ಪಿಯುಸಿಯಲ್ಲಿನ್ನು 20 ಆಂತರಿಕ ಅಂಕ: ಇದೇ ವರ್ಷದಿಂದ ಜಾರಿ
ಆಂತರಿಕ ಮೌಲ್ಯಮಾಪನ ನಡೆಸಲು ಪಿಯು ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದ್ದು ಪ್ರಸಕ್ತ ಸಾಲಿನಿಂದಲೇ ಜಾರಿಗೆ ಅನುಮತಿಸಿದೆ.
ಬೆಂಗಳೂರು(ಜು.11): ಪಿಯುಸಿಯಲ್ಲಿ ಪ್ರಾಯೋಗಿಕ ಪರೀಕ್ಷೆ ಹೊಂದಿರದ ಭಾಷಾ ವಿಷಯಗಳು ಹಾಗೂ ಕಲಾ, ವಾಣಿಜ್ಯ ವಿಭಾಗದ ಕೋರ್ ವಿಷಯಗಳ ಪರೀಕ್ಷೆಗೆ 2023-24ನೇ ಸಾಲಿನಿಂದ 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ಪರೀಕ್ಷೆ ನಡೆಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಆಂತರಿಕ ಮೌಲ್ಯಮಾಪನ ನಡೆಸಲು ಪಿಯು ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ನೀಡಿದ್ದು ಪ್ರಸಕ್ತ ಸಾಲಿನಿಂದಲೇ ಜಾರಿಗೆ ಅನುಮತಿಸಿದೆ.
ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಸ್ತುತ ಭೌತಶಾಸ್ತ್ರ, ರಸಾಯನಾಸ್ತ್ರ, ಜೀವಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ (ಎಲೆಕ್ಟ್ರಾನಿಕ್ಸ್), ಗಣಕ ವಿಜ್ಞಾನ, ಗೃಹ ವಿಜ್ಞಾನ, ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಸೇರಿದಂತೆ ಇನ್ನು ಹಲವು ವಿಷಯಗಳಿಗೆ 70 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು ಉಳಿದ 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ. ಇದು ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ. ಪ್ರಾಯೋಗಿಕ ತರಗತಿ ಹಾಗೂ ಪರೀಕ್ಷೆ ಯಾವ್ಯಾವ ವಿಷಯಗಳಿಗೆ ಇಲ್ಲವೋ ಅಂದರೆ ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಭಾಷಾ ವಿಷಯಗಳು ಹಾಗೂ ಕಲಾ, ವಾಣಿಜ್ಯ ವಿಭಾಗದ ಐಚ್ಛಿಕ ವಿಷಯಗಳು ಮತ್ತು ಇನ್ನಿತರೆ ಕೋರ್ ವಿಷಯಗಳಲ್ಲಿ ಇನ್ನು ಮುಂದೆ 80:20ರ ಅನುಪಾತದಲ್ಲಿ ಅಂದರೆ 80 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ನಡೆಯಲಿದೆ.
ಪಿಯು ಪ್ರವೇಶಕ್ಕೆ ಜು.30ರವರೆಗೆ ಕಾಲಾವಕಾಶ
20 ಅಂಕಗಳ ಹಂಚಿಕೆ ಹೇಗೆ?
ವಿದ್ಯಾರ್ಥಿಗಳು ಭಾಷಾ ಹಾಗೂ ಕೋರ್ ವಿಷಯಗಳಲ್ಲಿ ಕಾಲೇಜು ಹಂತದಲ್ಲೇ ಬರೆಯುವ ಎರಡು ಕಿರು ಪರೀಕ್ಷೆಗಳು ಮತ್ತು ಅರ್ಧವಾರ್ಷಿಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿ ಪಡೆದ ಅಂಕಗಳಲ್ಲಿ ಉತ್ತಮವಾದ ಎರಡನ್ನು 10 ಅಂಕಗಳಿಗೆ ಪರಿವರ್ತಿಸಿ ಅವುಗಳ ಸರಾಸರಿ ಅಂಕಗಳನ್ನು ನೀಡಬೇಕು. ಅದೇ ರೀತಿ ಪ್ರಾಜೆಕ್ಟ್ ಹಾಗೂ ಅಸೈನ್ಮೆಂಟ್ ಪ್ರಸ್ತುಪಡಿಸುವಿಕೆಗೆ ತಲಾ 5ರಂತೆ ಒಟ್ಟು 10 ಅಂಕ ನೀಡಬೇಕು. ಒಟ್ಟಾರೆ ಫಲಿತಾಂಶ ನೀಡುವಾಗ 80 ಅಂಕದ ಲಿಖಿತ ಪರೀಕ್ಷೆ ಮತ್ತು 20 ಅಂಕದ ಆಂತರಿಕ ಮೌಲ್ಯಮಾಪನದಲ್ಲಿ ಪಡೆದ ಅಂಕಗಳನ್ನು ಸೇರಿಸಿ ಫಲಿತಾಂಶ ಪ್ರಕಟಿಸಬೇಕು ಎಂದು ತಿಳಿಸಲಾಗಿದೆ.