 ಕೋಟಿ ಸಂಭಾವನೆ-ಭತ್ಯೆಗೆ ಬೇಡಿಕೆ:
ಈ ಬಗ್ಗೆ ಮಂಡಳಿಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಪಿಯು ಉಪನ್ಯಾಸಕರ ಮೌಲ್ಯಮಾಪನ ಸಂಭಾವನೆ ಮತ್ತು ಭತ್ಯೆಗೆ ಸುಮಾರು 18 ಕೋಟಿ ರು. ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೊಂದು ವಾರದಲ್ಲಿ ಅನುದಾನ ಬಿಡುಗಡೆಯಾಗಬಹುದು. ಬಂದ ಕೂಡಲೇ ನೀಡಲಾಗುವುದು ಎಂದು ಹೇಳುತ್ತಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಎಸ್‌ಇಎಬಿ ನಿರ್ದೇಶಕ (ಪರೀಕ್ಷೆ) ಗೋಪಾಲಕೃಷ್ಣ ಅವರು, ಎಸ್ಸೆಸ್ಸೆಲ್ಸಿ ಮೌಲ್ಯಮಾಪಕರಿಗೆ ಸಂಪೂರ್ಣ ಸಂಭಾವನೆ ಮತ್ತು ಭತ್ಯೆ ನೀಡಲಾಗಿದೆ. ಅವರಿಗೆ ನೀಡಲು ಬೇಕಾದ ಅನುದಾನ ಮಂಡಳಿಯಲ್ಲೇ ಇರುತ್ತದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕವನ್ನು ಮಂಡಳಿಗೆ ನೀಡಲಾಗುತ್ತದೆ. ಹಾಗಾಗಿ ಆ ಹಣ ಬಳಸಿಕೊಂಡು ಮೌಲ್ಯಮಾಪನ ಮುಗಿದ ಕೂಡಲೇ ಸಂಭಾವನೆ, ಭತ್ಯೆ ಬಿಡುಗಡೆ ಮಾಡುತ್ತೇವೆ. ಆದರೆ, ಪಿಯು ವಿದ್ಯಾರ್ಥಿಗಳು ಪಾವತಿಸುವ ಶುಲ್ಕವನ್ನು ಕಾಲೇಜುಗಳು ನೇರವಾಗಿ ಸರ್ಕಾರಕ್ಕೆ ಪಾವತಿಸುತ್ತವೆ. ಹಾಗಾಗಿ ಅವರ ಸಂಭಾವನೆ ಮತ್ತು ಭತ್ಯೆಗೆ ಹಣ ಸರ್ಕಾರದಿಂದಲೇ ಬರಬೇಕು. ಇದರಿಂದ ಸ್ವಲ್ಪ ತಡವಾಗಿದೆ. ಇನ್ನೊಂದು ವಾರದಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಇನ್ಮುಂದೆ ಎಲ್ಲಾ ವಿಷಯಗಳಿಗೂ ಇಂಟರ್ನಲ್ ಮಾರ್ಕ್ಸ್..!
ಮೌಲ್ಯಮಾಪನ ಕಾರ್ಯಕ್ಕೆ ಕಡ್ಡಾಯವಾಗಿ ಹಾಜರಾಗಬೇಕೆಂದು ಮಾತ್ರ ಸರ್ಕಾರ ಹೇಳುತ್ತದೆ. ಆದರೆ, ಮೌಲ್ಯಮಾಪನ ಮುಗಿದು ಫಲಿತಾಂಶ ಬಂದು ಮೂರು ತಿಂಗಳಾದರೂ ಮೌಲ್ಯಮಾಪನ ನಡೆಸಿದ ಉಪನ್ಯಾಸಕರಿಗೆ ಸಂಭಾವನೆ ನೀಡದಿದ್ದರೆ ಹೇಗೆ? ಆದಷ್ಟುಬೇಗ ಸಂಭಾವನೆ, ಭತ್ಯೆ ಬಿಡುಗಡೆಗೆ ಅನುದಾನ ಬಿಡುಗಡೆ ಮಾಡಬೇಕು.
- ಎನ್.ನಿಂಗೇಗೌಡ, ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