ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿರುವ ಕಾರ್ಯ ಶ್ಲಾಘನೀಯ: ಬಿ.ಸಿ.ನಾಗೇಶ್
- ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿರುವ ಕಾರ್ಯ ಶ್ಲಾಘನೀಯ
- ಎಂ.ಎಸ್. ಡಂಬಳ ಹೆಣ್ಣುಮಕ್ಕಳ ಶಾಲೆಯ ಸುವರ್ಣ ಮಹೋತ್ಸವದಲ್ಲಿ ಸಚಿವ ಬಿ.ಸಿ. ನಾಗೇಶ್
ಮುಂಡರಗಿ (ನ.13) : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 2001 ರಲ್ಲಿ ಸರ್ವ ಶಿಕ್ಷಣ ಅಭಿಯಾನ ಪ್ರಾರಂಭಿಸುವ ಮೂಲಕ ಎಲ್ಲರೂ ಶಾಲೆಗೆ ಬರುವಂತೆ ಮಾಡಿದರು. 2014ರಲ್ಲಿ ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮ ಘೋಷಿಸಿದರು. ಇವೆರಡಕ್ಕೂ ಮೊದಲೇ ಮುಂಡರಗಿಯಲ್ಲಿ 50 ವರ್ಷಗಳ ಹಿಂದೆಯೇ ಅನ್ನದಾನೀಶ್ವರ ಶ್ರೀಗಳು ಅನ್ನದಾನೀಶ್ವರ ವಿದ್ಯಾ ಸಮಿತಿಯಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿರುವ ಕಾರ್ಯ ಶ್ಲಾಘನೀಯ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದರು.
ಅವರು ಭಾನುವಾರ ಸಂಜೆ ಪಟ್ಟಣದ ಶ್ರೀ ಜ.ಅ. ವಿದ್ಯಾ ಸಮಿತಿಯ ಎಂ.ಎಸ್. ಡಂಬಳ ಹೆಣ್ಣುಮಕ್ಕಳ ಶಾಲೆಯ ಸುವರ್ಣ ಮಹೋತ್ಸವ ಮತ್ತು ಎಂ.ಎಸ್. ಡಂಬಳ ಮಹಿಳಾ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಧ್ಯಾನ ದಂಗಲ್: ಸಿದ್ದರಾಮಯ್ಯಗೆ ಕುಟುಕಿದ ಸಚಿವ ನಾಗೇಶ್
ನಾವೆಲ್ಲರೂ ಈ ಸಂಸ್ಕೃತಿಯಲ್ಲಿ ಬೆಳೆದಂತವರು. ಈ ಸಂಸ್ಕೃತಿಯಲ್ಲಿ ಔಪಚಾರಿಕ ಶಿಕ್ಷಣಕ್ಕಿಂತ ಅನೌಪಚಾರಿಕ ಶಿಕ್ಷಣವನ್ನು ಹೆಚ್ಚು ಒಪ್ಪಿಕೊಳ್ಳುತ್ತಿದ್ದೆವು. ಇದು ಶಿಕ್ಷಣಕ್ಕೆ ಹಾಗೂ ಜ್ಞಾನಕ್ಕೆ ಹೆಚ್ಚು ಒತ್ತು ನೀಡಿದಂತ ದೇಶ. ಆದರೆ, ಅದನ್ನು ಶಾಲೆ ಮೂಲಕವೇ ಕೊಡುತ್ತಿರಲಿಲ್ಲ. ಅನೌಪಚಾರಿಕ ಶಿಕ್ಷಣದಿಂದಲೇ ಕೊಡಲಾಗುತ್ತಿತ್ತು. ಆ ಅನೌಪಚಾರಿಕ ಶಿಕ್ಷಣದಲ್ಲಿಯೂ ಸಹ ತುಂಬಾ ಹೆಚ್ಚಿನ ಪಾತ್ರವನ್ನು ವಹಿಸಿದವುಗಳೆಂದರೆ ಅವು ಮಠ- ಮಂದಿರಗಳು ಎನ್ನುವುದನ್ನು ನಾವು ಮರೆಯುವಂತಿಲ್ಲ. ಮನೆಯೆ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನುವುದನ್ನು ಸಹ ನಾವು ಮರೆಯುವಂತಿಲ್ಲ. ಆ ತರಹದ ಜ್ಞಾನಕ್ಕೆ ಒತ್ತು ಕೊಟ್ಟಂತಹ ದೇಶ ನಮ್ಮದು.
