ಶಾಲೆಗಳಲ್ಲಿ ಧ್ಯಾನದ ವಿಚಾರಕ್ಕೆ ಟ್ವೀಟ್ ವಾರ್: ಸಿದ್ದು ವಿರುದ್ಧ ಸಚಿವ ನಾಗೇಶ್ ಗರಂ..!
ಟ್ವಿಟ್ಟರ್‌ನಲ್ಲೇ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಚಿವ ಬಿ.ಸಿ.ನಾಗೇಶ್
ಬೆಂಗಳೂರು(ನ.05): ಶಾಲೆಗಳಲ್ಲಿ ಧ್ಯಾನದ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯೆ ಟ್ವೀಟ್ ವಾರ್ ನಡೆಯುತ್ತಿದೆ. ನಿನ್ನೆ ಶಾಲೆಗಳಲ್ಲಿ ಧ್ಯಾನದ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಇಂದು ಸಚಿವ ಬಿ.ಸಿ.ನಾಗೇಶ್ ಅವರೂ ಕೂಡ ಟ್ವಿಟ್ಟರ್‌ನಲ್ಲೇ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.
ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಸಚಿವ ಬಿ.ಸಿ. ನಾಗೇಶ್ ಅವರು, ಮಾನ್ಯ ಸಿದ್ದರಾಮಯ್ಯನವರೇ ಮಾನಸಿಕ, ದೈಹಿಕ ಆರೋಗ್ಯ, ಏಕಾಗ್ರತೆ, ವ್ಯಕ್ತಿತ್ವ ವಿಕಸನಕ್ಕಾಗಿ ಶಾಲಾ ಮಕ್ಕಳು 10 ನಿಮಿಷ ಧ್ಯಾನ ಮಾಡುವ ಉತ್ತಮ ಆಲೋಚನೆಯಲ್ಲೂ ನಿಮ್ಮಂತವರು ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವುದು ದುರಾದೃಷ್ಟಕರವಾಗಿದೆ. ಮಕ್ಕಳು ಧ್ಯಾನ ಮಾಡುವುದು ಗಿಮಿಕ್ ಹೇಗೆ ಆಗುತ್ತದೆ ಎಂಬುದನ್ನು ಜನತೆಗೆ ಸ್ವಲ್ಪ ವಿವರಿಸುವಿರಾ? ಅಂತ ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯ ಖಳನಾಯಕ, ನರಹಂತಕ: ನಳಿನ್‌ಕುಮಾರ್ ಕಟೀಲ್ ಟೀಕೆ
ಶಿಕ್ಷಣ ಕ್ಷೇತ್ರದ ಸುಧಾರಣೆ, ಬದಲಾವಣೆ, ಏಳಿಗೆ ಮತ್ತು ಅಭಿವೃದ್ಧಿಯೇ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಬಿಜೆಪಿ ಸರ್ಕಾರ ಕೋವಿಡ್-19 ಸಂದರ್ಭದಲ್ಲಿ ಇಡೀ ದೇಶದಲ್ಲೇ ಮೊದಲು ನಮ್ಮ ರಾಜ್ಯದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಭೌತಿಕ ತರಗತಿಗಳನ್ನು ಆರಂಭಿಸಿತು. ಕೋವಿಡ್-19 ಕಾರಣ ಎರಡು ವರ್ಷಗಳ ಕಾಲ ಭೌತಿಕ ತರಗತಿಗಳಿಲ್ಲದೆ ಮಕ್ಕಳ ಕಲಿಕೆಯಲ್ಲಿ ಉಂಟಾದ ಹಿನ್ನಡೆ ಸರಿದೂಗಿಸಲು ದೇಶದಲ್ಲೇ ಮೊದಲು 'ಕಲಿಕಾ ಚೇತರಿಕೆ' ಕಾರ್ಯಕ್ರಮವನ್ನು ಇಡೀ ದೇಶಕ್ಕೆ ಮಾದರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ದಾಖಲೆಯ 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. 21ನೇ ಶತಮಾನದ ಅಗತ್ಯಗಳಿಗೆ ಪೂರಕವಾಗಿರುವ 'ರಾಷ್ಟ್ರೀಯ ಶಿಕ್ಷಣ ನೀತಿ-2020' ಅನುಷ್ಠಾನಗೊಳಿಸಲಾಗುತ್ತಿದೆ. ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ನೀಗಿಸಲು 8,100 ಕೊಠಡಿ ನಿರ್ಮಿಸಲಾಗುತ್ತಿದೆ ಅಂತ ತಿಳಿಸಿದ್ದಾರೆ.
ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ/ಬಾಳೆಹಣ್ಣು/ಚಿಕ್ಕಿ ನೀಡಲಾಗುತ್ತಿದೆ. ಶಿಕ್ಷಣದ ಗುಣಮಟ್ಟ ಕಾಪಾಡಿಕೊಳ್ಳಲು ಶೈಕ್ಷಣಿಕ ವರ್ಷದ ಆರಂಭದಲ್ಲೇ 30 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು/ಉಪನ್ಯಾಸಕರ ಸೇವೆ ಪಡೆಯಲಾಗಿದೆ. ದೈಹಿಕ ಶಿಕ್ಷಕರು ಸೇರಿದಂತೆ 2,500 ಪ್ರೌಢಶಾಲಾ ಶಿಕ್ಷಕರು ಮತ್ತು 778 ಪಿಯು ಕಾಲೇಜು ಉಪನ್ಯಾಸಕರ ನೇಮಕ ಪ್ರಕ್ರಿಯೆಯನ್ನು ಮುಂಬರುವ ದಿನಗಳಲ್ಲಿ ಆರಂಭಿಸಲಾಗುತ್ತಿದೆ ಅಂತ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ಬಾದಾಮಿಯ ಜನರ ವಿಶ್ವಾಸ, ನಂಬಿಕೆ ಕಳೆದುಕೊಂಡ ಸಿದ್ದು: ಯಡಿಯೂರಪ್ಪ
ಅರ್ಜಿ ಹಾಕದವರು, ಪರೀಕ್ಷೆ ಬರೆಯದವರನ್ನು ಶಿಕ್ಷಕರಾಗಿ ನೇಮಿಸಿ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದ ಅಪ'ಕೀರ್ತಿ' ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕಲ್ಲವೇ!. ಭ್ರಷ್ಟಾಚಾರ, ಸಾಲು, ಸಾಲು ಹಗರಣಗಳಲ್ಲಿ ಮಿಂದೆದ್ದಿರುವುದು ಯಾರೆಂದು ರಾಜ್ಯದ ಜನತೆಗೆ ತಿಳಿದಿದೆ. ನಿಮ್ಮ ಅವಧಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಸುಧಾರಣೆ, ಅಭಿವೃದ್ಧಿ ಕಾರ್ಯಗಳನ್ನು ನೀವು ಮಾಡಿದ್ದರೇ ಶಿಕ್ಷಕರು ಮತ್ತು ಮೂಲಸೌಕರ್ಯಗಳ ಕೊರತೆ ಈ ಪ್ರಮಾಣದಲ್ಲಿ ಇರುತ್ತಿತ್ತೇ?. ನೀವು ಅಧಿಕಾರದಲ್ಲಿದ್ದಾಗ ಬಾರದ ಶೈಕ್ಷಣಿಕ ಅಭಿವೃದ್ಧಿಯ ಆಲೋಚನೆಗಳು ಈಗ ನಿಮಗೆ ಬರುತ್ತಿರುವುದು ಸಂತೋಷ ಅಂತ ಸಿದ್ದು ವಿರುದ್ಧ ನಾಗೇಶ್ ಹರಿಹಾಯ್ದಿದ್ದಾರೆ.
ಸಂಶೋಧಕರು, ವೈದ್ಯರು, ವಿಜ್ಞಾನಿಗಳ ಪ್ರಕಾರ, ಯೋಗ ಮತ್ತು ಧ್ಯಾನ ಮಾಡುವುದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ. ಆದರೆ, ನೀವು ಮಾತ್ರ ಧ್ಯಾನ, ಯೋಗ ಮಾಡಿದರೆ ಮಕ್ಕಳು 'ಕುಗ್ಗಿ ಹೋಗುತ್ತಾರೆ' ಎನ್ನುತ್ತಿರುವುದು ಹಾಸ್ಯಾಸ್ಪದವಾಗಿದೆ ಅಂತ ಸಿದ್ದರಾಮಯ್ಯಗೆ ಕುಟುಕಿದ್ದಾರೆ.