ಮಕ್ಕಳಲ್ಲಿ ಅಡಗಿರುವ ಸೂಕ್ತ ಮತ್ತು ನೈಜ ಆಸಕ್ತಿಯನ್ನು ಹೊರತರುವ ಮೂಲಕ ಅವರಲ್ಲಿ ರಾಷ್ಟ್ರೀಯತೆಯನ್ನು ಮತ್ತು ಕೌಶಲ್ಯವನ್ನು ಬೆಳಸಿ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗುವ ವಾತಾವರಣವನ್ನು ನಿರ್ಮಿಸುವುದೇ ರಾಷ್ಟ್ರೀಯ ನೂತನ ಶಿಕ್ಷಣ ನೀತಿ. ರಾಜ್ಯದಲ್ಲಿ ಈ ವರ್ಷದಿಂದ ಈ ಯೋಜನೆ ಜಾರಿಗೆ ಬರುತ್ತಿದ್ದು, ಮುಂಡರಗಿ ಶ್ರೀಗಳು ಸಹ ತಮ್ಮ ಸಂಸ್ಥೆಯ 2-3 ಶಾಲೆಗಳಲ್ಲಿ ಈ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು. ಇಂತಹ ಪ್ರದೇಶದಲ್ಲಿ ಶ್ರೀಗಳು 33 ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ಈ ಭಾಗದಲ್ಲಿ ಶಿಕ್ಷಣ ಕ್ರಾಂತಿಯನ್ನೇ ಮಾಡಿದ್ದಾರೆ. ಹೊಸ ಶಿಕ್ಷಣ ನೀತಿ ಸಂಪೂರ್ಣ ಜಾರಿಗೆ ಬಂದರೆ ಮಕ್ಕಳು ತಮ್ಮ ಇಚ್ಚೆಯಂತೆ ಶಿಕ್ಷಣ ಕಲಿತು ಸ್ವಾವಲಂಬಿ ಬದುಕು ಬದುಕಲು ಸಾಧ್ಯವಾಗುತ್ತದೆ ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಸ್ವತಂತ್ರ ಪೂರ್ವದಲ್ಲಿ ಶಿಕ್ಷಣ ಮರೀಚಿಕೆಯಾಗಿತ್ತು. ಇಂತಹ ಸಂದರ್ಭದಲ್ಲಿ 1924 ರಲ್ಲಿ ಮುಂಡರಗಿ ಶ್ರೀಗಳು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಮುಂಡರಗಿಯಲ್ಲಿ ಒಂದು ಪ್ರೌಢಶಾಲೆಯನ್ನು ಪ್ರಾರಂಭಿಸಿದರು. ಈ ಶಾಲೆ ಈಗ 98 ವರ್ಷಗಳನ್ನು ಪೂರೈಸಿದ್ದು ಸಾಧನೆಯಾಗಿದೆ. ಒಂದು ಸರ್ಕಾರ ಮಾಡುವಂತಹ ಕೆಲಸವನ್ನು ಶ್ರೀಗಳು ಈ ನಾಡಿನಲ್ಲಿ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ವಿಪ ಸದಸ್ಯ ಪ್ರೊ. ಎಸ್.ವಿ. ಸಂಕನೂರ, ಶಾಸಕ ರಾಮಣ್ಣ ಲಮಾಣಿ ಮಾತನಾಡಿದರು. ಶಾಲಾ ಸ್ಥಾನಿಕ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಎಂ.ಎಸ್. ಶಿವಶೆಟ್ಟಿಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಚಿವ ಬಿ.ಸಿ. ನಾಗೇಶ ಅವರು ಸಿ.ಎಸ್. ಅರಸನಾಳ ಸಂಪಾದಿಸಿರುವ ಸುವರ್ಣ ಸಿರಿ ಮತ್ತು ರಜತ ಸಿರಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಶ್ರೀಗಳು ನೇತೃತ್ವ ವಹಿಸಿದ್ದರು.
ಶಾಲೆಗಳಲ್ಲಿ ಧ್ಯಾನದ ವಿಚಾರಕ್ಕೆ ಟ್ವೀಟ್ ವಾರ್: ಸಿದ್ದು ವಿರುದ್ಧ ಸಚಿವ ನಾಗೇಶ್ ಗರಂ..!
ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಕರಬಸಪ್ಪ ಹಂಚಿನಾಳ, ಆರ್.ಆರ್. ಹೆಗ್ಗಡಾಳ, ಈರಣ್ಣ ಡಂಬಳ, ಹೇಮಗಿರೀಶ ಹಾವಿನಾಳ, ನಾಗೇಶ ಹುಬ್ಬಳ್ಳಿ, ಭೀಮಸಿಂಗ್ ರಾಠೋಡ, ನಾಗರಾಜ ಹಳ್ಳಿಕೇರಿ, ಬಸವರಾಜ ಧಾರವಾಡ, ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡ್ರ, ಡಿಡಿಪಿಐ ಬಸವಲಿಂಗಪ್ಪ, ಬಿಇಓ ಎಂ.ಎಫ್. ಬಾರ್ಕಿ, ಪ್ರತಿಭಾ ಹೊಸಮನಿ, ಎಸ್.ಎಸ್. ಗಡ್ಡದ, ಎಸ್.ಎಂ. ಅಗಡಿ ಸೇರಿದಂತೆ ಅನೇಕರು ಇದ್ದರು. ಸಮಿತಿಯ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಸ್ವಾಗತಿಸಿದರು. ಎಸ್.ಆರ್. ರಿತ್ತಿ ಮತ್ತು ಶಿಕ್ಷಕ ಮಠದ ನಿರೂಪಿಸಿದರು.